ಲಾಕ್‌ಡೌನ್‌ ಎಫೆಕ್ಟ್‌: ತುತ್ತು ಅನ್ನಕ್ಕಾಗಿ ಸರದಿಯಲ್ಲಿ ನಿಂತ ಕಾರ್ಮಿಕರು

By Kannadaprabha News  |  First Published May 31, 2021, 3:16 PM IST

* ಕೊಡುವ ಕೈಗಳತ್ತ ಹಸಿವಿನಿಂದ ಕಂಗೆಟ್ಟವರ ಕಣ್ಣು
* ಮುಂದುವರಿದಿದೆ ಹಸಿವಿನ ಸಂಟಕಗಳ ಕಥೆ
* ಸ್ವಾಭಿಮಾನ ಬದಿಗಿಟ್ಟು ಅನ್ನಕ್ಕಾಗಿ ಸರದಿಯಲ್ಲಿ ನಿಲ್ಲುವ ಕಾರ್ಮಿಕರು
 


ಮಯೂರ ಹೆಗಡೆ

ಹುಬ್ಬಳ್ಳಿ(ಮೇ.31):  ನರಗುಂದದ ಯಲ್ಲಪ್ಪನ ಕಥೆಯಿದು. ಕಳೆದ ವರ್ಷ ಇವರು ಮಗಳ ಮದುವೆ ಮಾಡಿದ್ದರು. ಅತಿವೃಷ್ಟಿಗೆ ನಿರೀಕ್ಷಿತ ಬೆಳೆ ಬಾರದೆ ಸಾಲ ಹಾಗೆ ಉಳಿದುಬಿಟ್ಟಿದೆ. ದುಡಿಯಲೆಂದು ಹುಬ್ಬಳ್ಳಿಗೆ ಬಂದವರು ಕೆಲಸವಿಲ್ಲದೆ ರೈಲ್ವೆ ನಿಲ್ದಾಣದಲ್ಲಿ ಉಳಿದಿದ್ದಾರೆ. ಊಟ ಉಪಾಹಾರವನ್ನು ದಾನಿಗಳು ಯಾರಾದರೂ ತಂದು ಕೊಡುತ್ತಾರಾ ಎಂದು ದಿನವಿಡೀ ಕಾದು ಕುಳಿತಿರುತ್ತಾರೆ.

Tap to resize

Latest Videos

ಇಲ್ಲೇ ಸನಿಹದ ಯಲಿವಾಳದ ನಾಗರಾಜ ಮನೆ ಕಟ್ಟಿಸಿದ ಸಾಲ ಹಾಗೇ ಉಳಿದು ಬಡ್ಡಿ ಬೆಳೆದಿದೆ. ಹಣ ಹೊಟ್ಟೆ ಬಟ್ಟೆಗಾಗಿ ಹುಬ್ಬಳ್ಳಿಗೆ ಬಂದ ಇವರ ಕೈ ಬರಿದಾಗಿದೆ. ಒಂದು ಹೊತ್ತಿಗೆ ಹೊಟ್ಟೆ ತುಂಬಿಸಿಕೊಳ್ಳಲು ಕೊಡುವ ಕೈಗಳತ್ತ ಕಣ್ಣು ಹಾಯಿಸಬೇಕಾಗಿದೆ..

