* ಭಾರತೀಯರನ್ನು ಕಂಡರೆ ಹಿಡಿದು ಥಳಿಸುತ್ತಿರುವ ಯೋಧರು
* ಎಲ್ಲ ನಾಗರಿಕರು ಯುದ್ಧ ಮಾಡುವಂತೆ ನಿರ್ದೇಶನ ನೀಡಿದ ಉಕ್ರೇನ್ ಅಧ್ಯಕ್ಷ
* ಸಂಕಷ್ಟದ ಸ್ಥಿತಿಯಲ್ಲಿ ದೇಶ ತೊರೆದು ಪಲಾಯನ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳು
ಕೋಲಾರ(ಮಾ.02): ರಷ್ಯಾ(Russia) ಬಾಂಬ್‌ಗಿಂತ ಉಕ್ರೇನ್(Ukraine) ಸೈನಿಕರೇ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದಾರೆಂಬುದು ಭಾರತೀಯ ವಿದ್ಯಾರ್ಥಿಗಳ(Indian Students) ಆರೋಪ. ಉಕ್ರೇನ್‌ನ 4 ಗಡಿಯಲ್ಲಿ ಪಹರೆ ಕಾಯುತ್ತಿರುವ ಯೋಧರು(Soldiers) ಭಾರತೀಯರನ್ನು ಕಂಡರೆ ಹಿಡಿದು ಥಳಿಸುತ್ತಾರೆ ಎಂದು ಕೋಲಾರ ಮೂಲದ ಕೀರ್ತನಾ ಪೋಷಕರೊಂದಿಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಉಕ್ರೇನ್ ಅಧ್ಯಕ್ಷರು ಎಲ್ಲ ನಾಗರಿಕರು ಯುದ್ಧ(War) ಮಾಡುವಂತೆ ನಿರ್ದೇಶನ ನೀಡಿದ್ದು, ಭಾರತೀಯ ವಿದ್ಯಾರ್ಥಿಗಳು ಸಂಕಷ್ಟದ ಸ್ಥಿತಿಯಲ್ಲಿ ದೇಶ ತೊರೆದು ಪಲಾಯನ ಮಾಡುತ್ತಿದ್ದಾರೆ ಎಂಬುದು ಉಕ್ರೇನ್ ಸೈನಿಕರ ಕೋಪಕ್ಕೆ ಕಾರಣವಾಗಿದ್ದು, ಹೀಗಾಗಿ ಭಾರತೀಯರು ಕಂಡರೆ ಥಳಿಸುತ್ತಾರೆ ಎಂದು ಅಳಲು ತೋಡಿಕೊಂಡಿದ್ದಾರೆ.
Russia Ukraine War: 6 ದಿನದಲ್ಲಿ ರಷ್ಯಾ ನಾನಾ ರಣತಂತ್ರ, ಬೆಚ್ಚಿದ ಪ್ರಪಂಚ!
451 ಕನ್ನಡಿಗರ ಪೈಕಿ 64 ಮಂದಿ ವಾಪಸ್
ಬೆಂಗಳೂರು: ಉಕ್ರೇನ್‌ನಲ್ಲಿ ಸಿಲುಕಿರುವ ಕರ್ನಾಟಕ(Karnataka) ಮೂಲದ ವಿದ್ಯಾರ್ಥಿಗಳ(Students) ಪೈಕಿ ಮತ್ತೆ 20 ಮಂದಿ ಮಂಗಳವಾರ ತವರಿಗೆ ಮರಳಿದ್ದಾರೆ. ಇದರೊಂದಿಗೆ ಈವರೆಗೆ ರಾಜ್ಯದ 64 ವಿದ್ಯಾರ್ಥಿಗಳು ಸುರಕ್ಷಿತವಾಗಿ ಆಗಮಿಸಿದಂತಾಗಿದೆ.
