ಚಿಕ್ಕಮಗಳೂರು: ಸುಡುಗಾಡು ಸಿದ್ಧರ ಮಹಿಳೆಯ ಕೃಷಿ ಸಾಧನೆ

By Kannadaprabha News  |  First Published Aug 5, 2023, 10:45 PM IST

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ಪುರಾತನವಾದ, ಹೊಯ್ಸಳರಿಂದ ನಿರ್ಮಿತ ಪ್ರಸಿದ್ಧ ದೇಗುಲಗಳ ತಟದಲ್ಲಿರುವ ಶ್ರೀ ಹೇಮಗಿರಿ ಬೆಟ್ಟದ ಸುತ್ತಲಿನ ಗ್ರಾಮಗಳಲ್ಲಿ ಒಂದಾದ ಅಂಚೆ ಚೋಮನ ಹಳ್ಳಿಯ ಅತ್ಯಂತ ಹಿಂದುಳಿದ ಸಮಾಜವೆಂದೆ ಪರಿಗಣಿತವಾದ ಅಲೆಮಾರಿಗಳಾದ ಸುಡುಗಾಡು ಸಿದ್ಧರ ಸಮಾಜದ ಹಿರಿಯ ಮಹಿಳೆ ಸಾವಿತ್ರಮ್ಮ ಸ್ವಯಂ ಕೃಷಿಯಿಂದ ದಾಳಿಂಬೆ ಬೆಳೆದು ಯಶಸ್ಸಿನ ಹಾದಿಯಲ್ಲಿದ್ದಾರೆ.


ಕಡೂರು ಕೃಷ್ಣಮೂರ್ತಿ

ಕಡೂರು(ಆ.05):  ಅಕ್ಷರ ಜ್ಞಾನವಿಲ್ಲದಿದ್ದರೂ ಕೃಷಿ ಜ್ಞಾನ ಬೆಳೆಸಿಕೊಂಡು ಸುಡುಗಾಡು ಸಿದ್ಧರ ಮಹಿಳæಯೊಬ್ಬರು ಕೃಷಿ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯ ಯಶೋಗಾಥೆ ಇತರರಿಗೂ ಸ್ಪೂರ್ತಿ ನೀಡುವಂತಿದೆ. ಕಡೂರು ತಾಲೂಕಿನಲ್ಲಿ ಪುರಾತನವಾದ, ಹೊಯ್ಸಳರಿಂದ ನಿರ್ಮಿತ ಪ್ರಸಿದ್ಧ ದೇಗುಲಗಳ ತಟದಲ್ಲಿರುವ ಶ್ರೀ ಹೇಮಗಿರಿ ಬೆಟ್ಟದ ಸುತ್ತಲಿನ ಗ್ರಾಮಗಳಲ್ಲಿ ಒಂದಾದ ಅಂಚೆ ಚೋಮನ ಹಳ್ಳಿಯ ಅತ್ಯಂತ ಹಿಂದುಳಿದ ಸಮಾಜವೆಂದೆ ಪರಿಗಣಿತವಾದ ಅಲೆಮಾರಿಗಳಾದ ಸುಡುಗಾಡು ಸಿದ್ಧರ ಸಮಾಜದ ಹಿರಿಯ ಮಹಿಳೆ ಸಾವಿತ್ರಮ್ಮ ಸ್ವಯಂ ಕೃಷಿಯಿಂದ ದಾಳಿಂಬೆ ಬೆಳೆದು ಯಶಸ್ಸಿನ ಹಾದಿಯಲ್ಲಿದ್ದಾರೆ.

