Karnataka rains: ಕಾರವಾರ ಭಾರಿ ಮಳೆಗೆ ಜಲಾವೃತವಾದ ಹೊಲಗದ್ದೆಗಳು!

By Kannadaprabha NewsFirst Published Jun 29, 2023, 6:23 AM IST
Highlights

ತಾಲೂಕಿನಾದ್ಯಂತ ಮಂಗಳವಾರ ರಾತ್ರಿಯಿಂದ ಬುಧವಾರ ನಸುಕಿನವರೆಗೆ ಸುರಿದ ಮಳೆಯಿಂದಾಗಿ ತಾಲೂಕಿನ ಚೆಂಡಿಯಾದ ಇಡೂರು ಸಕಲಬಾಗ ಗ್ರಾಮದಲ್ಲಿ ಹೊಲಗದ್ದೆಗಳು ಜಲಾವೃತವಾಗಿದ್ದು, ಕೆಲವು ಮನೆಗಳ ದ್ವೀಪದಂತಾಗಿದೆ.

ಕಾರವಾರ (ಜೂ.29) : ತಾಲೂಕಿನಾದ್ಯಂತ ಮಂಗಳವಾರ ರಾತ್ರಿಯಿಂದ ಬುಧವಾರ ನಸುಕಿನವರೆಗೆ ಸುರಿದ ಮಳೆಯಿಂದಾಗಿ ತಾಲೂಕಿನ ಚೆಂಡಿಯಾದ ಇಡೂರು ಸಕಲಬಾಗ ಗ್ರಾಮದಲ್ಲಿ ಹೊಲಗದ್ದೆಗಳು ಜಲಾವೃತವಾಗಿದ್ದು, ಕೆಲವು ಮನೆಗಳ ದ್ವೀಪದಂತಾಗಿದೆ.

ಈ ಗ್ರಾಮದ ಸುತ್ತಮುತ್ತಲಿನ ನೂರಾರು ಎಕರೆ ಪ್ರದೇಶದಲ್ಲಿ ನೀರು ತುಂಬಿಕೊಂಡಿದ್ದು, ಗ್ರಾಮದಲ್ಲಿ 15ಕ್ಕೂ ಹೆಚ್ಚು ಮನೆಗಳಿದ್ದು, ಕೆಲವು ಮನೆಗಳು ಕೂಡಾ ದ್ವೀಪದಂತಾಗಿವೆ. ಮಳೆ ಹೀಗೆ ಮುಂದುವರೆದಲ್ಲಿ ಕೆಲವು ಮನೆಗಳಿಗೆ ಮುಳುಗಡೆಯಾಗುವ ಆತಂಕ ಎದುರಾಗಿದೆ. ಗುಡ್ಡಬೆಟ್ಟಗಳಿಂದ ಹರಿದು ಬರುವ ಮಳೆ ನೀರು ಸರಾಗವಾಗಿ ಸಮುದ್ರಕ್ಕೆ ಸೇರುವ ನಾಲಾಕ್ಕೆ ಅಡ್ಡಲಾಗಿ ಕದಂಬ ನೌಕಾನೆಲೆಯವರು ತಡೆಗೋಡೆ ನಿರ್ಮಿಸಿದ ಕಾರಣ ಈ ಗ್ರಾಮದ ಸುತ್ತಮುತ್ತಲಿನ ಕೃಷಿ ಭೂಮಿಗಳಲ್ಲಿ ನೀರು ತುಂಬಿಕೊಂಡಿದೆ. ಜಮೀನುಗಳ ಮಧ್ಯೆ ಮನೆಗಳು ಜಲಾವೃತವಾಗುವ ಸಾಧ್ಯತೆಯಿದೆ. ಜಮೀನಿನಲ್ಲಿ ತುಂಬಿರುವ ನೀರಿನಲ್ಲೇ ಜನರು ಸಂಚಾರ ಮಾಡುವಂತಾಗಿದೆ.

