ದ.ಕನ್ನಡ: ನೆಗೆಟಿವ್‌ ವರದಿ ರಹಿತರಿಗೆ ಸಂಪೂರ್ಣ ನಿರ್ಬಂಧ

By Kannadaprabha NewsFirst Published Aug 3, 2021, 11:27 AM IST
Highlights
  • ಕೊರೊನಾ ಸೋಂಕು ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ
  • ಕೊರೋನಾ ನೆಗೆಟಿವ್‌ ವರದಿ ರಹಿತರಿಗೆ ಕರ್ನಾಟಕ ಗಡಿ ಪ್ರವೇಶಕ್ಕೆ ನಿರ್ಬಂಧ

  ಉಳ್ಳಾಲ (ಆ.03):  ಕೊರೊನಾ ಸೋಂಕು ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ಕೊರೋನಾ ನೆಗೆಟಿವ್‌ ವರದಿ ರಹಿತರಿಗೆ ಕರ್ನಾಟಕ ಗಡಿ ಪ್ರವೇಶಕ್ಕೆ ಮಂಗಳವಾರ ಸಂಪೂರ್ಣ ನಿರ್ಬಂಧ ಹೇರಲಾಗಿದ್ದು, ಈ ನಿರ್ಧಾರವನ್ನು ವಿರೋಧಿಸಿ ಯುಡಿಎಫ್‌ ಬುಧವಾರ ಸಂಜೆ ತನಕ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದೆ. ಎಲ್‌ಡಿಎಫ್‌ ಹಾಗೂ ಸಂಯುಕ್ತ ಜನತಾ ದಳ ಸದಸ್ಯರು ಪ್ರತಿಭಟನೆ ನಡೆಸುವ ಮೂಲಕ ಕರ್ನಾಟಕದ ನಡೆಯನ್ನು ಅಸಮಂಜಸ ಎಂದು ದೂರಿದರು.

ದಕ್ಷಿಣ ಕನ್ನಡ ಜಿಲ್ಲಾಡಳಿತ, ಪೊಲೀಸ್‌ ಇಲಾಖೆ, ಕಂದಾಯ ಇಲಖೆ ಹಾಗೂ ಆರೋಗ್ಯ ಇಲಾಖೆ ಸಂಯುಕ್ತವಾಗಿ ಕಾರ್ಯಾಚರಣೆಗೆ ಇಳಿದಿದ್ದು, 72ಗಂಟೆಯ ಒಳಗೆ ಮಾಡಿಸಿದ ಆರ್‌ಟಿಪಿಸಿಆರ್‌ ವರದಿ ಇಲ್ಲದವರಿಗೆ ತಲಪಾಡಿ ಗಡಿಯಲ್ಲಿ ಪ್ರವೇಶ ನಿಷೇಧಿಸುವ ಕಾರ್ಯದಲ್ಲಿ ಯಾವುದೇ ಮುಲಾಜಿಲ್ಲದೆ ವಿದ್ಯಾರ್ಥಿಗಳು, ಉದ್ಯೋಗಿಗಳಿಗೆ ನೆಗೆಟಿವ್‌ ವರದಿ ಕಡ್ಡಾಯ ಎಂಬುದನ್ನು ಸಾರಿದರು.

ಕೇರಳ ಎಫೆಕ್ಟ್: ದಕ್ಷಿಣ ಕನ್ನಡದಲ್ಲಿ ಬೆಂಗ್ಳೂರಿಗಿಂತ ಹೆಚ್ಚು ಕೇಸ್‌..!

ಒಂದು ಹಂತದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತದ ಕ್ರಮವನ್ನು ಸಂಘಟನೆಯೊಂದರ ಸದಸ್ಯ ಅನ್ವರ್‌ ಎಂಬಾತ ವಿರೋಧಿಸಿದ್ದು, ಉಳ್ಳಾಲ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡರು.

ಜಿಲ್ಲಾಕಾರಿ ಡಾ.ಕೆ.ವಿ. ರಾಜೇಂದ್ರ, ಮಂಗಳೂರು ಪೊಲೀಸ್‌ ಕಮೀಷನರ್‌ ಶಶಿಕುಮಾರ್‌, ಸಹಾಯಕ ಆಯುಕ್ತ ಮದನ್‌ ಮೋಹನ್‌, ತಹಸೀಲ್ದಾರ್‌ ಗುರುಪ್ರಸಾದ್‌, ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಹರಿರಾಂ ಶಂಕರ್‌, ಎಸಿಪಿ ದಕ್ಷಿಣ ರಂಜಿತ್‌ ಕುಮಾರ್‌ ಬಂಡಾರ್‌, ಉಳ್ಳಾಲ ಇನ್‌ಸ್ಪೆಕ್ಟರ್‌ ಸಂದೀಪ್‌ ಜಿ.ಎಸ್‌., ಸೇರಿದಂತೆ ವಿವಿಧ ಇಲಾಖೆಯ ಪ್ರಮುಖರು ಗಡಿಯಲ್ಲಿ ಜಮಾಯಿಸಿದ್ದರು.

