*ಮಾಸ್ಕ್ ಹಾಕದೇ ಬಂದ ಬೈಕ್ ಸವಾರನಿಗೆ ಖಾಕಿ ಬುದ್ಧಿಮಾತು
*ಮನೆಗೆ ಹೋಗಿ ತೆಗೆದುಕೊಂಡು ಬರ್ತೀನಿ ಎಂದ ಬೈಕ್ ಸವಾರ
*ಪೊಲೀಸರನ್ನು ನೋಡಿ ಮಾಸ್ಕ್ ಹಾಕಬೇಡಿ ಎಂದು ಆರಕ್ಷಕರು
ಕೊಪ್ಪಳ (ಜ. 15): ಕರ್ನಾಟಕದಲ್ಲಿ(Karnataka) ಕೊರೋನಾ ವೈರಸ್ (Corona Virus) ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕೊರೋನಾ ಸೋಂಕು ಹತೋಟಿಗೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ತಿಂಗಳಾಂತ್ಯದವರೆಗೂ ನಿತ್ಯ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯದಲ್ಲಿ ದಿನಪೂರ್ತಿ (ಸತತ 55 ಗಂಟೆ) ಕರ್ಫ್ಯೂ ಜಾರಿಗೊಳಿಸುತ್ತಿದೆ. ಕೊಪ್ಪಳದಲ್ಲಿ (Koppal) ವೀಕೆಂಡ್ ಕರ್ಫ್ಯೂ ವೇಳೆ ಬೈಕ್ ಸವಾರನಿಗೆ ಪೋಲಿಸರು ಬುದ್ಧಿವಾದ ಹೇಳಿದ್ದಾರೆ. ವೀಕೆಂಡ್ ಕರ್ಫ್ಯೂ ಹಿನ್ನಲೆಯಲ್ಲಿ ನಗರದ ಅಶೋಕ ವೃತ್ತದಲ್ಲಿ ಕರ್ತವ್ಯದ ಮೇಲಿದ್ದ ಪೋಲಿಸರು ಮಾಸ್ಕ್ (Face Mask) ಪರಿಶೀಲನೆ ಮಾಡುತ್ತಿದ್ದರು. ಈ ವೇಳೆ ಮಾಸ್ಕ್ ಹಾಕದೇ ಬಂದಿದ್ದ ಓರ್ವ ಬೈಕ್ ಸವಾರನಿಗೆ ಪೋಲಿಸರು ಪ್ರಶ್ನಿಸಿದ್ದಾರೆ. ಆದರೆ ಇದಕ್ಕೆ ಉತ್ತರಿಸಿದ ಸವಾರ " ಬೇಕಿದ್ದರೆ ಮನೆಗೆ ಹೋಗಿ ತೆಗೆದುಕೊಂಡು ಬರ್ತೀನಿ" ಎಂದು ಹೇಳಿದ್ದಾರೆ. ಸವಾರನ ಮಾತಿನಿಂದ ಪೊಲೀಸ್ ಪೇದೆ ಗರಂ ಆಗಿದ್ದಾರೆ.
ನಂತರ ಮಾಸ್ಕ್ ಹಾಕದೇ ಬಂದ ಸವಾರನಿಗೆ ಪೋಲಿಸರು ಬುದ್ಧಿವಾದ ಹೇಳಿದ್ದಾರೆ. "ಪೊಲೀಸರನ್ನು ನೋಡಿ ಮಾಸ್ಕ್ ಹಾಕಬೇಡಿ, ನಮಗೋಸ್ಕರ ಜೀವನ ಮಾಡ್ತೀರಾ? ನಿಮಗೆ ಒಳ್ಳೇಯದು ಆಗಲಿ ಎಂದು ನಾವು ಕೆಲಸ ಮಾಡುತ್ತಿದ್ದೇವೆ. ಮಾಸ್ಕ್ ಹಾಕಿ ಎಂದರೆ ನಮ್ಮ ಮೇಲೆ ಕೋಪ ಮಾಡಿಕೊಳ್ತೀರಾ. ನಾವು ನಿಮಗೆ ಒಳ್ಳೇಯದು ಹೇಳ್ತೀವಾ, ಕೆಟ್ಟದ್ದು ಹೇಳ್ತೀವಾ? ನಿಮ್ಮ ಜೀವನ ನಮಗೋಸ್ಕರ ಕಾಪಾಡ್ತಾ ಇದ್ದೀವಾ. ಎಲ್ಲಾ ಸಮಯದಲ್ಲಿ ಪೊಲೀಸರು ಇರೋದಿಲ್ಲ. ನಿಮ್ಮ ಸಲುವಾಗಿ ಮಾಸ್ಕ್ ಹಾಕಿ ಎಂದು ಹೇಳುತ್ತಿದ್ದೇವೆ" ಎಂದು ಪೋಲಿಸರು ಮಾಸ್ಕ್ ಹಾಕುವುದರ ಮಹತ್ವ ತಿಳಿಸಿದ್ದಾರೆ. ಬಳಿಕ ಮಾಸ್ಕ್ ಹಾಕದ ಬೈಕ್ ಸವಾರಿನಿಗೆ ದಂಡ ಹಾಕಿದ್ದು ಇನ್ನುಮುಂದೆ ಮಾಸ್ಕ್ ತಪ್ಪದೇ ಧರಿಸುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: Weekend Curfew Bengaluru: ಝೋಮ್ಯಾಟೋ ಹೆಸರಲ್ಲಿ ಸುಳ್ಳು ಹೇಳಿ ರಸ್ತೆಗಿಳಿದ ಯುವಕ: ಬೈಕ್ ಸೀಝ್!
