
ಸಂಪತ್ ತರೀಕೆರೆ
ಬೆಂಗಳೂರು(ಮಾ.02): ನಗರದಲ್ಲಿ ಗುಂಡಿ ಬಿದ್ದಿರುವ ರಸ್ತೆಗಳ ನವೀಕರಣ ಮತ್ತು ನಿರ್ಮಾಣಕ್ಕೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯ ಕಾರ್ಯವೈಖರಿ ವಿರುದ್ಧ ಖುದ್ದು ಹೈಕೋರ್ಟ್(High Court) ತರಾಟೆಗೆ ತೆಗೆದುಕೊಂಡಿದ್ದರೂ ಪಾಲಿಕೆ ಬುದ್ಧಿ ಕಲಿಯುವಂತೆ ಕಾಣುತ್ತಿಲ್ಲ.
ಕೊಡಿಗೆಹಳ್ಳಿ ಮತ್ತು ಭದ್ರಪ್ಪ ಲೇಔಟ್‌ಗೆ ಸಂಪರ್ಕ ಕಲ್ಪಿಸುವ ಮುತ್ತು ರಾಯಸ್ವಾಮಿ ದೇವಸ್ಥಾನದಿಂದ ಕೊಡಿಗೆಹಳ್ಳಿ ವೃತ್ತದಲ್ಲಿರುವ ಗಣೇಶ ದೇವಸ್ಥಾನದವರೆಗಿನ ಸುಮಾರು 300 ಮೀಟರ್ ಉದ್ದದ ರಸ್ತೆ ವಾಹನ ಸವಾರರಿಗೆ ನಿತ್ಯ ನರಕದ ದರ್ಶನ ಮಾಡಿಸುತ್ತಿದೆ. ಆದರೂ ಕಳೆದ ಮೂರು ವರ್ಷಗಳಿಂದ ಈ ರಸ್ತೆ ದುರಸ್ತಿಗೆ(Road Repair) ಪಾಲಿಕೆ ಅಧಿಕಾರಿಗಳು ಮುಂದಾಗಿಲ್ಲ.
MES Flyover: ಬೆಂಗ್ಳೂರಲ್ಲಿ ಮತ್ತೊಂದು ಫ್ಲೈಓವರ್ ಅಪಾಯದಲ್ಲಿ..!
ವಾರ್ಡ್ ಸಂಖ್ಯೆ 8ರಲ್ಲಿರುವ ಈ ರಸ್ತೆ ಟಾಟಾ ನಗರ, ಭದ್ರಪ್ಪ ಲೇಔಟ್ ಮೂಲಕ ಹೆಬ್ಬಾಳ ರಿಂಗ್ ರಸ್ತೆಯಿಂದ ತುಮಕೂರು ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ. ಅದೇ ರೀತಿಯಲ್ಲಿ ಹೆಬ್ಬಾಳ ರಿಂಗ್ ರಸ್ತೆಯಿಂದ ಟಾಟಾ ನಗರದ ಮೂಲಕ ಕೊಡಿಗೆಹಳ್ಳಿ, ಸಹಕಾರ ನಗರದ ಮೂಲಕ ಬಳ್ಳಾರಿ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಹಾಗಾಗಿ ನಿತ್ಯವು ಇಲ್ಲಿ ಸಾವಿರಾರು ವಾಹನಗಳು(Vehicles) ಸಂಚರಿಸುತ್ತವೆ.
