ಉತ್ತರ ಕನ್ನಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆ: ಪ್ರಧಾನಿ ಮೋದಿಗೆ ರಕ್ತದಿಂದ ಪತ್ರ ಬರೆಯಲು ನಿರ್ಧಾರ

By Girish Goudar  |  First Published Jul 23, 2022, 10:52 PM IST

ಸುಮಾರು 12 ತಾಲೂಕುಗಳಿರುವ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳ ಅಭಾವವಿರುವುದರಿಂದ ಸರ್ಕಾರಿ ಆಸ್ಪತ್ರೆಗಳೇ ಇಲ್ಲಿನ ಜನರಿಗೆ ಸಂಜೀವಿನಿ


ವರದಿ: ಭರತ್‌ರಾಜ್ ಕಲ್ಲಡ್ಕ, ಏಷ್ಯಾನಟ್ ಸುವರ್ಣ ನ್ಯೂಸ್, ಕಾರವಾರ

ಕಾರವಾರ(ಜು.23):  ಉಡುಪಿಯ ಶಿರೂರಿನಲ್ಲಿ ಭೀಕರ ಅಪಘಾತ ನಡೆದ ಬಳಿಕ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಬೇಡಿಕೆ ಹೆಚ್ಚಾಗಿದೆ. ಈ ಕಾರಣದಿಂದ ಜಿಲ್ಲೆಯಲ್ಲೀಗ ಹೋರಾಟ, ಅಭಿಯಾನ ಪ್ರಾರಂಭಗೊಂಡಿದ್ದು, ರಕ್ತದಲ್ಲಿ ದೇಶದ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆಯುವುದಾಗಿ ಜನರು ನಿರ್ಧರಿಸಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ.

Tap to resize

Latest Videos

ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಉತ್ತರ ಕನ್ನಡ ಜಿಲ್ಲೆ ಅತೀ ಹೆಚ್ಚು ಅರಣ್ಯ ಪ್ರದೇಶವನ್ನು ಸಹ ಹೊಂದಿರುವ ಜಿಲ್ಲೆ ಎನ್ನುವ ಖ್ಯಾತಿ ಪಡೆದಿದೆ. ಸುಮಾರು 12 ತಾಲೂಕುಗಳಿರುವ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳ ಅಭಾವವಿರುವುದರಿಂದ ಸರ್ಕಾರಿ ಆಸ್ಪತ್ರೆಗಳೇ ಇಲ್ಲಿನ ಜನರಿಗೆ ಸಂಜೀವಿನಿ. ಆದರೆ, ಇಷ್ಟು ದೊಡ್ಡ ಜಿಲ್ಲೆಯಲ್ಲಿ ಒಂದೇ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಿಲ್ಲ. ಈ ಕಾರಣದಿಂದಲೇ ಜಿಲ್ಲೆಯಲ್ಲಿ ಯಾವುದೇ ಅವಘಡಗಳು ನಡೆದರೂ ಮಣಿಪಾಲ ಅಥವಾ ಗೋವಾಕ್ಕೆ ಕರೆದುಕೊಂಡು ಹೋಗಬೇಕು. ಮಣಿಪಾಲಕ್ಕೆ ಸಾಕಷ್ಟು ಸಾಗಬೇಕಾಗಿರೋದ್ರಿಂದ ಕರೆದುಕೊಂಡು ಹೋಗೋವಾಗಲೇ ಮಾರ್ಗದ ಮಧ್ಯೆಯೇ ರೋಗಿಗಳು ಕೊನೆಯುಸಿರು ಎಳೆಯುತ್ತಾರೆ. ಇನ್ನು ಗೋವಾಕ್ಕೆ ಕರೆದುಕೊಂಡು ಹೋದಲ್ಲಿ ಕರ್ನಾಟಕದವರೆಂದು ನಿರ್ಲಕ್ಷ್ಯದಿಂದ ನೋಡಲಾಗುತ್ತದೆ. 

ಉತ್ತರ ಕನ್ನಡಕ್ಕೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಕೂಗು: ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ

ಈ ನಡುವೆ ಮೊನ್ನೆಯಷ್ಟೇ ಜಿಲ್ಲೆಯ ಹೊನ್ನಾವರದಿಂದ ಉಡುಪಿಗೆ ತುರ್ತು ಚಿಕಿತ್ಸೆಗಾಗಿ ರೋಗಿಯನ್ನು ಕೊಂಡೊಯ್ದಿದ್ದ ಆ್ಯಂಬುಲೆನ್ಸ್ ಶಿರೂರು ಟೋಲ್‌ಗೇಟ್‌ನಲ್ಲಿ ಅಪಘಾತಕ್ಕೀಡಾಗಿತ್ತು. ಈ ಘಟನೆಯಲ್ಲಿ ನಾಲ್ವರು ಸಾವಿಗೀಡಾಗಿ, ಓರ್ವನಿಗೆ ಗಾಯವಾಗಿತ್ತು. ಪ್ರಕರಣದ ಬಳಿಕ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆಗಾಗಿ ಬೇಡಿಕೆ ಹೆಚ್ಚಾಗಿದ್ದು, ಜನರಂತೂ ಅಭಿಯಾನ ಪ್ರಾರಂಭಿಸಿದ್ದಾರೆ. ಜಿಲ್ಲೆಯಲ್ಲೇ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಿದ್ದಿದ್ದರೆ ಚಿಕಿತ್ಸೆಗಾಗಿ ಯಾರೂ ಹೊರ ಜಿಲ್ಲೆ ಅಥವಾ ಹೊರ ರಾಜ್ಯಗಳಿಗೆ ಹೋರಬೇಕಾಗಿರಲಿಲ್ಲ. ದಾರಿ ಮಧ್ಯೆ ಸಾವುಗಳೂ ಉಂಟಾಗುತ್ತಿರಲಿಲ್ಲ. ಈ ಕಾರಣದಿಂದ ಆಗಸ್ಟ್ ಒಂದರಂದು ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ರಕ್ತದಲ್ಲಿ ಪತ್ರ ಬರೆಯಲು ನಿರ್ಧರಿಸಿದ್ದು, ಮುಂದಿನ ಸ್ವಾತಂತ್ರ್ಯೋತ್ಸವದ ವೇಳೆ ಪ್ರಧಾನಿಯವರು ಕೆಂಪುಕೋಟೆಯಲ್ಲಿ ಕಾರವಾರಕ್ಕೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಅಗತ್ಯವಿರುವ ಬಗ್ಗೆ ಘೋಷಣೆ ಮಾಡಬೇಕು. ಇಲ್ಲದಿದ್ದರೆ ಮುಂದಕ್ಕೆ ಉಗ್ರ ಹೋರಾಟ ನಡೆಯಲಿದೆ ಎಂದು ಜನರು ಎಚ್ಚರಿಸಿದ್ದಾರೆ. 