ಸೋಮವಾರ ತಡರಾತ್ರಿವರೆಗೂ 44 ವಿದ್ಯಾರ್ಥಿಗಳು ರಾಜ್ಯಕ್ಕೆ ಆಗಮಿಸಿದ್ದರು. ಮಂಗಳವಾರ ಬೆಳಿಗ್ಗೆ ಉಕ್ರೇನ್ ಗಡಿಯಿಂದ ಮುಂಬೈಗೆ ಬಂದ ‘ಆಪರೇಷನ್ ಗಂಗಾ’ ಏಳನೇ ವಿಮಾನದಲ್ಲಿ 4, ಮಧ್ಯಾಹ್ನ 2ಕ್ಕೆ ದೆಹಲಿಗೆ ಬಂದ ಎಂಟನೇ ವಿಮಾನದಲ್ಲಿ ಏಳು ಕನ್ನಡಿಗ ವಿದ್ಯಾರ್ಥಿಗಳಿದ್ದರು. ಈ ಪೈಕಿ ಮುಂಬೈನಲ್ಲಿಳಿದ ವಿದ್ಯಾರ್ಥಿಗಳು ಸಂಜೆ 6.30ಕ್ಕೆ, ದೆಹಲಿ ವಿದ್ಯಾರ್ಥಿಗಳು ರಾತ್ರಿ 11ಕ್ಕೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದು ತಮ್ಮ ಊರುಗಳನ್ನು ಸೇರಿದ್ದಾರೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಉಕ್ರೇನ್‌ನಲ್ಲಿ ಸಿಲುಕಿರುವುದಾಗಿ 451 ಕನ್ನಡಿಗರು(Kannadigas) ನೋಂದಣಿ ಮಾಡಿಸಿದ್ದಾರೆ. ಈ ಪೈಕಿ 64 ಮಂದಿ ಮಾತ್ರ ತವರು ಸೇರಿದಂತಾಗಿದೆ. ಉಳಿದ 396 ಮಂದಿ ಉಕ್ರೇನ್‌ನಲ್ಲಿ ಉಳಿದಿದ್ದಾರೆ. ವಿದ್ಯಾರ್ಥಿಗಳ ಮನೆಗಳಿಗೆ ಜಿಲ್ಲಾಧಿಕಾರಿಗಳು, ತಹಶೀಲ್ದಾರ್, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು, ಸ್ಥಳೀಯ ಆಡಳಿತ ಸಿಬ್ಬಂದಿಗಳು ತೆರಳಿ ಪೋಷಕರು, ಕುಟುಂಬಸ್ಥರಿಗೆ ಧೈರ್ಯ ತುಂಬುತ್ತಿದ್ದಾರೆ.
ಪೋಷಕರಿಂದ ಹೆಚ್ಚಿದ ಕರೆಗಳು:
ಉಕ್ರೇನ್‌ನಲ್ಲಿ ವಿದ್ಯಾರ್ಥಿ ನವೀನ್ ಯುದ್ಧಕ್ಕೆ ಬಲಿಯಾದ ವಿಚಾರ ತಿಳಿಯುತ್ತಿದ್ದಂತೆ ಉಕ್ರೇನ್‌ನಲ್ಲಿರುವ ವಿದ್ಯಾರ್ಥಿಗಳ ಕುಟುಂಬದ ಸದಸ್ಯರು ಆತಂಕಗೊಂಡಿದ್ದಾರೆ. ಸಹಾಯವಾಣಿಗೆ ಕರೆ ಮಾಡಿ ನಮ್ಮ ಮಕ್ಕಳನ್ನು ಶೀಘ್ರ ಕರೆಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. 300ಕ್ಕೂ ಹೆಚ್ಚು ಕರೆಗಳು ಸಹಾಯವಾಣಿಗೆ ಬಂದಿದ್ದು, ಬಹುತೇಕರು ಗಾಬರಿಗೊಂಡು ಕರೆ ಮಾಡಿದ್ದಾರೆ ಎಂದು ಸಹಾಯವಾಣಿ ಸಿಬ್ಬಂದಿ ತಿಳಿಸಿದ್ದಾರೆ.