ಸಂಭ್ರಮದ 'ಕೋಡಿ ಕಡಿಯುವ; ಕಾರ್ಯ ಸಂಪನ್ನ ಹಳ್ಳದ ನೀರನ್ನು ಸಮುದ್ರಕ್ಕೆ ಹರಿಬಿಡುವ ವಿಶಿಷ್ಟ ಆಚರಣೆ

2008ರಲ್ಲಿ ಇದೇ ರೀತಿ ನೀರು ತುಂಬಿಕೊಂಡು ಮನೆಗಳನ್ನು ಕಳೆದುಕೊಂಡಿದ್ದರು. ಪುನಃ ಪ್ರಸಕ್ತ ವರ್ಷ ಮಳೆಯಿಂದ ಮನೆಗಳ ಗೋಡೆಗಳು ಒದ್ದೆಯಾಗಿ ಕುಸಿಯುವ ಆತಂಕ ಎದುರಾಗಿದೆ. ಒಂದೊಮ್ಮೆ ಭಾರೀ ಮಳೆಯಾಗಿ ನೀರು ತುಂಬಿಕೊಂಡಲ್ಲಿ ಗ್ರಾಮದಿಂದ ತೆರಳಲು ಅನುಕೂಲವಾಗುವಂತೆ ದೋಣಿ ಇಡಲಾಗಿತ್ತು. ಆದರೆ ದುರದೃಷ್ಟವಶಾತ್‌ ಅದು ಕೂಡ ಒಡೆದುಹೋಗಿದೆ.

ಭಾರೀ ಮಳೆಯಾಗಿ ನೀರು ತುಂಬಿ ಜನರು ಪರದಾಡುವ ಮೊದಲು ಜಿಲ್ಲಾಡಳಿತ, ತಾಲೂಕಾ ಆಡಳಿತ ಈ ಗ್ರಾಮದ ಜನರ ಸಮಸ್ಯೆಯನ್ನು ಬಗೆಹರಿಸಬೇಕಿದೆ.

ನೌಕಾನೆಲೆ ಕಾಮಗಾರಿಯಿಂದ ಚೆಂಡಿಯಾ ಗ್ರಾಪಂ ವ್ಯಾಪ್ತಿಯ ಇಡೂರುಸಕಲಬಾಗ ಮನೆಗೆ, ಜಮೀನುಗಳಿಗೆ ನೀರು ನುಗ್ಗುವಂತಾಗಿದೆ. ನೀರು ಸರಾಗವಾಗಿ ಹೋಗುವಂತೆ ಕ್ರಮವಾಗಬೇಕು ಅಥವಾ ಮಳೆಗಾಲ ಮುಗಿಯುವವರೆಗೆ ಸ್ಥಳೀಯರನ್ನು ಬೇರೆಡೆ ಸ್ಥಳಾಂತರ ಮಾಡಬೇಕು.

ಬಾಬು ರಾವ್‌, ಸ್ಥಳೀಯ

ಕಾರವಾರದ ಬೈತ್ಕೋಲ್​ನಲ್ಲಿ ಗುಡ್ಡ ಕುಸಿತದ ಭೀತಿ: ಜನವಸತಿ ಪ್ರದೇಶದತ್ತ ಮಳೆ ನೀರು 

ಚೆಂಡಿಯಾದ ಇಡೂರುಸಕಲಬಾಗ ಗ್ರಾಮಕ್ಕೆ ಭೇಟಿ ನೀಡಿ ಮಾತುಕತೆ ನಡೆಸಲಾಗಿದೆ. ಮಳೆಯಾಗಿ ತೊಂದರೆಯಾದರೆ ಜನರನ್ನು ಸ್ಥಳಾಂತರಿಸಿ ಕಾಳಜಿ ಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಗ್ರಾಮಸ್ಥರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ.

ನಾಗೇಶ ತೆಂಡುಲ್ಕರ್‌, ಪಿಡಿಒ ಚೆಂಡಿಯಾ ಗ್ರಾಪಂ

click me!