Karnataka Assembly Election : ಜೆಡಿಎಸ್‌ ಟಿಕೆಟ್‌ಗೆ ಪಟ್ಟು ಹಿಡಿದ ನಾಯಕ : ನಾಗಮಂಗಲದಿಂದ ಸ್ಪರ್ಧಿಸಲು ಭರದ ಸಿದ್ಧತೆ

By Kannadaprabha News  |  First Published Dec 20, 2021, 10:13 AM IST
  • ಜೆಡಿಎಸ್‌ ಟಿಕೆಟ್‌ಗೆ  ಪಟ್ಟು ಹಿಡಿದ ನಾಯಕ :  ನಾಗಮಂಗಲದಿಂದ ಸ್ಪರ್ಧಿಸಲು ಭರದ ಸಿದ್ಧತೆ
  • 2023ರ ಚುನಾವಣೆಗೆ ನಾಗಮಂಗಲದಿಂದ ಸ್ಪರ್ಧಿಸಲು ಭರದ ಸಿದ್ಧತೆ
  • ಜ.15ರ ಬಳಿಕ ರಾಜಕೀಯ ಚಟುವಟಿಕೆ ಬಿರುಸು

ವರದಿ :  ಮಂಡ್ಯ ಮಂಜುನಾಥ

 ಮಂಡ್ಯ (ಡಿ.20):  ವಿಧಾನಸಭಾ ಚುನಾವಣೆ (Assembly Election) ಇನ್ನೂ ಒಂದೂವರೆ ವರ್ಷ ಇರುವಾಗಲೇ ಜಿಲ್ಲೆಯ ನಾಗಮಂಗಲ ವಿಧಾನಸಭಾ ಕ್ಷೇತ್ರದ (Assembly Constituency) ಜೆಡಿಎಸ್‌ನೊಳಗೆ (JDS) ಟಿಕೆಟ್‌ ಪೈಪೋಟಿ ಆರಂಭಗೊಂಡಿದೆ. ಶಾಸಕ ಕೆ.ಸುರೇಶ್‌ಗೌಡ (Suresh Gowda) ಅವರು ಮತ್ತೊಮ್ಮೆ ಜೆಡಿಎಸ್‌ನಿಂದ (JDS) ಟಿಕೆಟ್‌ ಪಡೆದು ಸ್ಪರ್ಧಿಸುವ ಭರವಸೆಯಲ್ಲಿರುವಾಗಲೇ ಮಾಜಿ ಶಾಸಕ ಎಲ್‌.ಆರ್‌.ಶಿವರಾಮೇಗೌಡ ಜೆಡಿಎಸ್‌ (JDS) ಟಿಕೆಟ್‌ಗೆ ತೀವ್ರ ಪೈಪೋಟಿ ನಡೆಸುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.  ಪಕ್ಷೇತರವಾಗಿ ಸ್ಪರ್ಧಿಸಿ ಶಾಸಕರಾಗುವ ಮೂಲಕ ರಾಜಕೀಯ ಅಸ್ತಿತ್ವ ಕಂಡುಕೊಂಡಿದ್ದ ಎಲ್‌.ಆರ್‌.ಶಿವರಾಮೇಗೌಡ ಅವರು ಕೇವಲ ಆರು ತಿಂಗಳ ಅವಧಿಗೆ ಸಂಸದರಾಗಿದ್ದು ಪೂರ್ಣಾವಧಿ ಅಧಿಕಾರ ಅನುಭವಿಸಲು ಸಾಧ್ಯವಾಗದ ಕಾರಣ ಈಗ ಶಾಸಕರಾಗುವ ಮಹತ್ವಾಕಾಂಕ್ಷೆಯೊಂದಿಗೆ ರಾಜಕೀಯ ಚಟುವಟಿಕೆಗಳನ್ನು ಬಿರುಸುಗೊಳಿಸಿದ್ದಾರೆ.