Ukraine crisis: ನವೀನ್ ಸಾವು, ಪರಿಸ್ಥಿತಿ ಕುರಿತು ಮೋದಿ ಉನ್ನತ ಮಟ್ಟದ ಸಭೆ!
ಖಾರ್ಕಿವ್ನಿಂದ ಕೊನೇ ರೈಲು ಹತ್ತಿದ ಮಂಗಳೂರು ವಿದ್ಯಾರ್ಥಿ
ಮಂಗಳೂರು(Mangaluru): ಯುದ್ಧಗ್ರಸ್ಥ ಖಾರ್ಕಿವ್ ನಗರದಲ್ಲಿ ಸಿಲುಕಿದ್ದ ಮಂಗಳೂರು ದೇರೇಬೈಲ್‌ನ ವಿದ್ಯಾರ್ಥಿನಿ ಅನೈನಾ ಅನ್ನಾ ತನ್ನ ಸಹಪಾಠಿಗಳೊಂದಿಗೆ ಖಾರ್ಕಿವ್ ನಗರದಿಂದ ರೈಲಿನಲ್ಲಿ ಗಡಿಯತ್ತ ಪ್ರಯಾಣ ಬೆಳೆಸಿದ್ದಾರೆ.
ಈಕೆಯೊಂದಿಗೆ ದೇಶ, ವಿದೇಶಗಳ 500ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಖಾರ್ಕಿವ್ ನಗರದಿಂದ ಇದೇ ಕೊನೇ ರೈಲು ಎಂದು ಘೋಷಣೆ ಮಾಡಿದ್ದರಿಂದ ತರಾತುರಿಯಲ್ಲಿ ಆಕೆ ಹೊರಟುಬಿಟ್ಟಿದ್ದಾರೆ. ಹೀಗೆ ರೈಲಿನಲ್ಲಿ ಪ್ರಯಾಣ ಆರಂಭಿಸಿರುವ ಅನೈನಾ ಬಳಿ ಪಾಸ್ಪೋರ್ಟೇ ಇಲ್ಲ.
ಪಾಸ್‌ಪೋರ್ಟ್ ಏಜೆನ್ಸಿಯವರ ಕೈಯಲ್ಲೇ ಇದ್ದು, ಅದನ್ನು ಕೊಡಲು ನಿರಾಕರಿಸುತ್ತಿದ್ದಾರೆ. ಹೀಗಾಗಿ ಸೂಕ್ತ ವ್ಯವಸ್ಥೆ ಮಾಡುವಂತೆ ಅನೈನಾ, ಟ್ವೀಟ್ ಮೂಲಕ ಪ್ರಧಾನಿ ಕಚೇರಿ ಮತ್ತು ಪ್ರಧಾನಿ ಮೋದಿ ಅವರಿಗೆ ಟ್ವೀಟ್ ಮಾಡಿ ಟ್ಯಾಗ್ ಮಾಡಿ ಮನವಿ ಮಾಡಿದ್ದಾರೆ. ಅನೈನಾ ಅವರು ಖಾರ್ಕೀವ್ ನಗರದಿಂದ ರೈಲಿನಲ್ಲಿ ಲ್ವಿವ್ ಎಂಬ ನಗರಕ್ಕೆ ತೆರಳಲಿದ್ದು, ಅಲ್ಲಿಂದ ಬಸ್ಸಿನಲ್ಲಿ ಹಂಗೇರಿಗೆ ತೆರಳುವ ಯೋಜನೆ ಹಾಕಿಕೊಂಡಿದ್ದಾರೆ ಎಂದು ಆಕೆಯ ತಾಯಿ ಸಂಧ್ಯಾ ಮಾಹಿತಿ ನೀಡಿದ್ದಾರೆ.