ಕಾರವಾರದಲ್ಲಿ ಕೊಂಕಣಿ ಬೋರ್ಡ್ ಅಳವಡಿಕೆ ವಿಚಾರ ಒಮ್ಮೆಗೆ ಮುಗಿದು ಮತ್ತೆ ಭಟ್ಕಳದಲ್ಲಿ ಉರ್ದು ಬೋರ್ಡ್ ಅಳವಡಿಕೆಯ ವಿವಾದ ಎಬ್ಬಿತ್ತು. ಭಟ್ಕಳ ಪ್ರಕರಣ ಅಂತ್ಯ ಕಂಡಿತ್ತು. ಇದೀಗ ಮತ್ತೆ ಕೊಂಕಣಿ ಬೋರ್ಡ್ ವಿಚಾರ ಮುನ್ನಲೆಗೆ ಬಂದಿದೆ.
ವರದಿ: ಭರತ್‌ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್
ಉತ್ತರ ಕನ್ನಡ (ಜುಲೈ 1): ಕಾರವಾರದಲ್ಲಿ ದೇವನಾಗರಿ ಲಿಪಿಯ ಮೂಲಕ ಕೊಂಕಣಿ ಬೋರ್ಡ್ ಅಳವಡಿಕೆ ವಿಚಾರ ಒಮ್ಮೆಗೆ ಮುಗಿದು ಮತ್ತೆ ಭಟ್ಕಳದಲ್ಲಿ ಉರ್ದು ಬೋರ್ಡ್ ಅಳವಡಿಕೆಯ ವಿವಾದ ಎಬ್ಬಿತ್ತು. ಆದರೆ, ಇದೀಗ ಭಟ್ಕಳ ಪ್ರಕರಣ ಇತಿಶ್ರೀ ಕಂಡರೂ ಕಾರವಾರ ಪ್ರಕರಣ ಮಾತ್ರ ಮತ್ತೆ ಸದ್ದಾಗಲು ಪ್ರಾರಂಭವಾಗಿದ್ದು, ಅಂತಿಮ ನಿರ್ಣಾಯಕ್ಕೆಂದು ಜಿಲ್ಲಾಧಿಕಾರಿಯವರ ಮೂಲಕ ಸರಕಾರಕ್ಕೆ ಮನವಿ ಮಾಡಲಾಗಿದೆ.
undefined
ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಇಷ್ಟು ವರ್ಷಗಳ ಕಾಲ ಇಲ್ಲದ ಸಮಸ್ಯೆಯನ್ನು ಇದೀಗ ಕಾರವಾರ ನಗರಸಭೆ ಹುಟ್ಟುಹಾಕಿದೆ. ಕೆಲವು ದಿನಗಳ ಹಿಂದೆ ಕಾರವಾರ ನಗರದ ವಿವಿಧೆಡೆ ಕನ್ನಡ ನಾಮಫಲಕಗಳ ಜತೆ ದೇವನಾಗರಿ ಲಿಪಿಯಲ್ಲಿ ಕೊಂಕಣಿ ನಾಮಫಲಕವನ್ನೂ ಬರೆಯಲಾಗಿತ್ತು. ಆದರೆ, ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಇದರ ವಿರುದ್ಧ ಹೋರಾಟ ನಡೆಸಿ ಕೊಂಕಣಿ ಬರಹಗಳ ಮೇಲೆ ಮಸಿ ಬಳಿದಿದ್ದರು. ಇದರಿಂದ ಆಕ್ರೋಶಗೊಂಡ ಕೊಂಕಣಿ ಸಂಘಟನೆಗಳು ಬೀದಿಗಳಿದು ಹೋರಾಟ ನಡೆಸಿ ಮಸಿ ಬಳಿದವರನ್ನು ಬಂಧಿಸಲು ಒತ್ತಾಯಿಸಿತ್ತು. ಇದರಂತೆ ಕನ್ನಡ ಸಂಘಟನೆಯ ಕೆಲವರ ಮೇಲೆ ಪ್ರಕರಣ ಕೂಡಾ ದಾಖಲಾಗಿತ್ತು.
ಭಟ್ಕಳ ಪುರಸಭೆ ನಾಮಫಲಕದಲ್ಲಿ ಉರ್ದು ಅಕ್ಷರ: ಕನ್ನಡಿಗರ ಆಕ್ರೋಶ
ಇದನ್ನು ವಿರೋಧಿಸಿ ಮತ್ತೆ ಪ್ರತಿಭಟನೆ ನಡೆಸಿದ ಪ್ರವೀಣ್ ಶೆಟ್ಟಿ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಪ್ರಕರಣ ವಾಪಾಸ್ ಪಡೆಯುವಂತೆ ಮತ್ತೆ ಬೀದಿಗಿಳಿತ್ತು. ಈ ಪ್ರಕರಣಕ್ಕೆ ಕೊಂಚ ಅಲ್ಪವಿರಾಮ ಬೀಳುತ್ತಿದ್ದಂತೇ ಭಟ್ಕಳದಲ್ಲಿ ಪುರಸಭೆ ಕಟ್ಟಡಕ್ಕೆ ಉರ್ದು ನಾಮಫಲಕ ಅಳವಡಿಕೆ ನಡೆಸಲಾಗಿತ್ತು. ಇದಕ್ಕೆ ಕನ್ನಡ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದಕ್ಕೆ ಮುಸ್ಲಿಂ ಸಮುದಾಯ ಆಕ್ರೋಶ ವ್ಯಕ್ತಪಡಿಸಿದ್ದವು. ಎರಡು ದಿನಗಳ ಕಾಲ ನಡೆದ ಹೋರಾಟದ ಪರಿಣಾಮ ಕೊನೆಗೂ ಜಿಲ್ಲಾಧಿಕಾರಿ ಆದೇಶದೊಂದಿಗೆ ಕನ್ನಡ ಸಂಘಟನೆ ಗೆಲುವು ಕಂಡಿತ್ತು. ಭಟ್ಕಳ ಪ್ರಕರಣ ಮುಗಿದರೂ ಕಾರವಾರ ಪ್ರಕರಣ ಮಾತ್ರ ಹಾಗೆಯೇ ಉಳಿದಿದ್ದು, ಇದಕ್ಕೆಲ್ಲಾ ಕಾರವಾರ ನಗರಸಭೆ ಆಯುಕ್ತ ಆರ್.ಪಿ.ನಾಯಕ್ ನೇರ ಕಾರಣ ಎಂದು ಆರೋಪಿಸಿದ್ದಾರೆ.