ಭದ್ರಪ್ಪ ಲೇಔಟ್‌ನಿಂದ ಟಾಟಾ ನಗರ ಮಾರ್ಗವಾಗಿ ಮುತ್ತುರಾಯಸ್ವಾಮಿ ದೇವಸ್ಥಾನದವರೆಗೂ ಅಗಲವಾಗಿರುವ ರಸ್ತೆಯು ನಂತರ ಸುಮಾರು 300 ಮೀಟರ್ (ಕೊಡಿಗೆಹಳ್ಳಿ ಜಂಕ್ಷನ್) ವರೆಗೂ ಗಣೇಶ ದೇವಸ್ಥಾನದವರೆಗೆ ಕಿರಿದಾಗಿದೆ. ಹೀಗಾಗಿ ಇಲ್ಲಿ ಏಕಕಾಲದಲ್ಲಿ ಎರಡು ಬೃಹತ್ ವಾಹನಗಳು ಸಂಚರಿಸಲು ಅಸಾಧ್ಯ. ಇದೊಂದು ಮೈನರ್ ರಸ್ತೆಯಾಗಿದ್ದು, ಕೇವಲ 300 ಮೀಟರ್ ಉದ್ದದ ರಸ್ತೆಯ ಮಧ್ಯದಲ್ಲೇ 6 ರಿಂದ 7 ಮ್ಯಾನ್‌ಹೋಲ್‌ಗಳಿವೆ. ಮಳೆಗಾಲದಲ್ಲಂತೂ ಈ ಮ್ಯಾನ್‌ಹೋಲ್‌ಗಳು ತುಂಬಿ ಹರಿಯುತ್ತಲೇ ಇರುತ್ತವೆ. ಈ ರಸ್ತೆಯ ಅಕ್ಕಪಕ್ಕದಲ್ಲಿ ಜನವಸತಿ ಹೆಚ್ಚಾಗಿದ್ದು, ಮಳೆಗಾಲ ಹೊರತುಪಡಿಸಿ ಇತರೆ ದಿನಗಳಲ್ಲಿ ಆಗಾಗ ಈ ಮ್ಯಾನ್‌ಹೋಲ್‌ಗಳು ತುಂಬಿ ಗಲೀಜು ರಸ್ತೆಯಲ್ಲಿ ಹರಿಯುತ್ತಿರುತ್ತದೆ.
ದುರಸ್ತಿಯಾಗದ ರಸ್ತೆ:
ಕಳೆದ ಮೂರು ವರ್ಷಗಳ ಹಿಂದೆ ಈ ರಸ್ತೆಯ ಗುಂಡಿ ಮುಚ್ಚಿ ಡಾಂಬರೀಕರಣ ಮಾಡಲಾಗಿತ್ತು. ನಂತರ ಎರಡು ವರ್ಷ ಸುರಿದ ವಿಪರೀತ ಮಳೆಯಿಂದ ಡಾಂಬರು ಕಿತ್ತು ಬಂದಿದ್ದು, ರಸ್ತೆಗೆ ಸುರಿಯಲಾಗಿದ್ದ ಜಲ್ಲಿ ಕಲ್ಲುಗಳು ಹೊರ ಬಂದಿವೆ. ಹಾಗೆಯೇ ಈ ಹಿಂದೆ ನೀರು ನಿಂತಿದ್ದರ ಪರಿಣಾಮವೋ ಏನೋ ಮ್ಯಾನ್‌ಹೋಲ್‌ಗಳ ಸುತ್ತಮುತ್ತ ಗುಂಡಿ ಬಿದ್ದಿದ್ದು ವಾಹನಗಳು ಮ್ಯಾನ್‌ಹೋಲ್ ಮೇಲೇರಿ ನೆಗೆಯುತ್ತಿವೆ. ಇದರಿಂದ ಯಾವಾಗ ಅಪಘಾತ ಸಂಭವಿಸುತ್ತದೆಯೋ ಎಂಬ ಆತಂಕ ಸ್ಥಳೀಯ ನಿವಾಸಿಗಳನ್ನು ಕಾಡುತ್ತಿದೆ.
