ಬೆಟ್ಟ ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ ಕಲ್ಪಿಸಿರುವ ಕೇಂದ್ರ ಸರ್ಕಾರಕ್ಕೆ ಈಶ್ವರಪ್ಪ ಕೃತಜ್ಞತೆ

By Kannadaprabha NewsFirst Published Sep 17, 2022, 2:56 PM IST
Highlights

ಅಖಂಡ ಭಾರತವನ್ನು ಒಡೆದು ಈಗ ಭಾರತ್‌ ಜೋಡೋ ಮಾಡುತ್ತಿದೆ. ಕಾಂಗ್ರೆಸ್‌ ತನ್ನ ಯಾತ್ರೆಯ ಸ್ಲೋಗನ್‌ ಬದಲಾವಣೆ ಮಾಡಿಕೊಂಡು ಕಾರ್ಯಕ್ರಮ ಮಾಡುವುದು ಒಳಿತು: ಈಶ್ವರಪ್ಪ

ಮೈಸೂರು(ಸೆ.17):  ಬೆಟ್ಟ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಆಗ್ರಹಿಸಿ ನಾಲ್ಕು ದಶಕಗಳಿಂದ ಹೋರಾಟ ನಡೆದಿತ್ತು. ಬೆಟ್ಟ ಕುರುಬ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಿರುವ ಕೇಂದ್ರ ಸರ್ಕಾರಕ್ಕೆ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಕೃತಜ್ಞತೆ ಸಲ್ಲಿಸಿದರು. ಮೈಸೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಟ್ಟ ಕುರುಬರನ್ನು ಎಸ್‌ಟಿಗೆ ಸೇರಿಸುವಂತೆ ಕಾಗಿನೆಲೆ ಮಹಾಸಂಸ್ಥಾನ ಮಠದ ಶ್ರೀಗಳ ನೇತೃತ್ವದಲ್ಲಿ ಬೃಹತ್‌ ಪಾದಯಾತ್ರೆ ನಡೆಸಲಾಗಿತ್ತು. ಬೆಟ್ಟಕುರುಬ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಿರುವಂತೆಯೇ ಇತರ ಹಿಂದುಳಿದ ಸಮುದಾಯಗಳನ್ನು ಗುರುತಿಸಿ ಮೀಸಲು ಕಲ್ಪಿಸಬೇಕು ಎಂದರು.

ಆರ್ಥಿಕವಾಗಿ ಸಬಲರಾಗಿರುವವರಿಗೆ ಮೀಸಲಾತಿ ನೀಡಬಾರದು. ದಲಿತರಿಗೆ ಕಲ್ಪಿಸಿರುವ ಮೀಸಲಾತಿಯನ್ನು ಉಳ್ಳವರೇ ಪಡೆದುಕೊಳ್ಳುತ್ತಿದ್ದಾರೆ. ದಲಿತ ಸಮುದಾಯದಲ್ಲಿ ತುಳಿತಕ್ಕೊಳಗಾದವರಿಗೆ ಮೀಸಲಾತಿ ಸಿಗಬೇಕು. ಸ್ವಾಭಿಮಾನದ ಬದುಕು ಸಿಗುವವರೆಗೂ ದಲಿತ ಸಮುದಾಯಕ್ಕೆ ಮೀಸಲಾತಿ ಸಿಗಬೇಕು. ಮಲ್ಲಿಕಾರ್ಜುನ ಖರ್ಗೆ ನಂತರ ಅವರ ಮಗ ಪ್ರಿಯಾಂಕ ಖರ್ಗೆ ಮೀಸಲಾತಿಯ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿ, ಮೀಸಲಾತಿ ನೀಡುವಾಗ ಕಡು ಬಡವರಿಗೆ ಆದ್ಯತೆ ನೀಡಬೇಕು ಎಂದರು.