ಮಧ್ಯಾಹ್ನ ಆಗುತ್ತಿದ್ದಂತೆ ನಗರದ ಕಾರ್ಪೊರೇಶನ್‌, ರೈಲ್ವೆ ನಿಲ್ದಾಣ, ಗಬ್ಬೂರು ವೃತ್ತದಲ್ಲಿ ಊಟ ಕೊಡುವ ದಾನಿಗಳ ನಿರೀಕ್ಷೆಯಲ್ಲಿರುವ ಕೆಲಸವಿಲ್ಲದ , ಅಂಗವಿಕಲರ ಹಸಿವಿನ ಸಂಕಟಗಳಿವು. ಇವರೆಲ್ಲ ತಮ್ಮ ಬ್ಯಾಗ್‌ ಹೊತ್ತು ಮಕ್ಕಳ ಜತೆಗೆ ದಾನಿಗಳಿಗೆ ಕಾದು ಸಿಕ್ಕ ಸಿಕ್ಕ ಕಟ್ಟೆಮೇಲೆ ಕುಳಿತಿರುತ್ತಾರೆ. ಯಾರಾದರೂ ಕಾರಿನಲ್ಲಿ ಬಂದು ಅಡುಗೆಯ ಮುಚ್ಚಳ ತೆಗೆಯುತ್ತಿದ್ದಂತೆ ಎಷ್ಟೋ ದಿನಗಳ ರೂಢಿಯಂತೆ ಎಲ್ಲರೂ ಸರದಿ ಸಾಲಲ್ಲಿ ನಿಂತು ಕೈ ಒಡ್ಡುತ್ತಿದ್ದಾರೆ. ಬಂದು ಕೊಟ್ಟರೆ ಪಡೆಯಬೇಕು ಇಲ್ಲವಾದರೆ ಹಸಿದ ಹೊಟ್ಟೆಯಲ್ಲೇ ಇರುತ್ತಿದ್ದಾರೆ.

ಲಾಕ್‌ಡೌನ್‌ ಕುರಿತು ಕಾದು ನೋಡಿ ನಿರ್ಧಾರ: ಜಗದೀಶ್‌ ಶೆಟ್ಟರ್‌

ಇಲ್ಲಿ ಒಬ್ಬೊಬ್ಬರದ್ದು ಒಂದೊಂದು ಕಥೆಯಿದೆ. ಕೆಲಸಕ್ಕೆ ಬರಲು ನೂರಾರು ವ್ಯಥೆಯ ಹಿನ್ನೆಲೆಗಳಿವೆ. ಆದರೆ ಅದೆಲ್ಲ ಸಾಕಾರಗೊಳಿಸಿಕೊಳ್ಳಲು ಬಂದ ದುಡಿಯುವ ಕೈಗಳನ್ನು ಕೊರೋನಾ ಲಾಕ್‌ಡೌನ್‌ ಎಂಬ ಒಂದೇ ಕಾರಣ ಕಟ್ಟಿಹಾಕಿದೆ.
ನಮ್ಮ ಪೋಟೋ ತೆಗೆದ ಪೇಪರ್‌ನ್ಯಾಗ ಹಾಕಬ್ಯಾಡ್ರಿಪಾ..ದುಡ್ಕೊಂಡು ತಿನ್ನೋರು ನಾವು. ಈಗೆನೊ ಪರಿಸ್ಥಿತಿ ಹೀಂಗ ಬಂದದ, ಇಲ್ಲೀಗ ಬಂದು ಊಟ ತಗಳಕತ್ತೀವಿ. ನಾಳಿ ಕೆಲಸ ಶುರುವಾದ್ರ ಇಲ್ಲಿ ಯಾರ್‌ ಬರ್ತಾರ? ಎಂದು ಹೇಳಿದ್ದು ಗಟ್ಟಿಮುಟ್ಟಾಗಿದ್ದ ಕಟ್ಟಡ ಕಾರ್ಮಿಕ ಅಶೋಕ. ಮನ್ಯಾಗ ದುಡಿಯೋರು ಯಾರೂ ಇಲ್ರಿ. ಅವ್ವ, ಅಕ್ಕನಿಗೆ ಪ್ರತಿ ತಿಂಗಳ ದುಡ್ಡು ಮನೀಗ ಕೊಡ್ತಿದ್ದೆ, ಆದ್ರ ಈಗ ನನಗ ರೊಕ್ಕಿಲ್ಲದಂಗ ಆಗೇತಿ. ಏನ್‌ ಮಾಡ್ಬೇಕ ತಿಳಿವಲ್ದು ಎಂದು ವಿಷಾದ ತುಂಬಿದ ವ್ಯಂಗ್ಯದ ನಗು ಬೀರಿದ.

