ಕೇಂದ್ರದಿಂದ ತುಮಕೂರು ಜಿಲ್ಲೆ ಎಲ್ಲಾ ವಿಧದಲ್ಲೂ ಅಭಿವೃದ್ಧಿ: ಜಿಎಸ್‌ಬಿ

By Kannadaprabha News  |  First Published Jun 4, 2023, 5:53 AM IST

ಪ್ರಧಾನಿಮಂತ್ರಿಯಾಗಿ ನರೇಂದ್ರ ಮೋದಿ 9 ವರ್ಷ ಪೂರೈಸಿದ್ದು, ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮೆಗಾ ಪುಡ್‌ಪಾರ್ಕ್, ಎಚ್‌ಎಎಲ್‌, ಇಸ್ರೋ ಸೇರಿದಂತೆ ಹಲವಾರು ಮಹತ್ವದ ಕೆಲಸಗಳು ಆಗಿವೆ ಎಂದು ಸಂಸದ ಜಿ.ಎಸ್‌.ಬಸವರಾಜು ತಿಳಿಸಿದ್ದಾರೆ.


 ತುಮಕೂರು :  ಪ್ರಧಾನಿಮಂತ್ರಿಯಾಗಿ ನರೇಂದ್ರ ಮೋದಿ 9 ವರ್ಷ ಪೂರೈಸಿದ್ದು, ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮೆಗಾ ಪುಡ್‌ಪಾರ್ಕ್, ಎಚ್‌ಎಎಲ್‌, ಇಸ್ರೋ ಸೇರಿದಂತೆ ಹಲವಾರು ಮಹತ್ವದ ಕೆಲಸಗಳು ಆಗಿವೆ ಎಂದು ಸಂಸದ ಜಿ.ಎಸ್‌.ಬಸವರಾಜು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ನೀರಾವರಿ, ಕೃಷಿ, ತೋಟಗಾರಿಕೆ, ಕೈಗಾರಿಕೆ ಸೇರಿದಂತೆ ಎಲ್ಲಾ ವಿಧದಲ್ಲಿಯೂ ಜಿಲ್ಲೆ ಅಭಿವೃದ್ದಿ ಕಂಡಿದೆ ಎಂದರು. ಆರ್ಥಿಕ ತಜ್ಞ ನಂಜುಂಡಪ್ಪ ವರದಿ ಅನ್ವಯ ತುಮಕೂರು ಜಿಲ್ಲೆಯ 8 ತಾಲೂಕುಗಳು ಅತಿ ಹಿಂದುಳಿದ ತಾಲೂಕುಗಳಾಗಿದ್ದವು. ಆದರೆ ಕಳೆದ 9 ವರ್ಷಗಳಲ್ಲಿ ಮೋದಿಯ ದೂರದೃಷ್ಟಿಯೋಜನೆಗಳ ಫಲವಾಗಿ ಇಂದು ಎಲ್ಲಾ ತಾಲೂಕುಗಳು ಮುಂದುವರೆದಿವೆ. ಮಿಷನ್‌ ಅಮೃತ ಸರೋವರ, ಅಟಲ ಭೂ ಜಲ ಯೋಜನೆಯ ಮೂಲಕ ಕೆರೆಗಳಲ್ಲಿದ್ದ ಹೂಳು ಎತ್ತಿ, ಎಲ್ಲಾ ಕೆರೆಗಳಿಗೆ ಅಂತರ್ಜಲ ವೃದ್ಧಿಯಾಗುವಂತೆ ಮಾಡಲಾಗಿದೆ. ಇದರ ಜೊತೆಗೆ ಭದ್ರ ಮೇಲ್ದಂಡೆ ಯೋಜನೆಗೆ 5000ಕ್ಕೂ ಹೆಚ್ಚು ಕೋಟಿ ಅನುದಾನ ನೀಡಲಾಗಿದೆ. ಇದರ ಭಾಗವಾಗಿ ಜಿಲ್ಲೆಯಲ್ಲಿ ಜಲ ಸಂವೃದ್ಧಿ ಹೆಚ್ಚಾಗಿ, ರೈತರು ಕೃಷಿ ಮಾಡಿ, ಸಮೃದ್ಧಿಯ ಜೀವನ ನಡೆಸುತಿದ್ದಾರೆ ಎಂದು ಜಿ.ಎಸ್‌.ಬಸವರಾಜು ನುಡಿದರು.

