
ವಿಜಯನಗರ (ಫೆ.01): ಹಣ ಕೊಡದ ಅಮ್ಮನ ಕತ್ತು ಸೀಳಿದಾಗ ಮನೆಯಿಂದ ಹೊರಗೆ ಹೋಗಿದ್ದ ತಂಗಿಗೆ ಫೋನ್ ಮಾಡಿ ನಿನಗೆ ಗಿಫ್ಟ್ ತಂದಿದ್ದೀನಿ ಬೇಗ ಮನೆಗೆ ಬಾ ಎಂದು ಕರೆಸಿಕೊಂಡಿದ್ದಾನೆ. ರೂಮಿನಲ್ಲಿದ್ದ ಅಮ್ಮನ ಹೆಣವನ್ನು ತೋರಿಸಿ ಇದೇ ನಿನಗೆ ಗಿಫ್ಟ್ ಎಂದು ತೋರಿಸಿದ್ದಾನೆ. ಆಗ ಭಯಗೊಂಡ ತಂಗಿಗೆ ನೀನು ಭಯಪಡಬೇಡ, ನಿನ್ನನ್ನೂ ಅಮ್ಮನ ಹತ್ತಿರಕ್ಕೆ ಕಳಿಸುತ್ತೇನೆ ಎಂದು ನಿರ್ದಯವಾಗಿ ಕತ್ತು ಸೀಳಿದ್ದಾನೆ ಎಂದು ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ ತಿಳಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಜನವರಿ 26 ರಂದೇ ಈ ಭೀಕರ ಹತ್ಯಾಕಾಂಡ ನಡೆದಿದೆ. ಆರೋಪಿ ಅಕ್ಷಯ್ ಹಣಕ್ಕಾಗಿ ತಾಯಿ ಜಯಲಕ್ಷ್ಮಿ ಅವರ ಬಳಿ ಜಗಳವಾಡಿದ್ದಾನೆ. ಹಣ ನೀಡಲು ನಿರಾಕರಿಸಿದಾಗ ಆಕ್ರೋಶಗೊಂಡ ಆತ, ತಾಯಿಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ತಾಯಿ ಹತ್ಯೆಯಾದ ವಿಷಯ ಹೊರಬರಬಾರದೆಂಬ ಕಾರಣಕ್ಕೆ, ಹೊರಗೆ ಹೋಗಿದ್ದ ತಂಗಿ ಅಮೃತಾಗೆ ಕರೆ ಮಾಡಿ, 'ನಿನಗೆ ಗಿಫ್ಟ್ ತಂದಿದ್ದೀನಿ, ಬೇಗ ಬಾ' ಎಂದು ನಂಬಿಸಿ ಕರೆಸಿಕೊಂಡಿದ್ದಾನೆ. ಮನೆಗೆ ಬಂದ ತಂಗಿಯನ್ನೂ ನಿರ್ದಯವಾಗಿ ಕತ್ತು ಸೀಳಿ ಕೊಂದಿದ್ದಾನೆ. ಕೊನೆಗೆ ರಾತ್ರಿ ಮನೆಗೆ ಬಂದ ತಂದೆ ಭೀಮ್‌ರಾಜ್ ಅವರನ್ನೂ ಹತ್ಯೆಗೈದು ಪೈಶಾಚಿಕತೆ ಮೆರೆದಿದ್ದಾನೆ.
ಮೂವರನ್ನು ಹತ್ಯೆಗೈದ ಬಳಿಕ ಶವಗಳನ್ನು ವಿಲೇವಾರಿ ಮಾಡಲು ಆರೋಪಿ ಅಕ್ಷಯ್ ಮನೆಯ ಹಾಲಿನಲ್ಲೇ (Hall) 4 ಅಡಿ ಉದ್ದ ಮತ್ತು 2 ಅಡಿ ಅಗಲದ ಗುಂಡಿಯನ್ನು ತೋಡಿದ್ದ. ಆದರೆ, ತಂದೆಯ ಮೃತದೇಹ ಗುಂಡಿಯಲ್ಲಿ ಸರಿಯಾಗಿ ಕೂರುತ್ತಿರಲಿಲ್ಲ. ಈ ವೇಳೆ ಮತ್ತಷ್ಟು ವಿಕೃತಿ ಮೆರೆದ ಆರೋಪಿ, ತಂದೆಯ ಕಾಲುಗಳನ್ನೇ ಕತ್ತರಿಸಿ ಗುಂಡಿಯಲ್ಲಿ ಹಾಕಿ ಮಣ್ಣು ಮುಚ್ಚಿದ್ದಾನೆ. ಬಳಿಕ ಯಾರಿಗೂ ಅನುಮಾನ ಬಾರದಂತೆ ಅದರ ಮೇಲೆ ಟೈಲ್ಸ್ ಜೋಡಿಸಿದ್ದಾನೆ.
