
ಧಾರವಾಡ: ದೇಸಿ ಬೀಜಗಳ ಸಂರಕ್ಷಣೆ, ಕೃಷಿ ಜೀವವೈವಿಧ್ಯದ ಉಳಿವು ಹಾಗೂ ಸುಸ್ಥಿರ ಕೃಷಿ ಪದ್ಧತಿಗಳ ಉತ್ತೇಜನದಲ್ಲಿ ಅಪೂರ್ವ ಸಾಧನೆ ಮಾಡಿರುವ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ತೀರ್ಥ ಗ್ರಾಮದ 'ಬೀಬಿ ಫಾತಿಮಾ ಮಹಿಳಾ ಸ್ವಸಹಾಯ ಸಂಘ'ಕ್ಕೆ ಪ್ರತಿಷ್ಠಿತ 'ಸಸ್ಯ ತಳಿ ಸಂರಕ್ಷಕ ಸಮುದಾಯ ಪ್ರಶಸ್ತಿ' (Plant Genome Saviour Community Award) ಲಭಿಸಿದೆ.
10 ಲಕ್ಷ ರೂಪಾಯಿ ನಗದು ಬಹುಮಾನ ಹಾಗೂ ಪ್ರಮಾಣಪತ್ರವನ್ನೊಳಗೊಂಡ ಈ ರಾಷ್ಟ್ರಮಟ್ಟದ ಗೌರವವು ಉತ್ತರ ಕರ್ನಾಟಕದ ಗ್ರಾಮೀಣ ಮಹಿಳೆಯರ ಅಸಾಧಾರಣ ಕೃಷಿ ಸಾಧನೆಗೆ ಸಿಕ್ಕ ಹೆಮ್ಮೆಯ ಮನ್ನಣೆಯಾಗಿದೆ. ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಧೀನದಲ್ಲಿರುವ 'ಸಸ್ಯ ತಳಿ ಮತ್ತು ರೈತರ ಹಕ್ಕುಗಳ ಸಂರಕ್ಷಣಾ ಪ್ರಾಧಿಕಾರ' (PPVFRA) ಈ ಪ್ರಶಸ್ತಿಯನ್ನು ಘೋಷಿಸಿದ್ದು, ನವೆಂಬರ್ 12ರಂದು ನವದೆಹಲಿಯಲ್ಲಿ ನಡೆಯಲಿರುವ ವೈಭವದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
2018ರಲ್ಲಿ ಕೇವಲ 15 ಗ್ರಾಮೀಣ ಮಹಿಳೆಯರೊಂದಿಗೆ ಆರಂಭವಾದ ಈ ಸ್ವಸಹಾಯ ಸಂಘವು, 'ಸಹಜ ಸಮೃದ್ಧ' ಸಂಸ್ಥೆಯ ಮಾರ್ಗದರ್ಶನದಲ್ಲಿ ಪ್ರಸ್ತುತ ಸುಮಾರು 30 ಗ್ರಾಮಗಳಲ್ಲಿ ಸಿರಿಧಾನ್ಯ ಆಧಾರಿತ ಮಿಶ್ರ ಬೆಳೆ ಪದ್ಧತಿಯನ್ನು ಪುನರುಜ್ಜೀವನಗೊಳಿಸುತ್ತಿದೆ. ಸ್ಥಳೀಯ ಮಣ್ಣು ಹಾಗೂ ಹವಾಮಾನ ವೈಪರೀತ್ಯಕ್ಕೆ ಹೊಂದಿಕೊಂಡು ಬೆಳೆಯುವ 150ಕ್ಕೂ ಹೆಚ್ಚು ಅಪರೂಪದ ದೇಸಿ ಸಿರಿಧಾನ್ಯ ತಳಿಗಳನ್ನು ಉಳಿಸಿ ಬೆಳೆಸಿರುವುದು ಈ ಮಹಿಳಾ ಸಂಘದ ಪ್ರಮುಖ ಮೈಲಿಗಲ್ಲಾಗಿದೆ.