Latest Videos

undefined

ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ಸಿರಿಧಾನ್ಯ ಕೃಷಿಗೆ ಉತ್ತೇಜನ ನೀಡಲು ಪ್ರತಿ ಹೆಕ್ಟೇರ್‌ಗೆ 10 ಸಾವಿರ ರು. ಪೋ›ತ್ಸಾಹಧನ ನೀಡಲಾಗುತ್ತಿದೆ. ಅಲ್ಲದೆ ತೋಟಗಾರಿಕೆ ಇಲಾಖೆಯ ಒಂದು ಜಿಲ್ಲೆ, ಒಂದು ಉತ್ಪನ್ನದಲ್ಲಿ ತೆಂಗು ಆಯ್ಕೆಯಾಗಿದ್ದು, ಮೌಲ್ಯವರ್ಧಿತ ತೆಂಗಿನ ಉತ್ಪನ್ನಗಳು ಹೇರಳವಾಗಿವೆ. ಕೃಷಿ ಸಂಶೋಧನಾ ಸಂಸ್ಥೆ ಹಿರೇಹಳ್ಳಿಯ ಮೂಲಕ ಕೇಂದ್ರದ ಎಂಡಿಐ ಯೋಜನೆಯಡಿ ಡ್ಯಾಗ್ರನ್‌ ಪೂ›ಟ್‌ಗೆ ಸಂಬಂಧಿಸಿದ ಸೆಂಟರ್‌ ಆಫ್‌ ಎಕ್ಸಲೆನ್ಸ್‌ ಸ್ಥಾಪಿಸಲು ಅನುಮೋದನೆ ದೊರೆತಿರುವುದು ಸಂತೋಷದ ವಿಚಾರವಾಗಿದೆ ಎಂದರು.

ಜಿಲ್ಲೆಯಲ್ಲಿ ಕಳೆದ 9 ವರ್ಷಗಳಲ್ಲಿ ಕೈಗಾರಿಕೆಗೆ ಹೆಚ್ಚು ಒತ್ತು ನೀಡಲಾಗಿದ್ದು, ಬೆಂಗಳೂರು-ಮುಂಬೈ ಏಕನಾಮಿಕ್ಸ್‌ ಇಂಡಸ್ಟ್ರೀಯಲ್‌ ಕಾರಿಡಾರ್‌ಗೆ ಕೇಂದ್ರ ಸರ್ಕಾರ ಒಪ್ಪಿದ್ದು, ಮುಂದೊಂದು ದಿನ ವಸಂತನರಸಾಪುರ ಕೈಗಾರಿಕಾ ವಸಾಹತು ಮತ್ತೊಂದು ಗ್ರೇಟರ್‌ ನೋಯಿಡಾ ಆಗುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ. ಕಳೆದ ಫೆಬ್ರವರಿಯಲ್ಲಿ ಲೋಕಾರ್ಪಣೆಗೊಂಡ ಎಚ್‌ಎಎಲ್‌ ಬಹು ಉಪಯೋಗಿ ಲಘು ಹೆಲಿಕಾಪ್ಟರ್‌ ಘಟಕದಿಂದ ತುಮಕೂರು ಜಿಲ್ಲೆ ವಿಶ್ವ ಭೂಪಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ. ಅಲ್ಲದೆ ಹಳೆಯ ಎಚ್‌ಎಂಟಿ ಜಾಗದಲ್ಲಿ ಇರುವ ಇಸ್ರೋ ಘಟಕದಿಂದ ರಾಕೆಟ್‌ ಉಡಾವಣೆಗೆ ಬೇಕಾದ ಬಿಡಿ ಬಾಗಗಳ ಉತ್ಪಾದನಾ ಘಟಕ ಶೀಘ್ರದಲ್ಲಿಯೇ ಆರಂಭಗೊಳ್ಳಲಿದೆ ಎಂದು ಸಂಸದ ಜಿ.ಎಸ್‌.ಬಸವರಾಜು ತಿಳಿಸಿದರು.