Tap to resize

Latest Videos

ಉತ್ಸಾಹ ಕುಂದಿಲ್ಲ

ಈ ಹಿಂದಿನಿಂದಲೂ ವಾಗಿ (Politics) ಅಧಿಕಾರವಿಲ್ಲದಿದ್ದರೂ ಕ್ಷೇತ್ರದಲ್ಲಿ ಹಿಡಿತ ಸಾಧಿಸಿಕೊಂಡು ಬಂದಿರುವ ಎಲ್‌.ಆರ್‌.ಶಿವರಾಮೇಗೌಡ ಅವರು ಇತ್ತೀಚಿನ ವಿಧಾನಪರಿಷತ್‌ ಚುನಾವಣೆಯಲ್ಲಿ (MLC Election) ಜೆಡಿಎಸ್‌ ಪರಾಭವಗೊಂಡಿದ್ದರೂ ತಮ್ಮ ಉತ್ಸಾಹವನ್ನು ಕಡಿಮೆ ಮಾಡಿಕೊಂಡಿಲ್ಲ. ಬದಲಾಗಿ ಜ.15ರ ನಂತರ ಕ್ಷೇತ್ರದಲ್ಲಿ ಕಾರ್ಯಚಟುವಟಿಕೆಗಳನ್ನು ಬಿರುಸುಗೊಳಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಈಗಾಗಲೇ ಎರಡು ಅವಧಿಗೆ ಶಾಸಕರಾಗಿರುವ ಸುರೇಶ್‌ಗೌಡ (Suresh gowda) ಮತ್ತೊಂದು ಅವಧಿಗೆ ಜೆಡಿಎಸ್‌ (JDS) ಪಕ್ಷದಿಂದಲೇ ಸ್ಪರ್ಧಿಸಲು ಮುಂದಾಗಿರುವ ಹೊತ್ತಿನಲ್ಲೇ ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡರು (Shivaramegowda) ಜೆಡಿಎಸ್‌ ಪಕ್ಷದ ಟಿಕೆಟ್‌ನ್ನು (Ticket) ತಮಗೇ ಕೊಡುವಂತೆ ವರಿಷ್ಠರ ಮೇಲೆ ಒತ್ತಡ ಹಾಕುವುದರೊಂದಿಗೆ ತಮಗೊಂದು ಅವಕಾಶ ನೀಡುವಂತೆ ಲಾಬಿ ನಡೆಸುತ್ತಿದ್ದಾರೆ.

ನಿರೀಕ್ಷಿತ ಅಧಿಕಾರ ಸಿಗದೆ ಹತಾಶೆ

ಜೆಡಿಎಸ್‌ ಪಕ್ಷ ಸೇರ್ಪಡೆ ಸಂದರ್ಭದಲ್ಲಿ ವಿಧಾನಸಭಾ ಚುನಾವಣೆಯ (Election) ಟಿಕೆಟ್‌ ನೀಡುವರೆಂಬ ವಿಶ್ವಾಸ ಹೊಂದಿದ್ದ ಎಲ್‌.ಆರ್‌.ಶಿವರಾಮೇಗೌಡರು ನಂತರ ಅಲ್ಪಾವಧಿ ಸಂಸದರಾಗಿ ಕಾರ್ಯನಿರ್ವಹಿಸಿದ್ದರೂ ನಿರೀಕ್ಷಿತ ಅಧಿಕಾರ ಸಿಗದ ಕಾರಣ ಮತ್ತೊಂದು ಅವಧಿಗೆ ಶಾಸಕರಾಗುವ ಆಕಾಂಕ್ಷೆ ಹೊಂದಿದ್ದಾರೆ. ಈಗಾಗಲೇ ಜೆಡಿಎಸ್‌ನಿಂದ ಎರಡು ಬಾರಿ ಟಿಕೆಟ್‌ ಸಿಗದಿದ್ದರೂ ಸಮಾಧಾನ ಮಾಡುತ್ತಲೇ ಬಂದಿದೆ. 66 ವರ್ಷ ತುಂಬಿರುವ ತಮಗೆ 2023ರ ಚುನಾವಣೆಯಲ್ಲಿ ಅವಕಾಶ ಸಿಗದಿದ್ದರೆ ಮುಂದಿನ ದಿನಗಳಲ್ಲಿ ಚುನಾವಣಾ ಹೋರಾಟ ಎದುರಿಸುವುದು ಕಷ್ಟವಾಗಲಿದೆ ಎಂದು ವರಿಷ್ಠರ ಬಳಿ ಟಿಕೆಟ್‌ಗೆ ಮೊರೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಜೆಡಿಎಸ್‌ ವರಿಷ್ಠರ ಮನವೊಲಿಕೆಗೆ ಕಸರತ್ತು

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ (Election) ಅಖಾಡ ಪ್ರವೇಶಿಸಲೇಬೇಕೆಂಬ ಹಠದೊಂದಿಗೆ ಜೆಡಿಎಸ್‌ (JDS) ವರಿಷ್ಠರ ಗಮನಸೆಳೆಯುವ, ಅವರ ಮನವೊಲಿಸುವ ಪ್ರಯತ್ನವನ್ನು ಎಲ್‌.ಆರ್‌.ಶಿವರಾಮೇ ಗೌಡರು ಮಾಡುತ್ತಲೇ ಬರುತ್ತಿದ್ದಾರೆ. ಚುನಾವಣೆ ಇನ್ನೂ ಒಂದೂವರೆ ವರ್ಷವಿರುವುದರಿಂದ ವರಿಷ್ಠರು ನಾಗಮಂಗಲ ಕ್ಷೇತ್ರದ ರಾಜಕೀಯ (Politics) ಬೆಳವಣಿಗೆಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಾ ಶಿವರಾಮೇಗೌಡರಿಗೆ ಟಿಕೆಟ್‌ ಕೊಟ್ಟರೆ ರಾಜಕೀಯ ವಾತಾವರಣ ಹೇಗಿರಬಹುದೆಂಬ ಬಗ್ಗೆ ಅಭಿಪ್ರಾಯ, ಮಾಹಿತಿಯನ್ನು ಪಕ್ಷದ ಮುಖಂಡರು, ಕಾರ್ಯಕರ್ತರಿಂದ ಸಂಗ್ರಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ದಳಪತಿಗಳಿಂದ ಟಿಕೆಟ್‌ ಖಚಿತವಾಗದಿದ್ದರೂ ಸಂಕ್ರಾಂತಿ ಬಳಿಕ ಕ್ಷೇತ್ರದೊಳಗೆ ರಾಜಕೀಯ ಕಾರ್ಯಚಟುವಟಿಕೆಗಳನ್ನು ಬಿರುಸುಗೊಳಿಸುವುದಾಗಿ ಶಿವರಾಮೇಗೌಡರೇ ಹೇಳಿದ್ದಾರೆ. ವಾರದಲ್ಲಿ ಎರಡು-ಮೂರು ದಿನ ಕ್ಷೇತ್ರದಲ್ಲೇ ಉಳಿದು ಜನರ ಕಷ್ಟ-ಸುಖಗಳಿಗೆ ಸ್ಪಂದಿಸುವುದರೊಂದಿಗೆ ಅವರ ವಿಶ್ವಾಸ ಗಳಿಸುವ ಪ್ರಯತ್ನದಲ್ಲಿ ಮುನ್ನಡೆಯಲು ನಿರ್ಧರಿಸಿದ್ದಾರೆ.

