ವರದಿ:- ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ.
ಬಾಗಲಕೋಟೆ(ಸೆ.4) : ಆ ಊರಲ್ಲಿ ಯಾರಾದರೂ ಸತ್ತರೆ ಅಂತ್ಯಕ್ರಿಯೆಗೆ ಸಾರ್ವಜನಿಕ ಸ್ಮಶಾನವಿಲ್ಲ. ಸತ್ತವರ ಜಮೀನು ಇದ್ದರೆ ಅಲ್ಲಿಯೇ ಅಂತ್ಯಕ್ರಿಯೆ ಮಾಡಲಾಗ್ತಿತ್ತು. ಆದರೆ ನಿನ್ನೆ ಮೃತಪಟ್ಟ ಕುಟುಂಬದಲ್ಲಿ ಹೊಲ ಸಹ ಇರಲಿಲ್ಲ. ಹೀಗಾಗಿ ಅಂತ್ಯಕ್ರಿಯೆಗೆ ಸ್ಮಶಾನ ಜಾಗ ಇಲ್ಲದೆ ಊರ ಜನರೆಲ್ಲಾ ಪ್ರತಿಭಟನೆ ನಡೆಸಿದರು. ಸಾಲದ್ದಕ್ಕೆ ಗ್ರಾಮ ಪಂಚಾಯತಿ ಎದುರೇ ಶವ ಸಂಸ್ಕಾರಕ್ಕೆ ಮುಂದಾಗಿದ್ದರು. ಮುಂದೇನಾಯ್ತು ಎಂಬುದರ ಕುರಿತು ವರದಿ ಇಲ್ಲಿದೆ ನೋಡಿ.
ಬೆಳಗಾವಿ: ಬೆಕ್ಕೇರಿಯಲ್ಲಿ ಸ್ಮಶಾನಭೂಮಿಯೇ ಕಾಣೆ..!
ಹೌದು, ಸ್ಮಶಾನದ ಜಾಗ ಇಲ್ಲದೆ ಗ್ರಾಮ ಪಂಚಾಯತಿ ಎದುರೇ ಶವ ಸಂಸ್ಕಾರ ಮಾಡಲು ಗ್ರಾಮಸ್ಥರು ಮುಂದಾಗಿದ್ದ ಘಟನೆ ಬಾಗಲಕೋಟೆ(Bagalakote) ಜಿಲ್ಲೆಯ ಬಾದಾಮಿ(Badami) ತಾಲೂಕಿನ ಕೆರಕಲಮಟ್ಟಿ(Kerakalamatti) ಗ್ರಾಮದಲ್ಲಿ ನಡೆದಿದೆ.
ಹಲವು ದಿನಗಳಿಂದ ಸ್ಮಶಾನಕ್ಕಾಗಿ ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಮಾಡಿದ್ದರೂ, ಯಾವುದೇ ಪ್ರಯೋಜನೆ ಆಗಿರಲಿಲ್ಲ. ಗ್ರಾಮದಲ್ಲಿ ಈಗ ಕಾಳಪ್ಪ ಕಂಬಾರ(Kalappa Kumbar) ಎಂಬುವ ವ್ಯಕ್ತಿಯು ಮೃತ ಪಟ್ಟಿರುವ ಹಿನ್ನಲೆ, ಶವ ಸಂಸ್ಕಾರ ಮಾಡಲು ಸ್ಥಳ ಇಲ್ಲದೆ, ಆಕ್ರೋಶಗೊಂಡ ಗ್ರಾಮಸ್ಥರು, ಸಾರ್ವಜನಿಕ ಸ್ಮಶಾನಕ್ಕಾಗಿ ಪಂಚಾಯತಿ ಮುಂದೆ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪಂಚಾಯತಿ ಮುಂದೆಯೇ ಅಂತ್ಯಸಂಸ್ಕಾರ ಮಾಡಲು ಮುಂದಾದರು. ಇದರಿಂದ ಕೆಲ ಸಮಯ ಗೊಂದಲಮಯ ವಾತಾವರಣ ಉಂಟಾಗಿತು.
ಸ್ವಂತ ಜಮೀನು ಇರುವವರು ತಮ್ಮ ಜಮೀನನಲ್ಲಿ ಅಂತ್ಯ ಸಂಸ್ಕಾರ ಮಾಡುತ್ತಾರೆ. ಆದರೆ ಜಮೀನು ಇಲ್ಲದವರು ಎಲ್ಲಿ ಅಂತ್ಯಸಂಸ್ಕಾರ ಮಾಡಬೇಕು? ಎಂದು ಆಕ್ರೋಶಗೊಂಡ ಪಂಚಾಯತಿ ಎದುರು,ಟ್ರಾಕ್ಟರ್ ನಲ್ಲಿ ಶವಸಂಸ್ಕಾರಕ್ಕೆ ಕಟ್ಟಿಗೆ ತಂದು ಹಾಕಿದರು. ಸಾಕಷ್ಟು ಬಾರಿ ಅಧಿಕಾರಿಗಳಿಗೆ ಮನವಿ ನೀಡಿದ್ದರೂ, ಅಧಿಕಾರಿಗಳು ಸ್ಪಂದಿಸಿರಲಿಲ್ಲ.
