ವರುಣನ ಕೃಪೆ​ಗಾಗಿ ಬಾನಿನತ್ತ ಸುರಪುರ ತಾಲೂಕಿನ ಅನ್ನದಾತರ ಚಿತ್ತ

By Kannadaprabha News  |  First Published Jun 4, 2023, 6:08 AM IST

ಜೂನ್‌ ಮೊದಲ ವಾರ ಆರಂಭವಾದರೂ ವರುಣನ ಆಗಮನವಾಗ​ದ ಹಿನ್ನೆಲೆಯ​ಲ್ಲಿ ಸುರಪುರ ತಾಲೂಕಿನಲ್ಲಿ ಮುಂಗಾರು ಚಟುವಟಿಕೆಗಳು ಚುರು​ಕಾ​ಗದೆ ಮಳೆರಾಯನಿಗಾಗಿ ಬಾನಿನತ್ತ ಅನ್ನದಾತರು ಚಿತ್ತ ನೆಟ್ಟಿದ್ದಾರೆ.


ನಾಗರಾಜ್‌ ನ್ಯಾಮತಿ

ಸುರಪುರ (ಜೂ.4) : ಜೂನ್‌ ಮೊದಲ ವಾರ ಆರಂಭವಾದರೂ ವರುಣನ ಆಗಮನವಾಗ​ದ ಹಿನ್ನೆಲೆಯ​ಲ್ಲಿ ಸುರಪುರ ತಾಲೂಕಿನಲ್ಲಿ ಮುಂಗಾರು ಚಟುವಟಿಕೆಗಳು ಚುರು​ಕಾ​ಗದೆ ಮಳೆರಾಯನಿಗಾಗಿ ಬಾನಿನತ್ತ ಅನ್ನದಾತರು ಚಿತ್ತ ನೆಟ್ಟಿದ್ದಾರೆ.

Latest Videos

undefined

ಕಳೆದೆರಡು ವರ್ಷದಿಂದ ಬಿಸಿಲುನಾಡು ಸುರಪುರದಲ್ಲಿ ಉತ್ತಮ ಮಳೆಯಾಗಿದೆ. ಈ ವರ್ಷವು ವಾಡಿಕೆ ಮಳೆಗಿಂತ ಹೆಚ್ಚಾಗಿದ್ದರೂ ಬಿತ್ತನೆಗೆ ಬೇಕಾದಷ್ಟುಮಳೆ ಬಂದಿಲ್ಲ. ಸುರಪುರ ಮತಕ್ಷೇತ್ರದಲ್ಲಿ 1,44,792 ಹೆಕ್ಟೇರ್‌ ಬಿತ್ತನೆಯ ಕೃಷಿ ಭೂಮಿಯಿದೆ. ಭತ್ತ- 55,145 ಹೆಕ್ಟೇರ್‌, ಸಜ್ಜೆ- 6,716 ಹೆಕ್ಟೇರ್‌, ತೊಗರಿ- 57,486 ಹೆಕ್ಟೇರ್‌, ಹೆಸರು- 217 ಹೆಕ್ಟೇರ್‌, ಹತ್ತಿ- 24,136 ಹೆಕ್ಟೇರ್‌ ಬಿತ್ತನೆ ಗುರಿ ಹೊಂದಲಾಗಿದೆ.

ರಸಗೊಬ್ಬರ ಬೇಡಿಕೆ:

ಹುಣಸಗಿ ಮತ್ತು ಸುರಪುರ ತಾಲೂಕುಗಳೆರಡರಲ್ಲೂ 31,856 ಮೆಟ್ರಿಕ್‌ ಟನ್‌ ರಸಗೊಬ್ಬರದ ಬೇಡಿಕೆಯಿದೆ. ಡಿಎಪಿ-6833 ಮೆ.ಟ., ಯುರಿಯಾ-13435 ಟನ್‌, ಎನ್‌ಪಿಕೆ-10317 ಮೆ.ಟ., ಎಂಡಿಪಿ-1185 ಮೆ.ಟ., ಎಸ್‌ಎಸ್‌ಪಿ-86 ಮೆ.ಟ. ಅವಶ್ಯಕತೆಯಿದೆ ಎಂಬುದಾಗಿ ಅಂದಾಜಿಸಲಾಗಿದೆ ಹಾಗೂ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆಗೆ ತೊಗರಿ, ಹತ್ತಿ, ಸಜ್ಜೆ, ಜೋಳ, ನವಣೆ, ಹೆಸರು ಸೇರಿದಂತೆ ವಿವಿಧ ಬೀಜಗಳನ್ನು ದಾಸ್ತಾನು ಮಾಡಿಕೊಳ್ಳಲಾಗುತ್ತಿದೆ ಎಂಬುದಾಗಿ ಕೃಷಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Wrestlers Protest: ಕುಸ್ತಿ​ಪ​ಟು​ಗಳ ಬೆನ್ನಿಗೆ ನಿಂತ ರೈತರು!