ಕಾರವಾರ ನಗರಸಭೆ ಕೈಗೊಂಡ ನಿರ್ಧಾರದ ಬಗ್ಗೆ ಇಂದು ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತ ಸದಸ್ಯರ ನಡುವೆ ಜಟಾಪಟಿಯಾಗಿದ್ದು, ಕಾಂಗ್ರೆಸ್ ಬೆಂಬಲಿತ ಸದಸ್ಯರಂತೂ ಆಯುಕ್ತ ಆರ್.ಪಿ.ನಾಯಕ್ ವಿರುದ್ಧ ಹರಿಹಾಯ್ದಿದ್ದಾರೆ. ಆದರೆ, ಕಾರವಾರ ನಗರಸಭೆ ಅಧ್ಯಕ್ಷರು ಸಹಿತ ಬಿಜೆಪಿ ಬೆಂಬಲಿತ ಸದಸ್ಯರೆಲ್ಲಾ ಆಯುಕ್ತ ಆರ್.ಪಿ. ನಾಯಕ್ ಪರವಾಗಿ ದನಿಗೂಡಿಸಿದ್ದಾರೆ. ಸಾಕಷ್ಟು ಹೊತ್ತುಗಳ ಕಾಲ ಸದಸ್ಯರ ನಡುವೆ ಗಲಾಟೆಯಾಗಿದ್ದು, ಬಳಿಕ ಸದಸ್ಯರ ಪರ- ವಿರೋಧ ಓಟಿಂಗ್ ಮಾಡಲಾಗಿದೆ. ಇದರನ್ವಯ ಹೆಚ್ಚಿನ ಸದಸ್ಯರು ಬೇಡವೆಂದರೆ, ಉಳಿದವರು ಕೊಂಕಣಿ ಬೋರ್ಡ್ ಬೇಕೆಂದು ತಿಳಿಸಿದ್ದಾರೆ.
ನೆರೆ ರಾಜ್ಯಗಳಲ್ಲೂ ಪಂಚಮಸಾಲಿ ಸಂಘಟನೆ: ಡಾ. ಮಹಾದೇವ ಮಹಾಸ್ವಾಮೀಜಿ
ಈ ಅಭಿಪ್ರಾಯವನ್ನು ಸಂಗ್ರಹಿಸಿದ ನಗರಸಭೆ ಮುಂದಿನ ನಿರ್ಧಾರವಾಗಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮಂಡಿಸಿದೆ. ಸರಕಾರ ಈ ಬಗ್ಗೆ ಪರಿಶೀಲಿಸಿ ಯಾವ ನಿರ್ಧಾರಕ್ಕೆ ಬರಲಿದೆಯೋ ಅದನ್ನೇ ಪಾಲಿಸಲಾಗುವುದು ಎಂದು ನಿರ್ಣಯಿಸಲಾಗಿದೆ.
ಒಟ್ಟಿನಲ್ಲಿ ಭಟ್ಕಳದ ಉರ್ದು ಬೋರ್ಡ್ ಅಳವಡಿಕೆ ವಿಚಾರ ಕೊನೆ ಕಂಡರೂ ಕಾರವಾರದ ಕೊಂಕಣಿ ನಾಮಫಲಕ ಅಳವಡಿಕೆ ವಿಚಾರ ಮಾತ್ರ ಇನ್ನೂ ಕೊನೆ ಕಂಡಿಲ್ಲ. ಇನ್ನು ಸರಕಾರ ಈ ಬಗ್ಗೆ ಯಾವ ನಿರ್ಧಾರ ಕೈಗೊಳ್ಳುತ್ತದೆಂದು ನೋಡಬೇಕಾಗಿದ್ದು, ಒಂದು ವೇಳೆ ಕೊಂಕಣಿ ನಾಮಫಲಕಕ್ಕೆ ಅನುಮತಿ ದೊರಕಿದಲ್ಲಿ ಭಟ್ಕಳದಲ್ಲಿ ಮತ್ತೆ ಉರ್ದು ಬೋರ್ಡ್‌ಗಾಗಿ ಹೋರಾಟ ನಡೆಯುವುದರಲ್ಲಿ ಎರಡು ಮಾತಿಲ್ಲ.