'ಅಣ್ಣಾಮಲೈ ಇಟ್ಟುಕೊಂಡು ಬಿಜೆಪಿ ಹೈ ಡ್ರಾಮಾ'

By Kannadaprabha NewsFirst Published Aug 3, 2021, 12:23 PM IST
Highlights
  • ಕೆದಾಟು ಯೋಜನೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಕೊಡುಗೆ
  • 2013ರಲ್ಲಿ ಯೋಜನೆಗೆ ಕ್ಯಾಬಿನೆಟ್‌ ಅನುಮೋದನೆ ಪಡೆಯಲಾಗಿತ್ತು
  •  66 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯದ . 5912 ಕೋಟಿ ವೆಚ್ಚದ ಯೋಜನೆ ಇದಾಗಿತ್ತು

 ಮೈಸೂರು (ಆ.03): ಮೇಕೆದಾಟು ಯೋಜನೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಕೊಡುಗೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಪ್ರತಿಪಾದಿಸಿದ್ದಾರೆ.

ಮೈಸೂರಿನ ಕಾಂಗ್ರೆಸ್‌ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ 2013ರಲ್ಲಿ ಕ್ಯಾಬಿನೆಟ್‌ ಅನುಮೋದನೆ ಪಡೆಯಲಾಗಿತ್ತು. 66 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯದ . 5912 ಕೋಟಿ ವೆಚ್ಚದ ಯೋಜನೆ ಇದಾಗಿತ್ತು. ಈ ಯೋಜನೆಯಿಂದ 440 ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆಯಾಗಲಿದ್ದು, ತಮಿಳುನಾಡಿಗೆ ಶೇ.96 ರಷ್ಟುಅನುಕೂಲವಾದರೆ, ರಾಜ್ಯಕ್ಕೆ ಶೇ.4 ಮಾತ್ರ. ಬೆಂಗಳೂರಿನ ಕುಡಿಯುವ ನೀರಿಗಾಗಿ 4.75 ಟಿಎಂಸಿ ಬಳಕೆಯಾಗುತ್ತದೆ. ಇದು ಸಿದ್ದರಾಮಯ್ಯ ಅವರ ಕೊಡುಗೆ ಎಂದರು.

ಅಣ್ಣಾಮಲೈಗೆ ತಿರುಗೇಟು : ಮೇಕೆದಾಟು ಪರ ನಿಂತ ಸಿಎಂಗೆ ಕ್ಷೀರಾಭಿಷೇಕ

ಮೇಕೆದಾಟು ಯೋಜನೆ ಜಾರಿಗೆ ಯಾರ ಅಡ್ಡಿಯೂ ಇಲ್ಲ. ಸುಪ್ರೀಂ ಕೋರ್ಟ್‌ ಯೋಜನೆಗೆ ಗ್ರೀನ್‌ ಸಿಗ್ನಲ್‌ ನೀಡಿದೆ. ತಮಿಳುನಾಡು ಸರ್ಕಾರ ಕೂಡ ಹೊಗೇನಕಲ್‌, ಮೇಕೆದಾಟು ಸೇರಿದಂತೆ ಪ್ಯಾಕೇಜ್‌ ಘೋಷಿಸುವಂತೆ ತಿಳಿಸಿದೆ. ಆದರೆ, ಬಿಜೆಪಿ ಕಳ್ಳ ನಾಟಕವಾಡುತ್ತಿದೆ. ಡ್ರಾಮಾ ಆರ್ಟಿಸ್ಟ್‌ ಅಣ್ಣಾಮಲೈ ಅವರನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದೆ. ಆತನನ್ನು ಬೆಳೆಸಿದ್ದು, ಚುನಾವಣೆಯಲ್ಲಿ ನಿಲ್ಲಿಸಿದ್ದು, ರಾಜ್ಯಾಧ್ಯಕ್ಷ ಮಾಡಿದ್ದು ಬಿಜೆಪಿಯವರೇ. ಈಗ ಮೇಕೆದಾಟು ಯೋಜನೆ ವಿಚಾರವಾಗಿ ಆತನಿಂದ ಪ್ರತಿಭಟನೆ ಮಾಡಿಸುತ್ತಿದ್ದಾರೆ. ಬಿಜೆಪಿಯವರು ಈ ವಿಚಾರದಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟು, ಮೊದಲು ಯೋಜನೆಯನ್ನು ಜಾರಿಗೆ ತರಲು ಕ್ರಮ ವಹಿಸಲಿ ಎಂದು ಅವರು ಆಗ್ರಹಿಸಿದರು.

ಕಾಂಗ್ರೆಸ್‌ ನಗರಾಧ್ಯಕ್ಷ ಆರ್‌.ಮೂರ್ತಿ, ಮುಖಂಡರಾದ ಶಿವಣ್ಣ, ಕೆ. ಮಹೇಶ್‌ ಮೊದಲಾದವರು ಇದ್ದರು.

click me!