ಸರ್ಕಾರದ ಕೋವಿಡ್‌ ಪ್ಯಾಕೇಜ್‌ ಕಾಟಾಚಾರದ್ದು: ಸತೀಶ ಜಾರಕಿಹೊಳಿ

By Kannadaprabha NewsFirst Published May 20, 2021, 3:34 PM IST
Highlights

* ವಿರೋಧ ಪಕ್ಷದ ಒತ್ತಡದಿಂದ ಘೋಷಿಸಿದ ಪ್ಯಾಕೇಜ್‌
* 10 ಸಾವಿರ ಕೋಟಿ ಪರಿಹಾರ ಘೋಷಿಸಬೇಕಿತ್ತು
* 3ನೇ ಅಲೆ ತಡೆಯಲು ಸರ್ಕಾರ ಮುಂಜಾಗ್ರತೆ ವಹಿಸಬೇಕು 

ಬೆಳಗಾವಿ(ಮೇ.20): ಸರ್ಕಾರ ಘೋಷಣೆ ಮಾಡಿರುವ ಕೋವಿಡ್‌ ಪ್ಯಾಕೇಜ್‌ನಲ್ಲಿ ಜನರಿಗೆ ಅನುಕೂಲವಾಗುವ ಯೋಜನೆಗಳು ಇಲ್ಲ. ಕೇವಲ ಕಾಟಾಚಾರಕ್ಕಾಗಿ ಪ್ಯಾಕೇಜ್‌ ಘೋಷಣೆ ಮಾಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದವರ ಒತ್ತಡದಿಂದ ಮತ್ತು ಜನರಿಗೆ ಪ್ಯಾಕೇಜ್‌ ಕೊಟ್ಟಿದ್ದೇವೆ ಎಂದು ಬಿಂಬಿಸಿಕೊಳ್ಳುವುದಕ್ಕಾಗಿ ಮಾತ್ರ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್‌ ಘೋಷಿಸಿದೆ. ತಮಿಳುನಾಡಿನಲ್ಲಿ ಪ್ರತಿಯೊಬ್ಬರಿಗೂ 4,000 ಘೋಷಣೆ ಮಾಡಿದ್ದಾರೆ. ಆಂಧ್ರಪ್ರದೇಶದಲ್ಲಿ ಸರ್ಕಾರಿ ಹಾಗೂ ಖಾಸಗಿ ಸೇರಿ ಎಲ್ಲ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡುವುದಾಗಿ ಘೋಷಿಸಿದ್ದಾರೆ. ಆದರೆ, ನಮ್ಮಲ್ಲಿ ಅಂತಹ ಯಾವುದೇ ಯೋಜನೆಗಳನ್ನು ಘೋಷಿಸಿಲ್ಲ. ಅವುಗಳನ್ನು ಮರೆಮಾಚಿಸುವ ಪ್ರಯತ್ನವಾಗಿ ಈ ಪ್ಯಾಕೇಜ್‌ ಘೋಷಿಸಿದ್ದಾರೆ ಎಂದು ಹೇಳಿದರು.

10 ಸಾವಿರ ಕೋಟಿ ಪರಿಹಾರ ಘೋಷಿಸಬೇಕಿತ್ತು:

ಹೂವು, ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಪ್ರತಿ ಹೆಕ್ಟೇರ್‌ಗೆ 10 ಸಾವಿರ ನೀಡುವುದರಿಂದ, ಪ್ರತಿ ಎಕರೆಗೆ ಸುಮಾರು 3,000 ದಿಂದ 4000 ಮಾತ್ರ ಸಿಗುತ್ತದೆ. ಇದು ಅವರ ಒಂದು ದಿನದ ದುಡಿಮೆಯಾಗಿದೆ ಎಂದರು.
ಬೆಳಗಾವಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಕಷ್ಟು ಬೆಡ್‌ಗಳಿವೆ. ಆದರೆ, ಸಿಬ್ಬಂದಿ ಹಾಗೂ ಆಕ್ಸಿಜನ್‌ ಕೊರತೆ ಇದ್ದು, ಸರ್ಕಾರ ತಕ್ಷಣ ಸಿಬ್ಬಂದಿ ನೇಮಿಸಿ, ಆಕ್ಸಿಜನ್‌ ಪೂರೈಸಬೇಕು. ಸರ್ಕಾರ ಬೆಂಗಳೂರು ನಗರಕ್ಕೆ ಮಾತ್ರ ಸೀಮಿತವಾಗಿದೆ. ಗ್ರಾಮೀಣ ಭಾಗದಲ್ಲಿ ಸೋಂಕು ಹೆಚ್ಚಾಗುತ್ತಿದೆ. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಸರ್ಕಾರಕ್ಕೆ ಸೋಂಕು ತಡೆಗಟ್ಟುವ ಇಚ್ಚಾಶಕ್ತಿಯೇ ಇಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಹಾಗೂ ಆಕ್ಸಿಜನ್‌ ನೀಡದ ಹೊರತು ಯಾವುದೇ ರೀತಿ ಸೌಲಭ್ಯಗಳನ್ನು ಪಡೆಯಲು ಆಗುವುದಿಲ್ಲ. ಆದ ಕಾರಣ ತಕ್ಷಣ ಸಿಬ್ಬಂದಿ, ಆಕ್ಸಿಜನ್‌ ನೀಡಬೇಕು ಎಂದು ಹೇಳಿದರು.

