ಮೈಸೂರು ದಸರಾ ಮಹೋತ್ಸವ: ಭದ್ರತೆಯ ನೆಪದಲ್ಲಿ ಸಾರ್ವಜನಿಕರಿಗೆ ಕಿರಿಕಿರಿ

By Kannadaprabha News  |  First Published Sep 17, 2022, 2:28 PM IST

1990 ರಿಂದ ‘ಜಂಬೂಸವಾರಿ’ಗೆ ಅತಿ ಗಣ್ಯರಿಗೆ ಆಹ್ವಾನ ನೀಡಿಲ್ಲ, ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಬರಬಹುದು ಎಂಬ ಚರ್ಚೆ ಆರಂಭ


ಅಂಶಿ ಪ್ರಸನ್ನಕುಮಾರ್‌

ಮೈಸೂರು(ಸೆ.17):  ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ‘ಜಂಬೂಸವಾರಿ’ಗೆ ಪ್ರಧಾನಿ ನರೇಂದ್ರ ಮೋದಿ ಅವರು ಬರಬಹುದು ಎಂಬ ಚರ್ಚೆ ಆರಂಭವಾಗಿದೆ. ಆದರೆ ಭದ್ರತೆಯ ನೆಪದಲ್ಲಿ ಸಾರ್ವಜನಿಕರಿಗೆ ಕಿರಿಕಿರಿಯಾಯಿತು ಎಂಬ ಕಾರಣದಿಂದ 1990 ರಿಂದ ಅತಿ ಗಣ್ಯರಿಗೆ ಜಂಬೂಸವಾರಿಗೆ ಆಹ್ವಾನ ನೀಡುತ್ತಿಲ್ಲ.

Latest Videos

undefined

1988 ರಲ್ಲಿ ಅಂದಿನ ಉಪ ರಾಷ್ಟ್ರಪತಿ ಡಾ.ಶಂಕರ್‌ದಯಾಳ್‌ ಶರ್ಮ ಅವರು ಜಂಬೂ ಸವಾರಿ ಉದ್ಘಾಟಿಸಿದ್ದರು. 1990 ರಲ್ಲಿ ಅಂದಿನ ರಾಷ್ಟ್ರಪತಿ ಆರ್‌. ವೆಂಕಟರಾಮನ್‌ ಅವರು ಜಂಬೂಸವಾರಿ ಉದ್ಘಾಟಿಸಿದ್ದರು. ಆ ಸಂದರ್ಭದಲ್ಲಿಯೇ ಬಿಗಿ ಭದ್ರತೆ ಮಾಡಿದ್ದರಿಂದ ದಸರೆ ವೀಕ್ಷಣೆಗೆ ಬಂದವರಿಗೆ ಸಾಕಷ್ಟುಅನಾನುಕೂಲವಾಯಿತು ಎಂಬ ಕಾರಣದಿಂದ ಕಳೆದ 32 ವರ್ಷಗಳಲ್ಲಿ ಯಾವುದೇ ಅತಿ ಗಣ್ಯರನ್ನು ಜಂಬೂಸವಾರಿಗೆ ಅತಿಥಿಯಾಗಿ ಆಹ್ವಾನಿಸುವ ಸಂಪ್ರದಾಯವನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ.

