ಅಪ್ಪನ ಕೆರೆಗೆ ಕಾಂಗ್ರೆಸ್‌ನಿಂದ ಕಾಯಕಲ್ಪ: ಸಚಿವ ಪ್ರಿಯಾಂಕ್ ಖರ್ಗೆ

By Kannadaprabha NewsFirst Published Mar 8, 2024, 3:15 PM IST
Highlights

ಕಳೆದ ಬಿಜೆಪಿ ಆಡಳಿತದಲ್ಲಿ ಅವೈಜ್ಞಾನಿಕ ಕೆರೆ ಕಾಮಗಾರಿಗಳಿಂದಾಗಿ ಅಪಾಯದ ಅಂಚಿಗೆ ದೂಡಲ್ಪಟ್ಟಿದ್ದ, ಹಾಳು ಮಾಡಲ್ಪಟ್ಟಿದ್ದ ನಗರದ ಶರಣ ಬಸವೇಶ್ವರ ಕೆರೆ (ಅಪ್ಪನ ಕೆರೆ)ಗೆ ಕಾಂಗ್ರೆಸ್‌ ಆಡಳಿತದಲ್ಲಿ ಕಾಯಕಲ್ಪ ನೀಡಲಾಗಿದೆ. 

ಕಲಬುರಗಿ (ಮಾ.08): ಕಳೆದ ಬಿಜೆಪಿ ಆಡಳಿತದಲ್ಲಿ ಅವೈಜ್ಞಾನಿಕ ಕೆರೆ ಕಾಮಗಾರಿಗಳಿಂದಾಗಿ ಅಪಾಯದ ಅಂಚಿಗೆ ದೂಡಲ್ಪಟ್ಟಿದ್ದ, ಹಾಳು ಮಾಡಲ್ಪಟ್ಟಿದ್ದ ನಗರದ ಶರಣ ಬಸವೇಶ್ವರ ಕೆರೆ (ಅಪ್ಪನ ಕೆರೆ)ಗೆ ಕಾಂಗ್ರೆಸ್‌ ಆಡಳಿತದಲ್ಲಿ ಕಾಯಕಲ್ಪ ನೀಡಲಾಗಿದೆ. 3 ತಿಂಗಳಲ್ಲೇ ಕೆರೆಗೆ ಹೊಸರೂಪ ನೀಡುವಲ್ಲಿ ಶ್ರಮಿಸಲಾಗಿದೆ ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್, ಐಟಿಬಿಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಕಲಬುರಗಿ ನಗರದ ಹೃದಯ ಭಾಗದಲ್ಲಿರುವ ಶ್ರೀ ಶರಣಬಸವೇಶ್ವರ ಕೆರೆ ನಿರ್ವಹಣಾ ಪ್ರಾಧಿಕಾರದಿಂದ ನಿರ್ವಹಣೆಗೆ ಒಳಪಟ್ಟ ನವೀಕರಣಗೊಂಡ ಶರಣಬಸವೇಶ್ವರ ಕೆರೆ ಉದ್ಯಾನವನನ್ನು ಗುರುವಾರ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಕೆರೆಯ ಒಂದು ಬದುವಿನ ಮೇಲೆಯೇ ಸಿಮೆಂಟ್‌ ರಚನೆ ನಿರ್ಮಿಸಿ ಕೆರೆ ಹಾಳು ಮಾಡುವ ಯತ್ನ ಬಿಜೆಪಿ ಮಾಡಿತ್ತು. ಅದನ್ನು ನಾವು ಬಂದಾದ ಮೇಲೆ ತಡೆದಿದ್ದೇವೆ. ಕೆರೆಗೆ ವೈಜ್ಞಾನಿಕವಾಗಿ ಅಭಿವೃದ್ಧಿ ಪಡಿಸಲು ಮುಂದಾಗಿದ್ದಾವೇ ಎಂದರು. ನಗರದಲ್ಲಿನ ಉದ್ಯಾನವನ ಜೊತೆಗೆ ಕೆರೆಭೋಸಗಾ, ಖಾಜಾ ಕೋಟನೂರ ಕೆರೆ ಸಂರಕ್ಷಿಸಿ ಅಭಿವೃದ್ಧಿಪಡಿಸಲಾಗುವುದು. ಇತ್ತೀಚೆಗೆ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕವಾಗಿರುವ ಮಜರ್ ಆಲಂ ಖಾನ್ ಅವರು ಇದರ ಅಭಿವೃದ್ಧಿಗೆ ಉತ್ಸುಕರಾಗಿದ್ದು, ಸರ್ಕಾರ ಮತ್ತು ಕೆಕೆಆರ್‌ಡಿಬಿ ಮಂಡಳಿ ಸಹ ಇದಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದರು.

