ಹೈಕೋರ್ಟ್‌ಗೆ ಟೋಪಿ ಹಾಕಲು ಯತ್ನಿಸಿದ ವಕೀಲಗೆ ದಂಡ

By Kannadaprabha NewsFirst Published Jan 18, 2023, 1:00 AM IST
Highlights

ಹೈಕೋರ್ಟ್‌ ಮುಂದೆ ಮಾಡಿಕೊಂಡ ಒಪ್ಪಂದಂತೆ ತನ್ನ ಅಪ್ರಾಪ್ತ ಮಗನನ್ನು, 15 ದಿನಗಳ ಕಾಲ ಪತ್ನಿ ವಶಕ್ಕೆ ನೀಡದೆ ನ್ಯಾಯಾಲಯಕ್ಕೆ ಏಮಾರಿಸಲು ಯತ್ನಿಸಿದ್ದ ವಕೀಲರೊಬ್ಬರಿಗೆ 25000 ರು. ದಂಡ ವಿಧಿಸಿದ ಹೈಕೋರ್ಟ್‌. 

ವೆಂಕಟೇಶ್‌ ಕಲಿಪಿ

ಬೆಂಗಳೂರು(ಜ.18):  ಹೈಕೋರ್ಟ್‌ ಮುಂದೆ ಮಾಡಿಕೊಂಡ ಒಪ್ಪಂದಂತೆ ತನ್ನ ಅಪ್ರಾಪ್ತ ಮಗನನ್ನು, 15 ದಿನಗಳ ಕಾಲ ಪತ್ನಿ ವಶಕ್ಕೆ ನೀಡದೆ ನ್ಯಾಯಾಲಯಕ್ಕೆ ಏಮಾರಿಸಲು ಯತ್ನಿಸಿದ್ದ ವಕೀಲರೊಬ್ಬರಿಗೆ ಹೈಕೋರ್ಟ್‌ 25000 ರು. ದಂಡ ವಿಧಿಸಿದೆ. ನೋಟಿಸ್‌, ವಾರಂಟ್‌ಗೂ ಬಗ್ಗದೇ ಚಳ್ಳೆಹಣ್ಣು ತಿನ್ನಿಸಲು ಯತ್ನಿಸಿದ ಈ ವ್ಯಕ್ತಿ ಕೊನೆಗೆ ಹೈಕೋರ್ಟ್‌ನ ಜಾಮೀನು ರಹಿತ ವಾರಂಟ್‌ ಜಾರಿಗೆ ಹೆದರಿ ಮಗನನ್ನು ಪತ್ನಿಯ ಸುಪರ್ದಿಗೆ ನೀಡಲು ಒಪ್ಪಿದ್ದಾರೆ.

ಪ್ರಕರಣದ ವಿವರ:

ನೇತ್ರಾ ಮತ್ತು ನವೀನ್‌ ದಂಪತಿ ಭಿನ್ನಾಭಿಪ್ರಾಯದಿಂದಾಗಿ ಪ್ರತ್ಯೇಕವಾಗಿ ಜೀವಿಸುತ್ತಿದ್ದರು. ನೇತ್ರಾ ಮೈಸೂರಿನಲ್ಲಿ ಹಾಗೂ ನವೀನ್‌ ತಮಿಳುನಾಡಿನ ಚೆನ್ನೈನಲ್ಲಿ ನೆಲೆಸಿದ್ದಾರೆ. 2022ರ ಏ.27ರಂದು ಹೈಕೋರ್ಟ್‌ಗೆ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದ ಪತ್ನಿ, ಅಪ್ರಾಪ್ತ ಪುತ್ರನನ್ನು ಪತಿ ಅಕ್ರಮ ಬಂಧನದಲ್ಲಿಟ್ಟಿದ್ದಾರೆ ಎಂದು ಆರೋಪಿಸಿದ್ದರು. ಪ್ರಕರಣ ಸಂಬಂಧ ಮೇ 25ಕ್ಕೆ ಕೋರ್ಟ್‌ಗೆ ಹಾಜರಾಗಿದ್ದ ನವೀನ್‌, ಪುತ್ರನನ್ನು ಅಕ್ರಮವಾಗಿ ಬಂಧನದಲ್ಲಿ ಇಟ್ಟಿಲ್ಲ. ಪ್ರತಿ ತಿಂಗಳ ಮೊದಲ 15 ದಿನ ಮಗನನ್ನು ಪತ್ನಿ ಸುಪರ್ದಿಯಲ್ಲಿ ಮತ್ತು ನಂತರದ 15 ದಿನ ತನ್ನಲ್ಲಿ ಇರಿಸಿಕೊಳ್ಳಲು ಒಪ್ಪಿ ಸಲ್ಲಿಸಿದ ಜಂಟಿ ಮೆಮೋ ಒಪ್ಪಂದ ಉಲ್ಲಂಘಿಸುವುದಿಲ್ಲ ಎಂದು ವಾಗ್ದಾನ ನೀಡಿದ್ದರು. ಅದನ್ನು ಒಪ್ಪಿ ಪ್ರಕರಣವನ್ನು ಹೈಕೋರ್ಟ್‌ ಇತ್ಯರ್ಥಪಡಿಸಿತ್ತು.

