Mailaralingeshwara Fair: ನಿಷೇಧದ ನಡುವೆಯೂ ಡೆಂಕಣ ಮರಡಿಗೆ ರಾತ್ರೋರಾತ್ರಿ ಭಕ್ತರ ದಂಡು..!

Kannadaprabha News   | Asianet News
Published : Feb 17, 2022, 12:59 PM IST
Mailaralingeshwara Fair: ನಿಷೇಧದ ನಡುವೆಯೂ ಡೆಂಕಣ ಮರಡಿಗೆ ರಾತ್ರೋರಾತ್ರಿ ಭಕ್ತರ ದಂಡು..!

ಸಾರಾಂಶ

*   ಪಾದಯಾತ್ರೆ ಮೂಲಕ ಮೈಲಾರದ ಡೆಂಕಣ ಮರಡಿಗೆ ತೆರಳಿದ ಭಕ್ತರು *   ಭಾರತ ಹುಣ್ಣಿಮೆ ದಿನ ಹುಂಡಿಗಳಿಗೆ ವಿಶೇಷ ಪೂಜೆ ಸಲ್ಲಿಸಿದ ವೆಂಕಪ್ಪಯ್ಯ ಒಡೆಯರ್‌ *   ಸರ್ಕಾರದ ನಿರ್ಬಂಧದ ನಡುವೆಯೂ 10 ಸಾವಿರ ಜನರು ಆಗಮನ

ಹೂವಿನಹಡಗಲಿ(ಫೆ.17):  ಕೋವಿಡ್‌(Covid-19) ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮೈಲಾರಲಿಂಗೇಶ್ವರ ಜಾತ್ರೆಗೆ(Mailaralingeshwara Fair) ಭಕ್ತರಿಗೆ ನಿಷೇಧ ವಿಧಿಸಿದ್ದು, ದೇವಸ್ಥಾನದಲ್ಲಿ(Temple) ದರ್ಶನ ವ್ಯವಸ್ಥೆ ಕೂಡ ಬಂದ್‌ ಮಾಡಲಾಗಿದೆ. ಆದರೂ ಸಹ ಭಕ್ತರು(Devotees) ರಾತ್ರೋ ರಾತ್ರಿ ಪಾದಯಾತ್ರೆ ಮೂಲಕ ಮೈಲಾರದ ಡೆಂಕಣ ಮರಡಿಗೆ ತೆರಳಿದ್ದಾರೆ.

ಭಕ್ತರ ನಿಷೇಧದ ನಡುವೆ ದೇವಸ್ಥಾನದಲ್ಲಿ ಭಾರತ ಹುಣ್ಣಿಮೆ ದಿನವಾದ ಬುಧವಾರ ಧ್ವಜಾರೋಹಣ, ಹುಂಡಿಗಳಿಗೆ ವಿಶೇಷ ಪೂಜೆ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳನ್ನು ಸರಳವಾಗಿ ಆಚರಿಸಲಾಯಿತು. ಸರ್ಕಾರದ ನಿರ್ಬಂಧದ(Restriction) ನಡುವೆಯೂ ಸುಮಾರು 10 ಸಾವಿರ ಜನರು ಆಗಮಿಸಿದ್ದರೆಂದು ಹೇಳಲಾಗಿದೆ.

