* ವಾರಸುದಾರರು, ವೈದ್ಯರೂ ಇಲ್ಲದೆ ತೆರೆದುಕೊಂಡ ನಕಲಿ ಕೋವಿಡ್ ಕೇಂದ್ರಗಳು
* ಸೋಂಕಿತೆಯನ್ನು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದ ಕೆಲವೇ ಗಂಟೆಗಳಲ್ಲಿ ಸಾವು
* ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಮೇಲೆ ದೂರು ದಾಖಲಿಸುವಂತೆ ಸೂಚನೆ
ರಾಮಮೂರ್ತಿ ನವಲಿ
ಗಂಗಾವತಿ(ಮೇ.21): ನಗರದಲ್ಲಿ ಬುಧವಾರವಾರವಷ್ಟೇ ಅಧಿಕಾರಿಗಳು ಪತ್ತೆ ಮಾಡಿದ್ದ ನಕಲಿ ಕೊವೀಡ್ ಕೇಂದ್ರದಿಂದ ರೋಗಿಗಳನ್ನು ಸ್ಥಳಾಂತರ ಮಾಡಿದ ಕೆಲವೇ ಗಂಟೆಗಳಲ್ಲಿ ಸೋಂಕಿತೆಯೊಬ್ಬರು ಅಸುನೀಗಿದ್ದಾರೆ.
ವಿಜಯನಗರ ಬಡಾವಣೆಯ ಜಾಹ್ನವಿ ಜಗನ್ನಾಥ ಜೋಷಿ (37) ಮೃತಪಟ್ಟ ನತದೃಷ್ಟೆ. ನಾಲ್ಕು ದಿನಗಳ ಹಿಂದೆ ಇವರು ಮಂಜುನಾಥ ಆಸ್ಪತ್ರೆಗೆ ದಾಖಲಾಗಿದ್ದರು. ಸಿಬ್ಬಂದಿಯಿಂದ ಔಷಧೋಪಚಾರ ನಡೆದಿತ್ತು. ಆಕ್ಸಿಜನ್ ಅಳವಡಿಸಿದ್ದರೂ ಸ್ಥಿತಿ ಗಂಭೀರವಾಗಿತ್ತು. ಈ ಮಹಿಳೆಯ ಜೀವ ಉಳಿಯುವುದರ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಸಿಬ್ಬಂದಿ ಬೇರೆಡೆ ದಾಖಲಿಸಲು ಸಂಬಂಧಿಕರಿಗೆ ಮಾಹಿತಿ ನೀಡಿದ್ದರು. ಇದೇ ಸಂದರ್ಭದಲ್ಲಿ ನಕಲಿ ಕೊವೀಡ್ ಕೇಂದ್ರ ಎನ್ನುವ ಮಾಹಿತಿ ಪಡೆದ ಅಧಿಕಾರಿಗಳು ದಾಳಿ ನಡೆಸಿ, ಸೋಂಕಿತೆಯನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಿದರು. ಸ್ಥಳಾಂತರಿಸಿದ ಕೆಲವೇ ಗಂಟೆಗಳಲ್ಲಿ ಮೃತಪಟ್ಟಿದ್ದಾಳೆ.