High Court of Karnataka: ತಂದೆಯ ಸಾಲಕ್ಕೆ ಮಗ ಚೆಕ್‌ ನೀಡಿದ್ದರೆ ಸಾಲ ತೀರಿಸುವ ಹೊಣೆ ಮಗನದ್ದೇ!

ತಿಂಗಳಲ್ಲೇ ಉಲ್ಲಂಘನೆ:

ಆದರೆ ಜೂ.22ರಂದು ಹೈಕೋರ್ಟ್‌ಗೆ ಮತ್ತೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ ನೇತ್ರಾ, ಪತಿ ಮಗನನ್ನು ತಮ್ಮ ಸುಪರ್ದಿಗೆ ನೀಡುತ್ತಿಲ್ಲ ಎಂದು ದೂರಿದ್ದರು. ಹೀಗಾಗಿ ಹೈಕೋರ್ಟ್‌ ಜು.13ರಂದು ನೋಟಿಸ್‌ ಜಾರಿ ಮಾಡಿತ್ತು. ಅದಕ್ಕೆ ನವೀನ್‌ ಉತ್ತರಿಸದೇ ಇದ್ದಾಗ, ನೋಟಿಸ್‌ ಮರು ಜಾರಿಗೆ ತಮಿಳುನಾಡು ಡಿಜಿಪಿಗೆ ಸೆ.1ರಂದು ಸೂಚಿಸಿತ್ತು. ಆದರೆ ಸೆ.10ರಂದು ವಿಚಾರಣೆಗೆ ನವೀನ್‌ ಪರ ಯಾರೂ ಹಾಜರಾಗಿರಲಿಲ್ಲ. ಇದರಿಂದ 20 ಸಾವಿರ ರು. ಮೊತ್ತದ ಜಾಮೀನು ಸಹಿತ ವಾರಂಟ್‌ ಜಾರಿ ಮಾಡಿತ್ತು. ವಾರಂಟ್‌ ಜಾರಿಯಾದರೂ ಆತನಿಂದ ಯಾವುದೇ ಉತ್ತರ ಬರಲಿಲ್ಲ. ಹಾಗಾಗಿ ಆಕ್ರೋಶಗೊಂಡ ಹೈಕೋರ್ಟ್‌, 2023ರ ಜ.11ರಂದು ವಿಚಾರಣೆಗೆ ಹಾಜರಾಗದಿದ್ದರೆ ಜಾಮೀನು ರಹಿತ ಬಂಧನ ವಾರಂಟ್‌ ಜಾರಿಯ ಎಚ್ಚರಿಕೆ ನೀಡಿತ್ತು.

ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತ, ಇಂದಿನಿಂದಲೇ ಸರ್ವೀಸ್ ನಿಲ್ಲಿಸುವುದಾಗಿ ಬಾಂಬೆ ಹೈಕೋರ್ಟ್‌ಗೆ ಸ್ಪಷ್ಟನೆ!

