ಯಲ್ಲಾಪುರ ಪಟ್ಟಣದ ಬಸ್ ಘಟಕದ ಕೆಲವು ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಬಂದಿದ್ದರೂ ಅವರಿಗೆ ಸರಿಯಾದ ವ್ಯವಸ್ಥೆ ಕಲ್ಪಿಸದೇ ಹೊರದೂಡಿದ ಘಟನೆ ನಡೆದಿದೆ.
ಉತ್ತರ ಕನ್ನಡ(ಜೂ.28): ಯಲ್ಲಾಪುರ ಪಟ್ಟಣದ ಬಸ್ ಘಟಕದ ಕೆಲವು ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಬಂದಿದ್ದರೂ ಅವರಿಗೆ ಸರಿಯಾದ ವ್ಯವಸ್ಥೆ ಕಲ್ಪಿಸದೇ ಹೊರದೂಡಿದ ಘಟನೆ ನಡೆದಿದೆ.
ಘಟಕದ ರೆಸ್ಟ್ ರೂಂನಲ್ಲಿ ಕ್ವಾರಂಟೈನ್ ಆಗಿದ್ದ 10ಕ್ಕೂ ಹೆಚ್ಚು ಸಿಬ್ಬಂದಿಯನ್ನು ಅಧಿಕಾರಿಗಳು ಏಕಾಏಕಿ ಜೂ. 26ರಂದು ರಾತ್ರಿ ಘಟಕದಿಂದ ಹೊರಹಾಕಿದ್ದಾರೆ. ಘಟಕದ ಹೊರಗೆ ಸಿಬ್ಬಂದಿ ಅಸಹಾಯಕರಾಗಿ ನಿಂತು, ಪ್ರತಿಭಟನೆಯ ಹಂತಕ್ಕೆ ಹೋದ ವಿಷಯ ತಿಳಿದು ರಾತ್ರಿ 11.30ರ ವೇಳೆಗೆ ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಡಿ.ಜಿ. ಹೆಗಡೆ, ಘಟಕದ ಪಕ್ಕದಲ್ಲಿರುವ ಸಣ್ಣ ಹೋಟೆಲ್ ಒಂದರ ಚಿಕ್ಕ ಕೋಣೆಯಲ್ಲಿ ಉಳಿಯಲು ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿದರು.
ಮಾಹಿತಿ ಮುಚ್ಚಿಟ್ಟು ಸೋಂಕು ಹರಡಿದ ಸಹೋದರರು..!
ಶನಿವಾರ ಬೆಳಗ್ಗೆ ಮುಂದಿನ ವ್ಯವಸ್ಥೆ ಮಾಡುವುದಾಗಿ ಅಧಿಕಾರಿಗಳು ಹೇಳಿದ್ದರು. ಆದರೆ, ಬೆಳಗ್ಗೆ 11 ಗಂಟೆಯಾದರೂ ಯಾವುದೇ ಅಧಿಕಾರಿಗಳು ಬಾರದ ಹಿನ್ನೆಲೆಯಲ್ಲಿ, ಸಿಬ್ಬಂದಿ ಘಟಕದ ಎದುರು ಪ್ರತಿಭಟನೆ ನಡೆಸಿದರು.
ನಮ್ಮ ವರದಿ ಬರುವ ವರೆಗೆ ಹೋಂ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಿದ್ದು, ಮನೆಯಲ್ಲಿ ಇರೋಣವೆಂದು ಹೋದರೆ ಬಾಡಿಗೆ ಮನೆಯ ಮಾಲೀಕರು ಬಿಡುತ್ತಿಲ್ಲ. ಹಾಗಾಗಿ ಅನಿವಾರ್ಯವಾಗಿ ಘಟಕದ ರೆಸ್ಟ್ ರೂಂನಲ್ಲಿ ಕ್ವಾರಂಟೈನ್ ಆಗಿದ್ದೆವು. ಶುಕ್ರವಾರ ದಿಢೀರ್ ಎಂದು ನಮ್ಮನ್ನು ಹೊರಹೋಗುವಂತೆ ಅಧಿಕಾರಿಗಳು ಸೂಚಿಸಿದ್ದು, ಕೇವಲ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿ, ಬೇರೆ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿ ಕಲ್ಪಿಸದೇ ಅಮಾನವೀಯತೆ ತೋರಿದ್ದಾರೆ ಎಂದು ದೂರಿದರು.
ಮಾಹಿತಿ ಪಡೆದ ವಿ.ಎಸ್. ಪಾಟೀಲ್:
ಕೆಎಸ್‌ಆರ್‌ಟಿಸಿ ಸಿಬ್ಬಂದಿ ಧರಣಿ ನಡೆಸುತ್ತಿರುವ ವಿಷಯ ತಿಳಿದ ವಾಯವ್ಯ ಸಾರಿಗೆ ನಿಗಮದ ಅಧ್ಯಕ್ಷ ವಿ.ಎಸ್. ಪಾಟೀಲ ಶನಿವಾರ ಮಧ್ಯಾಹ್ನ ಪಟ್ಟಣದ ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳನ್ನು ಕರೆದು ಮಾಹಿತಿ ಪಡೆದರು.