Mysuru Dasara 2022: ಈ ಬಾರಿ 124 ಕಿ.ಮೀ. ದಸರಾ ದೀಪಾಲಂಕಾರ

ಮೂರು ದಶಕಗಳಲ್ಲಿ ಭಾರಿ ಬದಲಾವಣೆ

1990ರಲ್ಲಿ ಇದ್ದ ಪರಿಸ್ಥಿತಿಗೂ ಈಗಿನ ಪರಿಸ್ಥಿತಿಗೂ ಬಹಳಷ್ಟು ಬದಲಾವಣೆಯಾಗಿದೆ. 1984ರಲ್ಲಿ ದೆಹಲಿಯಲ್ಲಿ ಅಂಗರಕ್ಷಕರಿಂದಲೇ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆಯಾಯಿತು. 1991 ರಲ್ಲಿ ತಮಿಳುನಾಡಿನ ಶ್ರೀಪೆರಂಬದೂರು ಬಳಿ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರನ್ನು ಮಾನವ ಬಾಂಬ್‌ ಸ್ಫೋಟಿಸಿ ಹತ್ಯೆ ಮಾಡಲಾಯಿತು. ಇದಾದ ನಂತರ ಅತಿ ಗಣ್ಯರಿಗೆ ಅದರಲ್ಲೂ ಪ್ರಧಾನಿಯಾದವರ ಭದ್ರತೆಯನ್ನು ಗರಿಷ್ಠ ಮಟ್ಟದಲ್ಲಿ ಹೆಚ್ಚಿಸಲಾಗಿದೆ.
ಕಳೆದ ಜೂ.21 ರಂದು ಪ್ರಧಾನಿ ನರೇಂದ್ರ ಮೋದಿಯವರು ಸೀಮಿತವಾದ 10,000 ಮಂದಿಯ ನಡುವೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಲು ಬಂದಾಗ ಅರಮನೆ ಸುತ್ತಮುತ್ತ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಜನರ ಓಡಾಟಕ್ಕೂ ಅವಕಾಶ ಇರಲಿಲ್ಲ. ಹೀಗಿರುವಾಗ ಅರಮನೆಯಿಂದ ಬನ್ನಿಮಂಟಪವರೆಗೆ ರಾಜಮಾರ್ಗದಲ್ಲಿ ಸಾಗುವ ಜಂಬೂಸವಾರಿಯನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ಸೇರುತ್ತಾರೆ. ಅದರಲ್ಲೂ ಅರಮನೆ ಉತ್ತರ ದ್ವಾರ, ಕೆ.ಆರ್‌. ವೃತ್ತದಲ್ಲಿಯೇ ಎರಡು- ಮೂರು ಲಕ್ಷ ಮಂದಿ ಸೇರುತ್ತಾರೆ. ಅಂಬಾರಿ ನೋಡಿದರೆ ಒಳಿತಾಗುತ್ತದೆ ಎಂಬ ಭಾವನೆ ಈ ಭಾಗದಲ್ಲಿ ಜನಮನದಲ್ಲಿ ಇರುವುದು ಇದಕ್ಕೆ ಕಾರಣ.

ಬೆಟ್ಟಕ್ಕೆ ರಾಷ್ಟ್ರಪತಿ ಬರುವುದು ಖಚಿತ

ದಸರಾ ಮಹೋತ್ಸವ ಸಾಮಾನ್ಯವಾಗಿ ಒಂಭತ್ತು ಅಥವಾ ಹತ್ತು ದಿನ ನಡೆಯುತ್ತಿದೆ. ಮೊದಲ ದಿನ ಚಾಮುಂಡಿಬೆಟ್ಟದಲ್ಲಿ ಉದ್ಘಾಟನೆಯಾದರೆ ಕೊನೆಯ ದಿನ ಅರಮನೆಯಿಂದ ಜಂಬೂಸವಾರಿ ಹೊರಡುತ್ತದೆ. ಬನ್ನಿಮಂಟಪದಲ್ಲಿ ಪಂಜಿನ ಕವಾಯತುವಿನೊಂದಿಗೆ ಅಂತ್ಯವಾಗುತ್ತದೆ. ಉದ್ಘಾಟನೆಯ ದಿನ ಚಾಮುಂಡಿಬೆಟ್ಟದಲ್ಲಿ ಹೆಚ್ಚು ಜನರು ಇರುವುದಿಲ್ಲ. ಈ ಬಾರಿ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸಲಾಗಿದೆ. ಅವರು ಬರುವುದು ಕೂಡ ಖಚಿತವಾಗಿದೆ. ಬೆಟ್ಟಕ್ಕೆ ಅಂದು ಸಂಚಾರ ನಿರ್ಬಂಧ ವಿಧಿಸುವುದರಿಂದ ಹೆಚ್ಚಿನ ತೊಂದರೆ ಆಗದು.