ಅಳಿವಿನಂಚಿನಲ್ಲಿರುವ ತಳಿಗಳನ್ನು ರಕ್ಷಿಸಲು 'ಸಮುದಾಯ ಬೀಜ ಬ್ಯಾಂಕ್' ಸ್ಥಾಪಿಸಿರುವ ಸಂಘವು, ಆಸಕ್ತ ರೈತರಿಗೆ ಉಚಿತವಾಗಿ ದೇಸಿ ಬೀಜಗಳನ್ನು ವಿತರಿಸುತ್ತಿದೆ. ಸೆಲ್ಕೋ ಫೌಂಡೇಶನ್, ಭಾರತೀಯ ಸಿರಿಧಾನ್ಯ ಸಂಶೋಧನಾ ಸಂಸ್ಥೆ (IIMR) ಹಾಗೂ ಕೃಷಿ ಇಲಾಖೆಯ ಸಹಯೋಗದಲ್ಲಿ ಸೌರಶಕ್ತಿ ಆಧಾರಿತ ಧಾನ್ಯ ಸಂಸ್ಕರಣಾ ಘಟಕವನ್ನೂ ಸ್ಥಾಪಿಸಲಾಗಿದೆ. ಇಲ್ಲಿ ದೇಸಿ ಧಾನ್ಯಗಳಿಂದ ಹಿಟ್ಟು, ರೊಟ್ಟಿ, ಶಾವಿಗೆ ಸೇರಿದಂತೆ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ.
ಕೂಲಿ ಕೆಲಸ ಮತ್ತು ಗಾರ್ಮೆಂಟ್ ಕಾರ್ಖಾನೆಗೆ ಹೋಗುತ್ತಿದ್ದ ಮಹಿಳೆಯರು ಒಗ್ಗೂಡಿ ಈ ಸಂಘವನ್ನು ಆರಂಭಿಸಿದೆವು. ರೈತರು ಕೇವಲ ಬೆಳೆಗಾರರಷ್ಟೇ ಅಲ್ಲ; ಅವರು ಜೀವವೈವಿಧ್ಯದ ಸಂರಕ್ಷಕರು ಹಾಗೂ ಭವಿಷ್ಯದ ಆಹಾರ ಭದ್ರತೆಯ ಕಾವಲುಗಾರರು ಎಂಬ ಸಂದೇಶವನ್ನು ಈ ಪ್ರಶಸ್ತಿ ಸಾರುತ್ತದೆ.
— ಬೀಬಿಜಾನ್ ಹಳೇಮನಿ, ಅಧ್ಯಕ್ಷೆ, ಬೀಬಿ ಫಾತಿಮಾ ಮಹಿಳಾ ಸ್ವಸಹಾಯ ಸಂಘ
ಈ ಸಂಘದ ಪರಿಸರಸ್ನೇಹಿ ಹಾಗೂ ಜೀವವೈವಿಧ್ಯ ಕಾಳಜಿಗೆ 2025ರಲ್ಲಿ ವಿಶ್ವಸಂಸ್ಥೆಯ (UNDP) ಪ್ರತಿಷ್ಠಿತ "ಈಕ್ವೇಟರ್ ಇನಿಷಿಯೇಟಿವ್ ಪ್ರಶಸ್ತಿ" (Equator Prize) ಲಭಿಸಿತ್ತು. ಇದೀಗ ಅಂತರರಾಷ್ಟ್ರೀಯ ಮನ್ನಣೆಯ ಬೆನ್ನಲ್ಲೇ ಕೇಂದ್ರ ಸರ್ಕಾರದ ರಾಷ್ಟ್ರಮಟ್ಟದ ಪ್ರಶಸ್ತಿಯೂ ಒಲಿದಿರುವುದು ಸಂಘದ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ತೊಡಿಸಿದಂತಾಗಿದೆ.
ತೀರ್ಥ ಗ್ರಾಮದ ಬೀಬಿ ಫಾತಿಮಾ ಮಹಿಳಾ ಸ್ವಸಹಾಯ ಸಂಘವು ಅಂತರರಾಷ್ಟ್ರೀಯ ಪ್ರಶಸ್ತಿಯ ಬೆನ್ನಲ್ಲೇ ಇದೀಗ ಪ್ರತಿಷ್ಠಿತ ರಾಷ್ಟ್ರೀಯ ಸಸ್ಯ ತಳಿ ಸಂರಕ್ಷಕ ಸಮುದಾಯ ಪ್ರಶಸ್ತಿಗೆ ಆಯ್ಕೆಯಾಗಿರುವುದು ಇಡೀ ತಾಲೂಕಿಗೆ ಹೆಮ್ಮೆಯ ಸಂಗತಿ. ಸಂಘದ ಎಲ್ಲಾ ಸಾಧಕ ಮಹಿಳೆಯರಿಗೆ ಗ್ರಾಮ ಪಂಚಾಯತಿ ಪರವಾಗಿ ಹಾರ್ದಿಕ ಅಭಿನಂದನೆಗಳು.
— ಗುರುನಾಥಗೌಡ ಪಾಟೀಲ, ಮಾಜಿ ಅಧ್ಯಕ್ಷರು, ಮಳಲಿ ಗ್ರಾಮ ಪಂಚಾಯತಿ