
ಬರ್ಬರವಾಗಿ ಹತ್ಯೆಗೀಡಾದ ಸೌಜನ್ಯಳಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ಶುರುವಾದ Justice For Soujanya ವಿಭಿನ್ನ ಹಾದಿಯನ್ನೇ ತುಳಿದು, ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿರುವುದು ತಿಳಿದೇ ಇದೆ. ಸೌಜನ್ಯಳ ಹೆಸರಿನಲ್ಲಿ ರಾಜಕೀಯ, ಧರ್ಮ ಎಲ್ಲವನ್ನೂ ಎಳೆದು ತಂದು ಧರ್ಮಸ್ಥಳದ ಹೆಸರನ್ನು ಹಾಳುಮಾಡಲು ದೊಡ್ಡ ಸಂಚೇ ನಡೆದಿದ್ದು, ಅದರ ಸತ್ಯಾಸತ್ಯತೆ ಇನ್ನೂ ಹೊರಬರಬೇಕಿದೆ. ಇದಾಗಲೇ ಕೆಲವು ಪ್ರಮುಖ ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡದ್ದೂ ಆಗಿದೆ. ಇದರ ಹಿಂದೆ ಇರುವ ಕೈಗಳ ಬಗ್ಗೆಯೂ ಎಲ್ಲರಿಗೂ ತಿಳಿದೇ ಇದ್ದರೂ, ಸಾಕ್ಷ್ಯಾಧಾರಗಳು ಸಿಕ್ಕು ಅವರೇ ನಿಜವಾದ ಅಪರಾಧಿಗಳು ಎಂದು ಕಾನೂನು ಪ್ರಕಾರ ಸಾಬೀತು ಆಗಬೇಕಿದೆಯಷ್ಟೇ. ಇವೆಲ್ಲವುಗಳ ನಡುವೆಯೇ ಹೈಲೈಟ್ ಆಗಿದ್ದು ಅಸ್ತಿತ್ವದಲ್ಲಿಯೇ ಇಲ್ಲದ ಅನನ್ಯಾ ಭಟ್ (Ananya Bhat).
ಅನನ್ಯಾ ಭಟ್ ಎನ್ನುವ ಪಾತ್ರವನ್ನು ಸೃಷ್ಟಿ ಮಾಡಿ Justice for Ananya Bhat ಎಂದು ಹೋರಾಟ ಮಾಡಿ ಕೊನೆಗೆ ಸಿಕ್ಕಾಕಿಕೊಂಡವರು ಸದ್ಯ ಕಾನೂನು ಪ್ರಕ್ರಿಯೆಯನ್ನು ಎದುರಿಸುತ್ತಿದ್ದಾರೆ. ಒಂದು ಸುಳ್ಳನ್ನು ಸಾವಿರಾರು ಬಾರಿ ಹೇಳಿದರೆ ಸತ್ಯವಾಗುತ್ತದೆ ಎನ್ನುವ ಮಾತನ್ನೇ ನಂಬಿ ಕೆಲವು 'ಪ್ರತಿಷ್ಠಿತ' ಯುಟ್ಯೂಬರ್ಗಳು ಎಐ ವಿಡಿಯೋ ಕೂಡ ಹರಿಬಿಟ್ಟು ಎಲ್ಲರೂ ಸುಳ್ಳನ್ನೇ ನಂಬುತ್ತಾರೆ ಎಂದುಕೊಂಡು ಬಿಟ್ಟರು. ಅದೇ ಇನ್ನೊಂದೆಡೆ, ಧರ್ಮಸ್ಥಳದಲ್ಲಿ ಕಾಣೆಯಾದ ನನ್ನ ಮಗಳು ಅನನ್ಯಾ ಭಟ್ ಅಸ್ತಿಪಂಜರ ಕೊಡಿಸಿ, ಸನಾತದ ಧರ್ಮದ ಪ್ರಕಾರ ಶವಸಂಸ್ಕಾರ ಮಾಡುತ್ತೇನೆ ಎಂದು ಸುಜಾತಾ ಭಟ್ ಕಣ್ಣೀರು ಹಾಕಿದ್ದೇ ಹಾಕಿದ್ದು. ಅವರನ್ನು ನೋಡುವವರ ಕಣ್ಣಿನಲ್ಲಿಯೂ ನೀರು ತರಿಸಿದ್ದೇ ತರಿಸಿದ್ದು. ಕೊನೆಗೆ ಇವೆಲ್ಲಾ ಕಟ್ಟುಕಥೆ ಎಂದು ಶರಣಾಗಿಬಿಟ್ಟರು ಸುಜಾತಾ ಭಟ್ (Sujata Bhat)
ಇದೀಗ ಸುಜಾತಾ ಅವರು ಸುವರ್ಣ ನ್ಯೂಸ್ (Asianet Suvarna News) ವಿಶೇಷ ಸಂದರ್ಶನ ನೀಡಿದ್ದು, ಅದರಲ್ಲಿ ಕೆಲವೊಂದು ವಿಷಯಗಳನ್ನು ಹಂಚಿಕೊಂಡಿದ್ದಾರೆ (ಒಂದೂವರೆ ಗಂಟೆಗಳ ಈ ವಿಡಿಯೋ ಲಿಂಕ್ ಸುದ್ದಿಯ ಕೊನೆಯಲ್ಲಿ ಇದೆ.) ಅದರಲ್ಲಿ ಅವರು ಹೇಳಿರುವ ಮುಖ್ಯ ವಿಷಯ ಏನೆಂದರೆ, 'ನಾನು ಅಮಾಯಕಿ, ಆಸ್ತಿಯ ವಿಷಯಕ್ಕೆ ಸಂಬಂಧಿಸಿದಂತೆ ಶಿವಶಂಕರ್ ಎನ್ನುವವರ ಯುಟ್ಯೂಬ್ ಸಂದರ್ಶನಕ್ಕೆ ಹೋದಾಗ ಅಲ್ಲಿ ಅನನ್ಯಾ ಭಟ್ ಎನ್ನುವವಳ ಸೃಷ್ಟಿ ಮಾಡಿದರು. ನನಗೆ ಇದರ ಬಗ್ಗೆ ಏನೂ ತಿಳಿಯಲೇ ಇಲ್ಲ. ಅವರು ಹೇಳಿದಂತೆಲ್ಲಾ ಕೇಳುತ್ತಾ ಹೋದೆ ಎಂದಿರುವ ಸುಜಾತಾ, ಶಿವಶಂಕರ್ ಈಗ ತೀರಿಕೊಂಡಿದ್ದಾರೆ ಎಂದಿದ್ದಾರೆ. ಮಹೇಶ್ ಶೆಟ್ಟಿ ತಿಮರೋಡಿ ಅಮಾಯಕರು. ಅವರಿಗೂ ಇದಕ್ಕೂ ಲಿಂಕ್ ಇಲ್ಲ. ಆದರೆ ಮಟ್ಟಣ್ಣನವರ್ ಮತ್ತು ಅವರ ಗುಂಪು ನನಗೆ ಹೀಗೆ ಹೇಳು, ಹಾಗೆ ಹೇಳು ಎಂದು ಹೇಳಿತ್ತು. ವಿಮಾನದಲ್ಲಿ ನನ್ನನ್ನು ದೆಹಲಿಗೂ ಕರೆದುಕೊಂಡು ಹೋದರು. ಸುಪ್ರೀಂಕೋರ್ಟ್ ಒಳಗೆ ನಾನು ಹೋಗಲಿಲ್ಲ. ಅಲ್ಲಿ ಏನಾಯಿತೋ ನನಗೆ ಗೊತ್ತಿಲ್ಲ. ಸುಖಾ ಸುಮ್ಮನೆ ಅಮಾಯಕಿಯಾದ ನನ್ನನ್ನು ಸಿಲುಕಿದರು ಎಂದು ಸುಜಾತಾ ಕಣ್ಣೀರು ಹಾಕಿದ್ದಾರೆ.