2ನೇ ವಾರದ ವೀಕೆಂಡ್ ಕರ್ಫ್ಯೂ!
ರಾಜ್ಯದಲ್ಲಿ ಸತತ ಎರಡನೇ ವಾರವೂ ವೀಕೆಂಡ್ ಕರ್ಫ್ಯೂ ಜಾರಿಯಾಗಿದ್ದು, ಸೋಮವಾರ ಬೆಳಿಗ್ಗೆ 5 ಗಂಟೆವರೆಗೂ ತುರ್ತು ಸಂದರ್ಭ ಹೊರತುಪಡಿಸಿ ಇತರೆ ಎಲ್ಲಾ ಚಟುವಟಿಕೆಗಳಿಗೆ ನಿರ್ಬಂಧವಿರಲಿದೆ. ಕೊರೋನಾ ಸೋಂಕು ಹತೋಟಿಗೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ತಿಂಗಳಾಂತ್ಯದವರೆಗೂ ನಿತ್ಯ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯದಲ್ಲಿ ದಿನಪೂರ್ತಿ (ಸತತ 55 ಗಂಟೆ) ಕರ್ಫ್ಯೂ ಜಾರಿಗೊಳಿಸುತ್ತಿದೆ. ಈಗಾಗಲೇ ಕಳೆದ ಒಂಬತ್ತು ದಿನಗಳಿಂದ (ಜ.6) ರಾತ್ರಿ ಕಫ್ರ್ಯೂ ಮತ್ತು ಕಳೆದ ವಾರಾಂತ್ಯದಲ್ಲಿ ಕರ್ಫ್ಯೂವಿತ್ತು. ಕಳೆದ ವಾರ ಮೊದಲ ವಾರಾಂತ್ಯದ ಕಫ್ರ್ಯೂ ಹಿನ್ನೆಲೆ ಪೊಲೀಸರು ಒಂದಿಷ್ಟುವಿನಾಯ್ತಿಗಳನ್ನು ನೀಡಿದ್ದರು.
ಇದನ್ನೂ ಓದಿ: Weekend Curfew: ಕ್ಯಾರೇ ಎನ್ನದ ಬಳ್ಳಾರಿ ಜನ, ಎಪಿಎಂಸಿ ಮಾರುಕಟ್ಟೆಯಲ್ಲಿ ಜನ ಜಾತ್ರೆ!
ಆದರೆ, ಈ ವಾರ ಕೊರೋನಾ ಸೋಂಕು ಹೊಸ ಪ್ರಕರಣಗಳು 30 ಸಾವಿರ ಆಸುಪಾಸಿಗೆ ಹೆಚ್ಚಳವಾಗಿದೆ. ಇತ್ತೀಚೆಗೆ ನಡೆದ ಸಭೆಯಲ್ಲಿ ಮುಖ್ಯಮಂತ್ರಿಗಳು ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದರು. ಹೀಗಾಗಿ, ಮತ್ತಷ್ಟುಬಿಗಿ ನಿಯಮ ಜಾರಿಗೊಳಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಉಳಿದಂತೆ ಎಲ್ಲಾ ವಾಣಿಜ್ಯ ಚಟುವಟಿಕೆಗಳಿಗೆ ಸಂಪೂರ್ಣ ಕಡಿವಾಣ ಬೀಳಲಿದೆ.
ಕರ್ನಾಟಕದಲ್ಲಿ ಕೊರೋನಾ ಏರಿಕೆ
ಶುಕ್ರವಾರ ರಾಜ್ಯದಲ್ಲಿ 28,723 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಅಲ್ಲದೇ 14 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.ಈ ಮೂಲಕ ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಒಟ್ಟು ಸಂಖ್ಯೆ 31,53,247ಕ್ಕೆ ಏರಿಕೆಯಾಗಿದೆ. ಈ ಪೈಕಿ ಇದುವರೆಗೆ ಒಟ್ಟು 29,73,470 ಜನರು ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಪಾಸಿಟಿವಿಟಿ ದರ 12.98ರಷ್ಟಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.