ನವದೆಹಲಿ (ಜು.2) : ದೇಶಾದ್ಯಂತ ಮುಂಗಾರು ಮಳೆಯ ಕೊರತೆಯ ಭೀಕರ ಪರಿಣಾಮಗಳು ಎದ್ದು ಕಾಣುತ್ತಿರುವಾಗಲೇ, ಜೂನ್‌ ತಿಂಗಳಿನಲ್ಲಿ ದೇಶದೆಲ್ಲೆಡೆ ಶೇ.33ರಷ್ಟುಮುಂಗಾರು ಮಳೆ ಕೊರತೆ ದಾಖಲಾಗಿದೆ. ಇದು ಕಳೆದ 100 ವರ್ಷಗಳಲ್ಲೇ ಜೂನ್‌ ತಿಂಗಳಲ್ಲಿ ದಾಖಲಾದ 5ನೇ ಅತಿ ಕಡಿಮೆ ಮಳೆ ಪ್ರಮಾಣ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಜೂನ್‌ ತಿಂಗಳಲ್ಲಿ ಆಗುವ ದೀರ್ಘಕಾಲೀನ ಸರಾಸರಿ ಮಳೆಯ ಪ್ರಮಾಣ 166.9 ಮಿ.ಮೀನಷ್ಟಿದೆ. ಆದರೆ ಪ್ರಸಕ್ತ ವರ್ಷದ ಜೂನ್‌ ತಿಂಗಳಲ್ಲಿ ಮುಂಗಾರು ಮಾರುತಗಳು ಸುರಿಸಿದ ಮಳೆಯ ಪ್ರಮಾಣ ಕೇವಲ 112.1 ಮಿ.ಮೀನಷ್ಟಿದೆ. ಇಷ್ಟುಪ್ರಮಾಣದ ಮಳೆ ಕೊರತೆ ಉಂಟಾಗಿದ್ದು ಕಳೆದ 100 ವರ್ಷದಲ್ಲಿ ಆಗಿದ್ದು ನಾಲ್ಕು ಬಾರಿ ಮಾತ್ರ. 2009ರಲ್ಲಿ 85.7 ಮಿ.ಮೀ., 2014ರಲ್ಲಿ 95.4 ಮಿ.ಮೀ., 1926ರಲ್ಲಿ 98.7 ಮಿ.ಮೀ., 1923ರಲ್ಲಿ 102 ಮಿ.ಮೀ. ಮಳೆ ಸುರಿದಿದ್ದು ಈ ವರೆಗಿನ ಕನಿಷ್ಠ ಮಳೆಯ ಸರಾಸರಿ ಎನಿಸಿಕೊಂಡಿದೆ.

ಹವಾಮಾನ ಇಲಾಖೆಯ ಮಾಹಿತಿ ಅನ್ವಯ, ದೇಶದ 36 ಹವಾಮಾನ ಉಪ ವಿಭಾಗಗಳ ಪೈಕಿ 30ರಲ್ಲಿ ಜೂನ್‌ ತಿಂಗಳಿನಲ್ಲಿ ಮಳೆಯ ಕೊರತೆ ಉಂಟಾಗಿದೆ. ಗರಿಷ್ಠ ಶೇ.60ರಿಂದ ಕನಿಷ್ಠ ಶೇ.20ರವರೆಗೆ ಮಳೆ ಕೊರತೆ ಕಂಡು ಬಂದಿದೆ. ಹೀಗಾಗಿ ಸಾಮಾನ್ಯ ಮುಂಗಾರು ಅಂದರೆ ದೀರ್ಘಕಾಲೀನ ಸರಾಸರಿ- ಶೇ.96ರಷ್ಟುಮಳೆ ದಾಖಲಾಗಬೇಕಾದರೆ ಮುಂದಿನ ಮೂರು ತಿಂಗಳಿನಲ್ಲಿ ಶೇ.102ಕ್ಕಿಂತಲೂ ಹೆಚ್ಚು ಮಳೆ ಸುರಿಯಬೇಕಿದೆ. ವಿಳಂಬವಾಗಿ ಮುಂಗಾರು ಪ್ರವೇಶ ಮತ್ತು ಜೂ.19ರವರೆಗೂ ಮುಂಗಾರು ವೇಗ ಪಡೆದುಕೊಳ್ಳದೇ ಇದ್ದಿದ್ದರ ಪರಿಣಾಮಾಗಿ ಈ ಬಾರಿ ಜೂನ್‌ನಲ್ಲಿ ಮಳೆಯ ಕೊರತೆ ಉಂಟಾಗಿದೆ.

ಕೇಂದ್ರ ಜಲ ಆಯೋಗ ಕಳೆದ ವಾರ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಮಳೆ ಕೊರತೆಯಿಂದಾಗಿ ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರದ ಜಲಾಶಯಗಳ ನೀರಿನ ಮಟ್ಟತೀರಾ ಕೆಳ ಮಟ್ಟಕ್ಕೆ ಇಳಿಕೆಯಾಗಿದೆ. ಆಂಧ್ರ- ತೆಲಂಗಾಣದಲ್ಲಿ ಜಲಾಶಯಗಳ ನೀರಿನ ಮಟ್ಟಸಾಮಾನ್ಯಕ್ಕಿಂತ ಶೇ.52ರಷ್ಟು, ತಮಿಳುನಾಡು ಮತ್ತು ಕೇರಳದಲ್ಲಿ ಶೇ.47ರಷ್ಟು, ಕರ್ನಾಟಕದಲ್ಲಿ ಶೇ.36ರಷ್ಟುಹಾಗೂ ಗುಜರಾತಿನಲ್ಲಿ ಶೇ.23ರಷ್ಟುಇಳಿಕೆಯಾಗಿದೆ.

ಟಾಪ್‌ 5 ಕನಿಷ್ಠ ಮಳೆ

2009: 85.7 ಮಿ.ಮೀ

2014: 95.4 ಮಿ.ಮೀ

1926: 98.7 ಮಿ.ಮೀ

1923: 102 ಮಿ.ಮೀ

2019: 112.1 ಮಿ.ಮೀ