ವಾರುಸುದಾರರು ಇಲ್ಲದ ಆಸ್ಪತ್ರೆ:
ಯ ಕನಕದಾಸ ವೃತ್ತದಲ್ಲಿ ಮಂಜುನಾಥ ಆಸ್ಪತ್ರೆಯ ಹೆಸರಿನಲ್ಲಿ ಕೋವಿಡ್ ಕೇಂದ್ರ ಆರಂಭಿಸಲಾಗಿದೆ. ಆಸ್ಪತ್ರೆಯ ಮುಂಭಾಗದಲ್ಲಿ ಹಾಕಲಾದ ನಾಮಫಲಕದಲ್ಲಿ ಡಾ. ಸಲಾವೂದ್ದೀನ್ ಖಾಲಿದ್, ಡಾ. ಮಲ್ಲಿಕಾರ್ಜುನ ಸಿ.ಟಿ. ಮತ್ತು ಡಾ. ಶರಣಬಸವ ಸಂಕನೂರು ಎನ್ನುವ ವೈದ್ಯರ ಹೆಸರು ಇವೆ. ಆದರೆ, ಈ ಯಾವುದೇ ವೈದ್ಯರು ಅಲ್ಲಿರುವುದಿಲ್ಲ. ಬಳ್ಳಾರಿ ಜಿಲ್ಲೆಯ ಕಂಪ್ಲಿಯ ವೈದ್ಯರೊಬ್ಬರು ಆಸ್ಪತ್ರೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದರೂ ಅವರು ಅಲ್ಲಿ ಕರ್ತವ್ಯದಲ್ಲಿಲ್ಲ. ಓರ್ವ ವ್ಯವಸ್ಥಾಪಕ ಮತ್ತು ಕೆಲ ಸಿಬ್ಬಂದಿಗಳು ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ. ಮೂವರು ಸೋಂಕಿತರು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದುದು ದಾಳಿಯ ಸಂದರ್ಭದಲ್ಲಿ ಗೊತ್ತಾಗಿದೆ. ಆಕ್ಸಿಜನ್ ವ್ಯವಸ್ಥೆ ಸೇರಿ ಕೆಲ ಉಪಕರಣ ಇತ್ತಾದರೂ ಚಿಕಿತ್ಸೆ ಸಮರ್ಪಕವಾಗಿಲ್ಲ. ಯಾವುದಕ್ಕೂ ಅನುಮತಿ ಪಡೆದಿರಲಿಲ್ಲ ಎಂಬುದು ವೇಳೆ ಗೊತ್ತಾಗಿದೆ.
ಗಂಗಾವತಿ: ನಕಲಿ ಕೋವಿಡ್ ಕೇಂದ್ರಗಳ ಮೇಲೆ ದಾಳಿ
ಪ್ರಕರಣ ದಾಖಲಿಸಲು ಜಿಜ್ಞಾಸೆ:
ಈ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿರುವ ಆರೋಗ್ಯ ಇಲಾಖೆ ಮತ್ತು ತಹಸೀಲ್ದಾರರಿಗೆ ಈಗ ಯಾರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕೆಂಬ ಗೊಂದಲ ಉಂಟಾಗಿದೆ. ಕೊವೀಡ್ ಸೋಂಕಿತರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಅನುಮತಿ ಇರಲಿಲ್ಲ ಮತ್ತು ದಾಳಿಯ ವೇಲೆ ಯಾವುದೇ ವೈದ್ಯರೂ ಇರಲಿಲ್ಲ. ಹಾಗಾಗಿ ಈ ಗೊಂದಲ.
ನಗರದ ಹೊಸಳ್ಳಿ ರಸ್ತೆಯಲ್ಲಿರುವ ಮಂಜುನಾಥ ಆಸ್ಪತ್ರೆ ಮೇಲೆ ದಾಳಿ ಮಾಡಿ ನಕಲಿ ಕೋವಿಡ್ ಕೇಂದ್ರ ಎಂದು ದೃಢಪಟ್ಟಿತ್ತು. ಅನುಮತಿ ಇಲ್ಲದೆ ಇಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವದು ಕಂಡುಬಂದಿತು. ತಕ್ಷಣ ಈ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಮೇಲೆ ದೂರು ದಾಖಲಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಗಂಗಾವತಿ ತಹಸೀಲ್ದಾರ್ ನಾಗರಾಜ್ ತಿಳಿಸಿದ್ದಾರೆ.
ನಕಲಿ ಕೋವಿಡ್ ಕೇಂದ್ರವಾಗಿರುವ ಮಂಜುನಾಥ ಆಸ್ಪತ್ರೆ ಮೇಲೆ ದಾಳಿ ನಡೆಸಿ ಸೋಂಕಿತರಿಗೆ ಚಿಕಿತ್ಸೆ ನೀಡುವುದರ ಬಗ್ಗೆ ಎಚ್ಚರಿಕೆ ನೀಡಲಾಯಿತು. ಅಲ್ಲದೆ ಈ ಆಸ್ಪತ್ರೆಯ ವೈದ್ಯರು ಯಾರು? ಎನ್ನುವದು ತಿಳಿಯುತ್ತಿಲ್ಲ. ಇದರಿಂದಾಗಿ ಯಾರ ಮೇಲೆ ದೂರು ದಾಖಲಿಸಬೇಕೆನ್ನುವುದರ ಬಗ್ಗೆ ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಗಂಗಾವತಿ ತಾಲೂಕ ವೈದ್ಯಾಧಿಕಾರಿ ರಾಘವೇಂದ್ರ ಹೇಳಿದ್ದಾರೆ.