ಸ್ಪಂದಿಸದ ಬಿಬಿಎಂಪಿ
ಈ ರಸ್ತೆಯ ದುರವಸ್ಥೆ ಬಗ್ಗೆ ಬಿಬಿಎಂಪಿ ನಿಯಂತ್ರಣ ಕೊಠಡಿಗೆ ಅನೇಕ ಬಾರಿ ದೂರುಗಳನ್ನು ನೀಡಿದ್ದರೂ ಪ್ರಯೋಜವಾಗಿಲ್ಲ. ಕೆಲ ದಿನಗಳ ಹಿಂದಷ್ಟೇ ಬಿಬಿಎಂಪಿ ಮೂಲಸೌಕರ್ಯ ಮತ್ತು ರಸ್ತೆ ವಿಭಾಗದ ಮುಖ್ಯ ಎಂಜಿನಿಯರ್ ಅವರಿಗೆ ರಸ್ತೆ ಅವ್ಯವಸ್ಥೆ ಬಗ್ಗೆ ಮಾಹಿತಿ ನೀಡಲಾಗಿತ್ತು. ನಾಳೆಯೇ ರಸ್ತೆ ಗುಂಡಿ ಮುಚ್ಚಿಸುತ್ತೇನೆ ಎಂದು ಅವರು ನೀಡಿದ್ದ ಭರವಸೆ ಎರಡು ವಾರಗಳಾದರೂ ಈಡೇರಿಲ್ಲ ಎಂದು ಸ್ಥಳೀಯ ನಿವಾಸಿ ಶ್ರೀನಿವಾಸ್ ದೂರಿದ್ದಾರೆ.
Bengaluru: ಈಜಿಪುರ ಫ್ಲೈಓವರ್ ಗುತ್ತಿಗೆದಾರರ ವಿರುದ್ಧ ಕೇಸ್ ದಾಖಲಿಸಿ: ಹೈಕೋರ್ಟ್
ರಸ್ತೆ ಹಾಳಾಗಿದ್ದು ಗುಂಡಿ ಬಿದ್ದಿರುವುದರಿಂದ ಹಿಂದೂ ರುದ್ರಭೂಮಿ ಸಮೀಪದ ಕಿರಿದಾದ ಟಾರ್ ರಸ್ತೆಯಲ್ಲಿ ಕಾರುಗಳು, ದ್ವಿಚಕ್ರ ವಾಹನಗಳು, ಆಟೋಗಳು, ಮಿನಿ ಲಾರಿಗಳು ಸಂಚರಿಸುತ್ತಿವೆ. ವಿಪರಾರಯಸವೆಂದರೆ ಈ ರಸ್ತೆಯಲ್ಲಿಯೇ ಸರ್ಕಾರಿ ಶಾಲೆಯೊಂದಿದ್ದು, ಮಕ್ಕಳು ಇದೇ ಮಾರ್ಗದಲ್ಲಿ ಓಡಾಡುತ್ತಿರುತ್ತಾರೆ. ಆದ್ದರಿಂದ ಕೂಡಲೇ ಬಿಬಿಎಂಪಿ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಬಿಟ್ಟು ಕೂಡಲೇ ರಸ್ತೆ ದುರಸ್ತಿಗೆ ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಮುತ್ತುರಾಯ ಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿ ಬೆಸ್ಕಾಂ ಕೇಬಲ್ ಅಳವಡಿಸಲು ತೆಗೆದಿದ್ದ ಗುಂಡಿಯನ್ನು ಬೇಕಾಬಿಟ್ಟಿಯಾಗಿ ಮುಚ್ಚಲಾಗಿದೆ. ಪರಿಣಾಮ ರಾತ್ರಿ ವೇಳೆ ವಾಹನ ಸವಾರರು ಬಿದ್ದು ಗಾಯ ಮಾಡಿಕೊಂಡಿದ್ದಾರೆ . ಈ ರಸ್ತೆಗುಂಡಿಗಳನ್ನು ಮುಚ್ಚಲು ಈವರೆಗೂ ಬಿಬಿಎಂಪಿ ಕ್ರಮಕೈಗೊಂಡಿಲ್ಲ. ಪ್ರಸ್ತುತ ಪಾಲಿಕೆ ಸದಸ್ಯರು ಇಲ್ಲದ ಕಾರಣ ಅಧಿಕಾರಿಗಳು ಕೂಡ ಕೈಗೆ ಸಿಗುತ್ತಿಲ್ಲ. ರಸ್ತೆ ದುರಸ್ತಿಯಾಗುತ್ತಿಲ್ಲ ಅಂತ ಸ್ಥಳೀಯ ನಿವಾಸಿ ಲಕ್ಷ್ಮೀಪತಿ ತಿಳಿಸಿದ್ದಾರೆ.