ಭವಿಷ್ಯ ನುಡಿಯುವ ಕೋಡಿ ಮಠದ ಶ್ರೀಗಳಿಂದ ಜೋಳಿಗೆ ಹಿಡಿದು ಭಿಕ್ಷಾಟನೆ

By Kannadaprabha NewsFirst Published Mar 12, 2020, 11:19 AM IST
Highlights

ಭವಿಷ್ಯವನ್ನು ನಿಖರವಾಗಿ ನುಡಿಯುವ ಕೋಡಿ ಮಠದ ಸ್ವಾಮೀಜಿ ಮನೆ ಮನೆಗೆ ತೆರಳಿ ಜೋಳಿಗೆ ಹಿಡಿದು ಭಿಕ್ಷಾಟನೆ ಮಾಡಿದ್ದಾರೆ. 

ಅರಸೀಕೆರೆ [ಮಾ.12]:  ಭಿಕ್ಷಾಟನೆಗೆಂದು ಜೋಳಿಗೆ ಹಿಡಿದು ಮನೆ ಬಾಗಿಲಿಗೆ ಬಂದ ನೆಚ್ಚಿನ ಗುರುಗಳ ಕಂಡ ಭಕ್ತರು ಶ್ರದ್ಧೆ, ಭಕ್ತಿಯೊಂದಿಗೆ ಪಾದ ಪೂಜೆ ಮಾಡಿ ತಮ್ಮ ಮನೆಯೊಳಗೆ ಕರೆದು ದವಸ ಧಾನ್ಯಗಳನ್ನು ಜೋಳಿಗೆಗೆ ತುಂಬುವ ಮೂಲಕ ಹಾರನಹಳ್ಳಿ ಗ್ರಾಮಸ್ಥರು ಗುರುವಿನ ಅನುಗ್ರಹಕ್ಕೆ ಪಾತ್ರರಾದರು.

ತಾಲೂಕಿನ ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದಲ್ಲಿ ಮಹದೇಶ್ವರ ಜಾತ್ರಾ ಮಹೋತ್ಸವ ಆರಂಭಗೊಂಡಿದ್ದು, ಜಾತ್ರಾ ಮಹೋತ್ಸವದ 2ನೇ ದಿನವಾದ ಬುಧವಾರ ಶ್ರೀಮಠದ ಸಂಪ್ರದಾಯದಂತೆ ಮಠದ ಉತ್ತರಾಧಿಕಾರಿ ಚೇತನ್‌ ಮರಿ ದೇವರೊಂದಿಗೆ ಹಾರನಹಳ್ಳಿ ಗ್ರಾಮ ಪ್ರವೇಶಿಸಿದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಜಾತಿ, ಮತ, ಭೇದವೆನ್ನದೇ ಗ್ರಾಮದ ಪ್ರತಿ ಮನೆಗಳಿಗೆ ತೆರಳಿ ಭಿಕ್ಷಾಟನೆ ನಡೆಸಿ ಭಕ್ತರನ್ನು ಅರಸಿ ಆಶೀರ್ವದಿಸುವ ಮೂಲಕ ಮುಂದೆ ಸಾಗಿದರು.

