ಕಲ್ಲಂಗಡಿ ಬೇಸಾಯಕ್ಕೆ ನೀರು ಬಸಿದು ಹೋಗುವ ಮರಳು ಮಿಶ್ರಿತ ಗೋಡು ಮಣ್ಣು ತುಂಬಾ ಉತ್ತಮ ಎಂದು ನಾಗನಹಳ್ಳಿಯ ವಿಸ್ತರಣಾ ಶಿಕ್ಷಣ ಘಟಕದ ತೋಟಗಾರಿಕೆ ತಜ್ಞ ರಾಹುಲ್ ದಾಸ್ ಸಲಹೆ ನೀಡಿದ್ದಾರೆ.
ಮೈಸೂರು (ಅ.08): ಕಲ್ಲಂಗಡಿ ಬೇಸಾಯಕ್ಕೆ ನೀರು ಬಸಿದು ಹೋಗುವ ಮರಳು ಮಿಶ್ರಿತ ಗೋಡು ಮಣ್ಣು ತುಂಬಾ ಉತ್ತಮ ಎಂದು ನಾಗನಹಳ್ಳಿಯ ವಿಸ್ತರಣಾ ಶಿಕ್ಷಣ ಘಟಕದ ತೋಟಗಾರಿಕೆ ತಜ್ಞ ರಾಹುಲ್ ದಾಸ್ ಸಲಹೆ ನೀಡಿದ್ದಾರೆ.
ಉಷ್ಣವಲಯದ ಹೆಚ್ಚಿನ ಹವೆ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಬಿಸಿಲು (Sunny) ಇರುವ ವಾತಾವರಣ ಅತ್ಯಧಿಕ ಇಳುವರಿಗೆ ಅಗತ್ಯ. ನವೆಂಬರ್‌ನಿಂದ ಫೆಬ್ರವರಿ ತಿಂಗಳಲ್ಲಿ ಬೆಳೆದರೆ ಹಣ್ಣುಗಳು ತುಂಬಾ ಚೆನ್ನಾಗಿ ಬರುತ್ತವೆ. ಸಾಲಿನಿಂದ ಸಾಲಿಗೆ 6 ಅಡಿ, ಗಿಡದಿಂದ ಗಿಡಗಳಿಗೆ 2 ಅಡಿ ಅಂತರದಲ್ಲಿ ನಾಟಿ ಮಾಡಬೇಕು. ಪ್ರತಿ ಗುಣಿಗೆ 4-5 ಬೀಜಗಳನ್ನು ಬಿತ್ತಬೇಕು. ಬಿತ್ತಿದ 2- 3 ವಾರದ ನಂತರ ಪ್ರತಿ ಗುಣಿಯಲ್ಲಿ 2 ಸಸಿಗಳನ್ನು ಬಿಟ್ಟು ಉಳಿದ ಸಸಿಗಳನ್ನು ತೆಗೆದು ಹಾಕಬೇಕು.
ಬೀಜ (Seeds) ಹಾಕಿದ ಒಂದು ತಿಂಗಳ ನಂತರ ಮುಖ್ಯ ಕುಡಿಗಳನ್ನು ಕತ್ತರಿಸುವುದರಿಂದ ಹೆಚ್ಚು ಮಗ್ಗಲು ಇಲಕುಗಳನ್ನು ಬಿಡುವುದು. ಬಳ್ಳಿಗಳಲ್ಲಿ ಕಾಯಿಯ ಪ್ರಮಾಣ ಹೆಚ್ಚಾಗಿದ್ದರೆ, ಬೇಕಾಗುವಷ್ಟು(1- 2) ಕಾಯಿಗಳನ್ನು ಬಿಟ್ಟು ಉಳಿದ ಕಾಯಿಗಳನ್ನು ತೆಗೆಯುವುದರಿಂದ ಉತ್ತಮ ಗಾತ್ರದ ಹಣ್ಣುಗಳನ್ನು ಪಡೆಯಬಹುದು.
