ಕೊಟ್ಟೂರು ತ್ರಿವಳಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮಾವ ಮಾಡಿದ ಮನೆಹಾಳ ಕೆಲಸ, ಹಣದಾಸೆಗೆ ಹೆತ್ತವರ ಬಲಿಪಡೆದ!

Published : Feb 01, 2026, 05:59 PM IST
Kottur 3 murder Case

ಸಾರಾಂಶ

ಕೊಟ್ಟೂರಿನಲ್ಲಿ ನಡೆದ ಒಂದೇ ಕುಟುಂಬದ ಮೂವರ ಹತ್ಯೆಯು ಮರ್ಯಾದೆಗೇಡಿನ ಕೃತ್ಯವಲ್ಲ, ಬದಲಿಗೆ 1.20 ಕೋಟಿ ರೂಪಾಯಿ ಹಣದಾಸೆಗಾಗಿ ನಡೆದಿದೆ ಎಂದು ತನಿಖೆಯಿಂದ ಬಯಲಾಗಿದೆ. ಮಗನೇ ತನ್ನ ಮಾವನ ಜೊತೆ ಸೇರಿ ಹೆತ್ತ ತಂದೆ-ತಾಯಿ ಮತ್ತು ತಂಗಿಯನ್ನು ಕೊಲೆ ಮಾಡಿದ್ದನು.,

ವಿಜಯನಗರ (ಫೆ.01): ಕೊಟ್ಟೂರಿನಲ್ಲಿ ನಡೆದ ಒಂದೇ ಕುಟುಂಬದ ಮೂವರ ಹತ್ಯೆ ಪ್ರಕರಣ ಈಗ ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ತನ್ನ ತಂಗಿ ಗರ್ಭಿಣಿಯಾಗಿದ್ದಳು ಎಂಬ ಕಟ್ಟುಕಥೆ ಕಟ್ಟಿ ಪೊಲೀಸರ ಹಾದಿ ತಪ್ಪಿಸಲು ಯತ್ನಿಸಿದ್ದ ಹಂತಕ ಅಕ್ಷಯ್‌ನ ಅಸಲಿ ಮುಖವಾಡ ಈಗ ಕಳಚಿದೆ. ಈ ಭೀಕರ ಕೃತ್ಯದ ಹಿಂದೆ ಮರ್ಯಾದೆ ಹತ್ಯೆಯ ಕಾರಣವಿಲ್ಲ, ಬದಲಿಗೆ ಬರೋಬ್ಬರಿ 1.20 ಕೋಟಿ ರೂಪಾಯಿ ಹಣದಾಸೆ ಅಡಗಿದೆ ಎಂಬ ಆಘಾತಕಾರಿ ಸತ್ಯ ತನಿಖೆಯಲ್ಲಿ ಬಯಲಾಗಿದೆ.

1.20 ಕೋಟಿ ಎಫ್‌ಡಿ ಹಣ

ಹಣದಾಸೆಗಾಗಿ ಹೆತ್ತವರ ರಕ್ತ ಹರಿಸಿದ ಅಕ್ಷಯ್ ಆರಂಭದಲ್ಲಿ ಆರೋಪಿ ಅಕ್ಷಯ್, ತನ್ನ ತಂಗಿಯ ನಡವಳಿಕೆಯಿಂದ ಬೇಸತ್ತು ಕೊಲೆ ಮಾಡಿದ್ದಾಗಿ ಹೇಳಿಕೆ ನೀಡಿದ್ದ. ಆದರೆ ಪೊಲೀಸರು ಆಳವಾಗಿ ತನಿಖೆ ನಡೆಸಿದಾಗ ಕೋಟಿ ಕೋಟಿ ಹಣದ ವ್ಯವಹಾರ ಬೆಳಕಿಗೆ ಬಂದಿದೆ. ಹಂತಕ ಅಕ್ಷಯ್‌ಗೆ ಆತನ ಮಾವ ವಸಂತ್ ಕುಮಾರ್ ಸಾಥ್ ನೀಡಿದ್ದು, ಇಬ್ಬರೂ ಸೇರಿ ಈ ಮಾಸ್ಟರ್ ಪ್ಲಾನ್ ರೂಪಿಸಿದ್ದರು. ಹರಪ್ಪನಹಳ್ಳಿಯಲ್ಲಿದ್ದ ಡೂಪ್ಲೆಕ್ಸ್ ಮನೆಯನ್ನು ಮಾರಾಟ ಮಾಡಿದ್ದ ತಂದೆ, ಬಂದ ಹಣದಲ್ಲಿ ಸುಮಾರು 1.20 ಕೋಟಿ ರೂಪಾಯಿಯನ್ನು ಫಿಕ್ಸೆಡ್ ಡಿಪಾಸಿಟ್ (FD) ಮಾಡಿದ್ದರು. ಈ ಹಣದ ಮೇಲೆ ಕಣ್ಣಿಟ್ಟಿದ್ದ ಅಕ್ಷಯ್, ಪದೇ ಪದೇ ಹಣಕ್ಕಾಗಿ ಪೀಡಿಸುತ್ತಿದ್ದ ಎನ್ನಲಾಗಿದೆ.

