* ದರ್ಗಾದಲ್ಲಿ ಶಿವಲಿಂಗ ಪೂಜೆ ವಿವಾದ, ಆಳಂದ ಉದ್ವಿಗ್ನ, ಗಾಳಿಯಲ್ಲಿ ಗುಂಡು
* ಕೇಂದ್ರ ಸಚಿವ ಖೂಬಾ, ಶಾಸಕ ತೇಲ್ಕೂರ್, ಮತ್ತಿಮೂಡು ಕಾರಿಗೆ ಕಲ್ಲು
* ಲಾಠಿಚಾರ್ಜ್, ಗಾಳಿಯಲ್ಲಿ ಗುಂಡು
ಕಲಬುರಗಿ(ಮೇ. 02) ರಾಜ್ಯದಲ್ಲಿ ಹಿಜಾಬ್-ಕೇಸರಿ (Hijab) ಗಲಾಟೆ ಕೊಂಚ ತಣ್ಣಗಾಯಿತು ಅಂದುಕೊಳ್ಳುವಷ್ಟರಲ್ಲೇ ಇದೀಗ ಕಲಬುಗರಿ (Kalaburagi) ಜಿಲ್ಲೆಯ ಆಳಂದದಲ್ಲಿ ದರ್ಗಾ-ಶಿವಲಿಂಗ ವಿವಾದ ಭುಗಿಲೆದ್ದಿದ್ದು, ತೀವ್ರ ಮತೀಯ ಸಂಘರ್ಷಕ್ಕೆ ಕಾರಣವಾಗಿದೆ. ಆಳಂದದ ಲಾಡ್ಲೇ ಮಶಾಕ್ ದರ್ಗಾ ಆವರಣದೊಳಗಿರುವ ‘ರಾಘವ ಚೈತನ್ಯ ಶಿವಲಿಂಗ’ದ ಶುದ್ಧೀಕರಣ ಹಾಗೂ ಪೂಜೆಗೆ ಹಿಂದೂ (Hindu)ಸಂಘಟನೆಗಳ ಕಾರ್ಯಕರ್ತರು ಶಿವರಾತ್ರಿಯ (Maha Shivratri) ದಿನವಾದ ಮಂಗಳವಾರ ಯತ್ನಿಸಿದಾಗ ಇನ್ನೊಂದು ಕೋಮಿವರು ಪ್ರತಿರೋಧ ತೋರಿದ್ದು, ಹಿಂಸಾಚಾರ ಸಂಭವಿಸಿದೆ. ಉದ್ರಿಕ್ತರನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ, ಲಾಠಿ ಪ್ರಹಾರ ನಡೆಸಿದ್ದು, ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಲಾಡ್ಲೇ ಮಶಾಕ್ ದರ್ಗಾ ಆವರಣದಲ್ಲಿರುವ ಪ್ರಾಚೀನ ಶಿವಲಿಂಗಕ್ಕೆ ಕಳೆದ ನವೆಂಬರ್‌ನಲ್ಲಿ ಅಪಚಾರ ಮಾಡಿದ್ದನ್ನು ಖಂಡಿಸಿ ಮಂಗಳವಾರ ವಿವಿಧ ಸಂಘಟನೆಗಳ ಕಾರ್ಯಕರ್ತರು ‘ಆಳಂದ ಚಲೋ’ ನಡೆಸಿ ದರ್ಗಾದೊಳಗೆ ಪ್ರವೇಶಿಸಲು ಯತ್ನಿಸಿದರು. ಅದು ಮತೀಯ ಸಂಘರ್ಷಕ್ಕೆ ಕಾರಣವಾಯಿತು. ಜಿಲ್ಲಾಡಳಿತವು ಗುಂಪು ಘರ್ಷಣೆ ತಡೆಗೆ ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧಾಜ್ಞೆ ವಿಧಿಸಿ 10 ಮಂದಿಯ ತಂಡಕ್ಕೆ ಮಾತ್ರ ಶಿವಲಿಂಗ ಪೂಜೆಗೆ ಅವಕಾಶ ಮಾಡಿಕೊಟ್ಟಿತ್ತು. ಆದರೂ ಉಭಯ ಕೋಮಿನವರ ಪ್ರತಿಭಟನೆ, ವಾಗ್ವಾದ, ತಿಕ್ಕಾಟ, ಒಂದು ಕೋಮಿನವರಿಂದ ಕಲ್ಲುತೂರಾಟ, ಮಾರಕಾಸ್ತ್ರಗಳೊಂದಿಗೆ ನಡೆಸಿದ ಬಹಿರಂಗ ಮೆರವಣಿಗೆಗಳಿಂದಾಗಿ ಇಡೀ ದಿನ ಉದ್ವಿಗ್ನತೆ ಕಾಡಿತು.
Dress Code: ಬಣ್ಣ ಬಣ್ಣ ಬೇಡ... ಸಮವಸ್ತ್ರವೇ ಬೆಸ್ಟ್ ಎಂದ ನಿವೃತ್ತ ವಿಸಿಗಳು!