ಈ ನಡುವೆ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ ನವೀನ್‌, ಹೈಕೋರ್ಟ್‌ ಒತ್ತಡದಿಂದ ಪತ್ನಿಯೊಂದಿಗೆ ಜಂಟಿ ಮೆಮೋಗೆ ಸಹಿ ಹಾಕಿದೆ. ಮೆಮೋಗೆ ಸಹಿ ಹಾಕದಿದ್ದರೆ ತನ್ನ ವಕೀಲಿಕೆಯ ಸನ್ನದ್ದು ಅಮಾನತುಗೊಳಿಸುವುದಾಗಿ ಹೈಕೋರ್ಟ್‌ ಬೆದರಿಕೆ ಹಾಕಿತ್ತು ಎಂದು ಆರೋಪಿಸಿದ್ದರು. ಆದರೆ, ಮೇಲ್ಮನವಿಯನ್ನು ವಜಾಗೊಳಿಸಿದ್ದ ಸುಪ್ರೀಂ ಕೋರ್ಟ್‌, ಹೈಕೋರ್ಟ್‌ ವಿಚಾರಣೆಗೆ ಹಾಜರಾಗುವಂತೆ ತಾಕೀತು ಮಾಡಿತ್ತು.

ಮೈಸೂರಿಗೆ ಹೋಗುವುದೇ ಅಡ್ಡಿ

ಕೊನೆಗೆ ಜ.12ರಂದು ಹೈಕೋರ್ಟ್‌ ವಿಚಾರಣೆಗೆ ಹಾಜರಾದ ನವೀನ್‌, ಮಗ ಅನಾರೋಗ್ಯಕ್ಕೆ ಒಳಗಾಗಿದ್ದ. ಪತ್ನಿಯ ಸುಪರ್ದಿಗೆ ಮಗನನ್ನು ನೀಡಬೇಕಾದರೆ ಚೆನ್ನೈಯಿಂದ ಮೈಸೂರಿಗೆ ಪ್ರಯಾಣಿಸಬೇಕು. ಹೀಗೆ ನಾಲ್ಕು ಸಲ ಪ್ರಯಾಣಿಸಿದರೆ ಮಗ ಇನ್ನಷ್ಟು ಅನಾರೋಗ್ಯಕ್ಕೆ ಒಳಗಾಗಬಹುದು. ಅವನ ಹಿತಾಸಕ್ತಿಯಿಂದ ತಾಯಿ ಬಳಿಗೆ ಕರೆದುಕೊಂಡು ಹೋಗಿಲ್ಲ ಎಂದು ಸಮಜಾಯಿಷಿ ನೀಡಿದರು. ಜೊತೆಗೆ, ಕೋರ್ಟ್‌ ಆದೇಶ ಪಾಲಿಸದಕ್ಕೆ ಕ್ಷಮೆ ಕೋರಿ, ನ್ಯಾಯಾಲಯದ ಮುಂದಿನ ಒಪ್ಪಂದದಂತೆ ಮಗನನ್ನು ಪತ್ನಿ ಸುಪರ್ದಿಗೆ ನೀಡಲು ಸಿದ್ಧವಾಗಿರುವುದಾಗಿ ತಿಳಿಸಿದರು. ನವೀನ್‌ ವಿವರಣೆಯನ್ನು ಒಪ್ಪಲು ಹಾಗೂ ಕ್ಷಮೆ ನೀಡಲು ನಿರಾಕರಿಸಿದ ಹೈಕೋರ್ಟ್‌, ಜ.17ರಂದು ಕೋರ್ಟ್‌ಗೆ ಮಗುವಿನೊಂದಿಗೆ ಹಾಜರಾಗಬೇಕು. ಅಂದು ಮಗನನ್ನು ತಾಯಿಗೆ ಸುಪರ್ದಿಗೆ ನೀಡಬೇಕು ಹಾಗೂ ಆಕೆಗೆ 25 ಸಾವಿರ ರು. ದಂಡ ಪಾವತಿಸಬೇಕು ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು.

click me!