ಜಿಪಂ ವಿರುದ್ಧ ಅವಿಶ್ವಾಸ ವಿವಾದ| ನ್ಯಾಯಾಲಯದಲ್ಲಿ ನಾಳೆ ವಿಚಾರಣೆ| ಜಿಲ್ಲಾ ಪಂಚಾಯಿತಿಯ ಬಿಜೆಪಿ ಸದಸ್ಯರು ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದಾರೆ ಎನ್ನುವುದು ಈಗ ಮುಗಿದ ಅಧ್ಯಾಯ| ಈಗಾಗಲೇ ಇವರಿಗೆ ಮುಂದಿನ ಅವಧಿಯ ಕಾಂಗ್ರೆಸ್ ಟಿಕೆಟ್ ಸಹ ಪಕ್ಕಾ ಆಗಿದೆ ಎನ್ನಲಾಗಿದೆ|
ಸೋಮರಡ್ಡಿ ಅಳವಂಡಿ
ಕೊಪ್ಪಳ(ಜೂ.28): ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿರುವ ಕೊಪ್ಪಳ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿಶ್ವನಾಥ ರೆಡ್ಡಿ ಅವರ ವಿರುದ್ಧದ ಅವಿಶ್ವಾಸದ ವಿವಾದ ಜೂ. 29ರಂದು ಧಾರವಾಡದ ಹೈಕೋರ್ಟ್ ಪೀಠದಲ್ಲಿ ವಿಚಾರಣೆಗೆ ಬರಲಿದ್ದು, ತೀರ್ಪು ನೀಡುವ ಸಾಧ್ಯತೆ ಇದೆ.
undefined
ಅವಿಶ್ವಾಸ ಮಂಡನೆಗೆ ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರಿಗೆ ಆಡಳಿತಾತ್ಮಕವಾಗಿ ಮಾನ್ಯತೆ ಸಿಗದೆ ಇರುವುದರಿಂದ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಹಾಲಿ ಅಧ್ಯಕ್ಷ ವಿಶ್ವನಾಥ ರೆಡ್ಡಿ ಕಾಂಗ್ರೆಸ್ ಪಕ್ಷದವರೇ ಆಗಿದ್ದರೂ ಕಾಂಗ್ರೆಸ್ ಈಗ ಅವಿಶ್ವಾಸಕ್ಕೆ ಮುಂದಾಗಿದ್ದು, ಇದಕ್ಕೆ ಬಿಜೆಪಿಯ 8 ಸದಸ್ಯರು ಬೆಂಬಲ ನೀಡಿದ್ದಾರೆ. ಜಿಲ್ಲಾ ಪಂಚಾಯಿತಿಯ 20 ಸದಸ್ಯರು ಪಕ್ಷಾತೀತವಾಗಿ ನ್ಯಾಯಾಲಯದ ಮೊರೆ ಹೋಗಿದ್ದು, ನಮಗೆ ಅವಕಾಶ ನೀಡುವಂತೆ ನಿರ್ದೇಶನ ನೀಡುವಂತೆ ಕೋರಿದ್ದಾರೆ. ಈ ಕುರಿತು ವಿಚಾರಣೆ ನಡೆಸಿರುವ ನ್ಯಾಯಾಲಯ ಜೂ. 29ರೊಳಗಾಗಿ ಅಗತ್ಯ ಕ್ರಮಕೈಗೊಂಡು, ನ್ಯಾಯಾಲಯಕ್ಕೆ ಮಾಹಿತಿ ನೀಡುವಂತೆ ಸೂಚಿಸಿದೆ. ಆದರೆ, ಸರ್ಕಾರ ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲವಾದ್ದರಿಂದ ನ್ಯಾಯಾಲಯಕ್ಕೆ ಏನು ಮಾಹಿತಿ ನೀಡುತ್ತದೆ ಎನ್ನುವುದೇ ಸದ್ಯದ ಕುತೂಹಲ.