ಮಹಿಳೆಯರ ಜೊತೆ ಸೇರಿ 'ನೀರಿಲ್ಲ ನೀರಿಲ್ಲ' ರೀಲ್ಸ್‌ ಮೂಲಕ ಎಲ್ಲರ ಗಮನ ಸೆಳೆದ ಮಾಜಿ ಮೇಯರ್ ರಾಮ್‌ ಮೋಹನ್‌ ರಾಜ್‌!

ಅಪ್ಪನ ಕೆರೆ ಉದ್ಯಾನವನ ಇಂದಿಲ್ಲಿ ಸಾರ್ವಜನಿಕರಿಗೆ ಮುಕ್ತವಾಗಿಸಿದೆ. ಇದಕ್ಕೆ ಶ್ರಮಿಸಿದ ಆರ್.ಸಿ ಕೃಷ್ಣ ಭಾಜಪೇಯಿ ಅವರಿಗೆ ಅಭಿನಂದಿಸಿದ ಸಚಿವರು ಇಲ್ಲಿಗೆ ಬರುವ‌ ವಿವಿಧ ಜಾತಿಯ 61 ಪಕ್ಷಿಗಳ ಕುರಿತು ಶಂಕ್ರಪ್ಪ ಹತ್ತಿ ಅವರು ಪುಸ್ತಕ ಬರೆದು, ದಾಖಲೀಕರಣ ಮಾಡಿರುವುದು ಒಳ್ಳೆಯ ಬೆಳವಣಿಗೆ, ಕೆರೆ ಮತ್ತು ಉದ್ಯಾನವನ ಜನರ ಆಸ್ತಿ. ಇದು ಸರ್ಕಾರ ಮಾತ್ರ ಸಂರಕ್ಷಿಸಬೇಕೆಂಬ ಮನೋಭಾವನೆ ಬಿಟ್ಟು ಎಲ್ಲರೂ ಇದರ ಸಂರಕ್ಷಣೆ ಮತ್ತು ಇಲ್ಲಿನ ಪರಿಸರ ಸಂರಕ್ಷಣೆಗೆ ಕಾಳಜಿ ವಹಿಸಬೇಕು ಎಂದು ಕರೆ ನೀಡಿದರು.

ಅಪ್ಪನ ಕೆರೆ ಒತ್ತುವರಿ ತಡೆಯಿರಿ: ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ಬರಗಾಲದ‌ ಸಂದರ್ಭದಲ್ಲಿ ದೊಡ್ಡಪ್ಪ ಅಪ್ಪ ಅವರು ಕೆರೆ ನಿರ್ಮಾಣ ಮಾಡಿ ನಗರದ ಕುಡಿವ‌ ನೀರಿನ ದಾಹ ನೀಗಿಸಿದ್ದ ಇತಿಹಾಸವುಳ್ಳ ಅಪ್ಪನ ಕೆರೆ ಉದ್ಯಾನವನ ಕೋವಿಡ್ ಕಾರಣ ಸ್ಥಗಿತಗೊಂಡು ಹಾಳುಬಿದ್ದಿತ್ತು. ಇದೀಗ ನಮ್ಮ ಸರ್ಕಾರ ಪುನಃ ಮಕ್ಕಳು, ಸಾರ್ವಜನಿಕರಿಗೆ ಮನೋರಂಜನೆಗೆ ಮತ್ತು ವಾಯು ವಿಹಾರ ಅನುಕೂಲಕ್ಕೆ ಉದ್ಯಾನವನ್ನು ಪುನರ್ ನವೀಕರಣ ಮಾಡಿದೆ. ಕೆರೆ ಒತ್ತುವರಿ ನಿಲ್ಲಿಸಬೇಕು. ಕೆರೆ ಸಂರಕ್ಷಣೆ‌ಗೆ ಎಲ್ಲರು ಮುಂದಾಗಬೇಕು ಎಂದರು.