ಧರಣಿ ನಿರತರು ಮೇಲಧಿಕಾರಿಗಳ ಮೇಲೆ ದೂರು ಸಲ್ಲಿಸುತ್ತಿದ್ದಾರೆ. ತಾವು ಅವರೊಂದಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎನ್ನುವ ದೂರು ಕೇಳಿಬಂದಿದೆ. ಅವರ ಬೇಡಿಕೆಗಳನ್ನು ಈಡೇರಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಪರ್ಯಾಯ ವ್ಯವಸ್ಥೆ ಮಾಡದೇ ಏಕಾಏಕಿ ರೆಸ್ಟ್ ರೂಂನಿಂದ ಹೊರ ಹಾಕಿದ್ದೇಕೆ ಎಂದು ಪ್ರಶ್ನಿಸಿದ ಅವರು, ಇದು ಹೀಗೆ ಮುಂದುವರಿದರೆ ಇಲಾಖೆಗೆ ಕೆಟ್ಟಹೆಸರು ಬರುತ್ತದೆ. ತಕ್ಷಣ ಅವರಿಗೆ ವ್ಯವಸ್ಥೆ ಕಲ್ಪಿಸಬೇಕೆಂದು ಖಡಕ್ ಆಗಿ ಸೂಚಿಸಿದರು.
ಉಳ್ಳಾಲ: ಕುಟುಂಬದ ಎಲ್ಲ 17 ಮಂದಿಗೆ ಪಾಸಿಟಿವ್!
ವೇತನ ತಾರತಮ್ಯದ ಆರೋಪವನ್ನು ಸಿಬ್ಬಂದಿ ಮಾಡಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು. ಯಾವುದೇ ಲಾಡ್ಜ್ ಲಭ್ಯವಾಗದಿದ್ದರೆ, ಕಲ್ಯಾಣ ಮಂಟಪ ಅಥವಾ ಹಾಲ್‌ಗಳನ್ನು ಕೇಳಬಹುದಿತ್ತು ಎಂದು ಹೇಳಿದರಲ್ಲದೆ, ಎಪಿಎಂಸಿಯ ರೈತಭವನದಲ್ಲಿ ವ್ಯವಸ್ಥೆ ಮಾಡುವಂತೆ ತಹಸೀಲ್ದಾರ್ ಹಾಗೂ ಎಪಿಎಂಸಿ ಕಾರ್ಯದರ್ಶಿಗಳಿಗೆ ದೂರವಾಣಿ ಮೂಲಕ ಸೂಚನೆ ನೀಡಿದರು. ಪರ್ಯಾಯ ವ್ಯವಸ್ಥೆ ಆಗುವ ವರೆಗೆ ಸ್ಥಳ ಬಿಡದಂತೆ ಸಿಬ್ಬಂದಿಗೆ ಸೂಚಿಸುವಂತೆ ತಿಳಿಸಿದರು.
ಶಿರಸಿ ವಿಭಾಗೀಯ ಸಾರಿಗೆ ಅಧಿಕಾರಿ ಸುರೇಶ ನಾಯಕ, ಕಾರ್ಮಿಕ ಕಲ್ಯಾಣಾಧಿಕಾರಿ ಪ್ರಕಾಶ ನಾಯಕ, ತಾಪಂ ಸದಸ್ಯ ನಟರಾಜ ಗೌಡರ್, ಪ್ರಮುಖರಾದ ಗಣಪತಿ ಬೋಳಗುಡ್ಡೆ, ಶ್ರೀನಿವಾಸ ಗಾಂವ್ಕಾರ, ಗಣಪತಿ ಹೆಗಡೆ ಮತ್ತಿತರರಿದ್ದರು.
ಉಡುಪಿ: 2ನೇ ದಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ, 803 ಮಂದಿ ಗೈರು
ಸಿಬ್ಬಂದಿಯನ್ನು ಏಕಾಏಕಿ ಹೊರಹಾಕಿಲ್ಲ. ಗಂಟಲುದ್ರವ ಪರೀಕ್ಷೆಯ ವರದಿ ಬರುವ ವರೆಗೆ ಅವರಿಗೆ ಹೋಂ ಕ್ವಾರಂಟೈನ್ ವಿಧಿಸಲಾಗಿದೆ. ಆದರೆ, ಅದರ ಬದಲು ಘಟಕದ ರೆಸ್ಟ್ ರೂಂನಲ್ಲಿದ್ದರು. ಕರ್ತವ್ಯ ಮುಗಿಸಿ ಬಂದ ಇತರ ಸಿಬ್ಬಂದಿ ಸಹ ಕೆಲವೊಮ್ಮೆ ಅದೇ ಕೋಣೆಯಲ್ಲಿ ವಿಶ್ರಾಂತಿ ಪಡೆಯುತ್ತಿರುತ್ತಾರೆ. ಅವರಿಗೂ ಅಪಾಯ ಉಂಟಾಗಬಾರದೆಂಬ ಉದ್ದೇಶದಿಂದ ಮನೆಗೆ ಹೋಗುವಂತೆ ಸೂಚಿಸಲಾಗಿದೆ ಎಂದು ಘಟಕ ವ್ಯವಸ್ಥಾಪಕ ಶಿವಾನಂತ ಹತಪಕ್ಕಿ ತಿಳಿಸಿದ್ದಾರೆ.