* ವಾಪಸ್ ಹೋಗುವಾಗ ಗೊತ್ತಾಗಿ ಬೆಳಗಾವಿ ಕಳುಹಿಸಿದರು
* ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾದ ಕಿಮ್ಸ್ ಆಸ್ಪತ್ರೆ ನಡೆ
* ಸಾರ್ವಜನಿಕರ ಆರೋಪವ ತಳ್ಳಿ ಹಾಕಿದ ಕಿಮ್ಸ್
ಹುಬ್ಬಳ್ಳಿ(ಮೇ.21): ಆಕ್ಸಿಜನ್ ಕೊರತೆಯಿಂದ ಕೋವಿಡ್ ಸೋಂಕಿತರು ಮೃತಪಡುತ್ತಿರುವ ಘಟನೆಗಳು ಎಲ್ಲೆಡೆ ನಡೆಯುತ್ತಿರುವ ಬೆನ್ನಲ್ಲೇ ಇಲ್ಲಿನ ನಲ್ಲಿ ಆಕ್ಸಿಜನ್ ಹೊತ್ತ ಟ್ಯಾಂಕರ್‌ವೊಂದು ಮೂರು ದಿನ ನಿಂತು ಮರಳಿ ಹೋದ ಘಟನೆ ನಡೆದಿದೆ.
undefined
ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಇದನ್ನು ತಳ್ಳಿ ಹಾಕಿರುವ ಕಿಮ್ಸ್ ಆಡಳಿತ ಮಂಡಳಿ ‘3 ದಿನದ ಹಿಂದೆಯೇ ಟ್ಯಾಂಕರ್ ಬಂದಿತ್ತು. ಕಿಮ್ಸ್‌ನಲ್ಲಿ ಆಕ್ಸಿಜನ್ ಸ್ಟಾಕ್ ಇದ್ದ ಕಾರಣ ಅದನ್ನು ಅನಲೋಡ್ ಮಾಡಿರಲಿಲ್ಲವಷ್ಟೇ. ಬಳಿಕ ಅದನ್ನು ಬೇರೆಡೆ ಕಳುಹಿಸಲಾಗಿದೆ’ ಎಂದು ಸ್ಪಷ್ಟಪಡಿಸಿದೆ.
ಆಗಿದ್ದೇನು?:
ಮಧ್ಯಪ್ರದೇಶದಿಂದ ಆಕ್ಸಿಜನ್ ಹೊತ್ತ ಟ್ಯಾಂಕರ್‌ವೊಂದು ಕಳೆದ 3 ದಿನದ ಹಿಂದೆಯೇ ಬಂದಿತ್ತು. ಅದು ಕಿಮ್ಸ್‌ನ ಆವರಣದಲ್ಲಿ ನಿಂತಿದೆ. ಚಾಲಕನಿಗೆ ಕಿಮ್ಸ್‌ನಲ್ಲಿ ಯಾರನ್ನು ಕಾಣಬೇಕು. ಯಾರನ್ನು ಭೇಟಿಯಾಗಬೇಕು ಎಂಬುದು ತಿಳಿಯದೇ ಟ್ಯಾಂಕರ್ ನಿಲ್ಲಿಸಿಕೊಂಡು ಅಲ್ಲೇ ನಿಂತಿದ್ದಾನೆ. ಕೊನೆಗೆ 3 ದಿನಗಳ ಬಳಿಕ ಮಧ್ಯಪ್ರದೇಶದಿಂದ ಟ್ಯಾಂಕರ್ ಮರಳಿ ಏಕೆ ಬಂದಿಲ್ಲ ಎಂದು ಟ್ಯಾಂಕರ್ ಮಾಲೀಕರು ಚಾಲಕನಿಗೆ ಕರೆ ಮಾಡಿ ಕೇಳಿದ್ದಾರೆ. ಆದರೆ ಆತ ಇಲ್ಲೇ ಕಿಮ್ಸ್‌ನಲ್ಲಿದ್ದೇನೆ. ಯಾರು ಆಕ್ಸಿಜನ್ ಪಡೆಯುವ ಕುರಿತು ಹೇಳುತ್ತಲೇ ಇಲ್ಲ. ಯಾರೂ ತನ್ನನ್ನು ಬಂದು ಭೇಟಿ ಮಾಡಿಲ್ಲ ಎಂದು ಹೇಳಿದ್ದಾನೆ. ಆಗ ಮಾಲೀಕರು, ಕಿಮ್ಸ್ ವೈದ್ಯರನ್ನು ಭೇಟಿಯಾಗು ಎಂದು ಸಲಹೆ ನೀಡಿದ್ದಾರೆ.
