
ಕೆ.ಆರ್.ಪೇಟೆ (ಅ.08): ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಪುರ-ಅಂಬಿಗರಹಳ್ಳಿ - ಸಂಗಾಪುರ ಬಳಿ ಕಾವೇರಿ - ಹೇಮಾವತಿ ಮತ್ತು ಲಕ್ಷ್ಮಣತೀರ್ಥ ನದಿಗಳ ತ್ರಿವೇಣಿ ಸಂಗಮ ಸ್ಥಳದಲ್ಲಿ ಅ.13 ರಿಂದ 16 ರವರೆಗೆ ನಡೆಯುವ ಕುಂಭಮೇಳ ಅಂಗವಾಗಿ ಪ್ರಚಾರ ಜ್ಯೋತಿ ರಥಯಾತ್ರೆ ತಾಲೂಕಿನಾದ್ಯಂತ ಸಂಚಾರ ಆರಂಭಿಸಿತು.
ಚಾಮರಾಜನಗರ (chamarajanagar) ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಿಂದ ಗುರುವಾರ ತನ್ನ ಸಂಚಾರ ಆರಂಭಿಸಿದ ಪ್ರಚಾರ ಜ್ಯೋತಿ ರಥ ನೆರೆಯ ಪಾಂಡವಪುರ ತಾಲೂಕಿನ ಡಿಂಕಾ, ಬನ್ನಂಗಾಡಿ ಗ್ರಾಮದ ಮೂಲಕ ತಾಲೂಕಿನ ಬಲ್ಲೇನಹಳ್ಳಿಯನ್ನು ಪ್ರವೇಶಿಸಿತು.
ತಾಲೂಕಿಗೆ ಪ್ರವೇಶಿಸಿದ ಸಂಚಾರ ರಥವನ್ನು ಬಲ್ಲೇನಹಳ್ಳಿ ಗ್ರಾಪಂ ಮುಖಂಡರು ವಿಶೇಷ ಪೂಜೆ ಸಲ್ಲಿಸುವ ಮೂಲಕ ತಾಲೂಕಿಗೆ ಬರಮಾಡಿಕೊಂಡರು. ಗುರುವಾರ ರಾತ್ರಿ ಗಂಜಿಗೆರೆ ಗ್ರಾಪಂ ವ್ಯಾಪ್ತಿಯ ಸುಪ್ರಸಿದ್ಧ ಭೂ ವರಾಹನಾಥ ದೇವಾಲಯದ ಆವರಣದಲ್ಲಿ ತಂಗಿದ್ದ ಜ್ಯೋತಿ ರಥ ಇಂದಿನಿಂದ (ಶುಕ್ರವಾರ) ತನ್ನ ಅಧಿಕೃತ ಪ್ರಚಾರ ಆರಂಭಿಸಿತು.
ತಾಲೂಕು ಆಡಳಿತದ ಪರವಾಗಿ ಜ್ಯೋತಿರಥಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ತಹಸೀಲ್ದಾರ್ ಎಂ.ವಿ.ರೂಪ ಪ್ರಚಾರ ರಥ ಯಾತ್ರೆಗೆ ಚಾಲನೆ ನೀಡಿದರು. ತಾಲೂಕಿನ ಬಲ್ಲೇನಹಳ್ಳಿ ಮತ್ತು ಬೂಕನಕೆರೆ ಗ್ರಾಮ ಪಂಚಾಯತಿಯ ವಿವಿಧ ಗ್ರಾಮಗಳಲ್ಲಿ ಜ್ಯೋತಿ ರಥ ಸಂಚರಿಸಿತು. ಗ್ರಾಮಕ್ಕೆ (Vollage) ಆಗಮಿಸಿದ ಜ್ಯೋತಿ ರಥಕ್ಕೆ ಗ್ರಾಮದ ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿ ಕಾಣಿಕೆಗಳನ್ನು ಸಮರ್ಪಿಸುತ್ತಿದ್ದ ದೃಶ್ಯ ಎಲ್ಲೆಡೆ ಕಂಡು ಬಂದಿತು. ಬೂಕನಕೆರೆ ಮೂಲಕ ಹಾದು ಹೋಗುತ್ತಿರುವ ಪ್ರಚಾರ ರಥ ಇಂದು ತಾಲೂಕಿನ ಶೀಳನೆರೆ ಗ್ರಾಮದಲ್ಲಿ ತಂಗಲಿದೆ.
ಅ.8 ರಂದು ಬೆಳಗ್ಗೆ ಶೀಳನೆರೆಯಿಂದ ಹೊರಡಲಿರುವ ರಥ ತಾಲೂಕಿನ ಸಿಂಧಘಟ್ಟ, ಹರಳಹಳ್ಳಿ, ಚೌಡೇನಹಳ್ಳಿ ಮತ್ತು ಮಾಕವಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಸಂಚರಿಸಿ ರಾತ್ರಿ ಬಂಡೀಹೊಳೆ ಗ್ರಾಮದಲ್ಲಿ ತಂಗಲಿದೆ. ಅ.9ರಂದು ಬಂಡಿಹೊಳೆಯಿಂದ ಹರಿಹರಪುರ, ಮಡುವಿನಕೋಡಿ, ಬಳ್ಳೇಕೆರೆ ಮತ್ತು ಐಚನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಸಂಚರಿಸಿ ರಾತ್ರಿ ಗಂಜೀಗೆರೆ ಗ್ರಾಮದಲ್ಲಿ ತಂಗಲಿದೆ.
