ಹರಪನಹಳ್ಳಿ: ಕೂಲಹಳ್ಳಿ ಗೋಣಿಬಸವೇಶ್ವರ ರಥೋತ್ಸವ, ಸಹಸ್ರಾರು ಭಕ್ತರು ಭಾಗಿ

By Kannadaprabha News  |  First Published Mar 7, 2020, 9:52 AM IST

ಕೂಲಹಳ್ಳಿ ಗೋಣಿಬಸವೇಶ್ವರ ರಥೋತ್ಸವ| ಬಳ್ಳಾರಿ ಜಿಲ್ಲೆ ಹರಪನಹಳ್ಳಿಯಲ್ಲಿರುವ ಪಂಚಗಣಾಧೀಶ್ವರರ ಕೂಲಹಳ್ಳಿ ದೇವಸ್ಥಾನ| ರಥಕ್ಕೆ ತೆಂಗಿನಕಾಯಿ, ಬಾಳೆಹಣ್ಣು ಹಾಗೂ ಮೆಣಸು ತೂರಿ ಹರಕೆ ಸಮರ್ಪಿಸಿದ ಭಕ್ತರು| 


ಹರಪನಹಳ್ಳಿ(ಮಾ.07): ಪಂಚಗಣಾಧೀಶ್ವರರ ಐತಿಹಾಸಿಕ ಹಿನ್ನೆಲೆಯುಳ್ಳ ತಾಲೂಕಿನ ಕೂಲಹಳ್ಳಿ ಗೋಣಿಬಸವೇಶ್ವರ ರಥೋತ್ಸವ ಶುಕ್ರವಾರ ಸಂಜೆ ಅಪಾರ ಭಕ್ತರ ಮಧ್ಯೆ ಶ್ರದ್ಧಾ-ಭಕ್ತಿಗಳಿಂದ ಜರುಗಿದೆ.

ಊರ ಹೊರವಲಯದಲ್ಲಿ ನಿರ್ಮಿಸಿದ್ದ ಆಕರ್ಷಕ ರಥಕ್ಕೆ ವಿವಿಧ ಬಣ್ಣಗಳ ಬಾವುಟ ಹಾಗೂ ಹಲವು ದೇವಾನುದೇವತೆಗಳ ಭಾವಚಿತ್ರ ಅಳವಡಿಕೆಯ ಜತೆಗೆ, ಬಾಳೆದಿಂಡು, ಮಾವಿನ ತೋರಣ ಹಾಗೂ ಪುಷ್ಪ ಮಾಲೆಯೊಂದಿಗೆ ಅಲಂಕರಿಸಲಾಗಿತ್ತು.

Latest Videos

undefined

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮಠದ ಪೀಠಾಧಿಪತಿ ಪಟ್ಟದ ಚಿನ್ಮಯ ಸ್ವಾಮೀಜಿ ನೇತೃತ್ವದಲ್ಲಿ ಬಿರುದಾವಳಿ ಮೂಲಕ ಸಕಲ ವಾದ್ಯತಂಡಗಳ ಭಾಜ -ಭಜಂತ್ರಿಯೊಂದಿಗೆ ಕೊಟ್ಟೂರೇಶ್ವರ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ, ಆನಂತರ ದೇಗುಲದಲ್ಲಿನ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿಕೊಂಡು ಮೆರವಣಿಗೆ ಹೊರಟಿತು.

ಚಿನ್ಮಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ರಥವನ್ನು ಐದು ಸುತ್ತು ಪ್ರದಕ್ಷಿಣೆ ಹಾಕಿದ ಆನಂತರ ಗೋಣಿಬಸವೇಶ್ವರರ ಪಟ(ಧ್ವಜ)ವನ್ನು ಬಹಿರಂಗ ಹರಾಜು ಮಾಡಲಾಯಿತು. ಆನಂತರ ಕೊಟ್ಟೂರೇಶ್ವರ ಉತ್ಸವ ಮೂರ್ತಿಯನ್ನು ರಥಮಂಟಪದಲ್ಲಿ ಪ್ರತಿಷ್ಠಾಪಿಸುವ ಮೂಲಕ ಅರ್ಚಕರು ಮಹಾ ಮಂಗಳಾರತಿ ನೆರವೇರಿಸುತ್ತಿದ್ದಂತೆಯೇ ಭರ್ಜರಿ ಜಯಘೋಷಗಳ ನಡುವೆ ರಥೋತ್ಸವಕ್ಕೆ ಉತ್ತರಾಭಿಮುಖವಾಗಿ ಚಾಲನೆ ನೀಡಲಾಯಿತು.

ಹರಕೆ ಹೊತ್ತಿದ್ದ ಭಕ್ತರು, ರಥಕ್ಕೆ ತೆಂಗಿನಕಾಯಿ, ಬಾಳೆಹಣ್ಣು ಹಾಗೂ ಮೆಣಸು ತೂರಿ ಹರಕೆ ಸಮರ್ಪಿಸಿದರು. ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಗದಗ ಹಾಗೂ ಹಾವೇರಿ ಜಿಲ್ಲೆಗಳು ಸೇರಿದಂತೆ ನಾಡಿನಾದ್ಯಂತ ಭಕ್ತ ಸಾಗರವೇ ರಥೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾದರು.
 

click me!