ಕೊಪ್ಪಳ: ಅಧ್ಯಕ್ಷನ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಜಿಪಂ ಸದಸ್ಯರು
ಏನಿದು ಸಮಸ್ಯೆ?:
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿಶ್ವನಾಥ ರೆಡ್ಡಿ ಅವರ ವಿರುದ್ಧ ಪಕ್ಷಾತೀತವಾಗಿ ಅವಿಶ್ವಾಸ ಮಂಡನೆಗೆ ಅರ್ಜಿ ಸಲ್ಲಿಸಲಾಗಿದೆ. ಆದರೆ, ಇದಕ್ಕೆ ಇದುವರೆಗೂ ಅವಕಾಶವೇ ಸಿಕ್ಕಿಲ್ಲ. ಪಂಚಾಯತ್ ಕಾಯ್ದೆ ತಿದ್ದುಪಡಿ ಅನ್ವಯ ಅವಿಶ್ವಾಸಕ್ಕೆ ಅವಕಾಶ ಇದ್ದು, ನಮಗೆ ನೀಡಿ ಎಂದು ಮನವಿಯಲ್ಲಿ ವಿವರಿಸಲಾಗಿದೆ. ಆದರೆ, ಪಂಚಾಯತ್ ಕಾಯ್ದೆ ತಿದ್ದುಪಡಿಯಾಗಿದ್ದರೂ ಸರ್ಕಾರ ಅದಕ್ಕೆ ಅಗತ್ಯ ನಿಯಮಾವಳಿಯನ್ನು ರೂಪಿಸುವ ಪ್ರಕ್ರಿಯೆ ನಡೆದಿರುವುದರಿಂದ ಈಗಲೇ ಅದು ಅನ್ವಯವಾಗುವುದಿಲ್ಲ ಎಂದ ಹಿಂಬರ ನೀಡಿದೆ. ಇದನ್ನು ಪ್ರಶ್ನೆ ಮಾಡಿಯೇ ಈಗ ಜಿಲ್ಲಾ ಪಂಚಾಯಿತಿಯ ಕಾಂಗ್ರೆಸ್ ಮತ್ತು ಬಿಜೆಪಿಯ ಸುಮಾರು 20 ಸದಸ್ಯರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇರುವ ಅಧ್ಯಕ್ಷ ವಿಶ್ವನಾಥ ರೆಡ್ಡಿ ಅವರ ಮೇಲೆ ನಮಗೆ ನಂಬಿಕೆ ಇಲ್ಲ. ಅವರು ಪಕ್ಷಪಾತಿ ಧೋರಣೆಯನ್ನು ಅನುಸರಿಸುತ್ತಿದ್ದಾರೆ. ಹೀಗಾಗಿ, ಅವರ ವಿರುದ್ಧ ಅವಿಶ್ವಾಸಕ್ಕೆ ಅವಕಾಶ ನೀಡಲು ಸರ್ಕಾರಕ್ಕೆ ನಿರ್ದೇಶ ನೀಡಬೇಕು ಎಂದು ಕೋರಲಾಗಿದೆ.
