ಭಟ್ಕಳದಿಂದ ದೂರದ ಊರುಗಳಿಗೆ ಸೋಮವಾರದಿಂದ ಸಾರಿಗೆ ಬಸ್ಸಿನ ಸಂಚಾರ ಆರಂಭಿಸಿದ್ದು, ಪ್ರಯಾಣಿಕರಿಲ್ಲದೇ ಬಸ್ಸನ್ನು ಖಾಲಿ ಓಡಿಸುವಂತಾಯಿತು.
ಉತ್ತರ ಕನ್ನಡ(ಜೂ. 02): ಭಟ್ಕಳದಿಂದ ದೂರದ ಊರುಗಳಿಗೆ ಸೋಮವಾರದಿಂದ ಸಾರಿಗೆ ಬಸ್ಸಿನ ಸಂಚಾರ ಆರಂಭಿಸಿದ್ದು, ಪ್ರಯಾಣಿಕರಿಲ್ಲದೇ ಬಸ್ಸನ್ನು ಖಾಲಿ ಓಡಿಸುವಂತಾಯಿತು.
ರಾಜ್ಯ ಸರ್ಕಾರ ಲಾಕ್‌ಡೌನ್ ಸಡಿಲಿಕೆ ಮಾಡಿದ್ದರಿಂದ ಭಟ್ಕಳದಿಂದ ಬಸ್ ಸಂಚಾರ ಆರಂಭಿಸಲಾಗಿತ್ತು. ಸೋಮವಾರ ಬೆಳಗ್ಗೆ ಬೆಂಗಳೂರು, ಹುಬ್ಬಳ್ಳಿ ಮುಂತಾದ ಕಡೆ ಹೊರಟಿದ್ದ ಬಸ್ಸುಗಳನ್ನು ಪ್ರಯಾಣಿಕರಿಲ್ಲದ್ದರಿಂದ ವಾಪಾಸ್ ಡಿಪೋಕ್ಕೆ ತರಲಾಯಿತು.
ಕೊಡಗಿನಲ್ಲಿ ಕೆಎಸ್‌ಆರ್‌ಟಿಸಿಗೆ ಪ್ರತಿ ದಿನ 10 ಲಕ್ಷದಷ್ಟು ನಷ್ಟ!
ಇನ್ನು ಹುಬ್ಬಳ್ಳಿಗೆ ಹೊರಟಿದ್ದ ಬಸ್ ಶಿರಸಿಯ ವರೆಗೆ ಹೋಗಿ ಬಂದರೆ, ಬೆಂಗಳೂರಿಗೆ ಹೊರಟಿದ್ದ ಬಸ್ ಶಿವಮೊಗ್ಗದಿಂದ ವಾಪಾಸ್ ಬಂತು. ಭಟ್ಕಳದಿಂದ ಕುಂದಾಪುರ, ಹೊನ್ನಾವರ, ಕುಮಟಾಕ್ಕೆ ಬಸ್ಸನ್ನು ಓಡಿಸಲಾಯಿತಾದರೂ ಪ್ರಯಾಣಿಕರು ತೀರಾ ಕಡಿಮೆ ಸಂಖ್ಯೆಯಲ್ಲಿದ್ದರು. ಹೆಚ್ಚಿನವರಿಗೆ ಭಟ್ಕಳದಿಂದ ಬಸ್ ಸಂಚಾರ ಪುನರಾರಂಭಿಸಿದ್ದು ಗೊತ್ತೇ ಇರಲಿಲ್ಲ. ಬಸ್ ನಿಲ್ದಾಣದಲ್ಲಿ ಹೆಚ್ಚಿನ ಬಸ್ಸನ್ನು ನಿಲ್ಲಿಸದೇ 2-3 ಬಸ್ಸುಗಳನ್ನು ಮಾತ್ರ ನಿಲ್ಲಿಸಲಾಗಿತ್ತು. ಹೊನ್ನಾವರ ಲೋಕಲ್ ಬಸ್ ಹೊರತುಪಡಿಸಿ ಸ್ಥಳೀಯವಾಗಿ ಯಾವುದೇ ಬಸ್ಸುಗಳನ್ನು ಬಿಡಲಿಲ್ಲ. ನಿಲ್ದಾಣದಲ್ಲಿ ಮಾಸ್ಕ್ ಧರಿಸಿಯೇ ಬಸ್ಸಿನಲ್ಲಿ ಪ್ರಯಾಣಿಸುವಂತೆ ಡ್ರೈವರ್, ಕಂಡಕ್ಟರುಗಳು ಹೇಳುತ್ತಿರುವುದು ಕೇಳಿ ಬಂತು.