ಮೃತ ವ್ಯಕ್ತಿಗೆ ಸ್ವಂತ ಜಮೀನು ಇಲ್ಲ. ಬೇರೆಡೆ ಅಂತ್ಯಸಂಸ್ಕಾರ ಮಾಡವುದು ಅಸಾಧ್ಯವಾಗಿತ್ತು. ಹೀಗಾಗಿ ಗ್ರಾಮಸ್ಥರು ಸೇರಿಕೊಂಡು ಅಧಿಕಾರಿ ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪಂಚಾಯತಿ ಮುಂದೆ ಶವ ತೆಗೆದುಕೊಂಡು ಬಂದರು. ಊರಲ್ಲಿ ಮೆರವಣಿಗೆ ಮಾಡಿಕೊಂಡು ಶವವನ್ನು ಪಂಚಾಯತಿ ಹತ್ತಿರ ಕುಟುಂಬಸ್ಥರೊಂದಿಗೆ ಚಾವಡಿಗೆ ತೆಗೆದುಕೊಂಡು ಬಂದರು. ಶವ ಸಂಸ್ಕಾರ ಮಾಡಲು ಪಂಚಾಯತಿ ಎದುರೇ,ಕಟ್ಟಿಗೆ ಹಾಗೂ ಟೈರುಗಳನ್ನು ಇಟ್ಟು ಸಿದ್ದತೆ ಮಾಡಿಕೊಳ್ಳುತ್ತಿದ್ದರು. ಈ ಮಧ್ಯೆ ಸ್ಥಳಕ್ಕೆ ತಹಶೀಲ್ದಾರ ಜೆ.ಬಿ.ಮಜ್ಜಗಿ(J.B.Majjigi) ಹಾಗೂ ಇತರ ಅಧಿಕಾರಿಗಳು ಬಾರದ ಹಿನ್ನಲೆ ಮತ್ತಷ್ಟು ಆಕ್ರೋಶಗೊಂಡು,ಪತ್ರಿಭಟನೆ ನಡೆಸಿದರು. ಹೆಚ್ಚಿನ ಜನರು ಜಮಾಯಿಸುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಮಾಧಾನ ಮಾಡಲು ಪ್ರಯತ್ನಿಸಿದರು. ಆದರೆ ಗ್ರಾಮಸ್ಥರು ಮಾತ್ರ ಆಕ್ರೋಶಗೊಂಡ ಅಧಿಕಾರಿಗಳ ವಿರುದ್ದ ಧಿಕ್ಕಾರ ಹಾಕಿದರು.
ಸ್ಥಳಕ್ಕೆ ಅಧಿಕಾರಿಗಳ ದೌಡು: ಚರ್ಚೆ, ಅಂತ್ಯಕ್ರಿಯೆಗೆ ಜಾಗ ಗುರುತು:
ಕೆರಕಲಮಟ್ಟಿ ಗ್ರಾಮದಲ್ಲಿ ಪರಿಸ್ಥಿತಿ ಬಿಗಾಡುಯಿಸುತ್ತಿದ್ದಂತೆ ತಹಶೀಲ್ದಾರ ಜೆ.ಬಿ. ಮಜ್ಜಗಿ ಸ್ಥಳಕ್ಕೆ ಬಂದು ಸರ್ಕಾರದ ಜಮೀನು ಗುರುತಿಸಿ ಸ್ಮಶಾನಕ್ಕೆ ಉಪಯೋಗಿಸುವಂತೆ ಸೂಚನೆ ನೀಡಿದರು. ಈ ವೇಳೆ ಸಮಾಧಾನದಿಂದರುವಂತೆ ಗ್ರಾಮಸ್ಥರ ಮನವೊಲಿಸಿದರು. ಈ ಸಮಯದಲ್ಲಿ ಕೆಲ ಸಮಯ ಅಧಿಕಾರಿಗಳ ಹಾಗೂ ಗ್ರಾಮಸ್ಥರ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಸ್ಮಶಾನಕ್ಕೆ ಮೀಸಲಿಟ್ಟ ಜಾಗ ಒತ್ತುವರಿ; ಪಂಚಾಯತಿ ಅಧಿಕಾರಿಗಳನ್ನೇ ಕೂಡಿ ಹಾಕಿ ಬೀಗ ಜಡಿದ ಗ್ರಾಮಸ್ಥರು
ಕೆರಕಲಮಟ್ಟಿ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಸಾರ್ವಜನಿಕ ಸ್ಮಶಾನದ ಸಮಸ್ಯೆ ಇದೆ. ಸಾಕಷ್ಟು ಬಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ರು ಸ್ಪಂಧನೆ ಸಿಕ್ಕಿಲ್ಲ. ಸಾರ್ವಜನಿಕ ಸ್ಮಶಾನಕ್ಕಾಗಿ ನಮ್ಮದೇ 4 ಎಕರೆ ಸ್ವಂತ ಜಮೀನು ದಾನ ನೀಡಲು ಮುಂದಾದರೂ ಅಧಿಕಾರಿಗಳು ಪ್ರಕ್ರಿಯೆ ನಡೆಸಿಲ್ಲ. ಹೀಗಾಗಿ ನಾವು ಇಂದು ಗ್ರಾಮ ಪಂಚಾಯಿತಿ ಕಟ್ಟಡ ಮುಂದೆಯೇ ಶವಸಂಸ್ಕಾರ ಮಾಡಲು ನಿರ್ಧಾರ ಮಾಡಿದ್ದೇವೆಗಿರೀಶ್ ನಾಡಗೌಡರ, ಕೆರಕಲಮಟ್ಟಿ ಗ್ರಾಮಸ್ಥ.