3ನೇ ಅಲೆ ಭೀತಿ: ಯಾದಗಿರಿಯ ಮೈಲಾಪೂರಕ್ಕೆ ಭಕ್ತರ ಪ್ರವೇಶಕ್ಕೆ ನಿಷೇಧ

ಬೆಳಗ್ಗೆ ದೇವಸ್ಥಾನದಲ್ಲಿರುವ ಮೈಲಾರಲಿಂಗೇಶ್ವರ ಉದ್ಭವ ಲಿಂಗುವಿಗೆ ಅಭಿಷೇಕ ಹಾಗೂ ಅರ್ಚನೆ ಪೂಜೆಯನ್ನು ಮೌನವಾಗಿ ನೆರವೇರಿಸಲಾಯಿತು. ಬಳಿಕ ದೇವಸ್ಥಾನದ ಆವರಣದಲ್ಲಿ ದೇವಸ್ಥಾನದ ಬಾಬುದಾರರು, ಅಧಿಕಾರಿಗಳು ಮತ್ತು ಮೈಲಾರ ಭಕ್ತರ ಸಮ್ಮುಖದಲ್ಲಿ ದೇವಸ್ಥಾನದ ವಂಶ ಪಾರಂಪರ್ಯ ಧರ್ಮಕರ್ತ ಗುರು ವೆಂಕಪ್ಪಯ್ಯ ಒಡೆಯರ್‌, ಧ್ವಜಕ್ಕೆ ಪೂಜೆ ಸಲ್ಲಿಸಿದ ಬಳಿಕ ಧ್ವಜಾರೋಹಣ ನೆರವೇರಿಸಿದರು. ದೇವಸ್ಥಾನದ ಅಭಿವೃದ್ಧಿಗೆ ಪೂರಕವಾಗಿ ಹೆಚ್ಚು ಆದಾಯ ನಿರೀಕ್ಷೆ ಇಟ್ಟುಕೊಂಡು ಆವರಣದಲ್ಲಿ ಹುಂಡಿಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಆ ಹುಂಡಿಗಳನ್ನು ವಿವಿಧ ಕಡೆಗಳಲ್ಲಿ ಅಳವಡಿಸಲಾಯಿತು.

ಮೈಲಾರಲಿಂಗೇಶ್ವರನು 11 ದಿನಗಳ ಕಾಲ ಡೆಂಕಣ ಮರಡಿಯಲ್ಲಿ ಮಲ್ಲಾಸುರ, ಮಣಿಕಾಸುರರೊಂದಿಗೆ ಯುದ್ಧ ಮಾಡುತ್ತಿದ್ದಾರೆ. ಆದರಿಂದ ದೇವಸ್ಥಾನದಲ್ಲಿ ನೈವೈದ್ಯ, ಗಂಟೆನಾದ, ಮಂಗಳಾರುತಿ ಪದ್ಧತಿ ಇರುವುದಿಲ್ಲ ಎನ್ನುತ್ತಾರೆ ದೇವಸ್ಥಾನದ ವಂಶ ಪಾರಂಪರ್ಯ ಧರ್ಮಕರ್ತ ಗುರು ವೆಂಕಪ್ಪಯ್ಯ ಒಡೆಯರ್‌.

ವಿವಿಧ ಜಿಲ್ಲೆಗಳ ತಾಲೂಕುಗಳಿಂದ ಭಕ್ತರು ಮಂಗಳವಾರ ರಾತ್ರಿಯೇ ಪಾದಯಾತ್ರೆ(Padayatra) ಮೂಲಕ ಮೈಲಾರಕ್ಕೆ ತೆರಳಿದ್ದಾರೆ. ದೇವಸ್ಥಾನ ಬಂದ್‌ ಮಾಡಿರುವ ಹಿನ್ನೆಲೆಯಲ್ಲಿ ಎಲ್ಲ ಭಕ್ತರು ಕಾರ್ಣಿಕ ಸ್ಥಳ ಡೆಂಕಣ ಮರಡಿಗೆ ಹೋಗಿ ತಮ್ಮ ಹರಕೆಗಳಾದ ದೋಣಿ ಸೇವೆ, ದೀವಟಿಕೆ ಮತ್ತು ಕುದುರೆ ಸೇವೆಯನ್ನು ಸಲ್ಲಿಸಿದ್ದಾರೆ.

ಮೈಲಾರಕ್ಕೆ ಬಂದಿರುವ ಭಕ್ತರಿಗೆ ಹಣ್ಣು, ಕಾಯಿ ಇನ್ನಿತರ ಧಾರ್ಮಿಕ ಕಾರ್ಯಕ್ಕೆ, ಅಗತ್ಯವಿರುವ ವಸ್ತುಗಳ ಮಾರಾಟಕ್ಕೆ ಡೆಂಕಣ ಮರಡಿಯಲ್ಲೇ ವ್ಯವಸ್ಥೆ ಮಾಡಿದ್ದಾರೆ. 11 ದಿನಗಳ ಕಾಲ ವ್ರತಾಚರಣೆಯಲ್ಲಿರುವ ಕಾರ್ಣಿಕ ನುಡಿಯುವ ಗೊರವಯ್ಯ ರಾಮಣ್ಣ ಹಾಗೂ ಐತಿಹಾಸಿಕ ಬಿಲ್ಲಿನ ದರ್ಶನವನ್ನು ಭಕ್ತರು ಪಡೆದರು. ಪಾದಯಾತ್ರೆ ಹೊರತುಪಡಿಸಿದಂತೆ ಉಳಿದ ಭಕ್ತರು ವಾಹನಗಳಲ್ಲಿ ಮೈಲಾರಕ್ಕೆ ಬಂದಿದ್ದಾರೆ. ಆದರೆ ಮೈಲಾರದೊಳಗೆ ಯಾವುದೇ ವಾಹನಗಳಿಗೆ ಅವಕಾಶ ಇಲ್ಲದ ಕಾರಣ, ಭಕ್ತರು 2-3 ಕಿಮೀ ದೂರದಲ್ಲೇ ವಾಹನ ನಿಲುಗಡೆ ಮಾಡಿ ಪಾದಯಾತ್ರೆ ಮೂಲಕವೇ ಡೆಂಕಣ ಮರಡಿಗೆ ಪೂಜೆ ಸಲ್ಲಿಸಿ ತಮ್ಮ ಹರಕೆಗಳನ್ನು ತೀರಿಸಿದ್ದಾರೆ.