ಕೋಡಿ ಶ್ರೀಗಳು ಗ್ರಾಮಕ್ಕೆ ಭಿಕ್ಷಾಟನೆಗೆ ಬರುವ ಸಂಪ್ರದಾಯವನ್ನು ಅರಿತಿರುವ ಯುವಕರು ಗ್ರಾಮದ ರಸ್ತೆಗಳನ್ನೆಲ್ಲ ತಳಿರು ತೋರಣಗಳಿಂದ ಶೃಂಗರಿಸಿದರೇ, ಮಹಿಳೆಯರು ತಮ್ಮ ಮನೆಯ ಅಂಗಳ ಸ್ವಚ್ಛಗೊಳಿ ರಂಗೋಲಿ ಬಿಡಿಸಿ ಗುರುಗಳನ್ನು ಸ್ವಾಗತಿಸಿದರು. ಶ್ರೀಗಳು ಸಾಗುವ ಮಾರ್ಗದುದ್ದಕ್ಕೂ ನಂದಿ ಧ್ವಜದೊಂದಿಗೆ ಮಂಗಳವಾದ್ಯ ನುಡಿಸುತ್ತಾ ಪಾಲ್ಗೊಂಡ ಜಾನಪದ ಕಲಾವಿದರನ್ನು ಕಂಡ ಭಕ್ತರು ಶಿವನೇ ಜೋಳಿಗೆ ಹಿಡಿದು ನಮ್ಮ ಮನೆಗೆ ಭಿಕ್ಷೆಗೆ ಬಂದಿದ್ದಾನೆ ಎಂಬಂತೆ ಭಕ್ತಿ ಭಾವದಿ ತಾವು ಬೆಳೆದ ದವಸ ಧಾನ್ಯಗಳನ್ನು ಜೋಳಿಗೆಗೆ ತುಂಬುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸುವುದರೊಂದಿಗೆ ಧನ್ಯರಾದರು.

ಕೋಡಿಮಠದ ಶ್ರೀಗಳು ಹೇಳಿದ ನಾಡಿನ ಭವಿಷ್ಯ...

ಈ ವೇಳೆ ಶ್ರೀಗಳು ಆಶೀರ್ವಚನ ನೀಡಿ, ಭೂಮಿಯ ಮೇಲೆ ಜನಿಸಿರುವ ಪ್ರತಿಯೊಬ್ಬ ಮನುಷ್ಯನೂ ಒಂದಲ್ಲ ಒಂದನ್ನು ಮತ್ತೊಬ್ಬರಲ್ಲಿ ಬೇಡುತ್ತಾನೆ. ಬೇಡದೆ ಬದುಕು ಅಪೂರ್ಣವಾಗಲಾರದು. ಸರ್ವವನ್ನೂ ತ್ಯಾಗ ಮಾಡಿ ಸನ್ಯಾಸತ್ವದ ದೀಕ್ಷೆ ತೊಟ್ಟಧರ್ಮಗುರುಗಳು ಸಹ ತನ್ನ ಭಕ್ತನಿಗೆ ಒಳಿತು ಮಾಡು ಭಗವಂತಾ ಎಂದು ಬೇಡುತ್ತಾನೆ ಹೀಗೆ ಬೇಡುವುದು ಮತ್ತು ಮತ್ತೊಬ್ಬರನ್ನು ಆಶ್ರಯಿಸುವುದು ಪ್ರಕೃತಿಯ ನಿಯಮ. ಈ ನಿಯಮವನ್ನು ಅರಿತು ನಡೆದ ಮನುಷ್ಯನ ಬದುಕು ಮಾತ್ರ ಸಾರ್ಥಕವಾಗಲಿದೆ ಎಂದರು.

ಸ್ವಾಮೀಜಿ ಭಿಕ್ಷಾಟನೆಗೆ ಗ್ರಾಮಕ್ಕೆ ಆಗಮಿಸಿದ ವೇಳೆ ಗ್ರಾಮದ ಹಿರಿಯರು ನಾನಾ ರಾಜಕೀಯ ಪಕ್ಷಗಳ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಶ್ರೀಮಠದ ಭಕ್ತ ವೃಂದದವರು ಉಪಸ್ಥಿತರಿದ್ದರು.

ಅರಸೀಕೆರೆ ತಾಲೂಕಿನ ಹಾರನಹಳ್ಳಿ ಗ್ರಾಮ ಪ್ರವೇಶಿಸಿದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಜಾತಿ ಮತ ಭೇದವೆನ್ನದೆ ಗ್ರಾಮದ ಪ್ರತಿ ಮನೆಗಳಿಗೆ ತೆರಳಿ ಭಿಕ್ಷಾಟನೆ ನಡೆಸಿ ಭಕ್ತರನ್ನು ಅರಸಿ ಆಶೀರ್ವದಿಸುವ ಮೂಲಕ ಮುಂದೆ ಸಾಗಿದರು

click me!