ಮಗಳ ವಿದ್ಯಾಭ್ಯಾಸಕ್ಕೆ ಎತ್ತಿಟ್ಟಿದ್ದ ಹಣವೇ ಮುಳುವಾಯಿತೇ? ತಂದೆ ರಾಜಶೇಖರ್ ಅವರು ತನ್ನ ಮಗಳ (ಅಕ್ಷಯ್ ತಂಗಿ) ಭವಿಷ್ಯ ಮತ್ತು ವಿದ್ಯಾಭ್ಯಾಸಕ್ಕಾಗಿ ಸುಮಾರು 50 ಲಕ್ಷ ರೂಪಾಯಿ ಹಣವನ್ನು ಆಕೆಯ ಹೆಸರಿನಲ್ಲಿ ಎಫ್‌ಡಿ ಮಾಡಿದ್ದರು. ಮನೆ ಮಾರಾಟದ ಉಳಿದ ಹಣವನ್ನೂ ಸಹ ತಮ್ಮ ಸುಪರ್ದಿಯಲ್ಲೇ ಇಟ್ಟುಕೊಂಡಿದ್ದರು. ಕುಡಿತದ ಚಟಕ್ಕೆ ಬಿದ್ದಿದ್ದ ಅಕ್ಷಯ್‌ಗೆ ಹಣ ನೀಡಲು ತಂದೆ ನಿರಾಕರಿಸಿದ್ದರು. ಇದರಿಂದ ತಂದೆ ಮತ್ತು ಮಗನ ನಡುವೆ ತೀವ್ರ ಗಲಾಟೆಗಳು ನಡೆಯುತ್ತಿದ್ದವು. ಇದೇ ವಿಷಯವನ್ನು ಮುಂದಿಟ್ಟುಕೊಂಡು ಮಾವ ವಸಂತ್ ಕುಮಾರ್, ಅಳಿಯನಿಗೆ ಕುಮ್ಮಕ್ಕು ನೀಡಿ ಮೂವರನ್ನೂ ಮುಗಿಸುವ ಪ್ಲಾನ್ ಹಾಕಿಕೊಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಗರ್ಭಿಣಿ ನಾಟಕ

ಪೊಲೀಸರ ದಿಕ್ಕು ತಪ್ಪಿಸಲು 'ಗರ್ಭಿಣಿ' ನಾಟಕ ಕೊಲೆಯ ನಂತರ ಅಕ್ಷಯ್ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, "ತನ್ನ ತಂಗಿ ಬೇರೊಬ್ಬನ ಜೊತೆ ಸಂಬಂಧ ಬೆಳೆಸಿ ಗರ್ಭಿಣಿಯಾಗಿದ್ದಳು, ಇದರಿಂದ ಕುಟುಂಬದ ಮರ್ಯಾದೆ ಹೋಗುತ್ತದೆ ಎಂದು ಈ ಕೆಲಸ ಮಾಡಿದೆ" ಎಂದು ಸುಳ್ಳು ಕಥೆ ಸೃಷ್ಟಿಸಿದ್ದ. ಆದರೆ ವೈದ್ಯಕೀಯ ಪರೀಕ್ಷೆ ಮತ್ತು ತನಿಖೆಯ ವೇಳೆ ಈ ಆರೋಪ ಸುಳ್ಳೆಂದು ಸಾಬೀತಾಗಿದೆ. ಹಣದ ವಿಚಾರ ಹೊರಬರಬಾರದು ಎಂಬ ಕಾರಣಕ್ಕೆ ಇಂತಹ ಕೀಳು ಮಟ್ಟದ ಆರೋಪ ಮಾಡಿದ್ದ ಎಂಬುದು ಈಗ ಸಾಬೀತಾಗಿದೆ.

ತನಿಖೆ ಮುಂದುವರಿಕೆ ಸದ್ಯ ಪೊಲೀಸರು ಅಕ್ಷಯ್ ಮತ್ತು ಆತನಿಗೆ ಪ್ರಚೋದನೆ ನೀಡಿದ ಮಾವ ವಸಂತ್ ಕುಮಾರ್‌ನನ್ನು ವಶಕ್ಕೆ ಪಡೆದಿದ್ದಾರೆ. ಹರಪ್ಪನಹಳ್ಳಿಯ ಮನೆ ಮಾರಾಟ, ಬ್ಯಾಂಕ್ ದಾಖಲೆಗಳು ಮತ್ತು ಎಫ್‌ಡಿ ಪತ್ರಗಳನ್ನು ವಶಪಡಿಸಿಕೊಂಡಿರುವ ಪೊಲೀಸರು, ಮೂರು ವಿಭಿನ್ನ ಆಯಾಮಗಳಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ. ಹಣದ ವ್ಯಾಮೋಹಕ್ಕೆ ಬಿದ್ದು ಹೆತ್ತ ತಂದೆ-ತಾಯಿ ಹಾಗೂ ತಂಗಿಯನ್ನೇ ಬಲಿತೆಗೆದುಕೊಂಡ ಮೃಗೀಯ ಕೃತ್ಯ ಕಂಡು ಕೊಟ್ಟೂರು ಜನತೆ ಬೆಚ್ಚಿಬಿದ್ದಿದ್ದಾರೆ.

PREV
Read more Articles on
click me!

Recommended Stories

ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
30x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?