* ನಿಷೇಧದ ನಡುವೆಯೂ ಮಾಂಸ, ಕಾಯಿಪಲ್ಲೆ, ಹಣ್ಣು ಮಾರಾಟ ಜೋರು
* ನಗರ, ಗ್ರಾಮೀಣ ಭಾಗದಲ್ಲಿ ವಿವಾಹ ಮಹೋತ್ಸವಗಳ ಅಬ್ಬರ
* ಗಾಳಿಗೆ ತೂರಿದ ಕೋವಿಡ್ ನಿಯಂತ್ರಣದ ನಿಯಮಗಳ ಪಾಲನೆ
ರಾಮಕೃಷ್ಣ ದಾಸರಿ
ರಾಯಚೂರು(ಮೇ.31): ಕೊರೋನಾ ಎರಡನೇ ಅಲೆ ಆರ್ಭಟಕ್ಕೆ ಬ್ರೇಕ್ ಹಾಕುವುದಕ್ಕಾಗಿ ಜಾರಿಗೊಂಡಿರುವ ಸಂಪೂರ್ಣ ಲಾಕ್‌ಡೌನ್ ದಿನೇ ದಿನೆ ಅರ್ಥ ಕಳೆದುಕೊಳ್ಳಲಾರಂಭಿಸುತ್ತಿದೆ.
undefined
ಜಿಲ್ಲೆಯಾದ್ಯಂತ ಪಾಸಿಟಿವ್ ಪ್ರಕರಣಗಳ ಸಂಖ್ಯೆಯು ಇಳಿಕೆಯತ್ತ ಸಾಗಿರುವುದು ಒಂದು ಕಡೆಯಾದರೆ ಜಿಲ್ಲಾಡಳಿತವು ಗ್ರಾಮೀಣ ಭಾಗದ ಸೋಂಕಿತರನ್ನು ಕೋವಿಡ್ ಕೇರ್ ಕೇಂದ್ರಗಳಿಗೆ ಸಾಗಿಸುವಲ್ಲಿ ನಿತರಾಗಿರುವುದರಿಂದ ಎಲ್ಲೆಡೆ ಕೋವಿಡ್ ನಿಯಂತ್ರಣದ ನಿಯಮಗಳ ಪಾಲನೆ ಗಾಳಿಗೆ ತೂರಲಾಗುತ್ತಿದ್ದು, ಹೆಸರಿಗೆ ಮಾತ್ರ ಕಠಿಣ ಲಾಕ್‌ಡೌನ್ ಎನ್ನುವ ಪರಿಸ್ಥಿತಿಯು ನಿರ್ಮಾಣಗೊಂಡಿದೆ.
ಸಂಪೂರ್ಣ ಲಾಕ್‌ಡೌನ್ ಮೂರು ದಿನಗಳಿಗೊಮ್ಮೆ (ವಾರದಲ್ಲಿ ಎರಡು ಸಲ)ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನಂತರ ಎಲ್ಲವೂ ಬಂದ್ ಮಾಡಬೇಕು, ಅನಗತ್ಯವಾಗಿ ರಸ್ತೆಗಳ ಮೇಲೆ ಓಡಾಡಕೂಡದು ಎನ್ನುವ ನಿಯಮಗಳಿವೆ. ಆದರೂ ಜಿಲ್ಲೆಯಾದ್ಯಂತ ಕದ್ದುಮುಚ್ಚಿ ಕಿರಾಣಿ ವ್ಯಾಪಾರ, ಮಾಂಸ ಮಾರಾಟ, ಹಣ್ಣು-ಕಾಯಿಪಲ್ಲೆ ಖರೀದಿ, ಆಟೋಗಳ ಓಡಾಟ ಹೀಗೆ ಹಲವು ರೀತಿಯ ಚಟುವಟಿಕೆಗಳು ನಡೆಯುತ್ತಲೆಯೇ ಇದ್ದರು ಸಹ ಜಿಲ್ಲಾಡಳಿತ, ಪೊಲೀಸ್ ಇಲಾಖೆಯು ಕಂಡು ಕಾಣದಂತೆ ವರ್ತಿಸುತ್ತಿದೆ.