ಕಾರ್ಣಿಕಕ್ಕೆ ಮುನ್ನವೇ ಕಳಚಿ ಬಿದ್ದ ತ್ರಿಶೂಲ, ಮೈಲಾರ ಲಿಂಗೇಶ್ವರ ಜಾತ್ರೆಯಲ್ಲಿ ಅಪಶಕುನ.?

ಧಾರ್ಮಿಕ ಕಾರ್ಯದಲ್ಲಿ ದೇವಸ್ಥಾನದ ವಂಶ ಪಾರಂಪರ್ಯ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್‌, ಅರ್ಚಕ ಪ್ರಮೋದ ಭಟ್‌, ಮುಜರಾಯಿ ಇಲಾಖೆ ಸಹಾಯಕ ಆಯುಕ್ತ ಪ್ರಕಾಶ ರಾವ್‌, ದೇವಸ್ಥಾನದ ಬಾಬುದಾರರು ಹಾಗೂ ಮೈಲಾರದ ಗ್ರಾಮಸ್ಥರು ಮಾತ್ರ ಭಾಗವಹಿಸಿದ್ದರು.

ಮೈಲಾರಲಿಂಗೇಶ್ವರ ಜಾತ್ರೆ: ಕುಬೇರನ ದಿಕ್ಕಿನತ್ತ ಹರಿದ ಹಾಲು

ಹೂವಿನಹಡಗಲಿ: ನಾಡಿನ ಐತಿಹಾಸಿಕ ಮೈಲಾರಲಿಂಗೇಶ್ವರ ದೇವಸ್ಥಾನದ(Mylara Lingeshwara Temple) ಆವರಣದಲ್ಲಿ ಫೆ. 8 ರಥ ಸಪ್ತಮಿಯಂದು ಹಾಲು ಉಕ್ಕಿಸುವ ಮೂಲಕ ಫೆ.08 ರಂದು ಜಾತ್ರೆಗೆ ಚಾಲನೆ ನೀಡಲಾಗಿತ್ತು. ಈ ಬಾರಿ ದೇವಸ್ಥಾನದ ಆವರಣದಲ್ಲಿ ಕಾಯಿಸಿದ ಹಾಲು ಕುಬೇರನ ದಿಕ್ಕಿನೆಡೆ ಹರಿದಿದೆ. ಕಾಯ್ದ ಹಾಲು ಯಾವ ದಿಕ್ಕಿನ ಕಡೆಗೆ ಹರಿಯುತ್ತದೆಯೋ, ಆ ದಿಕ್ಕಿನ ಪ್ರದೇಶದಲ್ಲಿ ಮಳೆ ಬೆಳೆ ಹುಲುಸಾಗಿ ಬೆಳೆಯುತ್ತಿದೆ ಎಂಬ ನಂಬಿಕೆ ಭಕ್ತರದ್ದು, ಕಳೆದ ಬಾರಿ ಹಾಲು ಉತ್ತರ ದಿಕ್ಕಿನ ಕಡೆಗೆ ಹರಿದಿತ್ತು. ಈ ಬಾರಿ ಕುಬೇರ ದಿಕ್ಕಿಗೆ ಹರಿದಿತ್ತು. 
 

PREV
Read more Articles on
click me!

Recommended Stories

ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌
ದಲಿತ ಸಮುದಾಯಕ್ಕೆ ಸಿಎಂ ಹುದ್ದೆ ಕೊಡಿ ಎಂದು ಸಮಯ ಬಂದಾಗ ಕೇಳುವೆ: ಸಚಿವ ಮಹದೇವಪ್ಪ