
ಕಲಬುರಗಿ (ಜು.05): ಕರ್ನಾಟಕದ ಸಾರಿಗೆ ವ್ಯವಸ್ಥೆ ಯಾವ ಮಟ್ಟಕ್ಕೆ ತಲುಪಿದೆ ಎನ್ನುವುದಕ್ಕೆ ಈ ಘಟನೆ ಒಂದು ಕನ್ನಡಿ ಹಿಡಿದಂತಿದೆ. ಬಸ್ಸಿನ ಹೆಡ್‌ಲೈಟ್ ಕೆಟ್ಟುಹೋಗಿದ್ದರೂ, ಕಂಡಕ್ಟರ್ ಮೊಬೈಲ್ ಫೋನ್ ಟಾರ್ಚ್ ಹಿಡಿದು ದಾರಿ ತೋರಿಸುತ್ತಿದ್ದರೆ, ಚಾಲಕ ಕತ್ತಲಲ್ಲೇ ಬಸ್ ಚಲಾಯಿಸಿರುವ ಭೀಕರ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಕಲಬುರಗಿಯಿಂದ ಚಿಂಚೋಳಿ ಮಾರ್ಗವಾಗಿ ಸಂಚರಿಸುತ್ತಿದ್ದ KA-28 F-1985 ನೋಂದಣಿ ಸಂಖ್ಯೆಯ ಕೆಕೆಆರ್‌ಟಿಸಿ (KKRTC) ಬಸ್ಸಿನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಬಸ್ಸಿನ ಹೆಡ್‌ಲೈಟ್‌ಗಳು ಸಂಪೂರ್ಣವಾಗಿ ಕೆಟ್ಟುಹೋಗಿದ್ದವು. ಆದರೆ, ಬಸ್ಸನ್ನು ರಸ್ತೆಯಲ್ಲೇ ನಿಲ್ಲಿಸುವ ಬದಲು ಅಥವಾ ಬದಲಿ ವ್ಯವಸ್ಥೆ ಮಾಡುವ ಬದಲು, ಚಾಲಕ ಮತ್ತು ಕಂಡಕ್ಟರ್ ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡಿದ್ದಾರೆ. ಕಂಡಕ್ಟರ್ ಬಸ್ಸಿನ ಮುಂದಿನ ಕಿಟಕಿಯಿಂದ ಮೊಬೈಲ್ ಫೋನ್ ಫ್ಲಾಶ್ ಲೈಟ್ ಆನ್ ಮಾಡಿ ದಾರಿ ತೋರಿಸುತ್ತಿದ್ದರೆ, ಚಾಲಕ ಬಸ್ ಓಡಿಸುತ್ತಿರುವ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
'ಇದು ಸರ್ಕಾರದ ಹೊಸ ಹೆಡ್‌ಲೈಟ್ ತಂತ್ರಜ್ಞಾನವೇ?' ಎಂದು ನೆಟ್ಟಿಗರು ವ್ಯಂಗ್ಯವಾಡುತ್ತಿದ್ದಾರೆ. ಹೆಡ್‌ಲೈಟ್ ಇಲ್ಲದ ಬಸ್ಸನ್ನು ರಸ್ತೆಗೆ ಬಿಟ್ಟಿದ್ದು ಯಾರು? ಫಿಟ್‌ನೆಸ್ ಸರ್ಟಿಫಿಕೇಟ್ ನೀಡಿದವರು ಯಾರು? ಎಂಬ ಪ್ರಶ್ನೆಗಳು ಎದ್ದಿವೆ. ಸಾಮಾನ್ಯ ನಾಗರಿಕರು ತಮ್ಮ ಖಾಸಗಿ ವಾಹನದಲ್ಲಿ ಸಣ್ಣ ತಪ್ಪು ಮಾಡಿದರೂ ದಂಡ ವಿಧಿಸುವ ಸಾರಿಗೆ ಇಲಾಖೆ, ಸರ್ಕಾರಿ ಬಸ್‌ಗಳ ಈ ಭೀಕರ ನಿರ್ಲಕ್ಷ್ಯಕ್ಕೆ ಏನು ಹೇಳುತ್ತದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಈ ಘಟನೆಯು ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳ ಆರ್ಥಿಕ ಸಂಕಷ್ಟವನ್ನು ಮತ್ತೆ ಮುನ್ನೆಲೆಗೆ ತಂದಿದೆ. ಶಕ್ತಿ ಯೋಜನೆಯಡಿ ಸಾರಿಗೆ ಸಂಸ್ಥೆಗಳಿಗೆ ಬರಬೇಕಾದ ಸುಮಾರು 4,573 ಕೋಟಿ ರೂಪಾಯಿ ಅನುದಾನ ಬಾಕಿ ಇದೆ ಎಂದು ವರದಿಯಾಗಿದೆ. ಹಣದ ಕೊರತೆಯಿಂದಾಗಿ ಹಳೆಯ ಬಸ್‌ಗಳ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲವೇ? ಪ್ರಯಾಣಿಕರ ಸುರಕ್ಷತೆಯನ್ನು ಗಾಳಿಗೆ ತೂರಿ ಬಸ್‌ಗಳನ್ನು ಓಡಿಸಲಾಗುತ್ತಿದೆಯೇ ಎಂಬ ಅನುಮಾನಗಳು ಮೂಡುತ್ತಿವೆ.
ಹೆಡ್‌ಲೈಟ್ ಇಲ್ಲದ ಬಸ್ಸನ್ನು ರಾತ್ರಿ ಸಮಯದಲ್ಲಿ ಓಡಿಸುವುದು ಕೇವಲ ನಿಯಮದ ಉಲ್ಲಂಘನೆಯಲ್ಲ, ಬದಲಾಗಿ ಅದೊಂದು ಆತ್ಮಹತ್ಯಾಕಾರಿ ನಿರ್ಧಾರ. ಬಸ್ಸಿನಲ್ಲಿದ್ದ ಪ್ರಯಾಣಿಕರು, ರಸ್ತೆಯಲ್ಲಿ ಬರುವ ಇತರ ವಾಹನ ಸವಾರರು ಈ ನಿರ್ಲಕ್ಷ್ಯದಿಂದ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇತ್ತು. ಸಾರಿಗೆ ಇಲಾಖೆ ಕೂಡಲೇ ಈ ಬಸ್ಸಿನ ಚಾಲಕ, ನಿರ್ವಾಹಕ ಮತ್ತು ಬಸ್ಸಿನ ನಿರ್ವಹಣೆಯ ಜವಾಬ್ದಾರಿ ಹೊತ್ತ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ.
Is this Karnataka's Government New 'Headlight Technology' ?? A Conductor's Mobile Phone?
Is this what public transport has come to? A government bus was allegedly seen operating without a working headlight, with the driver forced to drive in the dark while the conductor used a… pic.twitter.com/u1lSTLe71Q— Karnataka Portfolio (@karnatakaportf) July 5, 2026