ಕೋವಿಡ್‌ನಿಂದ ಗುಣಮುಖರಾದರೂ ಮಕ್ಕಳಿಗೆ ಕಾಡುತ್ತಿದೆ 'ಕವಾಸಕಿ' ಕಂಟಕ
ಖರೀದಿ ನಿರಂತರ:
ಕೇವಲ ಭಾನುವಾರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಬೇಕಾಗಿತ್ತು. ಆದರೆ ಈ ದಿನ ಮಾಂಸ ಮಾರಾಟಕ್ಕೆ ಜನ ಮುಗಿಬೀಳುತ್ತಾರೆ ಎನ್ನುವ ಕಾರಣಕ್ಕೆ ಜಿಲ್ಲಾಡಳಿತ ಸೋಮವಾರ ಮಧ್ಯಾಹ್ನ 2 ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದೆ. ಆದರೂ ಸಹ ನಗರ ಸೇರಿದಂತೆ ಜಿಲ್ಲೆ ವಿವಿಧ ತಾಲೂಕು ಹಾಗೂ ಗ್ರಾಮೀಣ ಭಾಗದಲ್ಲಿ ಮಾಂಸ ಖರೀದಿಯು ಜೋರಾಗಿತ್ತು. ಜನರೇ ಮಾಂಸದ ಅಂಗಡಿಗಳ ಮುಂದೆ ಕ್ಯೂನಿಂತಿದ್ದರು. ಇನ್ನು ಸಂಪೂರ್ಣ ಲಾಕ್‌ಡೌನ್ ವೇಳೆಯಲ್ಲಿ ಕಾಯಿಪಲ್ಲೆ, ಹಣ್ಣು ಮಾರಾಟವು ನಿರಂತರವಾಗಿ ನಡೆಯುತ್ತಿದ್ದರು ಇದನ್ನು ತಡೆಯುವ ಕಾರ್ಯವು ನಡೆಯುತ್ತಿಲ್ಲ.
ವಿವಾಹಗಳ ಮೇಲೆ ತಪ್ಪಿದ ನಿಗಾ:
ಎಷ್ಟೇ ಕಠಿಣ ಲಾಕ್‌ಡೌನ್ ಜಾರಿಗೊಳಿಸಿದರು ಸಹ ವಿವಾಹ ಮಹೋತ್ಸವಗಳು ಜರುಗುತ್ತಲೆಯೇ ಇವೆ. ರಾಯಚೂರು ತಾಲೂಕಿನಲ್ಲೇ ಏ.12 ರಿಂದ ಮೇ 20ರವರೆಗೆ 1,200ಕ್ಕೂ ಅಧಿಕ ಮದುವೆ ಸಮಾರಂಭಗಳು ನಡೆದಿವೆ. ಇದು ಕೇವಲ ಒಂದು ತಾಲೂಕಿಗೆ ಸಂಬಂಧಿಸಿದ ಸಂಗತಿಯಾಗಿದ್ದು, ಇನ್ನು ಜಿಲ್ಲೆ ವಿವಿಧ ಆರು ತಾಲೂಕುಗಳಲ್ಲಿ ಸಾವಿರಾರು ಮದುವೆ ಸಮಾರಂಭಗಳು ನಡೆಯುತ್ತಲೇ ಇವೆ. ವಿವಾಹ ಮಹೋತ್ಸವಕ್ಕೆ ಕೇವಲ 10 ರಿಂದ 50 ಜನ ಮಾತ್ರ ಸೇರಬೇಕು ಎನ್ನುವ ನಿಯಮವಿದ್ದರು ಸಹ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ. ಸ್ಥಳೀಯ ಆಡಳಿತ ಸಂಸ್ಥೆಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಪಂನ ಸಿಬ್ಬಂದಿ ವಿವಾಹಗಳ ಮೇಲೆ ನಿಗಾ ವಹಿಸಿರುವುದೇ ತಪ್ಪಿದ್ದರಿಂದ ಇಷ್ಟೊಂದು ಪ್ರಮಾಣದಲ್ಲಿ ಮದುವೆಗಳು, ಸಮಾರಂಭದಲ್ಲಿ ಸೇರುತ್ತಿರುವ ಜನರ ಸಂಖ್ಯೆಯು ಜಾಸ್ತಿಯಾಗುತ್ತಲೆಯೇ ಇವೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona