100 ವಿದ್ಯಾರ್ಥಿಗಳಿಗೆ ತಲಾ 70,000: ಎಂಎಲ್ಸಿ

By Kannadaprabha News  |  First Published Jun 4, 2023, 5:56 AM IST

ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ತಾಲೂಕಿನ 100 ವಿದ್ಯಾರ್ಥಿಗಳಿಗೆ ತಲಾ 70 ಸಾವಿರ ರು.ಗಳನ್ನು ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ವಿತರಿಸಲಾಗುವುದು ಎಂದು ವಿಧಾನ ಪರಿಷತ್‌ ಸದಸ್ಯ ಚಿದಾನಂದ್‌ ಎಂ.ಗೌಡ ಹೇಳಿದರು.


  ಶಿರಾ :  ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ತಾಲೂಕಿನ 100 ವಿದ್ಯಾರ್ಥಿಗಳಿಗೆ ತಲಾ 70 ಸಾವಿರ ರು.ಗಳನ್ನು ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ವಿತರಿಸಲಾಗುವುದು ಎಂದು ವಿಧಾನ ಪರಿಷತ್‌ ಸದಸ್ಯ ಚಿದಾನಂದ್‌ ಎಂ.ಗೌಡ ಹೇಳಿದರು.

ಶನಿವಾರ ನಗರದ ಸೇವಾ ಸದನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಕಳೆದ 22 ವರ್ಷಗಳಿಂದಲೂ ಜೆಮ್ಸ್‌ ಎಜುಕೇಷನ್‌ ಟ್ರಸ್ಟ್‌ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದ್ದು, ಅದೇ ರೀತಿ ಈ ವರ್ಷವೂ ನೀಡಲಾಗುತ್ತಿದೆ. 100 ವಿದ್ಯಾರ್ಥಿಗಳು ಪಿಯುಸಿ ವಿದ್ಯಾಭ್ಯಾಸ ಮಾಡಲು ಅನುಕೂಲವಾಗುತ್ತದೆ. ಇದಕ್ಕೆ ಒಟ್ಟು 1.40 ಕೋಟಿ ರು. ಹಣ ಮೀಸಲಿಡಲಾಗಿದೆ ಹಾಗೂ ಸರ್ಕಾರಿ ಶಾಲೆಯ ಸುಮಾರು 15000 ವಿದ್ಯಾರ್ಥಿಗಳಿಗೆ 200 ಪೇಜ್‌ನ 6 ನೋಟ್‌ಬುಕ್‌ಗಳನ್ನು ವಿತರಿಸಲಾಗುವುದು. ಜೂನ್‌ 4ರ ಭಾನುವಾರದಿಂದ ವಿದ್ಯಾರ್ಥಿಗಳ ಮನೆ ಮನೆಗೆ ಹೋಗಿ ಚೆಕ್‌ಗಳನ್ನು ವಿತರಿಸಲಾಗುವುದು ಎಂದ ಅವರು ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 80 ರಿಂದ 90 ಅಂಕ ಪಡೆದ ವಿದ್ಯಾರ್ಥಿಗಳಿಗೆ 1000 ರು., ಶೇ. 90 ರಿಂದ 100 ಅಂಕ ಪಡೆದ ವಿದ್ಯಾರ್ಥಿಗಳಿಗೆ 2000 ರು., ಪಿಯುಸಿಯಲ್ಲಿ ಶೇ. 95 ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ 3000 ವಿದ್ಯಾರ್ಥಿ ವೇತನ ನೀಡಲು ಈ ಹಿಂದೆ ಅರ್ಜಿ ಆಹ್ವಾನಿಸಲಾಗಿತ್ತು. ಸುಮಾರು 1500 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು, ವಿದ್ಯಾರ್ಥಿಗಳು ಓದಿದ ಶಾಲೆಗಳಿಗೆ ತೆರಳಿ ಅವರಿಗೆ ಸನ್ಮಾನಿಸಿ ವಿದ್ಯಾರ್ಥಿವೇತನದ ಚೆಕ್‌ ವಿತರಿಸಲಾಗುವುದು ಎಂದರು.

Tap to resize

Latest Videos

ತುಮಕೂರು ಲೋಕಸಭಾ ಕ್ಷೇತ್ರಕ್ಕೆ ನೀವು ಅಭ್ಯರ್ಥಿಯಾಗಲು ಅವಕಾಶ ಬಂದರೆ ಸ್ಪರ್ಧಿಸುತ್ತಿರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಚಿದಾನಂದ್‌ ಎಂ.ಗೌಡ ಅವರು ನಾನು ವಿಧಾನ ಪರಿಷತ್‌ ಸದಸ್ಯನಾಗಿ ಈಗಾಗಲೇ ಎಲ್ಲಾ ತಾಲೂಕುಗಳಲ್ಲಿ ಸಂಚರಿಸಿ ಕೆಲಸ ಮಾಡುತ್ತಿದ್ದೇನೆ. ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ನನ್ನನ್ನು ಚುನಾವಣಾ ಉಸ್ತುವಾರಿಯನ್ನಾಗಿ ನೇಮಿಸಿದ್ದರು. ಅಲ್ಲಿಯೂ ಸಹ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡು ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಪಕ್ಷ ನನ್ನನ್ನು ಗುರುತಿಸಿ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್‌ ನೀಡಿದರೆ ಖಂಡಿತ ಸ್ಪರ್ಧಿಸುತ್ತೇನೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಸದಸ್ಯ ರಂಗರಾಜು, ಮಾಜಿ ಸದಸ್ಯ ನಟರಾಜು, ತಾ.ಪಂ.ಮಾಜಿ ಸದಸ್ಯ ಹೊನ್ನಗೊಂಡನಹಳ್ಳಿ ಚಿಕ್ಕಣ್ಣ, ಗ್ರಾ.ಪಂ.ಮಾಜಿ ಅಧ್ಯಕ್ಷ ಈರಣ್ಣ ಪಟೇಲ್‌, ಗ್ರಾ.ಪಂ. ಸದಸ್ಯ ಶಿವಲಿಂಗಯ್ಯ ಸೇರಿದಂತೆ ಹಲವರು ಹಾಜರಿದ್ದರು 

click me!