Latest Videos

undefined

ತುಂಬು ಕುಟುಂಬದ ನಿರ್ವಹಣೆ, ಬದುಕಿನ ಅನಿವಾರ್ಯತೆಯನ್ನು ಸವಾಲಿನಂತೆ ಸ್ವೀಕರಿಸಿ, ತಮಗಿದ್ದ ಭೂಮಿಯಲ್ಲೆ ಸಾಕಷ್ಟುಶ್ರಮಪಟ್ಟು ಮಾಡಿದ ಕೃಷಿ ಇದೀಗ ಕೈಹಿಡಿದಿದೆ. ಹಿಂದೆಲ್ಲಾ ತಮ್ಮ ಜಮೀನಿನಲ್ಲಿ ರಾಗಿ, ಜೋಳ ಬೆಳೆಯುತ್ತಿದ್ದ ಇವರು ಕಳೆದ 3-4 ವರ್ಷಗಳಿಂದ ದಾಳಿಂಬೆ ಬೆಳೆಯಲು ಮುಂದಾಗಿದ್ದು, ಇರುವ 1183 ದಾಳಿಂಬೆ ಗಿಡಗಳ ಪೋಷಣೆಯಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳದೆ ಮಾಡಿದ ವ್ಯವಸಾಯದಿಂದ ಈ ಬಾರಿ ಹೆಚ್ಚಿನ ಇಳುವರಿಗೂ ಕಾರಣವಾಗಿದೆ.

ಮಿಡಿ ಹಾಕಿದ್ರೆ ದೇವೀರಮ್ಮನ ದರ್ಶನ ಇಲ್ಲ: ದೇಗುಲದ ಹೊಸ ನಿಯಮ ಏನ್‌ ಹೇಳುತ್ತೆ?

ಪತಿ ನಿಧನರಾಗಿ ಎಂಟು ವರ್ಷವಾಗಿದ್ದು ಅವರ ನಂತರದಲ್ಲಿ ಕೃಷಿಯನ್ನೆ ಸಾವಿತ್ರಮ್ಮ ಹೆಚ್ಚು ಅವಲಂಭಿಸಿದ್ದರು. ಬರ ಪೀಡಿತ ಪ್ರದೇಶದಲ್ಲಿ ದಾಳಿಂಬೆಯಂತಹ ಸಂಪದ್ಭರಿತ ಹಣ್ಣಿನ ಕೃಷಿಗೆ ಮುಂದಾಗಿ ಅದರಲ್ಲೂ ಸೈ ಎನಿಸಿಕೊಂಡಿದ್ದಾರೆ. ಶಶಿಕಲಾ, ಚಂದ್ರಕಲಾ, ಆಶಾ ಮತ್ತು ಮಗ ಸಿ.ಕೆ. ಮಂಜುನಾಥ್‌ ಸೇರಿದಂತೆ 3 ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗನ ನಿರುವ ತುಂಬು ಕುಟುಂಬದ ಜವಾಬ್ದಾರಿ ನಿರ್ವಹಿಸಲು ಹಠಬಿಡದೆ ತಮಗಿರುವ 3.15 ಎಕರೆ ಭೂಮಿಯಲ್ಲಿ ಕೆಲಸಗಾರರೊಂದಿಗೆ ಹೆಚ್ಚಿನ ಶ್ರಮ ಹಾಕಿ ಉತ್ತಮ ದಾಳಿಂಬೆ ಬೆಳೆದಿದ್ದಾರೆ.

