
ಕಲ್ಬುರ್ಗಿ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಹಾಗೂ ಕೃಷ್ಣ ನದಿಯ ಮಹಾರಾಷ್ಟ್ರದ ಉಜನಿ ಹಾಗೂ ನೀರ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರನ್ನು ಹೊರಬಿಟ್ಟಿರುವುದರಿಂದ ಭೀಮ ನದಿ ತೀರದಲ್ಲಿ ಹಾಗೂ ಬೆಣ್ಣೆತೋರಾದಲ್ಲಿ ಪ್ರವಾಹದ ಪರಿಸ್ಥಿತಿ ಉದ್ಭವಿಸಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಯ ಮೇಲೆ ತೀವ್ರ ನಿಗಾವಹಿಸಿ, ಅಗತ್ಯ ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಂದಾಯ ಸಚಿವರಾದ ಕೃಷ್ಣಬೈರೇಗೌಡರು ಮತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಗೂ ಕಲ್ಬುರ್ಗಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕಲ್ಯಾಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಅದರ ಪರಿಣಾಮವಾಗಿ ಜಲಾಶಯಗಳಿಂದ ನೀರು ಹೊರಬಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವಿಶೇಷವಾಗಿ ಕಲಬುರಗಿ ಜಿಲ್ಲೆಯಲ್ಲಿ ನೀರಿನ ಮಟ್ಟ ಏರಿಕೆಯಿಂದ ನದಿ ತೀರ ಗ್ರಾಮಗಳು ಅತಿದೊಡ್ಡ ಹಾನಿಯ ಅಪಾಯದಲ್ಲಿವೆ.
ಈ ಹಿನ್ನೆಲೆಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸಿಎಂ ಸಿದ್ದರಾಮಯ್ಯ ಅವರು ಪರಿಸ್ಥಿತಿಯನ್ನು ನಿಕಟವಾಗಿ ಪರಿಶೀಲಿಸಿ, ಜಿಲ್ಲಾಡಳಿತಕ್ಕೆ ತಕ್ಷಣ ಮಾರ್ಗದರ್ಶನ ನೀಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಪ್ರವಾಹದಿಂದ ಯಾರಿಗೂ ತೊಂದರೆ ಆಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನೂ, ಸಂತ್ರಸ್ತರಿಗೆ ತಕ್ಷಣ ನೆರವು ತಲುಪಿಸುವುದನ್ನೂ ಸರ್ಕಾರ ಪ್ರಥಮ ಆದ್ಯತೆಯಾಗಿ ಪರಿಗಣಿಸಿದೆ. ಪ್ರಸ್ತುತ ಪರಿಸ್ಥಿತಿಯ ತೀವ್ರತೆಯನ್ನು ಮನಗಂಡು, ರಾಜ್ಯ ಸರ್ಕಾರವು ರಕ್ಷಣಾ, ಪರಿಹಾರ ಹಾಗೂ ಪುನರ್ವಸತಿ ಕಾರ್ಯಗಳನ್ನು ಶೀಘ್ರಗತಿಯಲ್ಲಿ ಜಾರಿಗೆ ತರುವ ನಿರ್ಧಾರ ಕೈಗೊಂಡಿದೆ. ಈ ಮೂಲಕ, ಕಲ್ಯಾಣ ಕರ್ನಾಟಕದ ಜನತೆಗೆ ತೊಂದರೆ ಕಡಿಮೆ ಮಾಡುವತ್ತ ಹಾಗೂ ಪ್ರವಾಹದ ದೋಷಗಳನ್ನು ಹತೋಟಿಗೆ ತರಲು ಸರ್ಕಾರವು ತೀವ್ರ ಚಟುವಟಿಕೆಯನ್ನು ಕೈಗೊಂಡಿದೆ.