ತಾಲೂಕಿನಾದ್ಯಂತ ಗುರುವಾರವೂ ಸಹ ಮಳೆಯ ಅಬ್ಬರ ಮುಂದುವರಿದಿದ್ದು, ಕೆಲವು ಕಡೆ ಮಳೆ ನೀರು ಮನೆಗಳಿಗೆ ನುಗ್ಗಿರುವುದರಿಂದ ಜನರು ತೊಂದರೆ ಅನುಭವಿಸಿದರು.
ಭಟ್ಕಳ (ಜು.7) : ತಾಲೂಕಿನಾದ್ಯಂತ ಗುರುವಾರವೂ ಸಹ ಮಳೆಯ ಅಬ್ಬರ ಮುಂದುವರಿದಿದ್ದು, ಕೆಲವು ಕಡೆ ಮಳೆ ನೀರು ಮನೆಗಳಿಗೆ ನುಗ್ಗಿರುವುದರಿಂದ ಜನರು ತೊಂದರೆ ಅನುಭವಿಸಿದರು.
ತಾಲೂಕಿನಲ್ಲಿ ಗುರುವಾರ ಬೆಳಗ್ಗೆಯ ವರೆಗೆ 198.4 ಮಿಮೀ ಮಳೆಯಾಗಿದ್ದು ಕಳೆದ 3 ದಿನಗಳಲ್ಲಿ ಒಟ್ಟೂ50 ಸೆಮೀಗೂ ಅಧಿಕ ಮಳೆಯಾಗಿದೆ. ವ್ಯಾಪಕ ಮಳೆಗೆ ಚೌತನಿ ಕುದುರೆ ಬೀರಪ್ಪ ಸನಿಹದ ಹೊಳೆ ತುಂಬಿ ತುಳುಕಿ ರಸ್ತೆಯವರೆಗೆ ನೀರು ಬಂದಿತ್ತು.
undefined
ಕಡವಿನಕಟ್ಟೆಡ್ಯಾಂ, ವೆಂಕಟಾಪುರ ಹೊಳೆ ತುಂಬಿ ತುಳುಕುತ್ತಿವೆ. ವ್ಯಾಪಕ ಮಳೆಗೆ ಯಾವುದೇ ಪ್ರದೇಶದಲ್ಲಿ ನೋಡಿದರೂ ನೀರೇ ನೀರು ಎನ್ನುವಂತಾಗಿತ್ತು. ಗುರುವಾರ ಭಾರೀ ಮಳೆಯ ಜೊತೆಗೆ ಗಾಳಿಯೂ ಬೀಸಿದ್ದರಿಂದ ಹಲವು ಕಡೆ ಮರಗಳು ನೆಲಕ್ಕೆ, ವಿದ್ಯುತ್ ಕಂಬ, ಮನೆಗಳ ಮೇಲೆ ಬಿದ್ದು ಹಾನಿಯಾದ ಬಗ್ಗೆ ವರದಿಯಾಗಿದೆ.
Uttara kannada rain: ಕರಾವಳಿಯಲ್ಲಿ ಮುಂದುವರಿದ ಮಳೆ: ವೃದ್ಧೆ ಬಲಿ
ರಸ್ತೆಗೆ ಉರುಳಿದ ಮರ:
ರಸ್ತೆಯ ಮೇಲೆ ಬಿದ್ದ ಮರವನ್ನು ಸ್ಥಳೀಯ ಆಡಳಿತದವರು ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು. ಪಟ್ಟಣದ ಮಣ್ಕುಳಿ ಭಾಗದಲ್ಲಿ ಐಆರ್‌ಬಿಯವರು ಚತುಷ್ಪಥ ಹೆದ್ದಾರಿ ನಿರ್ಮಿಸುವಾಗ ಸಮರ್ಪಕ ಚರಂಡಿ ನಿರ್ಮಿಸದ ಹಿನ್ನೆಲೆಯಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿ ಅವಾಂತರವೇ ಸೃಷ್ಟಿಯಾಯಿತು.
