ಚನ್ನಕೇಶವ ದೇಗುಲಕ್ಕೂ ತಟ್ಟಿದ ಕೊರೋನಾ

By Kannadaprabha NewsFirst Published Mar 12, 2020, 11:05 AM IST
Highlights

ಕೊರೋನಾ ವೈರಸ್ ಕಾಟ ಇದೀಗ ದೇವರನ್ನು ಬಿಟ್ಟಂತಿಲ್ಲ. ಬೇಲೂರಿನ ಚನ್ನಕೇಶವನಿಗೂ ಸಮಸ್ಯೆ ತಟ್ಟಿದೆ. 

ಬೇಲೂರು [ಮಾ.12]:  ಕೊರೋನಾ ವೈರಸ್‌ ರಾಕ್ಷಸನ ಅಟ್ಟಹಾಸದ ಬಿಸಿ ವಿಶ್ವವಿಖ್ಯಾತ ಬೇಲೂರು ಚನ್ನಕೇಶವ ದೇಗುಲಕ್ಕೆ ತಟ್ಟಿದ್ದು, ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಕ್ಷೀಣವಾಗಿ ದೇಗುಲ ಹಾಗೂ ಮುಖ್ಯ ರಸ್ತೆಗಳು ಬಣಗುಡುತ್ತಿವೆ.

ಕೊರೋನಾ ವೈರಸ್‌ ಹಾವಳಿಯಿಂದ ಪ್ರಮುಖ ಪ್ರವಾಸಿ ಕೇಂದ್ರಗಳ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಜನಸಂದಣಿ ಕಡಿಮೆಯಾಗಿದ್ದು, ಭಕ್ತರು ಹಾಗೂ ಪ್ರವಾಸಿಗರು ತಮ್ಮ ಪ್ರವಾಸ ಮುಂದೂಡುತ್ತಿದ್ದಾರೆ. ಚನ್ನಕೇಶವಸ್ವಾಮಿ ದೇಗುಲಕ್ಕೂ ಕೊರೋನಾ ಸೋಂಕಿನ ಬಿಸಿ ಮುಟ್ಟಿದ್ದು, ಪ್ರವಾಸಿಗರಿಲ್ಲದೇ ಬಿಕೋ ಎನ್ನುವಂತಾಗಿದೆ.

ಸಾಮಾನ್ಯವಾಗಿ ಪರೀಕ್ಷೆ ವೇಳೆ ಪ್ರವಾಸಿಗರ ಸಂಖ್ಯೆ ಕಡಿಮೆ ಇರುತ್ತದೆ. ಆದರೆ, ಈ ಬಾರಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದ್ದು, ಇದಕ್ಕೆ ಕೊರೋನಾ ವೈರಸ್‌ ಆತಂಕವೇ ಪ್ರಮುಖ ಕಾರಣವಾಗಿದೆ ಎನ್ನಲಾಗುತ್ತಿದೆ.

ಕರ್ನಾಟಕದಲ್ಲಿ ನಾಲ್ವರಿಗೆ ಕೊರೋನಾ: ದಿಟ್ಟ ಕ್ರಮಕೈಗೊಂಡ ರಾಜ್ಯ ಸರ್ಕಾರ.

ಕೊರೋನಾ ವೈರಸ್‌ ಆತಂಕದ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿರುವುದು ಪ್ರವಾಸೋಧ್ಯಮ ನಂಬಿರುವ ಉದ್ದಿಮೆಗಳಿಗೆ ಹೊಡೆತ ಬಿದ್ದಿದೆ. ದೇಗುಲದ ಸುತ್ತಮುತ್ತ ಇರುವ ಹೋಟೆಲ್‌ಗಳು, ವಸತಿ ಗೃಹಗಳು ಖಾಲಿ ಹೊಡೆಯುತ್ತಿವೆ. ದೇಗುಲದ ಮುಂಭಾಗ ಇರುವ ಗೊಂಬೆ ಅಂಗಡಿಗಳು ಹಾಗೂ ವಿವಿಧ ತಿನಿಸು ತಿಂಡಿಗಳ ಅಂಗಡಿಗಳಿಗೆ ವ್ಯಾಪಾರ ಇಲ್ಲದಂತಾಗಿದೆ.

ಈ ಬಗ್ಗೆ ಶಂಕರ್‌ ಹೋಟೆಲ್‌ ಮಾಲೀಕ ಶಂಕರ್‌ ಮಾತನಾಡಿ, ಕೊರೋನಾ ವೈರಸ್‌ ಆತಂಕದಿಂದ ಈ ರೀತಿ ವಹಿವಾಟಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಗೊತ್ತಿರಲಿಲ್ಲ. ಪ್ರವಾಸಿಗರು ಹೊರಗಡೆ ತಿಂಡಿ ತಿನಿಸು ತಿನ್ನಲು ಹೆದರುತ್ತಿದ್ದಾರೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಜೀವನ ನಿರ್ವಹಣೆ ಕಷ್ಟಸಾಧ್ಯ ಎನ್ನುತ್ತಾರೆ.

ಇಲ್ಲಿನ ಚೆನ್ನಕೇಶವ ದಾಸೋಹ ಭವನದಲ್ಲಿ ಭಕ್ತರ ಕೊರತೆ ಎದ್ದು ಕಾಣುತ್ತಿತ್ತು. ಸಾಮಾನ್ಯವಾಗಿ ರಜಾದಿನ ಹೊರತುಪಡಿಸಿಯೂ ದಾಸೋಹ ಭವನ ಭಕ್ತರಿಂದ ತುಂಬಿರುತ್ತದೆ. ಆದರೆ, ಕಳೆದೆರಡು ದಿನಗಳಿಂದ ಬೆರಳೆಣಿಕೆಯಷ್ಟುಮಂದಿ ಮಾತ್ರ ದಾಸೋಹ ಭವನಕ್ಕೆ ಬರುತ್ತಿದ್ದಾರೆ. ಇದರಿಂದ ಎಷ್ಟುಜನಕ್ಕೆ ಪ್ರಸಾದ ತಯಾರಿಸುವುದು ಎಂಬ ಗೊಂದಲ ಬಾಣಸಿಗರಲ್ಲಿ ಕಂಡುಬರುತ್ತಿದೆ.

ಚನ್ನಕೇಶವ ದೇಗುಲ ದ್ವಾರ ಬಾಗಿಲಿನಲ್ಲಿ ಕೊರೋನಾ ವೈರಸ್‌ ಬಗ್ಗೆ ಮಾಹಿತಿ ನೀಡಲು ವೈದ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕಳೆದ ಎರಡು ದಿನಗಳಿಂದ ವಿದೇಶಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿದಿದೆ ಎಂದು ಸಿಬ್ಬಂದಿ ಮಾಹಿತಿ ನೀಡಿದರು.

click me!