ಮಾಡು ಇಲ್ಲವೇ ಮಡಿ ಹೋರಾಟ

ಕಳೆದ 25 ವರ್ಷಗಳಿಂದ ರಾಜಕೀಯ (Politics) ಅಧಿಕಾರ ಸಿಗದೆ ನಿರಾಶರಾಗಿರುವ ಎಲ್‌.ಆರ್‌.ಶಿವರಾಮೇಗೌಡರಿಗೆ ಮುಂದಿನ ವಿಧಾನಸಭಾ ಚುನಾವಣೆ (Assembly Election) ಮಾಡು ಇಲ್ಲವೇ ಮಡಿ ಎಂಬಂತಿದೆ. ಅಲ್ಲದೆ, ರಾಜಕೀಯ (Politics) ಅಧಿಕಾರದಿಂದ ವಂಚಿತರಾಗಿರುವ ಹಾಗೂ ಟಿಕೆಟ್‌ ಸಿಗದಿರುವ ಬಗ್ಗೆ ಜನರಲ್ಲಿರುವ ಅನುಕಂಪ ತಮ್ಮ ಪರವಾಗಿ ಕೆಲಸ ಮಾಡಬಹುದೆನ್ನುವ ವಿಶ್ವಾಸ ಶಿವರಾಮೇಗೌಡರಲ್ಲಿದೆ. ಇದೇ ಕಾರಣಕ್ಕೆ ಮುಂದಿನ ಚುನಾವಣೆಗೆ ಸ್ಪರ್ಧಿಸುವುದಕ್ಕೆ ಅತ್ಯುತ್ಸಾಹ ತೋರುತ್ತಿದ್ದಾರೆಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ನಾನು 2023ರ ಚುನಾವಣೆಗೆ ಸ್ಪರ್ಧಿಸಲು ದೃಢ ನಿರ್ಧಾರ ಮಾಡಿದ್ದೇನೆ. ಜೆಡಿಎಸ್‌ (JDS) ಟಿಕೆಟ್‌ ಕೊಡುವಂತೆ ವರಿಷ್ಠರಲ್ಲಿ ಮೊರೆ ಇಟ್ಟಿದ್ದೇನೆ. ನನಗೆ 66 ವರ್ಷವಾಗಿದೆ. ನನಗಿದು ಕೊನೆಯ ಅವಕಾಶ. ಒಮ್ಮೆ ಶಾಸಕ ಮತ್ತೊಮ್ಮೆ ಅಲ್ಪಾವಧಿ ಸಂಸದನಾಗಷ್ಟೇ ರಾಜಕೀಯ (Politics) ಅಧಿಕಾರ ಸಿಕ್ಕಿದೆ. ಮುಂದಿನ ಬಾರಿ ಟಿಕೆಟ್‌ ಸಿಕ್ಕರೆ ಪೂರ್ಣಾವಧಿ ಅಧಿಕಾರ ಸಿಗುವ ವಿಶ್ವಾಸವಿದೆ. ಶಿವರಾಮೇಗೌಡ ಚುನಾವಣೆಯವರೆಗೂ ಓಡಾಡಿ, ಓಡಿಹೋಗುತ್ತಾನೆ ಎಂಬ ಆರೋಪವಿದೆ. ಇದು ಪಟ್ಟಭದ್ರರ ಅಪಪ್ರಚಾರ. ಏನೇ ಆಗಲಿ ಸಂಕ್ರಾಂತಿ ನಂತರ ನನ್ನ ರಾಜಕೀಯ ಕಾರ್ಯಚಟುವಟಿಕೆಗಳೆಲ್ಲವೂ ಬಿರುಸನ್ನು ಪಡೆದುಕೊಳ್ಳಲಿವೆ.

click me!