ರಮೇಶ್ ಜಾರಕಿಹೊಳಿ‌ಯನ್ನ ಮಂತ್ರಿ ಮಾಡಿದ್ದು ನಾನೇ ಎಂದ ಹೆಬ್ಬಾಳಕರ್‌..!

By Suvarna NewsFirst Published Feb 24, 2021, 11:05 AM IST
Highlights

ನಾನು ಅಹಂಬ್ರಹ್ಮಾಸ್ಮಿ, ನಾನು ನನ್ನಿಂದ ಅಂದವರೆಲ್ಲ ಹೆಸರು ಇಲ್ಲದಂಗೆ ಹೋಗಿದ್ದಾರೆ| ನಾನು ನಗಣ್ಯ, ಲಕ್ಷ್ಮೀ ಹೆಬ್ಬಾಳ್ಕರ್‌ನ ಮತದಾರರು ಮಾಡಿದ್ದಾರೆ| ಯಾಕೆ ಇಷ್ಟೊಂದು ಟಾರ್ಗೆಟ್ ಮಾಡುತ್ತಿದ್ದಾರೆ ಅಂತಾ ಅವರನ್ನೇ ಕೇಳಿ ಎಂದು ಪ್ರಶ್ನಿಸಿದ ಹೆಬ್ಬಾಳಕರ್‌| 

ಬೆಳಗಾವಿ(ಫೆ.24): ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಹೋರಾಟಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ ಕಾಂಗ್ರೆಸ್‌ನ ಬಿ ಟೀಮ್ ಎಂದ ಸಚಿವ ಮುರುಗೇಶ್‌ ನಿರಾಣಿ ವಿರುದ್ಧ ಕಾಂಗ್ರೆಸ್‌ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಇಂದು(ಬುಧವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,  ಇದು ತಪ್ಪು ಕಲ್ಪನೆಯಾಗಿದ್ದು, ಪಕ್ಷಾತೀತವಾಗಿ ಹೋರಾಟ ಮಾಡುತ್ತಿದ್ದೇವೆ. ಕಾಂಗ್ರೆಸ್ ಬಿ ಟೀಮ್, ಬಿಜೆಪಿ ಎ ಟೀಮ್ ಅನ್ನೋದಲ್ಲಾ ಏನೂ ಇಲ್ಲ. ಇದೆಲ್ಲಾ ಇದ್ದಿದ್ರೆ ಆದರೆ ನಿರಾಣಿ ಯಾಕೆ ಹೋರಾಟಕ್ಕೆ ಬೆಂಬಲ ಸೂಚಿಸಿದ್ರು? ಎಂದು ಸಚಿವರಿಗೆ ಪ್ರಶ್ನಿಸಿದ್ದಾರೆ.  

ಹೋರಾಟದ ಮುಂಚೂಣಿಯಲ್ಲಿದ್ದವರು ಈ ರೀತಿ ಆರೋಪ ಮಾಡುವುದು ಶೋಭೆ ತರುವಂತದಲ್ಲ. ಸ್ವಾಮೀಜಿಗಳ ಬಗ್ಗೆ ಈ ರೀತಿ ಮಾತನಾಡುವುದೇ ತಪ್ಪು. ಸಮಾಜಕ್ಕೆ ಸ್ವಾಮೀಜಿಗಳು ಕಿರೀಟ ಪ್ರಾಯ ಇದ್ದ ಹಾಗೆ. ಗುರುಗಳ ಬಗ್ಗೆ ಹಗುರವಾಗಿ ಮಾತನಾಡುವುದು ತಪ್ಪು. ಸಮಾಜಕ್ಕೋಸ್ಕರ ಹೋರಾಟ ಮಾಡುತ್ತಿದ್ದಾರೆ ಹೊರತು ಸ್ವಂತಕ್ಕಲ್ಲ. ಯಾರ ಕಪಿಮುಷ್ಟಿಯಲ್ಲಿ ಗುರುಗಳು ಇಲ್ಲ, ಸಮಾಜಕ್ಕೆ ಒಳ್ಳೆಯದಾಗಲೆಂದು ಹೋರಾಟ ಮಾಡುತ್ತಿದ್ದಾರೆ. ಹೋರಾಟವನ್ನ ರಾಜಕೀಯವಾಗಿ ಬಳಸಿಕೊಳ್ಳಬಾರದು. ಧರ್ಮದಲ್ಲಿ ರಾಜಕಾರಣ ಮಾಡುವುದು ಒಳ್ಳೆಯದಲ್ಲ. ಪಂಚಮಸಾಲಿ ಸಮುದಾಯದಲ್ಲಿ ಒಗ್ಗಟ್ಟು ಇದೆ ವಿಚಾರಧಾರೆಗಳು ಬೇರೆ ಬೇರೆ ಇದೆ ಎಂದು ತಿಳಿಸಿದ್ದಾರೆ. 

