Hijab Row: ಶಿವಮೊಗ್ಗ,  ನಿಷೇಧಾಜ್ಞೆ ನಡುವೆಯೂ ಪಿಎಫ್‌ಐ ದಿನಾಚರಣೆ!

By Kannadaprabha News  |  First Published Feb 18, 2022, 2:51 AM IST

* 2ನೇ ದಿನವೂ ಕಾಲೇಜಿಗೆ ಹಿಜಾಬ್‌ಧಾರಿಗಳ ಬಹಿಷ್ಕಾರ

* 1560ಕ್ಕೂ ಅಧಿಕ ಮಂದಿ ತರಗತಿಗೆ ಗೈರು

* 23ಕ್ಕೂ ಅಧಿಕ ಜಿಲ್ಲೆಗಳಲ್ಲಿ ಗೊಂದಲ ತೀವ್ರ


 ಶಿವಮೊಗ್ಗ(ಫೆ. 18)  ನಗರದಾದ್ಯಂತ (Shivamogga) ಸೆಕ್ಷನ್‌ 144 ಅಡಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಗುರುವಾರ ನಗರದಾದ್ಯಂತ 10ಕ್ಕೂ ಹೆಚ್ಚು ಕಡೆ ಪಿಎಫ್‌ಐ ಧ್ವಜ ಹಾರಿಸಿ ಸಂಸ್ಥಾಪನಾ ದಿನ ಆಚರಣೆ ಮಾಗಿದೆ. . ನಗರದ ಲಷ್ಕರ್‌ ಮೊಹಲ್ಲಾದಲ್ಲಿರುವ ಮೌಲಾನ ಆಜಾದ್‌ ಆಂಗ್ಲ ಮಾದರಿ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೇಟ್‌ ಮೇಲೆ ಪಾಪ್ಯುಲರ್‌ ಫ್ರಂಟ್‌ ಡೇ (ರ್ಫೀ) ಆಚರಣೆ ಸಂಬಂಧದ ಪೋಸ್ಟರ್‌ ಹಾಕಲಾಗಿತ್ತು, ಅದನ್ನು ಪೊಲೀಸರು (Karnataka Police) ತೆರವುಗೊಳಿಸಿದರು. ಇದರ ನಡುವೆಯೂ ಶಿವಮೊಗ್ಗ ಹಾಗೂ ಭದ್ರಾವತಿಯಲ್ಲಿ ಒಟ್ಟು 10 ಕಡೆ ಪಿಎಫ್‌ ಡೇ ಆಚರಣೆ ಮಾಡಲಾಗಿದೆ.

ಶಿವಮೊಗ್ಗದ ಇಲಿಯಾಸ್‌ ನಗರದ ಆಯೂಬ್‌ ಕ್ಯಾಂಟೀನ್‌, ಟಿಪ್ಪುನಗರ, ಆರ್‌.ಎಂ.ಎಲ್‌ ನಗರ ಆಟೋ ಸ್ಟಾಂಡ್‌, ಕೆ.ಆರ್‌.ಪುರಂ ಜೀ ಕಾರ್ನರ್‌, ಶಾಂತಿನಗರದ ನೂರ್‌ ಎ ಮಸೀದಿ ಹಾಗೂ ಬೈಪಾಸ್‌ ಮಸೀದಿ, ಮಾರ್ನಾಮಿ ಬೈಲು ಮದನಿ ಮಸೀದಿ ಹಾಗೂ ಭದ್ರಾವತಿ ನಗರದ ಸೀಗೆಬಾಗಿಯಲ್ಲಿ ನಿಷೇಧಾಜ್ಞೆ ಉಲ್ಲಂಘನೆ ಮಾಡಿ ಸಂಸ್ಥಾಪನಾ ದಿನಾಚರಣೆ ಮಾಡಲಾಗಿದೆ.