ಕೆಲಸ ಒಂದಿನ ಇದ್ರ ನಾಲ್ಕು ದಿನ ಸಿಗುತ್ತಿಲ್ಲ. ನಾವು ಗುತ್ತಿಗೆ ತೆಗೆದುಕೊಂಡು ಕಟ್ಟಡದ ಕಚ್ಚಾ ಸಾಮಗ್ರಿಗಳನ್ನು ಸ್ಥಳಾಂತರ ಮಾಡುತ್ತೇವೆ. ಕಟ್ಟಡ ಕೆಲಸಕ್ಕೆ ಬೇಕಾದ ಸರಕು ಬರುತ್ತಿಲ್ಲ. ಹೀಗಾಗಿ ನಮಗೆ ಕೆಲಸವೇ ಇಲ್ಲದಂತಾಗಿದೆ. ಲಾಕ್‌ಡೌನ್‌ ವಿಸ್ತರಣೆ ಆಗುತ್ತದೆಂದು ಗೊತ್ತಿದ್ದರೆ ಮೊದಲೇ ಊರು ಸೇರಿ ಬಿಡುತ್ತಿದ್ದೆವು. ಈಗ ಅದಕ್ಕೂ ಅವಕಾಶ ಇಲ್ಲದಂತಾಗಿದೆ ಎಂದು ಊಟ ಪಡೆಯುತ್ತಿದ್ದ ಹನುಮಂತಪ್ಪ ಬೇಸರ ತೋಡಿಕೊಂಡರು.
ಆಗ ರೈಲ್ವೆ ಸ್ಟೇಷನ್ನಿಗೆ ಹೋದ್ರ ಸಾಕಾಗೇತ್ರಿ. ಕಾಂಟ್ರ್ಯಾಕ್ಟರ್‌ಗಳು ಬಂದ ಕೆಲಸಕ್ಕ ಕರ್ಕೊಂಡು ಹೋಗ್ತಿದ್ರು. ಈಗ ನಾವಾಗಿ ಕೆಲಸ ಐತೇನ್ರಿ ಎಂದು ಕೇಳಬೇಕಾಗಿದೆ. ಬೆಳಗ್ಗೆ ಸ್ಟೇಷನ್ನಿಗ ಹೋಗಿ ಮಧ್ಯಾಹ್ನದವರೆಗ ಕಾದ್ರೂ ಕೆಲಸ ಸಿಗ್ತಿಲ್ಲ. ಹೀಂಗ ಕಾರ್ಪೋರೇಷನ್‌ ಹತ್ರ ಬಂದು ಊಟ ತಗಂಡು ತಿನ್ನಬೇಕಾಹೈತಿ ಎನ್ನುತ್ತಾರೆ.

ಇಂದಿರಾ ಕ್ಯಾಂಟೀನ್‌ ಬಾಳ ದೂರ ಐತ್ರಿ..ನಂಗ ನಡೆಯಕಾಗಂಗಿಲ್ರಿ. ಇಲ್ಲ ಯಾರರೂ ಏನರ ಕೊಡ್ತಾರ ಅದ್ನ ತಿಂತೇನಿ. ರಾತ್ರಿ ಮಾತ್ರ ಏನೂ ಸಿಗಂಗಿಲ್ಲ. ಹಂಗಾಗಿ ಈಗ್ಲ ಎರಡು ಪಾಕೀಟ ಊಟ ತಗೊಂಡಬಿಡ್ತಿನ್ರಿ ಎಂದು ವೃದ್ಧನೊಬ್ಬ ಹೇಳಿದ.

ನಗರದಲ್ಲಿ 9 ಇಂದಿರಾ ಕ್ಯಾಂಟೀನ್‌ಗಳು ಉಚಿತವಾಗಿ ಊಟ ಕೊಡುತ್ತಿವೆ. ಪ್ರತಿನಿತ್ಯ 300-500 ಜನ ಇಲ್ಲಿಂದ ಆಹಾರ ಪಡೆಯುತ್ತಿದ್ದಾರೆ. ಆದರೂ ಹಸಿವಿನ ಕಣ್ಣುಗಳ ಕಥೆ ಮುಂದುವರಿದಿದೆ.
 

click me!