ಐಐಎಚ್‌ಆರ್ ಅನುಮೋದಿತ ತರಕಾರಿ ಸ್ಪೆಷಲ್ ಅನ್ನು ನಾಟಿ ಮಾಡಿದ 30, 45 ಹಾಗೂ 60 ದಿನಗಳ ನಂತರ ಪ್ರತಿ ಲೀ. ನೀರಿಗೆ 5 ಗ್ರಾಂ ನಂತೆ ಬೆರೆಸಿ ಸಿಂಪಡಿಸಬೇಕು. ಗಂಧಕಯುಕ್ತ ಔಷಧಗಳನ್ನು ಯಾವುದೇ ಸಂದರ್ಭದಲ್ಲಿ ಈ ಬೆಳೆಗೆ ಉಪಯೋಗಿಸಬಾರದು. ಹೆಕ್ಟೇರಿಗೆ 2- 3 ಜೇನು ಪೆಟ್ಟಿಗೆಗಳನ್ನು ಇಡುವುದರಿಂದ ಸಾಕಷ್ಟುಪ್ರಮಾಣದಲ್ಲಿ ಪರಾಗಸ್ಪರ್ಶವಾಗಿ ಹೆಚ್ಚಿನ ಇಳುವರಿ ಪಡೆಯಬಹುದು.
ಕಲ್ಲಂಗಡಿಯು ನಿಂಬೆ ಹಣ್ಣಿನ ಗಾತ್ರದಷ್ಟಿರುವಾಗ 20 ಪಿಪಿಎಂ ಜಿಬ್ಬರ್ಲಿಕ್ ಅಮ್ಲದ ದ್ರಾವಣದಲ್ಲಿ (20 ಮಿ. ಗ್ರಾಂಜಿಬ್ಬರ್ಲಿಕ್ ಆಮ್ಲ 1 ಲೀಟರ್ ನೀರಿಗೆ) ಅದ್ದುವುದರಿಂದ ಹಣ್ಣಿನ ಗಾತ್ರ ಮತ್ತು ಗುಣಮಟ್ಟಹೆಚ್ಚುವುದು. ಕಲ್ಲಂಗಡಿ ಬಳ್ಳಿಯ ಹಣ್ಣಿನ ಹತ್ತಿರದ ಲತಾತಂತು (ಕುಡಿ ಬಳ್ಳಿ) ಒಣಗಲು ಪ್ರಾರಂಭಿಸಿದಾಗ ಹಾಗೂ ಹಣ್ಣಿನ ತಳಮೈ ಹಳದಿ ಬಣ್ಣಕ್ಕೆ ತಿರುಗಿದ ನಂತರ ಕಟಾವು ಮಾಡಬಹುದು. ಈ ಹಂತದಲ್ಲಿ ಹಣ್ಣುಗಳನ್ನು ಬೆರಳಿನಿಂದ ಬಾರಿಸಿದರೆ ಮಂದ ಶಬ್ದ ಬರುವುದು. ಸಾಮಾನ್ಯ ತಳಿಗಳು - 15 ರಿಂದ 20ಟನ್ ಪ್ರತಿ ಎಕೆರೆಗೆ, ಹೈಬ್ರಿಡ್ ತಳಿಗಳು- 30 ರಿಂದ 60 ಟನ್/ ಎಕೆರೆಗೆ ಇಳುವರಿಯನ್ನು ಪಡೆಯಬಹುದು ಎಂದು ಅವರು ವಿವರಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಮೊ. 98803 38630 ಸಂಪರ್ಕಿಸಬಹುದು.