ಅಂದಹಾಗೆ, ಉತ್ತರಕನ್ನಡ ಜಿಲ್ಲೆಯ ಜಿಲ್ಲಾಕೇಂದ್ರ ಕಾರವಾರದಲ್ಲಿ ಕಳೆದ ಆರು ವರ್ಷದ ಹಿಂದೆ ಸರ್ಕಾರಿ ಮೆಡಿಕಲ್ ಕಾಲೇಜು ನಿರ್ಮಾಣ ಮಾಡಲಾಗಿತ್ತು. ಯಾವುದೇ ಮೆಡಿಕಲ್ ಕಾಲೇಜು ನಿರ್ಮಾಣವಾಗಬೇಕಾದರೆ 450 ಬೆಡ್ ಹಾಸಿಗೆ ಇರಬೇಕಾದ ಹಿನ್ನೆಲೆಯಲ್ಲಿ 2019ರಲ್ಲಿ ಸಮ್ಮಿಶ್ರ ಸರ್ಕಾರ ಆಡಳಿತವಿದ್ದ ವೇಳೆ ಮೆಡಿಕಲ್ ಕಾಲೇಜು ಆವರಣದಲ್ಲಿ 160 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿತ್ತು. ಸಮ್ಮಿಶ್ರ ಸರ್ಕಾರ ಬಿದ್ದ ನಂತರ ಯಡಿಯೂರಪ್ಪ ಸಿಎಂ ಆದ ಮೇಲೆ 2020ರಲ್ಲಿ ಹಣ ಬಿಡುಗಡೆ ಮಾಡಿದ್ದು, ಬೆಂಗಳೂರಿನ ಬಿ.ಎಸ್.ಆರ್ ಎನ್ನುವ ಕಂಪೆನಿಗೆ ಗುತ್ತಿಗೆಯನ್ನು ಕೂಡಾ ನೀಡಿತ್ತು.  

ಉತ್ತರ ಕನ್ನಡದಲ್ಲಿ ಮಳೆಯಿಂದ ಹಾನಿ: ಅಲ್ಪ ಪರಿಹಾರ ವಿತರಣೆಗೆ ಸಚಿವ ಕೋಟ ಆಕ್ಷೇಪ

ಕಾರವಾರ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳಿಲ್ಲದ್ದರಿಂದ 450 ಬೆಡ್ ಗಳ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗುತ್ತದೆ ಎಂದು ಜನರು ಖುಷಿ ಪಟ್ಟಿದ್ದರು. ಆದರೆ, ಕಾಮಗಾರಿಗೆ ಗುತ್ತಿಗೆ ನೀಡಿ ವಿವಿಧ ಕಾರಣಗಳಿಂದ ಈವರೆಗೆ ಕಾಮಗಾರಿ ಪ್ರಾರಂಭವೇ ಆಗಿಲ್ಲ. ಜಿಲ್ಲೆಯಲ್ಲಿ ಉತ್ತಮ ಆಸ್ಪತ್ರೆಯ ಕೊರತೆಯ ಕಾರಣ ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದೆ ಸಾಕಷ್ಟು ಜನರು ಸಾವಿಗೀಡಾಗಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಲೇಬೇಕಿದೆ ಎಂದು ಜನರು ಪಟ್ಟು ಹಿಡಿದು ಕುಳಿತಿದ್ದಾರೆ.

ಒಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸಾಕಷ್ಟು ಬೇಡಿಕೆಯೊಂದಿಗೆ ಅಭಿಯಾನವೇ ಪ್ರಾರಂಭಗೊಂಡಿದೆ. ಇಷ್ಟು ವರ್ಷಗಳ ಕಾಲ ಕೇವಲ ಮನವಿಯಲ್ಲೇ ಇದ್ದ ಜಿಲ್ಲೆಯ ಜನರ ಬೇಡಿಕೆ ಇದೀಗ ಹೋರಾಟದ ಹೆಜ್ಜೆಯಿರಿಸಿದ್ದು, ಮುಂದಿನ ದಿನಗಳಲ್ಲಿ ಜನರ ಹೋರಾಟ ಮುಂದುವರಿಯಲಿದೆಯೇ ಅಥವಾ ಜನರು ಮತ್ತೆ ಮೌನವಾಗಲಿದೆಯೇ ಎಂದು ಕಾದು ನೋಡಬೇಕಷ್ಟೇ.
 

click me!