ಕೊರೋನಾ ಸಂಕಷ್ಟ, 1,250 ಕೋಟಿ ಮೊತ್ತದ ಪ್ಯಾಕೇಜ್ ಘೋಷಣೆ: ಯಾರಿಗೆಷ್ಟು ಪರಿಹಾರ?

3ನೇ ಅಲೆ ಬಗ್ಗೆ ಮುಂಜಾಗ್ರತೆ ವಹಿಸಿ:

ತಜ್ಞರು ಕೋವಿಡ್‌ ಮೂರನೇ ಅಲೇ ಇದೆ ಎಂದು ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ. ಆದ ಕಾರಣ 3ನೇ ಅಲೆ ತಡೆಯಲು ಸರ್ಕಾರ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ಸೋಂಕು ನಗರಗಳಲ್ಲಿ ಕ್ರಮೇಣ ಕಡಿಮೆಯಾಗುತ್ತಿದೆ. ಆದರೆ ಗ್ರಾಮೀಣ ಭಾಗದಲ್ಲಿ ಸೋಂಕು ಹೆಚ್ಚಾಗುತ್ತಿದೆ. ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಜನರ ಜೀವನದ ಬಗ್ಗೆ ಚಿಂತಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ವಿರೋಧ ಪಕ್ಷದ ಶಾಸಕರು, ಮಾಜಿ ಶಾಸಕರು ಹಾಗೂ ಇನ್ನಿತರ ಚುನಾಯಿತ ಜನಪ್ರತಿನಿಧಿಗಳ ಸಭೆ ಕರೆದು, ಕೊರೋನಾ ನಿಯಂತ್ರಣಕ್ಕೆ ಪರಿಹಾರ ಕಂಡುಕೊಳ್ಳಬೇಕು. ನಾವು ಸಹ ಎಲ್ಲ ರೀತಿಯ ಸಹಕಾರ ನೀಡಲಿದ್ದೇವೆ. ಕೇವಲ ಅಧಿಕಾರಿಗಳೊಂದಿಗೆ ಸಭೆ ಮಾಡುವುದರಿಂದ ಯಾವುದೇ ಪ್ರಯೋಜನೆ ಆಗುವುದಿಲ್ಲ ಎಂದು ಹೇಳಿದ್ದಾರೆ. 

ಸಂಕಷ್ಟದಲ್ಲಿ ಇರುವವರಿಗೆ ನೆರವಾಗುವ ಘೋಷಣೆಗಳು

ಕೊರೋನಾ 2ನೇ ಅಲೆ ನಿಯಂತ್ರಣ ಸಂಬಂಧ ಲಾಕ್‌ಡೌನ್‌ ವಿಧಿಸಿರುವ ಹಿನ್ನೆಲೆಯಲ್ಲಿ ಸಂಕಷ್ಟಕ್ಕೊಳಗಾಗಿರುವ ರೈತರು, ಕಾರ್ಮಿಕರು ಸೇರಿದಂತೆ ವಿವಿಧ ವರ್ಗಗಳ ಜನರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು .1200 ಕೋಟಿ ಮೊತ್ತದ ಪರಿಹಾರ ಘೋಷಣೆ ಮಾಡಿರುವ ಕಾರ್ಯ ಶ್ಲಾಘನೀಯ ಎಂದು ಸಂಸದ ಈರಣ್ಣ ಕಡಾಡಿ ಹೇಳಿದ್ದಾರೆ.

ಬುಧವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಜನರ ಆರೋಗ್ಯದ ದೃಷ್ಟಿಯಿಂದ ಲಾಕ್‌ಡೌನ್‌ ಮಾಡಲಾಗಿದೆ. ಹೂ, ಹಣ್ಣುಹಂಪಲ, ತರಕಾರಿ ಬೆಳೆದ ರೈತರಿಗೆ 10 ಸಾವಿರ, ಕಟ್ಟಡ ಕಾರ್ಮಿಕರಿಗೆ, ಆಟೋ ಮತ್ತು ಟ್ಯಾಕ್ಷಿ ಚಾಲಕರಿಗೆ 3 ಸಾವಿರ, ಅಸಂಘಟಿತ ಕಾರ್ಮಿಕರಾದ ಕ್ಷೌರಿಕರು, ಅಗಸರು, ಟೇಲರ್‌, ಹಮಾಲಿಗಳು, ಕುಂಬಾರ ಸೇರಿದಂತೆ 2 ಸಾವಿರದಂತೆ ಒಟ್ಟು 3.04 ಲಕ್ಷ ಜನರು ಇದರ ಸದುಪಯೋಗ ಪಡೆದುಕ್ಕೊಳ್ಳಲಿದ್ದಾರೆ. ರಸ್ತೆ ಬದಿ ವ್ಯಾಪಾರಸ್ಥರು, ಕಲಾವಿದರು ಮತ್ತು ತಂಡದವರಿಗೆ ಪರಿಹಾರ ಸಿಗಲಿದೆ ಎಂದಿದ್ದಾರೆ.
 

click me!