ಸೌಕರ್ಯಕ್ಕೆ ಹನಿ ನೀರಾವರಿ ಪದ್ಧತಿಯಡಿ ನೀರಿನ ಸದ್ಬಳಕೆಯೊಂದಿಗೆ ಅತ್ಯುತ್ತಮ ದಾಳಿಂಬೆ ಬೆಳೆದ ಯಶಸ್ವಿ ರೈತ ಮಹಿಳೆಯಾಗಿದ್ದಾರೆ. 2019ರಲ್ಲಿ 1 ಕೆಜಿಗೆ 130 ರು. ಬೆಲೆ ಇದ್ದಾಗ ಸುಮಾರು 8 ಲಕ್ಷ ರು.ಗಳ ದಾಳಿಂಬೆ ಬೆಳೆದು ರೈತ ಮಹಿಳೆಯರಿಗೆ ಸಾವಿತ್ರಮ್ಮ ಮಾದರಿಯಾಗಿದ್ದರು. ಮೊದಲಿನಿಂದಲೂ ಕೇವಲ ಜೋಳ, ರಾಗಿ ಬೆಳೆಯುತ್ತಿದ್ದ ಜಾಗದಲ್ಲಿ ಈಗ ಬೆಳೆದ ದಾಳಿಂಬೆ ಹಣ್ಣಿನಿಂದ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಸಿಗುತ್ತಿದ್ದು, ಪರ್ಯಾಯ ಬೆಳೆ ವಿಧಾನ ಅನುಸರಿಸುವ ಉತ್ತಮ ನಿರ್ಧಾರ ಕೃಷಿಯಲ್ಲಿರುವ ಅವರ ಅಪಾರ ಅರಿವಿಗೆ ಹಿಡಿದ ಕೈಗನ್ನಡಿ.

ರಾಜಕಾರಣದಲ್ಲೂ ಸಕ್ರಿಯ:

ಕೃಷಿ ಕ್ಷೇತ್ರವೇ ಅಲ್ಲದೆ ಸಕ್ರಿಯ ರಾಜಕಾರಣದಲ್ಲೂ ತೊಡಗಿದ್ದ ಇವರು 2015-16ನೇ ಸಾಲಿನಲ್ಲಿ ಕೆರೆಸಂತೆ ಗ್ರಾಪಂಗೆ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿ ತಮಗೆ ಸಿಕ್ಕ ಅಧಿಕಾರವನ್ನು ಗ್ರಾಮೀಣ ಜನರ ಸೇವೆ ಮಾಡುವ ಮೂಲಕ ಉತ್ತಮ ಹೆಸರು ಮಾಡಿದ್ದಾರೆ.

ಬೆಳಗಿನಿಂದ ಸಂಜೆವರೆಗೂ ಜಮೀನಿನಲ್ಲಿದ್ದು, ಇರುವ 1183 ದಾಳಿಂಬೆ ಗಿಡಗಳ ಆರೈಕೆಗೆ ಬೇಕಾಗುವ ಔಷಧಿ ಮತ್ತಿತರ ಪರಿಕರಗಳನ್ನು ಹೊಂದಿಸಿಕೊಂಡು ಕಳೆದ ಮೂರ್ನಾಲ್ಕು ವರ್ಷದಿಂದ ದಾಳಿಂಬೆ ಕೃಷಿ ಮಾಡುತ್ತಿದ್ದಾರೆ. 60ನೇ ವಯಸ್ಸಿನಲ್ಲಿಯೂ ಕೃಷಿಯನ್ನೇ ನಂಬಿ ಜೀವನ ನಡೆಸುವ ಹಿಂದುಳಿದ ವರ್ಗಗಳ ಮಹಿಳೆಯಾಗಿರುವ ಸಾವಿತ್ರಮ್ಮ ಸುತ್ತಮುತ್ತಲಿನ ಜನರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ಬೆಂಗಳೂರು, ಹೊಸೂರು ಮಾರುಕಟ್ಟೆಯಲ್ಲಿ ಉತ್ತಮ ದಾಳಿಂಬೆಗೆ ಕೆಜಿಗೆ 40 ರಿಂದ 120 ರು.ವರೆಗಿದೆ. ಈ ಬಾರಿಯೂ ಸುಮಾರು 4 ಎಕರೆಯಲ್ಲಿ ದಾಳಿಂಬೆ ಹಾಕಿದ್ದಾರೆ.