ಇಂಧನ ಇಲಾಖೆ ಅಧಿಕಾರಿಗಳಿಗೆ ದಾಖಲೆ ತರುವಂತೆ ಹೆದರಿಸುತ್ತಿದ್ದಾರೆ: ಡಿಕೆಶಿ ಸ್ಫೋಟಕ ಆರೋಪ

ಮತ್ತೆ ಸಚಿವ ಸ್ಥಾನ ನೀಡದಿರುವುದು ಬೇಸರ

ನನ್ನ ವಿರುದ್ಧ ಆರೋಪ ಕೇಳಿ ಬರುತ್ತಿದ್ದಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದೆ. ಪ್ರಕರಣದಿಂದ ಕ್ಲೀನ್‌ ಚಿಟ್‌ ಸಿಕ್ಕ ನಂತರ ಮತ್ತೆ ಸಚಿವ ಸ್ಥಾನ ನೀಡುವ ವಿಶ್ವಾಸವಿತ್ತು. ಸಚಿವ ಸ್ಥಾನ ನೀಡಬೇಕಿತ್ತು. ಆದರೆ, ಮತ್ತೆ ಸಚಿವ ಸ್ಥಾನ ನೀಡದಿರುವುದರಿಂದ ಸಹಜವಾಗಿಯೇ ಅಸಮಾಧಾನವಾಗಿದೆ ಎಂದರು.

ಇಡಿ ನೋಟಿಸ್‌ ನೀಡಿರುವ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿ ಅವರು, ಭಾರತ್‌ ಜೋಡೊ ಯಾತ್ರೆಯ ಸಿದ್ಧತೆಯಲ್ಲಿರುವಾಗ, ವಿಧಾನಮಂಡಲ ಅಧಿವೇಶನ ನಡೆಯುತ್ತಿರುವಾಗ ಇಡಿ ನೋಟಿಸ್‌ ನೀಡಿರುವುದಕ್ಕೆ ಡಿಕೆಶಿ ಆಕ್ಷೇಪ ವ್ಯಕ್ತಪಡಿಸಿರುವುದು ಸರಿಯಲ್ಲ. ಶಿವಕುಮಾರ್‌ ಈಗಾಗಲೇ ಜೈಲಿಗೆ ಹೋಗಿ ಬಂದಿದ್ದಾರೆ. ಬೇಲ್‌ ಮೇಲೆ ಹೊರಗಿದ್ದಾರೆ. ನಿರಪರಾಧಿ ಎಂದು ಸಾಬೀತಾಗುವವರೆಗೂ ಈ ರೀತಿಯ ಹೇಳಿಕೆ ನೀಡಬಾರದು ಎಂದರು.

Mysuru: ಬಿಜೆಪಿಗರು ಕನ್ನಡಕ್ಕೆ ದ್ರೋಹ ಎಸಗುತ್ತಿದ್ದಾರೆ: ಎಚ್‌.ಸಿ.ಮಹದೇವಪ್ಪ

ಮತಾಂತರ ನಿಷೇಧ ಕಾಯ್ಧೆ ಮಸೂದೆ ಮಂಡನೆ ವೇಳೆ ಬಿಲ್‌ ಪ್ರತಿಯನ್ನು ಹರಿದ ಕಾಂಗ್ರೆಸ್‌ ಕ್ರಮ ಖಂಡನಿಯ. ಇದು ಸಂವಿಧಾನಕ್ಕೆ ಮಾಡಿದ ಅಪಮಾನವಾಗಿದೆ. ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರನ್ನು ಓಲೈಸಲು ಕಾಂಗ್ರೆಸ್‌ ಸದಸ್ಯರು ಈ ರೀತಿ ಮಾಡಿದ್ದಾರೆ ಎಂದು ಅವರು ಕಿಡಿಕಾರಿದರು.

ಅಖಂಡ ಭಾರತವನ್ನು ಒಡೆದು ಈಗ ಭಾರತ್‌ ಜೋಡೋ ಮಾಡುತ್ತಿದೆ. ಕಾಂಗ್ರೆಸ್‌ ತನ್ನ ಯಾತ್ರೆಯ ಸ್ಲೋಗನ್‌ ಬದಲಾವಣೆ ಮಾಡಿಕೊಂಡು ಕಾರ್ಯಕ್ರಮ ಮಾಡುವುದು ಒಳಿತು. ಹಿಂದೆ ಮಾಡಿದ ತಪ್ಪಿಗೆ ಪಶ್ಚಾತ್ತಾಪವಾಗಿ ಈ ಕಾರ್ಯಕ್ರಮ ಎಂದು ಹೇಳಬೇಕು. ಅಖಂಡ ಭಾರತ ಒಗ್ಗೂಡಬೇಕು. ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಎಲ್ಲವೂ ಒಟ್ಟಾಗಿ ಅಖಂಡ ಭಾರತವಾಗಬೇಕು ಎಂದು ಅವರು ಹೇಳಿದರು.
 

click me!