Tap to resize

Latest Videos

ಮುಂದುವರಿದ ವಿವಾದ: 
ರಾಜ್ಯಾದ್ಯಂತ ಶಾಲೆ ಕಾಲೇಜುಗಳಲ್ಲಿ ನಡೆಯುತ್ತಿರುವ ಹಿಜಾಬ್‌ ವಿವಾದ ಮತ್ತಷ್ಟುಕಗ್ಗಂಟಾಗಿದೆ. ಕಾಲೇಜು ಪುನರಾರಂಭವಾದ ಎರಡನೇ ದಿನವಾದ ಗುರುವಾರವೂ ಬಹುತೇಕ ಜಿಲ್ಲೆಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ತರಗತಿ ಪ್ರವೇಶಕ್ಕೆ ಪಟ್ಟು ಹಿಡಿದಿದ್ದು ಶಿಕ್ಷಣಕ್ಕಿಂತ ಧರ್ಮವೇ ಮುಖ್ಯ ಎಂದು ಘೋಷಣೆಗಳನ್ನು ಕೂಗಿದ್ದಾರೆ. ಈ ಹಿನ್ನೆಲೆಯಲ್ಲಿ ತರಗತಿ, ಪರೀಕ್ಷೆಗಳನ್ನೂ ಬಹಿಷ್ಕರಿಸುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಲೇ ಸಾಗಿದೆ.

ಒಟ್ಟಾರೆ 23 ಜಿಲ್ಲೆಗಳ ​​​​85ಕ್ಕೂ ಅಧಿಕ ಶಾಲಾ ಕಾಲೇಜುಗಳಲ್ಲಿ ಹಿಜಾಬ್‌ ಗೊಂದಲ ಮುಂದುವರಿದಿದ್ದು 1560ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತರಗತಿಗಳಿಗೆ ಗೈರಾಗಿದ್ದಾರೆ. ಇನ್ನು 14 ಜಿಲ್ಲೆಗಳ 35ಕ್ಕೂ ಕಡೆ ಪ್ರತಿಭಟನೆಗಳು ನಡೆದಿದ್ದು ಕೆಲವೆಡೆ ಪರಿಸ್ಥಿತಿ ತಾರಕಕ್ಕೆ ಹೋಗಿರುವ ಘಟನೆಗಳೂ ನಡೆದಿವೆ. ಮುಂಜಾಗ್ರತಾ ಕ್ರಮವಾಗಿ 5 ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇನ್ನು 4 ಕಾಲೇಜುಗಳಲ್ಲಿ ಭೌತಿಕ ತರಗತಿಗಳನ್ನು ರದ್ದುಪಡಿಸಿ ಆನ್‌ಲೈನ್‌ ತರಗತಿಗಳನ್ನು ಪ್ರಾರಂಭಿಸಲಾಗಿದೆ.

ಎಷ್ಟೇ ಮನವೊಲಿಕೆಗೆ ಪ್ರಯತ್ನಿಸಿದರೂ ಹಿಜಾಬ್‌ ಪರ ವಿದ್ಯಾರ್ಥಿನಿಯರು ಹಿಜಾಬ್‌ ತೆಗೆದು ತರಗತಿ ಪ್ರವೇಶಿಸಲು ನಿರಾಕರಿಸುತ್ತಿರುವುದರಿಂದ ಅವರ ಮನವೊಲಿಸುವಲ್ಲಿ ಉಪನ್ಯಾಸಕರು, ಅಧಿಕಾರಿ ವರ್ಗ ಮತ್ತು ಪೊಲೀಸರು ಹೈರಾಣಾಗಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆಗಳಿಗೆ ಪೋಷಕರೊಂದಿಗೆ ವಿವಿಧ ರಾಜಕೀಯ ಪಕ್ಷಗಳು, ಸಂಘಟನೆಗಳ ಕಾರ್ಯಕರ್ತರೂ ಸಾಥ್‌ ನೀಡುತ್ತಿರುವ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಕಾಲೇಜುಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿದೆ.