ಅ.10 ರಂದು ಗಂಜಿಗೆರೆಯಿಂದ ಭಾರತೀಪುರ ಕ್ರಾಸ್, ಅಘಲಯ, ಸಂತೇಬಾಚಹಳ್ಳಿ, ರಂಗನಾಥಪುರ ಕ್ರಾಸ್ ಗ್ರಾಪಂ ವ್ಯಾಪ್ತಿಯಲ್ಲಿ ಸಂಚರಿಸಿ ರಾತ್ರಿ ಅಗ್ರಹಾರಬಾಚಹಳ್ಳಿಯಲ್ಲಿ ತಂಗಲಿದೆ. ಅ.11ರಂದು ಕಿಕ್ಕೇರಿ, ಲಕ್ಷ್ಮೀಪುರ, ಆನೆಗೊಳ, ಮಾಧಾಪುರ, ದಬ್ಬೇಘಟ್ಟಗ್ರಾಪಂ ವ್ಯಾಪ್ತಿಯಲ್ಲಿ ಸಂಚರಿಸುವ ರಥ ರಾತ್ರಿ ಐಕನಹಳ್ಳಿ ಗ್ರಾಮದಲ್ಲಿ ತಂಗಲಿದೆ. ಅ.12 ರಂದು ಐಕನಹಳ್ಳಿಯಿಂದ ಹೊರಟು ತಾಲೂಕಿನ ಬೀರವಳ್ಳಿ, ಹಿರೀಕಳೆ ಮತ್ತು ಮಂದಗೆರೆ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಸಂಚರಿಸುವ ರಥ ರಾತ್ರಿ ಕೆ.ಆರ್ .ಪೇಟೆ ಪಟ್ಟಣಕ್ಕೆ ಆಗಮಿಸಿ ತಂಗಲಿದೆ.
ಅ.13 ರಂದು ಆಳ್ವಾಸ್ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮೋಹನ್ ಆಳ್ವ ನೇತೃತ್ವದಲ್ಲಿ ಆಳ್ವಾಸ್ ಸಂಸ್ಥೆಯ ಕಲಾತಂಡಗಳು ಮತ್ತು ಪಟ್ಟಣದ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಂದ ಮೆರವಣಿಗೆ ಮತ್ತು ಕಲಾ ಪ್ರದರ್ಶನಗಳು ನಡೆಯಲಿವೆ. ಕಲಾ ಪ್ರದರ್ಶನ ಮತ್ತು ವೇದಿಕೆ ಕಾರ್ಯಕ್ರಮದ ಅನಂತರ ಪ್ರಚಾರ ರಥ ತ್ರಿವೇಣಿ ಸಂಗಮಕ್ಕೆ ತೆರಳಲುವ ಮೂಲಕ ತನ್ನ ಪ್ರಚಾರ ಯಾತ್ರೆ ಅಂತ್ಯಗೊಳಿಸಲಿದೆ.
ಅ. 14 ರಿಂದ 16 ರವರೆಗೆ ಮೂರು ದಿನಗಳ ಕಾಲ ತ್ರಿವೇಣಿ ಸಂಗಮದಲ್ಲಿ ಕುಂಭಮೇಳ, ಪವಿತ್ರ ಸ್ನಾನ ಮುಂತಾದ ಧಾರ್ಮಿಕ ಮತ್ತು ವೇದಿಕೆ ಕಾರ್ಯಕ್ರಮಗಳು ನಡೆಯಲಿವೆ. ಅ.16 ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯಾನಂದ, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆದಿ ಚುಂಚನಗಿರಿ, ಸುತ್ತೂರು ಶ್ರೀಗಳು ಸೇರಿದಂತೆ ಹಲವು ಗಣ್ಯರು ಹಾಗೂ ಧಾರ್ಮಿಕ ಮುಖಂಡರು ಆಗಮಿಸಲಿದ್ದಾರೆ.
ಅಧಿಕಾರಿಗಳ ಸಭೆ: ಅ.13 ರಂದು ಪಟ್ಟಣದಲ್ಲಿ ಮೋಹನ್ ಆಳ್ವ ನೇತೃತ್ವದಲ್ಲಿ ನಡೆಯಲಿರುವ ಕಲಾ ಪ್ರದರ್ಶನ, ಮೆರವಣಿಗೆ ಮತ್ತು ವೇದಿಕೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪಟ್ಟಣದ ತಾಪಂ ಸಭಾಂಗಣದಲ್ಲಿ ಇಂದು ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಪಟ್ಟಣದ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಸಮಾಲೋಚನಾ ಸಭೆ ನಡೆಯಿತು. ಪಾಂಡವಪುರ ಉಪ ವಿಭಾಗಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅಧ್ಯಕ್ಷತೆಯಲ್ಲಿ ಅಗತ್ಯ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ತಹಸೀಲ್ದಾರ್ ಎಂ.ವಿ.ರೂಪ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ನಾಗರಾಜು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ….ಟಿ.ಜವರೇಗೌಡ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ಪ್ರಸನ್ನ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಪ್ರಾಂಶುಪಾಲರು ಇದ್ದರು.