ಇದೀಗ ರಾಜಕೀಯ ವಿಷಯವಾಗಿ ಪರಿವರ್ತನೆಗೊಂಡಿದ್ದು, ಅದಕ್ಕೆ ಸಾಕ್ಷಿಯಾಗಿ ತಲಪಾಡಿ ಗಡಿಯಲ್ಲಿ ಎಲ್‌ಡಿಎಫ್‌ ಸದಸ್ಯರು ಪೆಟ್ರೋಲ್‌ ಪಂಪ್‌ ಬಳಿ ಬ್ಯಾರಿಕೇಡ್‌ ಹಾಕಿ ಇದು ನಮ್ಮ ಸ್ಥಳ, ಅರ್ಧ ಪೆಟ್ರೋಲ್‌ ಪಂಪ್‌ ಕೇರಳಕ್ಕೆ ಸೇರಿದೆ ಎಂದು ಉದ್ಘಾರ ತೆಗೆದರು. ಇಲ್ಲಿಂದಲೇ ನಮ್ಮ ಸಂಘಟನೆಯ ಸದಸ್ಯ ಅನ್ವರ್‌ನನ್ನು ಕರ್ನಾಟಕ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು ಅವನನ್ನು ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.

ಈ ಹಂತದಲ್ಲಿ ಕರ್ನಾಟಕದ ವಿವಿಧ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದರೊಂದಿಗೆ ಕೋವಿಡ್‌ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜನರಿಗೆ ಎಚ್ಚರಿಸಿದರು.

* ಆರಂಭದಲ್ಲಿ ಚೆಕ್ಕಿಂಗ್‌

ಸೋಮವಾರ ಬೆಳಗ್ಗಿನಿಂದಲೇ ಕಾಸರಗೋಡು-ಕರ್ನಾಟಕ ಮಧ್ಯೆ ಬಸ್‌ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕೇರಳ-ಕರ್ನಾಟಕದ ತಲಪಾಡಿ ಗಡಿಯಲ್ಲೇ ಪ್ರಯಾಣಿಕರನ್ನು ಬಸ್‌ಗಳು ಇಳಿಸಿ ಹೋಗಿತ್ತು. ಗಡಿಭಾಗದಲ್ಲಿ ಬಸ್‌ ಇಳಿದು ಗಡಿ ದಾಟುವವರಿಗೆ ಗಡಿಯಲ್ಲೇ ಪೊಲೀಸರಿಂದ ಹಾಗೂ ಆರೋಗ್ಯ ಇಲಾಖೆಯಿಂದ ತಪಾಸಣೆ ನಡೆಯಿತು. ಪ್ರಯಾಣಿಕರಿಂದ ನೆಗೆಟಿವ್‌ ರಿಪೋರ್ಟ್‌ ಚೆಕ್ಕಿಂಗ್‌ ನಡೆಯಿತು. ಇಂದು ಮಂಗಳೂರು ವಿ.ವಿ ಪದವಿ ಪರೀಕ್ಷೆ ಹಿನ್ನೆಲೆ ನೂರಾರು ವಿದ್ಯಾರ್ಥಿಗಳು ಕೂಡಾ ಗಡಿಭಾಗದಲ್ಲಿ ಜಮಾಯಿಸಿದ್ದರು. ಅವರನ್ನು ಸರತಿ ಸಾಲಿನಲ್ಲಿ ನಿಲ್ಲಿಸಿ ತಪಾಸಣೆ ನಡೆಸಿದ ಬಳಿಕವೇ ಕರ್ನಾಟಕದ ಬಸ್ಸುಗಳನ್ನು ಹತ್ತಲು ಪೊಲೀಸರು ಅವಕಾಶ ಮಾಡಿಕೊಟ್ಟರು.

ಕೇರಳಿಗರ ಜನಸಂದಣಿ ಹೆಚ್ಚಾದ ಹಿನ್ನೆಲೆಯಲ್ಲಿ ತಲಪಾಡಿಯಲ್ಲಿ ಮಾಡಲಾಗಿದ್ದ ಟೆಸ್ಟಿಂಗ್‌ ಸೆಂಟರನ್ನು ಸಂಪೂರ್ಣ ಸ್ಥಗಿತಗೊಳಿಸಲಾಯಿತು. ಬಳಿಕ ಕೇರಳದಿಂದಲೇ ಆರ್‌ಟಿಪಿಸಿಆರ್‌ ನೆಗೆಟಿವ್‌ ರಿಪೋರ್ಟ್‌ ತರಲು ಸೂಚನೆ ನೀಡಲಾಯಿತು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona 

click me!