ದೂಳಿನಿಂದ ರೇಷ್ಮೆ ಬೆಳೆ ನಾಶ
ಟೇಕಲ್ ಹೋಬಳಿಯ ನೂಟುವೆ ಗ್ರಾಮ ಪಂಚಾಯಿತಿಗೆ ಸೇರಿದ ದೊಡ್ಡನಾಯಕನಹಳ್ಳಿಯ ರೇಷ್ಮೆ ಬೆಳೆಯುವ ರೇಷ್ಮೆ ಬೆಳೆಗಾರರು, ಕಲ್ಲು ಗಣಿಗಾರಿಕೆಯಿಂದ ಬೆಳೆ ನಷ್ಟಅನುಭವಿಸುವಂತಾಗಿದೆ ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಇದಕ್ಕೆ ಮುಖ್ಯ ಕಾರಣವಾಗಿ ಸಮೀಪ ಕಲ್ಲು ಗಣಿಗಾರಿಕೆ (Mining) ನಡೆಯುವುದರಿಂದ ಬರುವ ಧೂಳು ಹಾಗೂ ರಸಾಯನಿಕಗಳಿಂದ ಕೈಗೆ ಬಂದ ರೇಷ್ಮೆ ಹುಳು, ರೇಷ್ಮೆ (Solk) ನೂಲು ಕಟ್ಟದೆ ಸಾಯುವಂತಾಗಿರುವುದರಿಂದ ಬೆಳೆ ನಷ್ಟಆಗಿ ರೈತರು (Farmers) ಸಾಲಗಾರರಾಗುವ ಪರಿಸ್ಥಿತಿ ಏರ್ಪಟ್ಟಿದೆ. ಈ ಬಗ್ಗೆ ರೇಷ್ಮೆ ಬೆಳೆದು ನಷ್ಟಅನುಭವಿಸಿದ ರೈತ ಎಂ.ವೆಂಕಟಸ್ವಾಮಿ ಮಾಧ್ಯಮದವರೊಂದಿಗೆ ಮಾತನಾಡಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಹಾಗೂ ಸ್ವಾರ್ಥ ರಾಜಕಾರಣಿಗಳ ಮತ್ತು ಉದ್ಯಮಿಗಳ ದುರಾಸೆಗೆ ರೈತರು ಬಲಿಯಾಗುತ್ತಿದ್ದು ಗಣಿಗಾರಿಕೆ ನಡೆಸಲು ಹಾಗೂ ಸಿಡಿಮದ್ದು ಸಿಡಿಸುವುದರಿಂದ ಬರುವ ಧೂಳು ರೇಷ್ಮೆ ಬೆಳೆ ಮೇಲೆ ಬಿದ್ದು ಅದನ್ನು ರೇಷ್ಮೆ ಹುಳು ತಿಂದು ಸಾಯುತ್ತಿದ್ದು, ಗ್ರಾಮದ 5 ಮಂದಿ ರೈತರ ರೇಷ್ಮೆ ಬೆಳೆಯಿಂದ ಸುಮಾರು 15 ಲಕ್ಷ ರೂಪಾಯಿ ಅಂದಾಜಿನ ನಷ್ಟಉಂಟಾಗಿದೆ ಎಂದರು.
ಗ್ರಾಮದ ಸಮೀಪವಿರುವ ಅರ್ಧಕೊತ್ತೂರು, ಆನಿಮಿಟ್ಟನಹಳ್ಳಿ ಬರುವ ಕೆಲವು ಸ್ಟೋನ್ ಕ್ರಷರ್‌ಗಳಿಂದ ಬರುವ ಧೂಳುನಿಂದ ರೇಷ್ಮೆ ಬೆಳೆ ನಾಶವಾಗುತ್ತಿದೆ ಎಂದು ಆರೋಪಿಸಿ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ. ಪಶ್ಚಿಮದಿಂದ ಪೂರ್ವಕ್ಕೆ ಗಾಳಿ ಬೀಸುವ ಸಮಯದಲ್ಲಿ ಗಣಿಗಾರಿಕೆಯ ಧೂಳು ರೇಷ್ಮೆ ಬೆಳೆಯ ಎಲೆಗಳ ಮೇಲೆ ಬಿದ್ದು ಅದನ್ನು ರೇಷ್ಮೆ ಹುಳ ತಿಂದು ಸಾಯುತ್ತಿದೆ ಎಂದು ಗ್ರಾಮದ ರೈತರು ಹುಳುಗಳನ್ನು ಮತ್ತು ರೇಷ್ಮೆ ಎಲೆಯನ್ನು ಪ್ರದರ್ಶಿಸಿದರು. ಈ ಬಗ್ಗೆ ಜಿಲ್ಲಾಡಳಿತ ಪರಿಹಾರ ಹಾಗೂ ಕ್ರಮ ಕೈಗೊಳ್ಳಬೇಕೆಂದರು.