ಧಾರವಾಡದಲ್ಲಿ ಕಾಣ್ತಿಲ್ಲ ಲಾಕ್‌ಡೌನ್ ವಾತಾವರಣ
ಅದರಂತೆ ಚಾಲಕ ವೈದ್ಯರನ್ನು ಭೇಟಿಯಾಗಿ ತಾನು ಆಕ್ಸಿಜನ್ ಟ್ಯಾಂಕರ್ ತಂದಿರುವ ವಿಷಯ ತಿಳಿಸಿದ್ದಾನೆ. ಆಗ ವೈದ್ಯರು ತಮ್ಮಲ್ಲಿ ಜಾಗವಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ, ಆಕ್ಸಿಜನ್ ಅನ್‌ಲೋಡ್ ಮಾಡಿಸಲು ಬೆಳಗಾವಿ ಕಳುಹಿಸಿದ್ದಾರೆ. ಅದರಂತೆ ಗುರುವಾರ ಸಂಜೆ ಆಕ್ಸಿಜನ್ ಟ್ಯಾಂಕರ್‌ನ್ನು ಬೆಳಗಾವಿಗೆ ತೆಗೆದುಕೊಂಡು ಹೋಗಿದ್ದಾನೆ. ಈ ಕುರಿತು ಕಿಮ್ಸ್‌ನಲ್ಲಿ ಸಾರ್ವಜನಿಕರೊಬ್ಬರು ವಿಡಿಯೋ ಮಾಡಿ ಅದನ್ನು ಹರಿಬಿಟ್ಟಿದ್ದಾರೆ. ಅದೀಗ ವೈರಲ್ ಆಗಿದೆ. ಆಕ್ಸಿಜನ್ ಟ್ಯಾಂಕರ್ ಬಂದರೂ ಅದನ್ನು ಅನ್‌ಲೋಡ್ ಮಾಡಿಕೊಳ್ಳದ ಕಿಮ್ಸ್ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ಬೇರೆ ಬೇರೆ ಜಿಲ್ಲೆಗಳಲ್ಲಿ ಆಕ್ಸಿಜನ್ ಕೊರತೆಯಿಂದ ಎಷ್ಟೋ ಜನ ಸಾವಿಗೀಡಾಗುತ್ತಿದ್ದಾರೆ. ಅಂತಹದ್ದರಲ್ಲಿ ಎರಡ್ಮೂರು ದಿನ ಆಕ್ಸಿಜನ್ ಟ್ಯಾಂಕರ್ ಅನ್‌ಲೋಡ್ ಮಾಡಿಕೊಳ್ಳದೇ ಹಾಗೆ ಇಟ್ಟು ಕೊಂಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಳ್ಳಿಹಾಕಿದ ಕಿಮ್ಸ್:
ಸಾರ್ವಜನಿಕರ ಈ ಆರೋಪವನ್ನು ತಳ್ಳಿ ಹಾಕಿರುವ ಕಿಮ್ಸ್‌ನ ಅಧೀಕ್ಷಕ ಡಾ. ಅರುಣಕುಮಾರ, ಟ್ಯಾಂಕರ್ ಬಂದಿರುವ ವಿಷಯ ಗೊತ್ತಾಗಿಲ್ಲ ಎನ್ನುವುದು ಅದೇನು ಸಣ್ಣ ವಸ್ತುವೇ? ಬೃಹದಾಕಾರದ ಟ್ಯಾಂಕರ್. ಎಲ್ಲರ ಕಣ್ಣಿಗೆ ಕಾಣುವಂತೆ ನಿಂತಿತ್ತು. 3 ದಿನದ ಹಿಂದೆ ಬಂದಿರುವುದು ನಿಜ. ಆದರೆ ಆಗ ಕಿಮ್ಸ್‌ನಲ್ಲಿ ಆಕ್ಸಿಜನ್ ಸ್ಟಾಕ್ ಇತ್ತು. ಹೀಗಾಗಿ ಅನ್‌ಲೋಡ್ ಮಾಡಿರಲಿಲ್ಲ. ಈಗಲೂ ಆಕ್ಸಿಜನ್ ಸ್ಟಾಕ್ ಇದೆ. ಹೀಗಾಗಿ ಆ ಟ್ಯಾಂಕರ್‌ನ್ನು ಬೇರೆಡೆ ಕಳುಹಿಸಲಾಗಿದೆ ಅಷ್ಟೇ. ಟ್ಯಾಂಕರ್ ಬಂದಿರುವುದೇ ಗೊತ್ತಾಗಿಲ್ಲ ಎಂಬುದು ಶುದ್ಧ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.