ಟೆಲಿ ಮೆಡಿಸಿನ್ ಮತ್ತಷ್ಟುಜನಪ್ರಿಯವಾಗಲಿ: ಮೋದಿ
ಡಿಪೋ ವ್ಯವಸ್ಥಾಪಕರು ಸೋಮವಾರದಿಂದ ಕೆಲವು ಕಡೆ ಬಸ್ಸನ್ನು ಬಿಟ್ಟಿದ್ದೇವೆ. ಆದರೆ, ಪ್ರಯಾಣಿಕರೇ ಇಲ್ಲವಾಗಿತ್ತು. ಹೀಗಾಗಿ ಬೆಂಗಳೂರು, ಹುಬ್ಬಳ್ಳಿ ಮುಂತಾದ ಕಡೆ ಹೊರಟಿದ್ದ ಬಸ್ಸುಗಳನ್ನು ಪ್ರಯಾಣಿಕರಿಲ್ಲದ್ದರಿಂದ ವಾಪಾಸ್ ಕರೆಯಿಸಲಾಗಿದೆ ಎಂದರು.
ಸಹಜ ಸ್ಥಿತಿಗೆ ಮರಳುತ್ತಿರುವ ಭಟ್ಕಳ:
ಕೋವಿಡ್ ಸೋಂಕು ಹೆಚ್ಚಳದಿಂದಾಗಿ 2 ತಿಂಗಳ ಕಾಲ ಸಂಪೂರ್ಣ ಲಾಕ್‌ಡೌನ್, ಸೀಲ್‌ಡೌನ್ ಆಗಿದ್ದ ಭಟ್ಕಳ ಪಟ್ಟಣದಲ್ಲಿ ಮೊನ್ನೆಯಷ್ಟೇ ಲಾಕ್‌ಡೌನ್ ಸಡಿಲಿಕೆ ಮಾಡಿದ್ದರಿಂದ ಮೊದಲಿನ ಸಹಜ ಸ್ಥಿತಿಗೆ ನಿಧಾನವಾಗಿ ಬರುತ್ತಿದೆ. ಪಟ್ಟಣದಲ್ಲಿ ಸೋಮವಾರ ಸಾಮಗ್ರಿ ಖರೀದಿಸಲು, ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಲು ಜನರು ಪಟ್ಟಣಕ್ಕಾಗಮಿಸಿದ್ದರು. ಭಟ್ಕಳದಲ್ಲಿ ಸದ್ಯ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆ ವರೆಗೆ ಮಾತ್ರ ಲಾಕ್‌ಡೌನ್ ಸಡಿಲಿಕೆ ಇರುವುದರಿಂದ ಅಷ್ಟೊತ್ತಿನ ಅವಧಿಯಲ್ಲಿ ಜನರು ಪೇಟೆಗೆ ಬಂದು ತಮ್ಮ ಕೆಲಸ ಮುಗಿಸಿ ಹೋಗುತ್ತಿದ್ದಾರೆ. ಹೋಟೆಲ್, ಬಾರ್, ರೆಸ್ಟೋರೆಂಟ್ ಹೊರತುಪಡಿಸಿ ಬಹುತೇಕ ಅಂಗಡಿಗಳು ಬಾಗಿಲು ತೆರೆದಿತ್ತು.
ಗಾಂಜಾ, ಇಸ್ಪೀಟ್ ಜೂಜಾಟ ತಡೆಗಟ್ಟುವಲ್ಲಿ ಪೊಲೀಸ್ ಇಲಾಖೆ ವಿಫಲ: ಆರೋಪ
ಪಟ್ಟಣದಲ್ಲಿ ಆಟೋ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದರೂ ನಿಲ್ದಾಣದಲ್ಲಿ ಕೆಲವೇ ಕೆಲವು ಆಟೋ ಬಾಡಿಗೆಗೆ ನಿಂತಿರುವುದು ಕಂಡು ಬಂತು. ಟೆಂಪೋ ಸಂಚಾರ ಇನ್ನೂ ಆರಂಭವಾಗಿಲ್ಲ. ಹೆಚ್ಚಿನ ಅಂಗಡಿಗಳಲ್ಲಿ ಗ್ರಾಹಕರೇ ಇರಲಿಲ್ಲ. ಮಳೆಗಾಲದ ಸಾಮಗ್ರಿ, ಹಾರ್ಡ್‌ವೇರ್, ದಿನಸಿ ಅಂಗಡಿಗಳ ಮುಂದೆ ಜನರು ನಿಂತಿದ್ದು ಕಂಡು ಬಂತು. ಜೂ. 8ರ ವರೆಗೂ ಭಟ್ಕಳದಲ್ಲಿ ಬೆಳಗ್ಗೆ 8ರಿಂದ ಮಧ್ಯಾಹ್ನದ 2 ಗಂಟೆ ವರೆಗೆ ಲಾಕ್‌ಡೌನ್ ಸಡಿಲಿಕೆ ಎಂದು ಜಿಲ್ಲಾಡಳಿತ ತಿಳಿಸಿದ್ದು, ನಂತರ ಮತ್ತಷ್ಟುಸಡಿಲಿಕೆ ಆಗುವ ಸಾಧ್ಯತೆ ಇದೆ.