
ಬೆಂಗಳೂರು (ಜು.05) ಬೆಂಗಳೂರಿನಲ್ಲಿ ಹಲವು ಕಂಪನಿಗಳ ದಿಗ್ಗಜರು ನೆಲೆಸಿದ್ದಾರೆ. ಇನ್ನು ಬಹುರಾಷ್ಟ್ರೀಯ ಕಂಪನಿಗಳ ಸಿಇಒ ಸೇರಿದಂತೆ ಪ್ರತಿಷ್ಠಿತರ ಆವಾಸ ಸ್ಥಾನ ಬೆಂಗಳೂರು. ಈ ಪೈಕಿ ಇನ್ಫೋಸಿಸ್ ಸಂಸ್ಥಾಪಕರು, ಸಹ ಸಂಸ್ಥಾಪಕರು ಬೆಂಗಳೂರಲ್ಲೇ ನೆಲೆಸಿದ್ದಾರೆ. ಇದೀಗ ಇನ್ಫೋಸಿಸ್ ಸಹ ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ಬೆಂಗಳೂರಿನ ಪ್ರಯಾಣದ ಕುರಿತು ಪೋಸ್ಟ್ ಮಾಡಿದ್ದಾರೆ. ಇದೀಗ ಭಾರಿ ಚರ್ಚೆಯಾಗುತ್ತಿದೆ. ಕೆಲಸದ ಕಾರಣದಿಂದ ಕ್ರಿಸ್ ಗೋಪಾಲಕೃಷ್ಣನ್ 31 ಕಿಲೋಮೀಟರ್ ಪ್ರಯಾಣಿಸಿದ್ದಾರೆ.ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ನಲ್ಲಿ ಹೇಳಿದ 3 ಪಾಯಿಂಟ್ ಪ್ರತಿಯೊಬ್ಬ ಬೆಂಗಳೂರಿಗನ ಅನುಭವಕ್ಕೆ ಬಂದಿರುತ್ತೆ.
ಕ್ರಿಸ್ ಗೋಪಾಲಕೃಷ್ಣನ್ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಕುರಿತು ಪೋಸ್ಟ್ ಮಾಡಿದ್ದಾರೆ. 31 ಕಿಲೋಮೀಟರ್ ಪ್ರಯಾಣಕ್ಕೆ 2.5 ಗಂಟೆ ತೆಗೆದುಕೊಂಡೆ. ಬೆಂಗಳೂರು ಪರಿಸ್ಥಿತಿ ಶೋಚನೀಯವಾಗುತ್ತಿದೆ. ಟ್ರಾಫಿಕ್,ಕಳಪೆ ರಸ್ತೆ ಹಾಗೂ ವಾಹನ ಚಾಲನೆಯಲ್ಲಿನ ಶಿಸ್ತು ಕೊರತೆ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನು ಗಂಭೀರವಾಗಿಸಿದೆ ಎಂದು ಕ್ರಿಸ್ ಗೋಪಾಲ ಕೃಷ್ಣನ್ ಹೇಳಿದ್ದಾರೆ.
ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಕುರಿತು ಇನ್ಫೋಸಿಸ್ ಸಹ ಸಂಸ್ಥಾಪಕ ಪೋಸ್ಟ್ ಮಾಡುತ್ತಿದ್ದಂತೆ ಹಲವರು ಪ್ರತಿಕ್ರಿಯಿಸಿದ್ದಾರೆ. ಕಳೆದ ವಾರ 28 ಕಿಲೋಮೀಟ್ ಪ್ರಯಾಣಕ್ಕೆ 3 ಗಂಟೆ ತೆಗೆದುಕೊಂಡಿದ್ದೇನೆ. ಕೇವಲ 8 ಕಿಲೋಮೀಟರ್ ಪ್ರಯಾಣಕ್ಕೆ 1.5 ಗಂಟೆ ತೆಗೆದುಕೊಂಡಿದ್ದೇನೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಲ್ಲಿ ಪ್ರತಿ ದಿನ ಗಂಟೆಗಳ ಕಾಲ ಧೂಳು ತುಂಬಿದ ರಸ್ತೆಯಲ್ಲಿ, ಟ್ರಾಫಿಕ್ ನಡುವೆ ಪರದಾಡಿ ಕಚೇರಿಗೆ ತಲುಪುತ್ತೇವೆ. ಸಂಜೆ ಅದೇ ರೀತಿ ಮನೆಗೆ ತಲಪುತ್ತೇವೆ. ಜೀವನದ ಅರ್ಧ ಎನರ್ಜಿ ರಸ್ತೆಯಲ್ಲೇ ಹೋಗುತ್ತಿದೆ ಎಂದು ಹಲವರು ಹೇಳಿದ್ದಾರೆ.
ಮತ್ತೆ ಕೆಲವರು ಇನ್ಫೋಸಿಸ್ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಕೊಟ್ಟು ಬಿಡಿ. ಬೆಂಗಳೂರಿನ ಇನ್ಫೋಸಿಸ್ ಉದ್ಯೋಗಿಗಳ ಸಂಖ್ಯೆಯನ್ನು ಮೈಸೂರು, ಮಂಗಳೂರು, ಹುಬ್ಬಳ್ಳಿಗೆ ವರ್ಗಾಯಿಸಿ ಎಂದು ಹಲವರು ಸಲಹೆ ನೀಡಿದ್ದಾರೆ. ಬೆಂಗಳೂರಲ್ಲಿ ಟ್ರಾಫಿಕ್ ಸಮಸ್ಯೆ ದೂರ ಮಾಡಲು ರಾಜ್ಯದ 2 ಟೈರ್, 3 ಟೈರ್ ನಗರಗಳಿಗೆ ಐಟಿ ಕಂಪನಿಗಳನ್ನು ಸ್ಥಳಾಂತರ ಮಾಡಬೇಕು. ನಗರದ ಹೊರ ವಲಯದಲ್ಲಿ ಐಟಿ ಪಾರ್ಕ್ ಮಾಡಿ ಸ್ಥಳಾಂತರ ಮಾಡಿದರೆ ರಾಜ್ಯದ ಅಭಿವೃದ್ಧಿಗೂ ಸಹಾಯವಾಗಲಿದೆ, ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ತಗ್ಗಿಸಬಹುದು ಎಂದು ಕೆಲವರು ಸಲಹೆ ನೀಡಿದ್ದಾರೆ.
31 km took 2 1/2 hours today. It is only becoming worse. Traffic, condition of roads, and poor discipline
— kris gopalakrishnan (@kris_sg) July 4, 2026
ಸೋಶಿಯಲ್ ಮೀಡಿಯಾದಲ್ಲಿ ಬೆಂಗಳೂರಿನ ಟ್ರಾಫಿಕ್ ಕುರಿತು ಹಲವು ಉದ್ಯಮಿಗಳು ಆಕ್ರೋಶ ಹೊರಹಾಕಿದ್ದಾರೆ. ಪರಿಸ್ಥಿತಿ ನಿಭಾಯಿಸಲು ಸುದೀರ್ಘ ಪ್ಲಾನ್ ಅವಶ್ಯಕತೆ ಇದೆ. ನಗರದ ಹೊರವಲಯದಲ್ಲಿ ಐಟಿ ಪಾರ್ಕ್, ಕೈಗಾರಿಕೆ ಪಾರ್ಕ್ ಮಾಡಿದರೆ ಪ್ರಯೋಜನವಿಲ್ಲ. ಇತರ ಸಣ್ಣ ನಗರಗಳಿಗೆ ವರ್ಗಾವಣೆ ಸೂಕ್ತ ಎಂಬ ಸಲಹೆಯನ್ನು ನೀಡಿದ್ದಾರೆ.