ಮೋಡ ಕವಿದ ವಾತಾವರಣ:

ಈಗಾಗಲೇ ಮುಂಗಾರು ಹಂಗಾಮಿನ ಕೃಷಿ ಚಟುವಟಕೆಗಳು ಬಹುತೇಕ ಮುಗಿದಿವೆ. ಆದರೆ, ಬಿತ್ತನೆಗೆ ಹೊಲಗಳನ್ನು ಹದ ಮಾಡಿಕೊಂಡಿರುವ ತಾಲೂಕಿನ ರೈತರಿಗೆ ವರುಣ ಇನ್ನೂ ಕೃಪೆ ತೋರಿಲ್ಲ. ಆದರೂ ಹುಣಸಗಿ ಮತ್ತು ಸುರಪುರ ತಾಲೂಕಿನಲ್ಲಿ ಮೋಡಕವಿದ ವಾತಾವರಣವಿದೆ ಎನ್ನುವುದು ಸಮಾಧಾನ ಸಂಗತಿಯಾಗಿದೆ.

ವಾಡಿಕೆ ಮಳೆ:

ಪ್ರಸಕ್ತ ಸಾಲಿನ 2023ರಲ್ಲಿ ಜನವರಿ ಮತ್ತು ಫೆಬ್ರವರಿಯಲ್ಲಿ ಮಳೆಯಾಗಿಲ್ಲ. ವಾಡಿಕೆ ಮಳೆ 54 ಮಿ.ಮೀ. ಇತ್ತು. ಆದರೆ 105 ಮಿ.ಮೀ. ಮಳೆಯಾಗಿದೆ. ಶೇ.93ರಷ್ಟುಹೆಚ್ಚಿನ ಮಳೆ ಬಂದಿದೆ. 2023 ಮಾಚ್‌ರ್‍ ಮೊದಲ ವಾರದಿಂದ ಮೇ 31ರ ವರೆಗೆ 105 ಮಿ.ಮೀ. ಮಳೆಯಾಗಿದೆ ಎಂದು ತಾಲೂಕಾಡಳಿತದ ಅಂಕಿಸಂಖ್ಯೆ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಕಕ್ಕೇರಾ ಹೋಬಳಿಯಲ್ಲಿ ಶೇ. 90, ಕೆಂಭಾವಿ ಹೋಬಳಿಯಲ್ಲಿ ಶೇ. 115, ಸುರಪುರ ಹೋಬಳಿಯಲ್ಲಿ ಶೇ. 90 ಹೆಚ್ಚಿನ ಮಳೆಯಾಗಿದೆ ಎನ್ನುವುದು ಕೃಷಿ ಇಲಾಖೆಯ ಅಧಿಕಾರಿಗಳ ಮಾತಾಗಿದ್ದರೂ ಕಳೆದ ವರ್ಷ ಮೇ ಕೊನೆಯಲ್ಲಿ ಉತ್ತಮ ಮಳೆ ಬಂದಿತ್ತು. ಬಿತ್ತನೆಗೆ ತಯಾರಿ ಮಾಡಿಕೊಂಡಿದ್ದೆವು. ಈ ಬಾರಿ ಮೋಡವಿದೆ. ಆದರೆ ಮಳೆ ಬರುತ್ತಿಲ್ಲ. ಯಾಕೋ ಈ ಸಾರಿ ಮಳೆ ಕೊರತೆ ಎದುರಾಗಿರುವುದು ನಮ್ಮಲ್ಲಿ ಆತಂಕ ಮೂಡಿ​ಸಿ​ದೆ ಎಂಬುದಾಗಿ ಯಲ್ಲಪ್ಪ ನಾಯಕ ಮಲ್ಲಿಭಾವಿ ತಿಳಿಸಿದ್ದಾರೆ.

ನೀರಿಲ್ಲದ ಕೆರೆ-ಹಳ್ಳ ಕೊಳ್ಳಗಳು:

ತಾಲೂಕಿನಲ್ಲಿರುವ ಹಳ್ಳ -ಕೊಳ್ಳಗಳು, ದೊಡ್ಡ ಕೆರೆಗಳು ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಬರುತ್ತಿದ್ದ ದೊಡ್ಡ ಮಳೆಗಳಿಂದ ತುಂಬಿ ಹರಿಯುತ್ತಿದ್ದವು. ಆದರೆ, ಈ ಬಾರಿ ಕೆರೆಗಳು ಕೋಡಿಬಿದ್ದಿಲ್ಲ. ಹಳ್ಳಕೊಳ್ಳಗಳಂತೂ ತುಂಬಿ ಹರಿದಿಲ್ಲ. ನಮ್ಮ ಬದುಕು ದೊಡ್ಡ ಮಳೆಗಾಗಿ ಕಾಯುವಂತಾಗಿದೆ ಎಂಬುದು ತಾಲೂಕಿನ ರೈತರ ಮಾತಾಗಿದೆ.

