ಮಗು ಕೋಮಾಗೆ ಜಾರಿದ ವಿವಾದ: ವೈದ್ಯರ ನಿರ್ಲಕ್ಷ್ಯದ ಆರೋಪ ತಳ್ಳಿಹಾಕಿ ಸ್ಪಷ್ಟನೆ ಕೊಟ್ಟ ಕ್ಲೌಡ್‌ನೈನ್ ಆಸ್ಪತ್ರೆ

Published : Nov 08, 2026, 01:09 PM IST
protest against cloudnine hospital

ಸಾರಾಂಶ

ನಾಗರಬಾವಿಯ ಕ್ಲೌಡ್‌ನೈನ್ ಆಸ್ಪತ್ರೆಯಲ್ಲಿ ಕಿವಿ ಗಾಯದ ಶಸ್ತ್ರಚಿಕಿತ್ಸೆ ವೇಳೆ ಮಗು ಕೋಮಾಗೆ ಜಾರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ. ವೈದ್ಯಕೀಯ ತೊಡಕಿನ ಬಗ್ಗೆ ವಿವರಿಸಿದ್ದು, ಎಲ್ಲಾ ಆರೋಪಗಳು ಆಧಾರರಹಿತ ಎಂದು ತಿಳಿಸಿದೆ.

ಬೆಂಗಳೂರು (ನ.08): ನಾಗರಬಾವಿಯ ಕ್ಲೌಡ್‌ನೈನ್ ಆಸ್ಪತ್ರೆಯಲ್ಲಿ ಕಿವಿ ಗಾಯದ ಶಸ್ತ್ರಚಿಕಿತ್ಸೆ ವೇಳೆ ವೈದ್ಯರ ನಿರ್ಲಕ್ಷ್ಯದಿಂದಾಗಿ ಒಂದು ವರ್ಷದ ಗಂಡು ಮಗು ಶಯಾನ್ ಕೋಮಾಗೆ ಜಾರಿದೆ ಎಂಬ ಆರೋಪಗಳ ಕುರಿತಂತೆ ಆಸ್ಪತ್ರೆ ಆಡಳಿತ ಮಂಡಳಿ ಸುದೀರ್ಘ ಹಾಗೂ ಅಧಿಕೃತ ಸ್ಪಷ್ಟನೆ ಬಿಡುಗಡೆ ಮಾಡಿದೆ. ಸಾಮಾಜಿಕ ಜಾಲತಾಣಗಳು ಹಾಗೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಆರೋಪಗಳು ಆಧಾರರಹಿತವಾಗಿದ್ದು, ಚಿಕಿತ್ಸೆಯ ವೇಳೆ ಸಂಭವಿಸಿದ ವೈದ್ಯಕೀಯ ತೊಡಕಿನ ಬಗ್ಗೆ ಆಸ್ಪತ್ರೆ ಸಂಪೂರ್ಣ ವಾಸ್ತವಾಂಶಗಳನ್ನು ಹಂಚಿಕೊಂಡಿದೆ.

ಆಸ್ಪತ್ರೆಯ ಸ್ಪಷ್ಟನೆಯ ಮುಖ್ಯಾಂಶಗಳು:

ಗಾಯ ಗಂಭೀರವಾಗಿತ್ತು: ಅ.26ರಂದು ಮಗುವಿನ ಎಡ ಕಿವಿಗೆ ಹರಿತವಾದ ವಸ್ತು ತಗುಲಿ ಆಳವಾದ ಗಾಯವಾಗಿದ್ದು, ಒಳಗಿನ ಮೃದು ಅಸ್ಥಿ (ಕಾರ್ಟಿಲೇಜ್) ಹೊರಗೆ ಕಾಣಿಸುತ್ತಿತ್ತು. ಇದು ಸಣ್ಣ ಗಾಯವಾಗಿರದ ಕಾರಣ, ಸೂಕ್ಷ್ಮ ಶಸ್ತ್ರಚಿಕಿತ್ಸೆಗಾಗಿ ಪ್ಲಾಸ್ಟಿಕ್ ಸರ್ಜನ್ ಅವರ ಸಲಹೆಯಂತೆ ಪೋಷಕರ ಒಪ್ಪಿಗೆ ಪಡೆದು ಸಾಮಾನ್ಯ ಅರಿವಳಿಕೆ (General Anaesthesia) ನೀಡಲು ನಿರ್ಧರಿಸಲಾಗಿತ್ತು.

ಅರಿವಳಿಕೆ ವೇಳೆ ಆಗಿದ್ದೇನು?: ಶಸ್ತ್ರಚಿಕಿತ್ಸೆಗೆ ಮುನ್ನ ಮಗುವಿಗೆ ಆಹಾರ ನೀಡದಂತೆ (NPO) ತಾಯಿಗೆ ಸೂಚಿಸಲಾಗಿತ್ತು. ಆದರೂ, ಅರಿವಳಿಕೆ ನೀಡುವ ಸಂದರ್ಭದಲ್ಲಿ ಹೊಟ್ಟೆಯೊಳಗಿದ್ದ ಹಾಲಿನಂತಹ ದ್ರವ ಹೊರಬಂದು ಶ್ವಾಸಕೋಶದ ಮಾರ್ಗ ಪ್ರವೇಶಿಸಿದೆ (Aspiration). ಇದರಿಂದಾಗಿ ಆಮ್ಲಜನಕದ ಮಟ್ಟ ಹಾಗೂ ಹೃದಯ ಬಡಿತ ಕುಸಿದಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ತಜ್ಞರ ತಂಡ ತುರ್ತು ಪುನಶ್ಚೇತನ ಚಿಕಿತ್ಸೆ (Resuscitation) ನೀಡಿ ಮಗುವಿನ ಸ್ಥಿತಿಯನ್ನು ಯಶಸ್ವಿಯಾಗಿ ಸ್ಥಿರಗೊಳಿಸಿತು.

