ಕರ್ನಾಟಕ ರತ್ನ, ಬದುಕಿರುವಾಗಲೇ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುವಂತಾಗಲಿ!

Published : Sep 11, 2025, 08:13 PM IST
Karnataka Ratna

ಸಾರಾಂಶ

Karnataka ratna award posthumous ಕರ್ನಾಟಕ ರತ್ನ ಪ್ರಶಸ್ತಿಯನ್ನು ಈ ವರ್ಷ ವಿಷ್ಣುವರ್ಧನ್ ಮತ್ತು ಬಿ.ಸರೋಜಾದೇವಿ ಅವರಿಗೆ ಮರಣೋತ್ತರವಾಗಿ ನೀಡಲಾಗಿದೆ. ಬದುಕಿರುವಾಗಲೇ ಸಾಧಕರನ್ನು ಗುರುತಿಸಿ ಗೌರವಿಸುವ ಅಗತ್ಯವಿದೆ ಎಂದು ಲೇಖನ ಒತ್ತಿ ಹೇಳುತ್ತದೆ. 

ರಾಜ್ಯದ ಪ್ರತಿಷ್ಠಿತ ನಾಗರೀಕ ಪ್ರಶಸ್ತಿ ಕರ್ನಾಟಕ ರತ್ನ. 1992ರ ನಂತರ ಇದೇ ಮೊದಲ ಬಾರಿಗೆ ಒಂದೇ ವರ್ಷದಲ್ಲಿ ಎರಡು ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಉದ್ಘಾಟನಾ ವರ್ಷವಾದ 1992ರಲ್ಲಿ ಸಾಹಿತ್ಯದಲ್ಲಿ ಕುವೆಂಪು ಅವರಿಗೆ ಸಿನಿಮಾದಲ್ಲಿ ಡಾ.ರಾಜ್‌ಕುಮಾರ್‌ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗಿತ್ತು. ಈ ಬಾರಿ ಡಾ.ವಿಷ್ಣುವರ್ಧನ್‌ ಹಾಗೂ ಬಿ.ಸರೋಜಾದೇವಿ ಅವರಿಗೆ ಸರ್ಕಾರ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.

ಇಲ್ಲಿಯವರೆಗೂ 11 ಸಾಧಕರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗಿದೆ. ಬೇಸರದ ವಿಚಾರವೇನೆಂದರೆ, ಕಳೆದ ಮೂರೂ ಕರ್ನಾಟಕ ರತ್ನ ಪ್ರಶಸ್ತಿಗಳನ್ನು ಮರಣೋತ್ತರವಾಗಿ ಘೋಷಿಸಲಾಗಿದೆ. 2022ರಲ್ಲಿ ಪುನೀತ್‌ ರಾಜ್‌ಕುಮಾರ್‌ ಅಕಾಲಿಕವಾಗಿ ನಿಧನದ ಬೆನ್ನಲ್ಲಿಯೇ ಮರಣೋತ್ತರವಾಗಿ ಈ ಗೌರವ ನೀಡಲಾಗಿತ್ತು.

ಸರ್ಕಾರ ಕನಿಷ್ಠ ಈಗಲಾದರೂ ಎಚ್ಚೆತ್ತುಕೊಂಡಿತಲ್ಲ ಎನ್ನುವ ಸಮಾಧಾನದ ನಡುವೆ, ಬದುಕಿರುವಾಗಲೇ ಸಾಧಕರನ್ನು ಗುರುತಿಸಿ ಕರ್ನಾಟಕ ರತ್ನ ನೀಡುವಂತಾಗಬೇಕು. ವಿಷ್ಣುವರ್ಧನ್‌ ನಿಧನರಾಗಿ ಬರೋಬ್ಬರಿ 16 ವರ್ಷಗಳ ಬಳಿಕ ಈ ಗೌರವ ನೀಡಲಾಗಿದೆ. ಸರೋಜಾದೇವಿ ವಿಚಾರದಲ್ಲಿ ಸರ್ಕಾರ ಕೊಂಚ ಮನಸ್ಸು ಮಾಡಿದ್ದರೆ ಕಳೆದ ವರ್ಷವೇ ಅವರಿಗೆ ಕರ್ನಾಟಕ ರತ್ನ ನೀಡಿ ಗೌರವಿಸಬಹುದಿತ್ತು. ಒಂದಷ್ಟು ದಿನಗಳ ಕಾಲ ಕರ್ನಾಟಕ ರತ್ನವನ್ನು ನಮ್ಮೆದುರು ನೋಡುವ ಅವಕಾಶವಾದರೂ ಸಿಗುತ್ತಿತ್ತು.

ವಿಷ್ಣುವರ್ಧನ್‌, ಬಿ.ಸರೋಜಾದೇವಿ ಅವರಂತೆಯೇ ಸಾಹಿತ್ಯದ ಮನಸುಗಳನ್ನು ತಮ್ಮ ಶುಭ್ರ ಕನ್ನಡ ಕಾವ್ಯದ ಮೂಲಕ ತಣಿಸಿದ್ದ ಎಚ್‌ಎಸ್‌ ವೆಂಕಟೇಶ ಮೂರ್ತಿ ಅವರು ಕೂಡ ಕರ್ನಾಟಕ ರತ್ನಕ್ಕೆ ಅರ್ಹರಾಗಿದ್ದರು. ಅವರಿಗೂ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡುವ ದೊಡ್ಡ ಮನಸ್ಸನ್ನು ಸರ್ಕಾರ ಮಾಡಬಹುದಿತ್ತು.