ನನ್ನನ್ನು ಕುಸುಮಾವತಿ (ಸೌಜನ್ಯ ಅವರ ಅಮ್ಮ) ಮನೆಗೆ ಕರೆದುಕೊಂಡು ಹೋಗಿದ್ದರು. ಕುಸುಮಾವತಿ ಮನೆಯಲ್ಲಿ ನಾನಿದ್ದೆ. ಅವರು ನನ್ನನ್ನು ಚೆನ್ನಾಗಿ ನೋಡಿಕೊಂಡರು. ಕುಸುಮಾವತಿ ಈ ವಿಷಯದ ಬಗ್ಗೆ ಏನೂ ಮಾತನಾಡಲಿಲ್ಲ. ನಾನು ಕೂಡ ಏನು ಕೇಳಲಿಲ್ಲ. ಅಲ್ಲಿರುವಾಗಲೇ ನನ್ನ ಕೈಯಲ್ಲಿ ಕಂಪ್ಲೇಟ್ ಕೊಡಿಸಲು ಗಿರೀಶ್ ಮಟ್ಟಣನವರ್ ಕರೆದುಕೊಂಡು ಹೋದರು. ಅಲ್ಲಿಯೇ ಅನನ್ಯಾ ಭಟ್, ಆಕೆಯ ಕಾಲೇಜು, ಆಕೆ ನಾಪತ್ತೆಯಾಗಿರುವ ಬಗ್ಗೆ ಎಲ್ಲವನ್ನೂ ಅವರೇ ಡ್ರಾಫ್ಟ್ ಮಾಡಿದ್ದರು. ನನಗೆ ಈ ಬಗ್ಗೆ ಏನೂ ಗೊತ್ತೇ ಇರಲಿಲ್ಲ. ನಾನು ಹೇಗೆ ಏನು ಹೇಳಬೇಕು ಎಂದು ಅಲ್ಲಿಯೇ ನನಗೆ ಹೇಳಿಕೊಟ್ಟರು. ಅವರು ಹೇಳಿದಂತೆ ಕೇಳಿಬಿಟ್ಟೆ. ನನಗೆ ಅವರು ಏನು ಮಾಡುತ್ತಿದ್ದಾರೆ ಎಂದೇ ಅರ್ಥವಾಗುತ್ತಿರಲಿಲ್ಲ ಎಂದಿದ್ದಾರೆ ಸುಜಾತಾ.
ಅಲ್ಲಿಯೇ ಮಾಸ್ಕ್ ಮ್ಯಾನ್ ಬಂದರು. ಅವರೆಲ್ಲಾ ಏನು ಮಾತನಾಡಿಕೊಳ್ತಿದ್ರು ಎನ್ನೋದು ನನಗೆ ಗೊತ್ತಿಲ್ಲ. ಅವರಿಂದ ಒಂದು ರೂಪಾಯಿಯನ್ನೂ ನಾನು ಪಡೆದುಕೊಂಡಿಲ್ಲ. ಒಂದೊಂದು ಸಲ 5- 10 ಸಾವಿರ ರೂಪಾಯಿ ಕೊಟ್ಟದ್ದು ಇದೆ. ಈಗ ಕತ್ತಿನಲ್ಲಿ ಇರುವ ತುಳಸಿ ಸರ ಬಿಟ್ಟು ಏನೂ ಇಲ್ಲ. ಆದರೂ ನನ್ನ ಪಾಡಿಗೆ ಇದ್ದ ನನ್ನನ್ನು ವಿನಾಕಾರಣ ಇಷ್ಟೊಂದು ದೊಡ್ಡ ಷಡ್ಯಂತ್ರದಲ್ಲಿ ಸಿಲುಕಿಸಿಬಿಟ್ಟರು ಎಂದು ಸುಜಾತಾ ಭಟ್ ಹೇಳಿದ್ದಾರೆ. ಈಗ ಯಾರಾದರೂ ದಾನಿಗಳಿಂದ ನನಗೆ ಸಹಾಯ ಬೇಕು, ಇಲ್ಲದಿದ್ದರೆ ಬದುಕಲು ಏನೂ ಇಲ್ಲ ಎಂದು ಕಣ್ಣೀರು ಇಟ್ಟಿದ್ದಾರೆ.