ಹೆಣ್ಮಕ್ಕಳ ಬಗ್ಗೆ ಜಾಸ್ತಿ ಮಾತಾಡ್ಬಾರದು: ರಮೇಶ ಜಾರಕಿಹೊಳಿ

ಸಚಿವರು ಸರ್ಕಾರದ ಒಳಗೆದ್ದಾರೆ ಹೀಗಾಗಿ ಅನೇಕ ಒತ್ತಡಗಳು ಇರಬಹುದು. ಸಿಎಂ ಹಾಗೂ ಅವರನ್ನ ಕಂಟ್ರೋಲ್ ಮಾಡೋರು ಏನೋ ಹೇಳಿದ್ದಾರೆ. ಸರ್ಕಾರದ ಹೊರಗೆ ಇದ್ದು ಮಾತಾಡೋದು ಬೇರೆಯಾಗಿರುತ್ತದೆ. ಸರ್ಕಾರವನ್ನ ಪ್ರತಿನಿಧಿಸುತ್ತಿರುವುದರಿಂದ ಅವರ ಧ್ವನಿ ಕಡಿಮೆಯಾಗಿದೆ. ಯಾರ ಒತ್ತಡ ಇದೆ ಗೊತ್ತಿಲ್ಲ, ನಿರಾಣಿಯವರನ್ನೇ ಕೇಳಿದ್ರೇ ಗೊತ್ತಾಗುತ್ತೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. 

ಲಕ್ಷ್ಮೀ ಹೆಬ್ಬಾಳ್ಕರ್ ಗೆಲ್ಲಿಸಿದ್ದು ನಾನೇ ಎಂಬ ಸಚಿವ ರಮೇಶ್ ಜಾರಕಿಹೊಳಿ‌ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ರಮೇಶ್ ಜಾರಕಿಹೊಳಿ‌ಯನ್ನು ನಾನೇ ಮಂತ್ರಿ ಮಾಡಿದ್ದೇನೆ. ನಾವೇ ಹೈಕಮಾಂಡ್‌ಗೆ ಶಿಪಾರಸು ಮಾಡಿದ್ದೇವೆ. ಮಂತ್ರಿ ಮಾಡಿದ್ದೇನೆ ಎಂಬ ನನ್ನ ಹೇಳಿಕೆ, ನನ್ನ ಗೆಲ್ಲಿಸಿದ್ದಾರೆ ಎಂಬ ಅವರ ಹೇಳಿಕೆಗೆ ಜಾಸ್ತಿ ಪ್ರಾಮುಖ್ಯತೆ ಕೊಡಬೇಡಿ ಎಂದು ಹೇಳುವ ಮೂಲಕ ರಮೇಶ್ ಜಾರಕಿಹೊಳಿ‌ಗೆ ತಿರುಗೇಟು ನೀಡಿದ್ದಾರೆ. 

ನಾನು ಅಹಂಬ್ರಹ್ಮಾಸ್ಮಿ, ನಾನು ನನ್ನಿಂದ ಅಂದವರೆಲ್ಲ ಹೆಸರು ಇಲ್ಲದಂಗೆ ಹೋಗಿದ್ದಾರೆ. ನಾನು ನಗಣ್ಯ, ಲಕ್ಷ್ಮೀ ಹೆಬ್ಬಾಳ್ಕರ್‌ನ ಮತದಾರರು ಮಾಡಿದ್ದಾರೆ. ಯಾಕೆ ಇಷ್ಟೊಂದು ಟಾರ್ಗೆಟ್ ಮಾಡುತ್ತಿದ್ದಾರೆ ಅಂತಾ ಅವರನ್ನೇ ಕೇಳಿ ಎಂದು ಪ್ರಶ್ನಿಸಿದ್ದಾರೆ. 

ಕ್ಷೇತ್ರದ ಕಾಮಗಾರಿಗಳ ವೀಕ್ಷಣೆ, ಚಾಲನೆಗೆ ಲಕ್ಷ್ಮೀ ಹೆಬ್ಬಾಳ್ಕರ್ ಆಹ್ವಾನಿಸದ ವಿಚಾರದ ಬಗ್ಗೆ ಮಾತನಾಡಿದ ಅವರು,  ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಉದ್ಘಾಟನೆ ಕಾರ್ಯಕ್ರಮ ನಮ್ಮ ಅಧ್ಯಕ್ಷತೆಯಲ್ಲಿ ಆಗಬೇಕು. ಯಾರನ್ನೋ ಎಲ್ಲೆಲ್ಲೋ ಕರೆದುಕೊಂಡು ಹೋಗ್ತಾರೆ ಅದಕ್ಕೆಲ್ಲಾ ನಾನು ಬಾಯಿ ಬಡೆದುಕೊಳ್ಳೋಕಾಗುತ್ತಾ‌. ಗೋಕಾಕ್ ಮತದಾರರು ಕೈಜೋಡಿಸುವುದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ. ನೀವು ಎಷ್ಟು ವಿರೋಧ ಮಾಡ್ತೀರಿ ನಾನು ಅಷ್ಟು ಗಟ್ಟಿಯಾಗ್ತೀನಿ, ಯಾರೂ ಏನೇ ಒದ್ರಾಡಿದ್ರೂ ದೇವಸ್ಥಾನ ಹಾಳಾಗುವುದಿಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿ‌ಗೆ ಲಕ್ಷ್ಮೀ ಹೆಬ್ಬಾಳ್ಕರ್ ಟಾಂಗ್ ಕೊಟ್ಟಿದ್ದಾರೆ. 

click me!