ಅರಿವಳಿಕೆ ತಜ್ಞರ ಅರ್ಹತೆ: ಚಿಕಿತ್ಸೆ ನೀಡಿದ ಅರಿವಳಿಕೆ ತಜ್ಞರು 14 ವರ್ಷಗಳಿಗೂ ಹೆಚ್ಚು ಸುದೀರ್ಘ ಅನುಭವ ಹೊಂದಿದ್ದು, ಭಾರತೀಯ ಅರಿವಳಿಕೆ ತಜ್ಞರ ಸಂಘದ (ISA) ನಿಯಮಾವಳಿ ಪ್ರಕಾರ ಮಕ್ಕಳ ಅರಿವಳಿಕೆ ನೀಡಲು ಸಂಪೂರ್ಣ ಅರ್ಹತೆ ಹೊಂದಿದ್ದಾರೆ. ಅವರ ಅರ್ಹತೆ ಪ್ರಶ್ನಿಸಿ ಅಪಪ್ರಚಾರ ನಡೆಸುವುದು ಸರಿಯಲ್ಲ ಎಂದು ಆಸ್ಪತ್ರೆ ಹೇಳಿದೆ.

ಮಗುವಿನ ಪ್ರಸ್ತುತ ಆರೋಗ್ಯ ಸ್ಥಿತಿ: ಮಗುವನ್ನು ಹೆಚ್ಚಿನ ನಿಗಾಕ್ಕಾಗಿ ಜಯನಗರದ ಕ್ಲೌಡ್‌ನೈನ್ ಪಿಐಸಿಯು (PICU) ಘಟಕಕ್ಕೆ ಸ್ಥಳಾಂತರಿಸಲಾಗಿದ್ದು, ಹಿರಿಯ ವೈದ್ಯರ ತಂಡ ನಿರಂತರ ನಿಗಾ ವಹಿಸಿದೆ. ಮಗುವಿನ ಆರೋಗ್ಯ ಹಾಗೂ ನರವೈಜ್ಞಾನಿಕ ಸ್ಪಂದನೆಯಲ್ಲಿ ಸದ್ಯ ಆಶಾದಾಯಕ ಸುಧಾರಣೆ ಕಂಡುಬಂದಿದ್ದು, ಚೇತರಿಕೆ ಮುಂದುವರಿದಿದೆ.

ಬಿಲ್ಲಿಂಗ್ ಆರೋಪ ಸುಳ್ಳು: ಚಿಕಿತ್ಸೆಗಾಗಿ ಪೋಷಕರು ಇಲ್ಲಿಯವರೆಗೆ ಒಟ್ಟು ₹80,000 (ಆರಂಭಿಕ ಶಸ್ತ್ರಚಿಕಿತ್ಸೆಗೆ ₹30,000 ಮತ್ತು ಜಯನಗರದಲ್ಲಿ ₹50,000) ಮಾತ್ರ ಪಾವತಿಸಿದ್ದಾರೆ. ಮಗುವಿನ ನಂತರದ ತೀವ್ರ ನಿಗಾ ಆರೈಕೆಗೆ ಆಸ್ಪತ್ರೆ ಯಾವುದೇ ಹೆಚ್ಚುವರಿ ಬಿಲ್ ವಿಧಿಸಿಲ್ಲ. ಹೆಚ್ಚುವರಿ ಹಣ ಕೇಳಲಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಸ್ಪಷ್ಟಪಡಿಸಿದೆ.

ಯಾವುದೇ ನ್ಯಾಯಸಮ್ಮತ ತನಿಖೆಗೆ ಸಹಕರಿಸಲು ತಾವು ಬದ್ಧವಾಗಿದ್ದು, ವೈದ್ಯರ ಮೇಲೆ ಬೆದರಿಕೆ ಹಾಕುವುದು ಮತ್ತು ಆಸ್ಪತ್ರೆಯ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುವುದು ಸರಿಯಲ್ಲ ಎಂದು ಕ್ಲೌಡ್‌ನೈನ್ ಆಡಳಿತ ಮಂಡಳಿ ತಿಳಿಸಿದೆ.

PREV
Read more Articles on
click me!

Recommended Stories

'ಹೌದು, ನಾನು ಬಲಿತ ದಲಿತನೇ ಸುಮಾರಣ್ಣ': ಎಚ್‌ಡಿಕೆಗೆ ಬ್ಯಾನರ್ ಮೂಲಕ ತಿರುಗೇಟು ನೀಡಿದ ಯುವ ಕಾಂಗ್ರೆಸ್!
Bengaluru: ಟಿನ್ ಫ್ಯಾಕ್ಟರಿ ಜಂಕ್ಷನ್ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್: ಕೃಷ್ಣ ಬೈರೇಗೌಡ