ತುಮಕೂರು-ದಾವಣಗೆರೆ, ತುಮಕೂರು -ರಾಯದುರ್ಗ ರೈಲ್ವೆ ಲೈನ್‌ಗಳ ಜೊತೆಗೆ, ತುಮಕೂರು, ಕುಣಿಗಲ್‌, ಮದ್ದೂರು, ಚಾಮರಾಜನಗರ ಹೊಸ ರೈಲು ಮಾರ್ಗದ ಸರ್ವೆ ಕಾರ್ಯಸಹ ನಡೆದಿದೆ. ಚಳ್ಳಕೆರೆ, ಹಿರಿಯೂರು, ಚಿ.ನಾ.ಹಳ್ಳಿ, ತುರುವೇಕೆರೆ, ಚನ್ನರಾಯಪಟ್ಟಣ ಹೊಸ ರೈಲು ಮಾರ್ಗಕ್ಕೆ ಒಪ್ಪಿಗೆ ದೊರೆತಿದೆ. ತುಮಕೂರು ಜಿಲ್ಲೆಗೆ ಜಲಜೀವನ್‌ ಮೀಷನ್‌ ಯೋಜನೆ, 100 ಹಾಸಿಗೆಗಳ ಇಎಸ್‌ಐ ಆಸ್ಪತ್ರೆಯ ಮಂಜೂರಾತಿ, ಈ ಎಲ್ಲಾ ಯೋಜನೆಗಳ ಹಿಂದೆ ಪ್ರಧಾನಿ ನರೇಂದ್ರಮೋದಿ ಅವರ ಸಹಕಾರವಿದೆ ಎಂದರು.

ರಾಜ್ಯದ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳಿಂದ ಜನಸಾಮಾನ್ಯರಿಗೆ ಯಾವುದೇ ಉಪಯೋಗವಾಗದು. ಇದು ಕೇವಲ ಕಣ್ಣೋರೆಸೋ ತಂತ್ರ. ಇದರಿಂದ ಆರ್ಥಿಕ ಹೊರೆ ಹೆಚ್ಚಾಗಲಿದೆ. ಕೆಲಸಕ್ಕೆ ಜನರಿಲ್ಲದಂತಾಗುತ್ತದೆ. ನಿರುದ್ಯೋಗ ಭತ್ಯೆಯಿಂದ ಯುವಜನರಿಗೆ ಉದ್ಯೋಗ ಹುಡುಕುವ ಕಾತುರತೆ ಇಲ್ಲದಂತಾಗಿದೆ. ಹಣಕ್ಕಾಗಿ ಯಾರ ತಲೆ ಬೋಳಿಸುತ್ತಾರೆ ನೋಡಬೇಕಿದೆ ಎಂದು ಸಂಸದ ಜಿ.ಎಸ್‌.ಬಸವರಾಜು ವ್ಯಂಗವಾಡಿದರು.

ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಮುಂದಿನ ಬಾರಿ ಸೋಮಣ್ಣ ಅಭ್ಯರ್ಥಿಯಾಗುತ್ತಾರೆ ಎಂದು ಹೇಳಿಲ್ಲ. ಪತ್ರಿಕೆಯೊಂದರಲ್ಲಿ ಬಂದ ವರದಿಯನ್ನಷ್ಟೇ ಉಲ್ಲೇಖಿಸಿದ್ದೇನೆ. ನನ್ನ ನಂತರ ಯಾರು ಎಂದು ಹೇಳುವ ಹಕ್ಕು ನನಗಿಲ್ಲ. ಅದು ಪಕ್ಷದ ಹೈಕಮಾಂಡ್‌ ತೀರ್ಮಾನ. ನನ್ನ ಅಭಿಪ್ರಾಯ ಕೇಳಿದರೆ ಹೇಳುತ್ತೇನೆ ಎಂದು ಮುಂದಿನ ಎಂ.ಪಿ.ಅಭ್ಯರ್ಥಿ ವಿ.ಎಸ್‌.ಸೋಮಣ್ಣ ಎಂಬ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್‌.ಎಸ್‌.ರವಿಶಂಕರ್‌, ಮುಖಂಡರಾದ ಎಸ್‌.ಪಿ.ಚಿದಾನಂದ್‌, ಮಾಧ್ಯಮ ಪ್ರಮುಖ ಟಿ.ಆರ್‌.ಸದಾಶಿವಯ್ಯ, ಸಹ ಪ್ರಮುಖ ಜೈ.ಜಗದೀಶ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

click me!