ಮುಂಗಾರು ಪೂರ್ವದಲ್ಲಿ ಆಗುವ ಮಳೆಗಳು ಈ ಸಾಲಿನಲ್ಲಿ ಬಂದಿಲ್ಲ. ಹಳ್ಳ-ಕೊಳ್ಳಗಳು, ಕೆರೆಗಳು ಸಂಪೂರ್ಣ ನೀರಿಲ್ಲದೆ ಬರಿದಾಗಿವೆ. ಜಲಜೀವಿಗಳು, ಜಾನುವಾರುಗಳು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

2023ರ ಮಾಚ್‌ರ್‍ ಮೊದಲ ವಾರದಿಂದ ಮೇ 31ರ ವರೆಗೆ 105 ಮಿ.ಮೀ. ಮಳೆಯಾಗಿದೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ಸಂಭವವಿದೆ. ಶೀಘ್ರದಲ್ಲೇ ವರುಣ ಕೃಪೆ ತೋರಿ ಎಲ್ಲೆಡೆ ಬಿತ್ತನೆ ಕಾರ್ಯ ಆರಂಭವಾಗಲಿದೆ.

- ಸುಬ್ಬಣ್ಣ ಜಮಖಂಡಿ, ತಹಸೀಲ್ದಾರ್‌, ಸುರಪುರ.

ಹುಣಸಗಿ ಮತ್ತು ಸುರಪುರ ತಾಲೂಕುಗಳೆರಡರಲ್ಲೂ 31,856 ಮೆಟ್ರಿಕ್‌ ಟನ್‌ ರಸಗೊಬ್ಬರದ ಬೇಡಿಕೆಯಿದೆ. 1.44 ಲಕ್ಷ ಹೆಕ್ಟೇರ್‌ಗಿಂತಲೂ ಅಧಿಕ ಬಿತ್ತನೆ ಗುರಿ ಹೊಂದಿದ್ದೇವೆ. ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗಿದೆ. ವಾಡಿಕೆಯಂತೆ ಈ ವರ್ಷವು ಮುಂಗಾರು ಉತ್ತಮವಾಗಿದ್ದು, ಜೂ.4ರಿಂದ ಮಾನ್ಸೂನ್‌ ಮಾರುತಗಳು ಬೀಸುವ ಸಾಧ್ಯತೆಯಿದೆ.

- ಗುರುನಾಥ, ಕೃಷಿ ಸಹಾಯಕ ನಿರ್ದೇಶಕ, ಸುರಪುರ.

ಕಳೆದ ವರ್ಷ ಎಲ್ಲೆಡೆ ಉತ್ತಮ ಮಳೆಯಾಗಿತ್ತು. ಎಲ್ಲೆಡೆ ಕೃಷಿ ಕಾರ್ಯಗಳು ಜೋರಾಗಿದ್ದವು. ಆದರೆ, ಮಳೆ ಆಗಿದೆ ಇರುವುದರಿಂದ ಹತ್ತಿ, ಸಜ್ಜೆ, ಶೇಂಗಾ, ಹೆಸರು ಬಿತ್ತನೆಯಾಗಿಲ್ಲ. ಮಳೆರಾಯ ಅನ್ನದಾತರ ಕೈಹಿಡಿಯಬೇಕಿದೆ. ರೈತರು ಮಳೆ ಬರುವಂತೆ ಶೀಘ್ರದಲ್ಲೇ ದೇವರ ಮೊರೆ ಹೋಗಾಲಾಗುತ್ತದೆ.

- ಚನ್ನಪ್ಪಗೌಡ, ದೇವಾಪುರದ ರೈತ.

Kolar: ಏಕಾಏಕಿ ಕುಸಿತ ಕಂಡ ರೇಷ್ಮೆ ಗೂಡಿನ ಧಾರಣೆ: ಕಂಗಾಲಾದ ರೇಷ್ಮೆ ಬೆಳೆಗಾರರು 

  • ಕಕ್ಕೇರಾ ಹೋಬಳಿ: ವಾಡಿಕೆ 54 ಮಿ. ಮೀ. ಬಿದ್ದ ಮಳೆ 103 ಹೆಚ್ಚಾದ ಮಳೆ ಶೇ.90
  • ಕೆಂಭಾವಿ ಹೋಬಳಿ: ವಾಡಿಕೆ 50 ಮಿ. ಮೀ., ಬಿದ್ದ ಮಳೆ 107, ಹೆಚ್ಚಾದ ಮಳೆ ಶೇ.115
  • ಸುರಪುರ ಹೋಬಳಿ: ವಾಡಿಕೆ 54ಮಿ. ಮೀ., ಬಿದ್ದ ಮಳೆ 103, ಹೆಚ್ಚಾದ ಮಳೆ ಶೇ.90
click me!