ಮಣ್ಕುಳಿಯಲ್ಲಿ ಪುರಸಭೆಯವರು ಜೆಸಿಬಿ ಸಹಾಯದಿಂದ ಗುರುವಾರ ಮಳೆ ನೀರು ಹರಿದು ಹೋಗಲು ಚರಂಡಿ ಬಿಡಿಸಿಕೊಡುವ ಕೆಲಸ ಮಾಡಿದ್ದರೂ ಈ ಕೆಲಸ ಮೊದಲೇ ಮಾಡಿದ್ದರೆ ಮನೆಗಳಿಗೆ ನೀರು ನುಗ್ಗುವುದಾದರೂ ತಪ್ಪುತ್ತಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಅತಿಕ್ರಮಣ ಅವಾಂತರ:
ಭಟ್ಕಳ ಪಟ್ಟಣದಲ್ಲಿ ಈ ಹಿಂದೆ ಎಷ್ಟೇ ಮಳೆ ಬಂದರೂ ಯಾರಿಗೂ ಯಾವುದೇ ಸಮಸ್ಯೆ ಇರಲಿಲ್ಲ. ಯಾಕೆಂದರೆ ಮಳೆ ನೀರು ಹರಿದು ಹೋಗಲು ಸರಿಯಾದ ಗಟಾರ ಇತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಗಟಾರ ಮುಚ್ಚಿ ಹೋಗಿರುವುದು ಮತ್ತು ಕೆಲವೆಡೆ ಅತಿಕ್ರಮಣ ಆಗಿರುವುದರಿಂದ ಮಳೆ ನೀರು ಹೋಗಲು ಜಾಗವೇ ಇಲ್ಲದೇ ನೀರು ಮನೆಗಳಿಗೆ ನುಗ್ಗುವಂತಾಗಿದೆ.
ಗುರುವಾರ ಬೆಳಗ್ಗೆ ಪಟ್ಟಣದ ಮುಖ್ಯ ರಸ್ತೆ ಸೇರಿದಂತೆ ವಿವಿಧ ರಸ್ತೆ ಮಳೆ ನೀರಿನಿಂದ ಜಲಾವೃತಗೊಂಡು ಸಂಚಾರಕ್ಕೆ ತೊಂದರೆ ಉಂಟಾಯಿತು. ಮುರ್ಡೇಶ್ವರದಲ್ಲೂ ಮಳೆ ನೀರು ಮನೆಗಳಿಗೆ ನುಗ್ಗಿದ್ದು ಜನರು ತೊಂದರೆ ಪಡುವಂತಾಯಿತು. ಪೊಲೀಸ್ ಅಧಿಕಾರಿಯೊಬ್ಬರ ಮನೆಗೂ ಕೂಡ ನೀರು ನುಗ್ಗಿದೆ.
ಮುರ್ಡೇಶ್ವರದ ಸೋನಾರಕೇರಿಯ ರಸ್ತೆ ಮಳೆ ನೀರು ತುಂಬಿ ಗುರುವಾರ ಹೊಳೆಯಾಗಿತ್ತು. ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದೇ ಇರುವುದರಿಂದ ಇಷ್ಟೆಲ್ಲಾ ರಾದ್ದಾಂತಕ್ಕೆ ಕಾರಣವಾಗಿದೆ.
ವ್ಯಾಪಕ ಮಳೆಗೆ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಬಿತ್ತನೆ ಮಾಡಿದ ತಗ್ಗು ಪ್ರದೇಶದ ಗದ್ದೆಗಳು ಜಲಾವೃತಗೊಂಡಿರುವುದು ರೈತರ ಚಿಂತೆಗೆ ಕಾರಣವಾಗಿದೆ. ಹೊಳೆ ಸನಿಹದ ಅಡಕೆ ಮತ್ತು ತೆಂಗಿನ ತೋಟಗಳಿಗೂ ನೀರು ನುಗ್ಗಿದ ಬಗ್ಗೆಯೂ ವರದಿಯಾಗಿದೆ.
ಉತ್ತರ ಕನ್ನಡದಲ್ಲಿ ಭಾರೀ ಮಳೆ: ಹೊನ್ನಾವರದಲ್ಲಿ ಪ್ರವಾಹ ಪರಿಸ್ಥಿತಿ
ಮಲ್ಲಾರಿಯಲ್ಲಿ ಸೇತುವೆ ಕುಸಿತ
ಭಾರೀ ಮಳೆಗೆ ಬೇಂಗ್ರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಾರಿಯ ಸೇತುವೆ ಮುರಿದು ಬಿದ್ದ ಪರಿಣಾಮ ಜನರ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಆದರೆ ಧರ್ಮಸ್ಥಳ ವಿಪತ್ತು ನಿರ್ವಹಣಾ ದಳದ ಸದಸ್ಯರು ಸ್ಥಳೀಯ ಸಹಕಾರದಿಂದ ಜನರ ಸಂಚಾರಕ್ಕೆ ಅನುಕೂಲವಾಗಲು ಕಾಲು ಸೇತುವೆ ನಿರ್ಮಾಣ ಮಾಡಿ ಮಾನವೀಯತೆ ಮೆರೆದಿದ್ದಾರೆ.