ಅದೇ ರೀತಿ ಹಲವು ವರ್ಷಗಳ ಕಾಲ ಕಲಾ ಸೇವೆಯಲ್ಲಿದ್ದರೂ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಹಿರಿಯ ನಟ ಅನಂತ್‌ ನಾಗ್‌ ಪ್ರಶಸ್ತಿಗಳಿಂದ ವಂಚಿತರಾಗುತ್ತಲೇ ಇದ್ದಾರೆ. ಈ ಬಾರಿ ಕೇಂದ್ರ ಸರ್ಕಾರ ದೇಶದ ಮೂರನೇ ಅತ್ಯುನ್ನತ ನಾಗರೀಕ ಪುರಸ್ಕಾರವಾದ ಪದ್ಮಭೂಷಣ ನೀಡಿ ಗೌರವಿಸಿದೆ. ಅದರೊಂದಿಗೆ ಅಭಿಮಾನಿಗಳ ಹಲವು ವರ್ಷದ ಆಕಾಂಕ್ಷೆ ಈಡೇರಿತ್ತು. ಹೀಗಿದ್ದಾಗ ಅನಂತ್‌ ನಾಗ್‌ ಕೂಡ ಕರ್ನಾಟಕ ರತ್ನ ಪ್ರಶಸ್ತಿಗೆ ಅರ್ಹರಾಗಿದ್ದರು. ವರ್ಣರಂಜಿತ ಕಲಾ ಜೀವನ ಕಂಡ ಅನಂತ್‌ ನಾಗ್‌ ಅವರಿಗೆ ಬದುಕಿರುವಾಗಲೇ ಮಹಾನ್‌ ಪ್ರಶಸ್ತಿ ನೀಡಿದ ಹೆಮ್ಮೆ ಕನ್ನಡಿಗರದಾಗಿರುತ್ತಿತ್ತು.

ಕರ್ನಾಟಕ ರತ್ನ ಗೌರವದಲ್ಲಿ ಏನೆಲ್ಲಾ ಇರುತ್ತದೆ?

ಕರ್ನಾಟಕ ಸರ್ಕಾರವು 1992 ರಲ್ಲಿ ಸ್ಥಾಪಿಸಿದ ಈ ಪ್ರಶಸ್ತಿಯು ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆ ನೀಡಿದ ವ್ಯಕ್ತಿಗಳನ್ನು ಗುರುತಿಸುತ್ತದೆ. ಈ ಗೌರವವು 50 ಗ್ರಾಂ ಚಿನ್ನದ ಪದಕ, ಸನ್ಮಾನ ಪತ್ರ, ಸ್ಮರಣಿಕೆ ಮತ್ತು ಶಾಲು ಒಳಗೊಂಡಿದೆ. ಇಲ್ಲಿಯವರೆಗೆ ಹತ್ತು ವಿಶಿಷ್ಟ ವ್ಯಕ್ತಿಗಳಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.

ಇವರೊಂದಿಗೆ ಎಸ್. ನಿಜಲಿಂಗಪ್ಪ (1999), ಸಿ. ಎನ್. ಆರ್. ರಾವ್ (2000), ಭೀಮಸೇನ ಜೋಶಿ (2005), ಡಾ. ಶಿವಕುಮಾರ ಸ್ವಾಮಿ (2007), ಡಿ. ಜವರೇ ಗೌಡ (2008) ಹಾಗೂ ಡಾ. ವೀರೇಂದ್ರ ಹೆಗ್ಗಡೆ (2009) ಈ ಗೌರವ ನೀಡಲಾಗಿದೆ. 2009ರಿಂದ 2021ರವರೆಗೂ ಯಾರಿಗೂ ಗೌರವವನ್ನು ನೀಡಿರಲಿಲ್ಲ. 2022ರಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಮೊದಲ ಬಾರಿಗೆ ಮರಣೋತ್ತರವಾಗಿ ಈ ಗೌರವವನ್ನು ಸರ್ಕಾರ ನೀಡಿತ್ತು.

 

PREV
Read more Articles on
click me!

Recommended Stories

ದಾವಣಗೆರೆ ರಾಟ್‌ವೀಲರ್ ನಾಯಿಗಳ ಡೆಡ್ಲಿ ಅಟ್ಯಾಕ್; 50ಕ್ಕೂ ಹೆಚ್ಚು ಕಡೆ ಕಚ್ಚಿಸಿಕೊಂಡ ಮಹಿಳೆ ದುರ್ಮರಣ
ಅಂಗನವಾಡಿ, ಆಶಾ ನೌಕರರ ಗೌರವಧನ ಹೆಚ್ಚಿಸಿ: ಸಂಸದ ಡಾ.ಕೆ.ಸುಧಾಕರ್‌ ಮನವಿ