ಕೊಲೆ ಮಾಡಿದ ಬಳಿಕ ಅಕ್ಷಯ್ ಬೆಂಗಳೂರಿಗೆ ತೆರಳಿ, ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ (ಕ್ರೈಂ ನಂಬರ್ 35/26) ಮಿಸ್ಸಿಂಗ್ ಕೇಸ್ ದಾಖಲಿಸಿದ್ದಾನೆ. 'ತನ್ನ ತಂದೆ, ತಾಯಿ ಮತ್ತು ತಂಗಿ ಜಯದೇವ ಆಸ್ಪತ್ರೆಗೆ ಹೋಗಿದ್ದರು, ಅಲ್ಲಿಂದ ವಾಪಸ್ ಬಂದಿಲ್ಲ' ಎಂದು ಸುಳ್ಳು ಕಥೆ ಕಟ್ಟಿದ್ದನು. ಆದರೆ, ತಿಲಕ್ ನಗರ ಪೊಲೀಸರು ಅನುಮಾನಗೊಂಡು ತೀವ್ರ ವಿಚಾರಣೆ ನಡೆಸಿದಾಗ ಅಕ್ಷಯ್ ನೀಡಿದ ಹೇಳಿಕೆಗಳಲ್ಲಿ ದ್ವಂದ್ವ ಕಂಡುಬಂದಿದೆ. ಪೊಲೀಸರ ಖಾಕಿ ರುಚಿ ತೋರಿಸಿದಾಗ ಆರೋಪಿ ಸತ್ಯ ಬಾಯಿಬಿಟ್ಟಿದ್ದಾನೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಜಾಹ್ನವಿ ಅವರು ಮಾತನಾಡಿ, 'ತಿಲಕ್ ನಗರ ಪೊಲೀಸರು ಆರೋಪಿಯ ಹೇಳಿಕೆ ಆಧರಿಸಿ ಇಲ್ಲಿಗೆ ಬಂದಿದ್ದರು. ಆರೋಪಿ ತೋರಿಸಿದ ಜಾಗದಲ್ಲಿ ನೆಲ ಅಗೆದಾಗ ಮೂರು ಮೃತದೇಹಗಳು ಒಂದೇ ಗುಂಡಿಯಲ್ಲಿ ಪತ್ತೆಯಾಗಿವೆ. ಮೇಲ್ನೋಟಕ್ಕೆ ಕತ್ತು ಸೀಳಿ ಹತ್ಯೆ ಮಾಡಿರುವುದು ಕಂಡುಬಂದಿದೆ. ಹತ್ಯೆಗೆ ಹಣಕಾಸಿನ ವಿಚಾರವೇ ಕಾರಣ ಎನ್ನಲಾಗುತ್ತಿದ್ದರೂ, ನಿಖರವಾದ ಕಾರಣ ತನಿಖೆಯಿಂದ ತಿಳಿಯಬೇಕಿದೆ' ಎಂದು ಹೇಳಿಕೆ ನೀಡಿದ್ದಾರೆ. ಒಟ್ಟಾರೆಯಾಗಿ, ಕ್ಷಣಿಕ ಸುಖ ಮತ್ತು ಹಣದ ಆಸೆಗಾಗಿ ರಕ್ತಸಂಬಂಧವನ್ನೇ ಬಲಿಪಡೆದ ಅಕ್ಷಯ್‌ನ ಕೃತ್ಯ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ.
ಇದೀಗ ಆರೋಪಿ ಅಕ್ಷಯ್‌ನನ್ನು ಕೊಟ್ಟೂರು ನಗರಕ್ಕೆ ತಂದು ಸ್ಥಳದಲ್ಲಿ ಅಗೆದಾಗ ಮೂವರ ಮೃತದೇಹಗಳು ಪತ್ತೆಯಾಗಿವೆ. ಇದೀಗ ತಂಗಿ ಬೇರೊಬ್ಬ ಯುವಕನನ್ನು ಪ್ರೀತಿಸಿ ಆತನಿಂದ ಗರ್ಭಿಣಿ ಆಗಿದ್ದಳೆಂದು ಹೇಳಲಾಗುತ್ತಿದ್ದು, ಇದೇ ಕೋಪದಿಂದ ಮರ್ಯಾದಾಗೇಡು ಹತ್ಯೆ ಮಾಡಿರಬಹುದೆಂದು ಹೇಳಲಾಗುತ್ತಿದೆ. ಆದರೆ, ಮರಣೋತ್ತರ ಪರೀಕ್ಷೆ ಬಳಿಕವೇ ಈ ಆರೋಪಕ್ಕೆ ಉತ್ತರ ಸಿಗಲಿದೆ.