ಅಧಿಕಾರಿಗಳು ಮನಸ್ಸು ಮಾಡಿದ್ರೆ ಜಿಲ್ಲೆಗೆ ಒಳಿತು ಮಾಡಬಹುದೆನ್ನುವುದಕ್ಕೆ ಡಿಸಿ ಅನಿರುದ್ಧ್ ಶ್ರವಣ್ ಉದಾಹರಣೆ. ಸರ್ಕಾರಿ ಅನುದಾನ ವೆಚ್ಚವಿಲ್ಲದೆಯೇ ಅಧಿಕಾರಿ ಹಾಗೂ ಸಾರ್ವಜನಿಕರ ನೆರವಿನಿಂದ ಸ್ವಚ್ಛಗೊಳಿಸಿದ ಕಲ್ಯಾಣಿ ಕೆರೆ ಈಗ ಮಳೆ ನೀರು ತುಂಬಿ ಭರ್ತಿಯಾಗಿದೆ.
ಚಿಕ್ಕಬಳ್ಳಾಪುರ(ಆ.02): ಯಾವುದೇ ಸರ್ಕಾರಿ ಅನುದಾನ ವೆಚ್ಚ ಮಾಡದೆ ಅಧಿಕಾರಿಗಳು ಮತ್ತು ಸಾರ್ವಜನಿಕರ ಸಹಕಾರದಿಂದಲೇ ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್ ಸ್ವಚ್ಛಗೊಳಿಸಿದ್ದ ಕಲ್ಯಾಣಿಗಳಿಗೆ ಇತ್ತೀಚಿಗೆ ಬಿದ್ದ ಮಳೆಯಿಂದಾಗಿ ನೀರು ತುಂಬಿಕೊಂಡಿದ್ದು, ಉತ್ತಮ ಮಳೆಯಾದರೆ ಕಲ್ಯಾಣಿಗಳ್ಲಲಿ ನೀರು ಶೇಖರಣೆಯಾಗುವ ಜೊತೆಗೆ ಅಂತರ್ಜಲ ವೃದ್ಧಿಗೆ ಸಹಕಾರಿಯಾಗಲಿದೆ ಎಂದು ನಾಗರಿಕರು ಸಂತಸ ವ್ಯಕ್ತಪಡಿಸಿದ್ದಾರೆ.
ಕಲ್ಯಾಣಿ ಸ್ವಚ್ಛತೆ:
ಜಿಲ್ಲೆಯಾದ್ಯಂತ ನೂರಾರು ಕಲ್ಯಾಣಿಗಳಿದ್ದು, ಇವುಗಳಲ್ಲಿ ಹಲವನ್ನು ಬಲಾಢ್ಯರು ಈಗಾಗಲೇ ಒತ್ತುವರಿ ಮಾಡಿಕೊಂಡಿದ್ದರು. ಇದನ್ನು ಗಮನಸಿದ ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್, ನಗರ ಸ್ಥಳೀಯ ಸಂಸ್ಥೆಗಳು, ಗ್ರಾಪಂ ಅಧಿಕಾರಿಗಳು ಸೇರಿದಂತೆ ಇತರೆ ಇಲಾಖೆಗಳ ಅಧಿಕರಿಗಳ ನೇತೃತ್ವದಲ್ಲಿ ಕಲ್ಯಾಣಿಗಳ ಸ್ವಚ್ಛತೆಗೆ ಮುಂದಾಗುವಂತೆ ಸೂಚನೆ ನೀಡಿದ್ದರು.
ಉತ್ತುವರಿಯಾಗಿದ್ದ ಕೆರೆಯನ್ನೂ ತೆರವುಗೊಳಿಸಿದ ಅಧಿಕಾರಿ:
ಜಿಲ್ಲಾಧಿಕಾರಿಗಳ ಸೂಚನೆಯಿಂದ ಎಚ್ಚೆತ್ತ ಅಧಿಕಾರಿಗಳು ಜಿಲ್ಲೆಯ ಆರೂ ತಾಲೂಕುಗಳಲ್ಲಿರುವ ಪುರಾತನ ಕಲ್ಯಾಣಿಗಳ ಸ್ವಚ್ಛತೆಗೆ ಟೊಂಕ ಕಟ್ಟಿ ಇಂತಿದ್ದರು. ಅಲ್ಲದೆ ಜಿಲ್ಲಾ ಕೇಂದ್ರದ ಮುಖ್ಯರಸ್ತೆಯ ಪಕ್ಕದಲ್ಲಿಯೇ ಇದ್ದ ಎರಡು ಕಲ್ಯಾಣಿಗಳು ಒತ್ತುವರಿಯಾಗಿದ್ದು, ಈ ಎರಡನ್ನೂ ಜಿಲ್ಲಾಧಕಾರಿಗಳೇ ಮುಂದೆ ನಿಂತು ತೆರವುಗೊಳಿಸುವ ಜೊತೆಗೆ ಸ್ವಚ್ಛತೆಯನ್ನೂ ಮಾಡುವ ಮೂಲಕ ಕಲ್ಯಾಣಿಗಳಿಗೆ ಒಂದು ರೂಪ ನೀಡುವ ಕೆಲಸ ಮಾಡಿದ್ದರು.
ನೀರು ಬಂದಿರುವುದೆಲ್ಲಿ?