ಸಚಿವರು ಮತ್ತು ಗಣ್ಯರು ಉದ್ಯಾನವನ ಅವರಣದಲ್ಲಿನ ನಂದಿನಿ‌ ಮಿಲ್ಕ್ ಪಾರ್ಲರ್, ಎಂಟರಟೇನ್‌ಮೆಂಟ್ ಝೋನ್, ಮಕ್ಕಳ ಆಟಿಕೆ‌ ವಲಯ ಉದ್ಘಾಟಿಸಿದರು. ಮಕ್ಕಳ ಕ್ರಿಕೆಟ್ ಅಂಗಣದಲ್ಲಿ ಸಚಿವ ದಿನೇಶ ಗುಂಡೂರಾವ ಬ್ಯಾಟ್‌ ಬೀಸಿದರೆ, ಪ್ರಿಯಾಂಕ್ ಖರ್ಗೆ, ಡಾ.ಅಜಯ ಸಿಂಗ್ ಅವರು ಬಾಲ್ ಹಾಕಿ ಗಮನ ಸೆಳೆದರು. ನಂತರ ಕೆರೆ‌ ವೀಕ್ಷಣೆಯ ವಾಚ್ ಟವರ್, ಬೋಟಿಂಗ್, ಕೆಫೆಟೇರಿಯಾ ಹೀಗೆ ಸಂಪೂರ್ಣ ಉದ್ಯಾನವನಕ್ಕೆ ಒಂದು ಸುತ್ತು ಹಾಕಿ ವೀಕ್ಷಿಸಿದರು.

ಕೆರೆ ವೆಬ್ ಸೈಟ್ ಲೋಕಾರ್ಪಣೆ: ಇದೇ ಸಂದರ್ಭದಲ್ಲಿ ಕೆರೆ ಆವರಣಕ್ಕೆ ಆಗಮಿಸುವ ದೇಶ ವಿದೇಶದ ಅತಿಥಿ ಪಕ್ಷಿ ಸಂಕುಲಗಳ ಪೂರ್ಣ ಮಾಹಿತಿ ನೀಡುವ ಪಕ್ಷಿ ಶಾಸ್ತ್ರಜ್ಞ, ನಿಸರ್ಗ ತಜ್ಞ ಡಾ.ಶಂಕರಪ್ಪ ಹತ್ತಿ ಅವರು ಬರೆದ ಕನ್ನಡ-ಇಂಗ್ಲೀಷ್ ಆವೃತ್ತಿಯ ಪುಸ್ತಕ, ಶರಣಬಸವೇಶ್ವರ ಕೆರೆಯ ವೆಬ್‌ ಸೈಟ್ www.sblake.in ಸಹ ಲೋಕಾರ್ಪಣೆ ಮಾಡಲಾಯಿತು.

'ಕರಟಕ ದಮನಕ' ನೋಡಲು ಇಲ್ಲಿದೆ ಐದು ಕಾರಣ: ಶಿವಣ್ಣ-ಪ್ರಭುದೇವ ಜುಗಲ್ಬಂಧಿ ಮೇಲೆ ಎಲ್ಲರ ಕಣ್ಣು!

ಮುಖ್ಯಮಂತ್ರಿಗಳ ಸಲಹೆಗಾರರು ಮತ್ತು ಆಳಂದ ಶಾಸಕ ಬಿ.ಆರ್.ಪಾಟೀಲ, ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಅಲಮ್ ಖಾನ, ಮಾಜಿ ಸಚಿವ ರೇವುನಾಯಕ ಬೆಳಮಗಿ, ಡಿಸಿ ಫೌಜಿಯಾ ತರನ್ನುಮ್, ಕಲಬುರಗಿ ನಗರ ಪೊಲೀಸ್ ಆಯುಕ್ತ ಆರ್.ಚೇತನಕುಮಾರ, ಎಸ್.ಪಿ ಅಕ್ಷಯ್ ಎಂ. ಹಾಕೆ, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ, ಕೆರೆ ಸಲಹಾ ಸಮಿತಿ ಸದಸ್ಯ ಸದಾನೆಂದ ಪೆರ್ಲಾ, ಶಂಕರಪ್ಪ ಹತ್ತಿ ಇದ್ದರು. ಶರಣಬಸವೇಶ್ವರ ಕೆರೆ ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಕಲಬುರಗಿ ವಿಭಾಗದ ಪ್ರಾ. ಆಯುಕ್ತರಾದ ಕೃಷ್ಣ ಬಾಜಪೇಯಿ ಅವರು ಸರ್ವರನ್ನು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು.

click me!