Mysuru Dasara 2022: ಕುಶಾಲತೋಪು ಶಬ್ದಕ್ಕೆ ಹೊಂದಿಕೊಳ್ಳುತ್ತಿರುವ ಗಜಪಡೆ

ಆದರೆ ಜಂಬೂಸವಾರಿಯ ದಿನ ಆ ರೀತಿ ಮಾಡುವುದು ಕಷ್ಟ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಬರುವುದು ಖಚಿತಪಟ್ಟರೆ ಅರಮನೆಗೆ ಸೀಮಿತವಾಗಿ ನಿರ್ಬಂಧಿ ವಿಧಿಸಿಕೊಳ್ಳಬಹುದು. ಅರಮನೆಯ ಸುತ್ತಮುತ್ತಲಿನ ರಸ್ತೆಗಳಲ್ಲಿ ನಿರ್ಬಂಧ ವಿಧಿಸಿದರೆ ಸಾರ್ವಜನಿಕರಿಗೆ ಅದರಲ್ಲೂ ದಸರಾ ವೀಕ್ಷಣೆಗೆ ಬರುವವರಿಗೆ ಕಿರಿಕಿರಿಯಾಗುವುದು ಖಚಿತ.

ಶಿಷ್ಟಾಚಾರ ವೈಫಲ್ಯದಿಂದಾಗಿ ಅರಮನೆಗೆ ಸಿಎಂ, ಬನ್ನಿಮಂಟಪಕ್ಕೆ ರಾಜ್ಯಪಾಲರು ಸೀಮಿತ!

ಮೊದಲೆಲ್ಲಾ ಅರಮನೆ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿ ನಂದಿಧ್ವಜ ಪೂಜೆ ನೆರವೇರಿಸಿದರೆ, ಒಳಾವರಣದಲ್ಲಿ ರಾಜ್ಯಪಾಲರು ಚಿನ್ನದ ಅಂಬಾರಿಯಲ್ಲಿರುವ ನಾಡದೇವತೆ ಚಾಮುಂಡೇಶ್ವರಿ ದೇವಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುತ್ತಿದ್ದರು. ರಾಜ್ಯಪಾಲರು ಸರ್ಕಾರಿ ಅತಿಥಿಗೃಹ ಹಾಗೂ ಮುಖ್ಯಮಂತ್ರಿಗಳು ಲಲಿತಮಹಲ್‌ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡುತ್ತಿದ್ದರು. ಒಮ್ಮೆ ಇಬ್ಬರು ಅರಮನೆಯತ್ತ ಹೊರಟಾಗ, ಮತ್ತೊಮ್ಮೆ ಬನ್ನಿಮಂಟಪಕ್ಕೆ ಹೊರಟಾಗ ರಾಜ್ಯಪಾಲರ ವಾಹನಗಳನ್ನು ತಡೆದು, ಶಿಷ್ಚಾಚಾರ ಉಲ್ಲಂಘಿಸಲಾಯಿತು ಎಂದು ಅಂದಿನ ಪೊಲೀಸ್‌ ಆಯುಕ್ತರ ತಲೆದಂಡದವರೆಗೂ ಹೋಗಿತ್ತು. ಹೀಗಾಗಿ ನಂತರದ ವರ್ಷಗಳಲ್ಲಿ ನಂದಿಪೂಜೆ ಹಾಗೂ ಅರಮನೆ ಒಳಾವರಣದಲ್ಲಿ ಮುಖ್ಯಮಂತ್ರಿ, ಸಂಜೆ ಬನ್ನಿಮಂಟಪದ ಪಂಜಿನ ಕವಾಯತಿನಲ್ಲಿ ರಾಜ್ಯಪಾಲರು ಗೌರವವಂದನೆ ಸ್ವೀಕಾರ ಎಂದು ಪರಿಷ್ಕರಿಸಲಾಯಿತು. ರಾಜ್ಯಪಾಲರು ಸುಗಮವಾಗಿ ಬನ್ನಿಮಂಟಪ ತಲುಪುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಬಹಳ ವರ್ಷಗಳಿಂದ ಇದೇ ರೀತಿ ನಡೆದುಕೊಂಡು ಬರುತ್ತಿದೆ.
 

click me!