ಈ ಗಲಾಟೆಯಲ್ಲಿ ಶಿವಲಿಂಗ ಪೂಜೆಗೆ ತೆರಳಿದ್ದ 10 ಜನರ ತಂಡದಲ್ಲಿದ್ದ ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕರಾದ ರಾಜಕುಮಾರ್ ಪಾಟೀಲ್ ತೇಲ್ಕೂರ್, ಬಸವರಾಜ ಮತ್ತಿಮೂಡು ಅವರ ಕಾರುಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಇದಲ್ಲದೆ ಜಿಲ್ಲಾಧಿಕಾರಿ ಯಶ್ವಂತ ಗುರುಕರ್, ಎಸ್ಪಿ ಇಶಾ ಪಂತ್, ತಹಸೀಲ್ದಾರ್ ಯಲ್ಲಪ್ಪ ಸುಬೇದಾರ್ ಕಾರುಗಳ ಮೇಲೆಯೂ ಗುಂಪು ಕಲ್ಲು ತೂರಿದೆ. ಘಟನೆಯಲ್ಲಿ ಪೊಲೀಸ್ ವಾಹನಗಳು ಜಖಂ ಆಗಿವೆ, ಅನೇಕ ಪೊಲೀಸರಿಗೂ ಗಾಯಗಳಾಗಿವೆ.
ಲಾಠಿಚಾರ್ಜ್, ಗಾಳಿಯಲ್ಲಿ ಗುಂಡು: ಎಲ್ಲೆಂದರಲ್ಲಿ ಕಲ್ಲು ತೂರುತ್ತಿದ್ದ ಉದ್ರಿಕ್ತರು ಪೊಲೀಸರ ಮೇಲೆಯೇ ಮುಗಿಬಿದ್ದಾಗ ಪರಿಸ್ಥಿತಿ ನಿಯಂತ್ರಿಸಲು ಹಾಗೂ ಒಂದು ಕೋಮಿನ ಉದ್ರಿಕ್ತರನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದರು. ಅದಕ್ಕೂ ಗುಂಪು ನಿಯಂತ್ರಣವಾಗದೆ ಹೋದಾಗ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು. ಆಗ ಗುಂಪು ಚದುರಿತು. ಪರಿಸ್ಥಿತಿ ನಿಯಂತ್ರಿಸಲು ಜಿಲ್ಲಾ ಎಸ್ಪಿ ಇಶಾ ಪಂತ್, ಎಎಸ್ಪಿ ಪ್ರಸನ್ನ ದೇಸಾಯಿ ಸೇರಿದಂತೆ ಹೆಚ್ಚಿನ ಪೊಲೀಸ್ ಬಲ ಆಳಂದದಲ್ಲಿ ಬಿಡಾರ ಹೂಡಿದೆ.
ಗೊಂದಲದಲ್ಲೇ ಶಿವಪೂಜೆ: ವಾಗ್ವಾದಗಳ ನಡುವೆಯೇ ಕಡಗಂಚಿ ಶ್ರೀಗಳ ಉಪಸ್ಥಿತಿಯಲ್ಲಿ, ಬಿಜೆಪಿ ಮುಖಂಡರು, ಹಿಂದು ಪರ ಹೋರಾಟಗಾರಿದ್ದ ತಂಡದ 10 ಸದಸ್ಯರು ರಾಘವ ಚೈತನ್ಯ ಶಿವಲಿಂಗವನ್ನು ಶುದ್ಧೀಕರಣಗೊಳಿಸಿ ಪ್ರಾಣ ಪ್ರತಿಷ್ಠೆ ಮಾಡಿ ಪೂಜಾದಿಗಳನ್ನು ನೆರವೇರಿಸಿದರು. ಕಲ್ಲು ತೂರಾಟದ ಗೊಂದಲದ ವಾತಾವರಣದಲ್ಲಿಯೇ ಶಿವಲಿಂಗಕ್ಕೆ ಪೂಜಾದಿ ಕೈಂಕರ್ಯಗಳು ನೆರವೇರಿದವು.
ಏನಿದು ವಿವಾದ? ಆಳಂದ ಪಟ್ಟಣದ ಲಾಡ್ಲೇಮಶಾಕ್ ದರ್ಗಾ ಅಂಗಳದಲ್ಲೇ ಪ್ರಾಚೀನ ‘ರಾಘವ ಚೈತನ್ಯ’ ಶಿವಲಿಂಗವಿದೆ. ಕಳೆದ ನವೆಂಬರ್‌ನಲ್ಲಿ ದುಷ್ಕರ್ಮಿಗಳು ಈ ಲಿಂಗಕ್ಕೆ ಅಪಚಾರ ಮಾಡಿ ವಿಕೃತಿ ಮೆರೆದು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಅಪಚಾರಕ್ಕೊಳಗಾದ ಶಿವಲಿಂಗವನ್ನು ಶುದ್ಧೀಕರಿಸಿ ಪೂಜಿಸಲು ಹಿಂದೂ ಸಂಘಟನೆಗಳು ಶಿವರಾತ್ರಿಯ ಮುಹೂರ್ತ ನಿಗದಿಪಡಿಸಿ, ಆಳಂದ ಚಲೋ ಹಮ್ಮಿಕೊಂಡಿದ್ದವು. ಇದಕ್ಕಾಗಿ 5 ದಿನದಿಂದ ಸಿದ್ಧತೆ ನಡೆಯುತ್ತಿತ್ತು. ಮಂಗಳವಾರ ಶಿವಪೂಜೆಗೆ ಅನ್ಯಕೋಮಿನವರು ಪ್ರತಿರೋಧ ತೋರಿದಾಗ ಹಿಂಸಾಚಾರ ಸಂಭವಿಸಿದೆ.