ಬಲಾಬಲ:
ಕೊಪ್ಪಳ ಜಿಲ್ಲಾ ಪಂಚಾಯಿತಿ 29 ಸದಸ್ಯ ಬಲ ಹೊಂದಿದೆ. ಇದರಲ್ಲಿ ಕಾಂಗ್ರೆಸ್ 17, ಬಿಜೆಪಿ 12 ಹಾಗೂ ಓರ್ವ ಪಕ್ಷೇತರ ಸದಸ್ಯರಿದ್ದಾರೆ. ಈಗ ಹಾಲಿ ಅಧ್ಯಕ್ಷ ವಿಶ್ವನಾಥ ರೆಡ್ಡಿ ಅವರು ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವುದರಿಂದ ಬಿಜೆಪಿ ನಾಯಕರೊಂದಿಗೆ ಸುತ್ತಾಡುತ್ತಿದ್ದಾರೆ. ಇದು ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿದೆ. ಅಲ್ಲದೆ ಒಪ್ಪಂದದಂತೆ ರಾಜೀನಾಮೆಯನ್ನು ನೀಡದೆ ಇರುವುದರಿಂದ ಅವರ ವಿರುದ್ಧ ಬಿಜೆಪಿ ಸದಸ್ಯರ ಬೆಂಬಲ ಪಡೆದು ಅವಿಶ್ವಾಸಕ್ಕೆ ಮುಂದಾಗಿದೆ. ಕಾಂಗ್ರೆಸ್ ನಂಬರ್ ಗೇಮ್ ಆಡುತ್ತಿದ್ದರೆ, ಬಿಜೆಪಿ ಆಡಳಿತದಲ್ಲಿ ಇರುವುದರಿಂದ ನಿಯಮಾವಳಿ ಗುರಾಣಿ ಹಿಡಿದಿದೆ. ಹೀಗಾಗಿ ಹಗ್ಗಜಗ್ಗಾಟ ನಡೆದಿದ್ದು, ನ್ಯಾಯಾಲಯದ ಮೆಟ್ಟಿಲು ಏರಿರುವುದರಿಂದ ಸಹಜವಾಗಿಯೇ ಕುತೂಹಲ ಇಮ್ಮಡಿಸಿದೆ. ಜೂ. 29ರಂದು ನಡೆಯುವ ವಿಚಾರಣೆ ಮಹತ್ವ ಪಡೆದುಕೊಂಡಿದೆ.
ಮುಂದುವರೆದ ತಿಕ್ಕಾಟ: ಬಿಜೆಪಿ, ಕಾಂಗ್ರೆಸ್‌ನಿಂದ ಕಾನೂನು ಸಮರ
ಕಾಂಗ್ರೆಸ್ ನಾಯಕರೊಂದಿಗೆ ಪ್ರತ್ಯಕ್ಷ:
ಜಿಲ್ಲಾ ಪಂಚಾಯಿತಿಯ 8 ಬಿಜೆಪಿ ಸದಸ್ಯರು ಈಗಾಗಲೇ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿರುವುದು ಹಳೆಯ ಸುದ್ದಿಯಾಗಿದ್ದು, ಈಗಾಗಲೇ ಪ್ರವಾಸದಲ್ಲಿರುವ ಸದಸ್ಯರು ಕೆಲದಿನಗಳ ಹಿಂದೆ ಧರ್ಮಸ್ಥಳದಲ್ಲಿ ಕಾಂಗ್ರೆಸ್ ನಾಯಕರೊಂದಿಗೆ ಪ್ರತ್ಯಕ್ಷವಾಗಿರುವ ಫೋಟೋ ಈಗ ‘ಕನ್ನಡಪ್ರಭ’ಕ್ಕೆ ಲಭ್ಯವಾಗಿದೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ, ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಜಶೇಖರ ಹಿಟ್ನಾಳ ಅವರೊಂದಿಗೆ ಸದಸ್ಯರು ಇರುವ ಫೋಟೋ ಸದ್ದು ಮಾಡುತ್ತಿದೆ.
ಕಾಂಗ್ರೆಸ್ ಟಿಕೆಟ್:
ಜಿಲ್ಲಾ ಪಂಚಾಯಿತಿಯ ಬಿಜೆಪಿ ಸದಸ್ಯರು ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದಾರೆ ಎನ್ನುವುದು ಈಗ ಮುಗಿದ ಅಧ್ಯಾಯ. ಈಗಾಗಲೇ ಇವರಿಗೆ ಮುಂದಿನ ಅವಧಿಯ ಕಾಂಗ್ರೆಸ್ ಟಿಕೆಟ್ ಸಹ ಪಕ್ಕಾ ಆಗಿದೆ ಎನ್ನಲಾಗಿದೆ. ಈ ಕುರಿತು ಮಾತುಕತೆಯಾದ ಮೇಲೆಯೇ ಇವರು ಕಾಂಗ್ರೆಸ್ ಹೊಸ್ತಿಲು ತುಳಿದಿದ್ದಾರೆ ಎನ್ನುವುದು ಈಗ ಬಹು ಚರ್ಚಿತ ವಿಷಯ.