ಅಧಿಕಾರಿಗಳು ಗುರುತಿಸಿದ ಜಾಗದಲ್ಲಿ ಅಂತ್ಯಕ್ರಿಯೆ:
ಸ್ಥಳಕ್ಕೆ ಬಾದಾಮಿ(Badami) ತಹಶೀಲ್ದಾರ(Tahsildar) ಜೆ.ಬಿ.ಮಜ್ಜಗಿ (J.B.Majjige) ಭೇಟಿ ನೀಡಿದಾಗ ಸಾರ್ವಜನಿಕರ ಮನವೊಲಿಕೆಗೆ ಪ್ರಯತ್ನ ಮಾಡಿದರು. ಈ ವೇಳೆ ಗ್ರಾಮಸ್ಥರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಶವಸಂಸ್ಕಾರಕ್ಕೆ ನೀವೇ ಜಾಗ ತೋರಿಸಬೇಕು. ಅದೇ ಜಾಗದಲ್ಲಿ ಇನ್ನು ಮುಂದೆ ಶವಸಂಸ್ಕಾರ ಮಾಡುತ್ತೇವೆ ಎಂದು ಪಟ್ಟು ಹಿಡಿದ್ದಿದರು. ಈ ವೇಳೆ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು. ಬಳಿಕ ಗ್ರಾಮದಲ್ಲಿ ಇದ್ದ ಸರ್ಕಾರದ 28 ಗುಂಟೆ ಜಮೀನಿನಲ್ಲಿ ಶವಸಂಸ್ಕಾರಕ್ಕೆ ಜಾಗ ಗುರುತಿಸಿದರು.
ಈ ವೇಳೆ ಸರಕಾರಿ ಜಾಗೆಯಲ್ಲೂ ಶವ ಸಂಸ್ಕಾರಕ್ಕೆ ವಿರೋಧ ವ್ಯಕ್ತವಾಯಿತು. ಈ ಜಾಗೆ ವಿವಾದ ಕೋರ್ಟ್ ನಲ್ಲಿದೆ. ಇಲ್ಲಿ ಅಂತ್ಯಕ್ರಿಯೆ ಮಾಡಬೇಡಿ ಎಂದು ಸಿದ್ದಣ್ಣ ಗೌಡರ ಎಂಬ ವ್ಯಕ್ತಿ ವಿರೋಧ ವ್ಯಕ್ತಪಡಿಸಿದರು. ವಿರೋಧದ ನಡುವೆಯೂ ತಹಶೀಲ್ದಾರ್ ಸೂಚಿಸಿದ ಸ್ಥಳದಲ್ಲೇ ಶವಸಂಸ್ಕಾರ ನೆರವೇರಿಸಿದರು.
ಇಟ್ಟಿದ್ದ ಶವದ ಬದಲಿಗೆ ಕೋಳಿ ಜೀವಂತ ದಹನ:
ಸ್ಮಶಾನ ಸಮಸ್ಯೆಯಿಂದ ಪಂಚಾಯಿತಿ ಎದುರು ಅಂತ್ಯಸಂಸ್ಕಾರಕ್ಕೆ ಚಿತೆ ಸಿದ್ದಪಡಿಸಿದ್ದ ಹಿನ್ನೆಲೆ ಕಟ್ಟಿಗೆ ಮೇಲೆ ಮಲಗಿಸಿದ ಶವ ತೆಗೆಯಲು ಸಂಪ್ರದಾಯ ಅಡ್ಡಿ ಉಂಟಾಗಿತ್ತು. ಈ ವೇಳೆ ಹಿರಿಯರ ಸಲಹೆಯಂತೆ ಕಟ್ಟಿಗೆಯಿಂದ ಶವ ಹೊರತೆಗೆದು. ಅದೇ ಚಿತೆಯ ಮೇಲೆ ಜೀವಂತ ಕೋಳಿಯನ್ನು ದಹಿಸಿ, ಬಳಿಕ ಶವವನ್ನು ಗ್ರಾಮದ ಹೊರವಲಯ ಸರ್ಕಾರಿ ಜಾಗೆಯಲ್ಲಿ ಅಂತ್ಯಕ್ರಿಯೆ ನಡೆಸಲು ಶವ ತೆಗೆದುಕೊಂಡ ಹೋಗುವ ಮೂಲಕ ಪ್ರಕರಣ ಅಂತ್ಯ ಕಂಡಿತು.