ಎಲ್ಲಿಗೆ ಬಂದಿ ನಿಂತಿದೆ ಹಿಜಾಬ್ ವಿವಾದ

ಶಿವಮೊಗ್ಗ, ಹಾಸನ, ಬೆಳಗಾವಿ, ಯಾದಗಿರಿ, ರಾಯಚೂರು, ಚಿತ್ರದುರ್ಗ, ತುಮಕೂರು, ಬಳ್ಳಾರಿ ಸೇರಿದಂತೆ 14 ಜಿಲ್ಲೆಗಳ ವಿವಿಧ ಕಾಲೇಜುಗಳಲ್ಲಿ ಹಿಜಾಬ್‌ಪರ ಪ್ರತಿಭಟನೆಗಳಾಗಿದ್ದು ಬಳ್ಳಾರಿ, ಹುಬ್ಬಳ್ಳಿಗಳಲ್ಲಿ ಪೊಲೀಸರಿಗೇ ಸವಾಲು ಹಾಕಿದ ಪ್ರಸಂಗಗಳು ನಡೆದಿವೆ. ಬೆಳಗಾವಿಯ ಪ್ಯಾರಾ ಮೆಡಿಕಲ್‌ ಕಾಲೇಜಿನ ಹೊರಗಡೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು ಈ ವೇಳೆ ಅಲ್ಲಾ ಹು ಅಕ್ಬರ್‌ ಎಂದು ಘೋಷಣೆ ಕೂಗಿದ 6 ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಗೋಕಾಕದ ಕಾಲೇಜಿನಲ್ಲಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಗುಂಪುಗಳ ನಡುವೆ ಹೊಯ್‌ ಕೈ ಏರ್ಪಟ್ಟಿದ್ದು ಪೊಲೀಸರು ಗುಂಪನ್ನು ಚದುರಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕಾಲೇಜೊಂದರಲ್ಲಿ ವಿ ವಾಂಟ್‌ ಜಸ್ಟೀಸ್‌ ಎಂದು ಕೂಗಿದ ಹಿಜಾಬ್‌ಧಾರಿ ವಿದ್ಯಾರ್ಥಿನಿಯರಿಗೆ ವಿರುದ್ಧವಾಗಿ ಜೈ ಶ್ರೀರಾಮ ಘೋಷಣೆ ಸಹ ಕೇಳಿ ಬಂದಿದೆ.

ಶಿವಮೊಗ್ಗ, ಚಿಕ್ಕಮಗಳೂರುಗಳಲ್ಲಿ ಪೊಲೀಸರು ಮತ್ತು ವಿದ್ಯಾರ್ಥಿನಿಯರ ನಡುವೆ ವಾಗ್ವಾದ ನಡೆದಿದೆ. ಬಳ್ಳಾರಿಯಲ್ಲಿ ಪ್ರತಿಭಟನಾ ನಿರತರನ್ನು ನಿಯಂತ್ರಿಸುತ್ತಿದ್ದ ಪೊಲೀಸ್‌ ಅಧಿಕಾರಿಯೊಬ್ಬರನ್ನು ಅವಾಚ್ಯ ಪದಗಳಿಂದ ನಿಂದಿಸಿರುವ ಘಟನೆಯೂ ನಡೆದಿದೆ. ಇನ್ನು ಕೋಲಾರ, ಯಾದಗಿರಿಗಳಲ್ಲಿ ಹಿಜಾಬ್‌ ಪರ ವಿದ್ಯಾರ್ಥಿನಿಯರು ಹಿಂದೂ ವಿದ್ಯಾರ್ಥಿಗಳು ಕುಂಕುಮ ತೆಗೆದು ಕ್ಲಾಸಿಗೆ ಬರಲಿ ಒತ್ತಾಯ ಮಾಡಿದ್ದಾರೆ.

ಇದೇ ವೇಳೆ ಕೊಪ್ಪಳ ನಗರದ ಸರ್ಕಾರಿ ಪಿಯು ಕಾಲೇಜು, ರಾಮನಗರ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸಮಸ್ಯೆ ಶಾಂತಿಯುತವಾಗಿ ಇತ್ಯರ್ಥವಾಗಿದ್ದರೆ, ಹಿಜಾಬ್‌ ಗಲಾಟೆ ಪ್ರಾರಂಭವಾದ ಉಡುಪಿ ಪದವಿ ಪೂರ್ವ ಕಾಲೇಜಿನಲ್ಲಿ ಸಭೆಯ ಬಳಿಕವೂ ಹಿಜಾಬ್‌ ಪರ ವಿದ್ಯಾರ್ಥಿನಿಯರು ಒಮ್ಮತಕ್ಕೆ ಬಂದಿಲ್ಲ. ಏತನ್ಮಧ್ಯೆ ರಾಯಚೂರಿನ ಕಾಲೇಜೊಂದರಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ನಮಗೆ ಹಿಜಾಬ್‌ಗಿಂತ ಶಿಕ್ಷಣವೇ ಮುಖ್ಯ, ಅದಕ್ಕಾಗಿ ನಾನು ಹಿಜಾಬ್‌ ತೆಗೆದು ಕ್ಲಾಸ್‌ಗೆ ತೆರಳುತ್ತೇನೆ ಎಂದು ತಿಳಿಸಿ ತರಗತಿಗೆ ಹಾಜರಾಗಿದ್ದಾಳೆ.

 

 

click me!