ಚಿಕ್ಕಬಳ್ಳಾಪುರದ ಭಾರತಿ ನಗರದಲ್ಲಿ ಪಾಳು ಬಿದ್ದಿದ್ದ ಪುರಾತನ ಕಾಲದ ಕಲ್ಯಾಣಿ ಇತ್ತೀಚೆಗೆಷ್ಟೇ ಜಿಲ್ಲಾಡಳಿತ ಪುನಃಶ್ಚೇತನಗೊಳಿಸಿತ್ತು. ಇತ್ತೀಚೆಗೆ ಬಿದ್ದ ಮಳೆಯಿಂದ ಸುಮಾರು 13 ಅಡಿಯಷ್ಟುನೀರು ಸಂಗ್ರಹವಾಗಿರುವುದು ಸ್ಥಳೀಯರಲ್ಲಿ ಸಂತಸ ಮೂಡಿಸಿದೆ. ಜಿಲ್ಲೆಯಾದ್ಯಂತ ವಿಶೇಷ ಕಾಳಜಿ ವಹಿಸಿ ನೂರಕ್ಕೂ ಅಧಿಕ ಪಾಳು ಬಿದ್ದಿದ್ದ ಕಲ್ಯಾಣಿಗಳನ್ನು ಸ್ವಚ್ಛತೆ ಮಾಡಿ ಪುನಃಶ್ಚೇತನಗೊಳಿಸಲಾಗಿತ್ತು. ಕೆಲ ಕಡೆ ಕಲ್ಯಾಣಿಗಳಿಗೆ ಮಳೆ ನೀರು ಹರಿದು ಬಂದು ಸಂಗ್ರಹಗೊಂಡಿರುವುದು ಅಂತರ್ಜಲ ಅಭಿವೃದ್ಧಿಗೆ ಪೂರಕವಾಗಿದೆ.
ಮಳೆಗೆ ಸ್ಟಾರ್ಟಿಂಗ್ ಟ್ರಬಲ್ : ಜೂನ್‌ನಲ್ಲಿ ಶೇ.33 ಕೊರತೆ!
ನೀರೇ ಇಲ್ಲದೇ ಪಾಳು ಬಿದ್ದಿದ್ದ ಕಲ್ಯಾಣಿ:
ಭಾರತಿ ನಗರದ ಪುರಾಣ ಪ್ರಸಿದ್ಧ ಕಲ್ಯಾಣಿ ಕಳೆದ ಹಲವು ದಶಕಗಳಿಂದ ನಿರ್ವಹಣೆ ಇಲ್ಲದೆ ಪಾಳು ಬಿದ್ದು, ಭೂಗಳ್ಳರ ಪಾಲಾಗಿ ಕಣ್ಮರೆಯಾಗುವ ಹಂತಕ್ಕೆ ತಲುಪಿತ್ತು. ಅಲ್ಲದೆ ಕಲ್ಯಾಣಿಗೆ ಸೇರಿದ ಸುಮಾರು ಜಾಗವನ್ನು ಈಗಲೂ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂಬ ಆರೋಪವಿದೆ. ಇದನ್ನು ಗಮನಿಸಿದ ಜಿಲ್ಲಾಧಿಕಾರಿ ಅನಿರುದ್‌್ಧ ಶ್ರವಣ್ ಕಲ್ಯಾಣಿ ಪುನಃಶ್ಚೇತಗೊಳಿಸುವ ಅಭಿಯಾನ ಕೈಗೊಂಡು ಸ್ಥಳೀಯ ಪೌರ ಕಾರ್ಮಿಕರ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಕಲ್ಯಾಣಿ ಸ್ವಚ್ಛಗೊಳಿಸಿದ್ದರು.
13 ಅಡಿ ನೀರು ಸಂಗ್ರಹ:
ಜಿಲ್ಲಾಡಳಿತದ ಶ್ರಮಕ್ಕೆ ಕೊನೆಗೂ ಫಲ ಸಿಕ್ಕಿದ್ದು, ಕಲ್ಯಾಣಿಯಲ್ಲಿ 13 ಅಡಿ ನೀರು ಸಂಗ್ರಹವಾಗಿರುವುದರಿಂದ ಇಡೀ ಕಲ್ಯಾಣಿ ಕಂಗೊಳಿಸುತ್ತಿದೆ. ಇತ್ತೀಚೆಗೆ ನಡೆದ ಯೋಗ ದಿನಾಚರಣೆ ಜಿಲ್ಲಾಧಿಕಾರಿಗಳು, ಜಿಪಂ ಸಿಇಒ ಸೇರಿದಂತೆ ಜಿಲ್ಲಾ ಮಟ್ಟದ ಬಹುತೇಕ ಅಧಿಕಾರಿಗಳು ಇದೇ ಕಲ್ಯಾಣಿ ಮೆಟ್ಟಿಲುಗಳ ಮೇಲೆ ಯೋಗ ಪ್ರದರ್ಶನ ನೀಡಿದ್ದರು.
ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದೀಗ ನೀರು ಸಂಗ್ರಹವಾಗಿರುವುದರಿಂದ ಸಾರ್ವಜನಿಕ ಆಕರ್ಷಣೆ ತಾಣವಾಗಿ ಕಲ್ಯಾಣಿ ಮಿಂಚುತ್ತಿದ್ದು, ಮುಂಜಾನೆ ವೇಳೆ ಯೋಗ ಪ್ರದರ್ಶನ ಸೇರಿದಂತೆ ವಾಯು ವಿಹಾರಕ್ಕೆ ನಗರದಲ್ಲಿನ ಸಾರ್ವಜನಿಕರನ್ನು ಕಲ್ಯಾಣಿಯತ್ತ ಸೆಳೆಯುತ್ತಿದೆ.