ಈ ನಿಟ್ಟಿನಲ್ಲಿ ಆಳುವ ಸರ್ಕಾರಗಳು ಅತಿ ಹಿಂದುಳಿದ ಹಾಗು ಸುಡುಗಾಡು ಸಿದ್ಧರ ಅಲೆಮಾರಿ ಸಮುದಾಯದ ಹೆಣ್ಣು ಮಗಳ ಸಾಧನೆ ಗುರುತಿಸಿ ಬೆನ್ನು ತಟ್ಟುವ ಮೂಲಕ ಪ್ರೋತ್ಸಾಹಿಸುವ ಕೆಲಸ ಮಾಡಬೇಕಿದೆ.

ನಾನು ಪ್ರಪಂಚದಲ್ಲೇ ಸರ್ವಾಂಗ ಸುಂದರನಾಗಬೇಕು, ತಾಯಿ ಕಳಸೇಶ್ವರೀ ಆಶೀರ್ವದಿಸು!

ಅತೀ ಹಿಂದುಳಿದ ಶೋಷಿತ ಸುಡುಗಾಡು ಸಿದ್ದರ ಸಮುದಾಯದ ಸಾವಿತ್ರಮ್ಮ ನವರು ತಮ್ಮ ಜಮೀನಿನಲ್ಲಿ ಆಸಕ್ತಿದಾಯಕ ಕೃಷಿಯಲ್ಲಿ ತೊಡಗಿಸಿಕೊಂಡು ಮಕ್ಕಳ ಸಹಾಯ ನಿರೀಕ್ಷೆ ಮಾಡದೆ ಕೃಷಿಕ ಮಹಿಳೆಯಾಗಿ ತಾವೇ ಜವಾಬ್ದಾರಿ ತೆಗೆದುಕೊಂಡು ದಾಳಿಂಬೆ ಬೆಳೆದು ಯಶಸ್ವಿಯಾಗಿರುವುದು ಸಂತಸದ ಸಂಗತಿ. ಎಲೆಮರೆ ಕಾಯಿಯಂತೆ ಸಾಧನೆ ಮಾಡುತ್ತಿರುವ ಅವರನ್ನು ಸರ್ಕಾರಗಳು ಮತ್ತು ಸಂಘ ಸಂಸ್ಥೆಗಳು ಪ್ರೋತ್ಸಾಹಿಸುವ ಮೂಲಕ ಗುರುತಿಸಬೇಕಿದೆ ಎಂದು ಕಡೂರು ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್‌ ಹೇಳಿದ್ದಾರೆ.

ನಮ್ಮ ಮಕ್ಕಳಂತೆ ಆರೈಕೆ ಮತ್ತು ಔಷಧೋಪಚಾರ ಮಾಡಿದರೆ ಮಾತ್ರ ದಾಳಿಂಬೆ ನಮ್ಮ ಕೈ ಬಿಡುವುದಿಲ್ಲ. ದಾಳಿಂಬೆ ಬೆಳೆ ಬೆಳೆಯಲು ತೋಟಗಾರಿಕಾ ಇಲಾಖೆಯಿಂದ ಸಬ್ಸಿಡಿ ಸಿಕ್ಕಿದ್ದು ಬಿಟ್ಟರೆ ಅಧಿಕಾರಿಗಳಿಂದ ಯಾವುದೇ ಮಾರ್ಗದರ್ಶನವೂ ಇಲ್ಲ. ಬೆಳೆಗೆ ಖಾಸಗಿ ತಂತ್ರಜ್ಞರಿಂದ ಸಲಹೆ ಪಡೆದಿದ್ದೇವೆ. ರಾತ್ರಿ ವೇಳೆ ಕರೆಂಟ್‌ ಬರುವುದನ್ನು ಕಾದು ಕರೆಂಟ್‌ ಬಂದಾಗ ಗಿಡಗಳಿಗೆ ನೀರನ್ನು ಬಿಡುತ್ತೇವೆ. ಕೃಷಿಗೆ ಆಸಕ್ತಿ ಬಹು ಮುಖ್ಯ ಎಂದು ಸಾವಿತ್ರಮ್ಮ ತಿಳಿಸಿದ್ದಾರೆ. 

click me!