Child marriage And HC : ಮದುವೆ ತಪ್ಪಿಸಿಕೊಳ್ಳಲು ಮನೆ ಬಿಟ್ಟಿದ್ದ ಬಾಲಕಿಗೆ ಹೈಕೋರ್ಟ್ ರಕ್ಷಣೆ

Published : Nov 30, 2021, 05:37 PM ISTUpdated : Nov 30, 2021, 05:44 PM IST
Child marriage And HC : ಮದುವೆ ತಪ್ಪಿಸಿಕೊಳ್ಳಲು ಮನೆ ಬಿಟ್ಟಿದ್ದ ಬಾಲಕಿಗೆ ಹೈಕೋರ್ಟ್ ರಕ್ಷಣೆ

ಸಾರಾಂಶ

* ಬಾಲ್ಯವಿವಾಹ ತಡೆ ಸಂಬಂಧ ಮಹತ್ವದ ಆದೇಶ ನೀಡಿದ ಹೈಕೋರ್ಟ್ *ಬಾಲಕಿಯ ಹಕ್ಕು ರಕ್ಷಣೆ ಮಾಡಿದ ಧಾರವಾಡ ಪೀಠ * ಮದುವೆಗೆ ಮನೆಯವರು ಮುಂದಾಗಿದ್ದಕ್ಕೆ ಗೋವಾಕ್ಕೆ ತೆರಳಿದ್ದ ಬಾಲಕಿ * ಬಾಲಕಿ ರಕ್ಷಣೆ ಮಾಡಲು ಸೂಚನೆ

ಧಾರವಾಡ (ನ.30) ಬಾಲಕಿಗೆ ಮದುವೆ (Child Marriage) ಮಾಡಲು ಮುಂದಾಗಿದ್ದ ಪೋಷಕರಿಗೆ ಬುದ್ಧಿವಾದ ಹೇಳಿರುವ ಧಾರವಾಡ (Karnataka Highcourt) ಹೈಕೋರ್ಟ್, ಬಾಲಕಿಯ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಗದಗದ ಬಾಲಕಿಯರ ಬಾಲ ಮಂದಿರಕ್ಕೆ ನಿರ್ದೇಶನ ನೀಡಿದೆ.

ಶಾಂತವ್ವ ಲಮಾಣಿ ಎಂಬುವವರು, ತಮ್ಮ ಪುತ್ರಿಯನ್ನು ಅಪಹರಿಸಲಾಗಿದೆ ಎಂದು ಗದಗ (Gadag) ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಪೊಲೀಸರು ತಮ್ಮ ಮಗಳನ್ನು ಪತ್ತೆ ಹಚ್ಚಿಕೊಡಲು ವಿಳಂಬ ಮಾಡುತ್ತಿದ್ದಾರೆ ಎಂದು ಶಾಂತವ್ವ ಹೈಕೋರ್ಟ್‌ನಲ್ಲಿ ಹೆಬಿಯಸ್ ಕಾರ್ಪಸ್ (Habeas corpus) ಸಲ್ಲಿಸಿದ್ದರು.

ಹೀಗಾಗಿ ಪೊಲೀಸರು ಸೂಕ್ತ ತನಿಖೆ ನಡೆಸಿ ಶಾಂತವ್ವ ಅವರ ಪುತ್ರಿಯನ್ನು ಪತ್ತೆ ಮಾಡಿ ಹೈಕೋರ್ಟ್ ವಿಭಾಗೀಯ ಪೀಠದ ಎದುರು  ಹಾಜರುಪಡಿಸಿದ್ದರು. ಈ ವೇಳೆ ನ್ಯಾಯಾಲಯಕ್ಕೆ ಹಾಜರಾದ ಬಾಲಕಿ, ನಾನು ಅಪ್ರಾಪ್ತಳಾಗಿದ್ದು, ಪೋಷಕರು ನನ್ನ ಮದುವೆ ಮಾಡಲು ಬಯಸಿದ್ದಾರೆ. ಇದರಿಂದ ತಪ್ಪಿಸಿಕೊಳ್ಳಲು ಸ್ವ ಇಚ್ಛೆಯಿಂದ ಗೋವಾಕ್ಕೆ(Goa) ತೆರಳಿ ಅಲ್ಲಿ ನನ್ನ ಸಹೋದರನ ಜೊತೆಗಿದ್ದೆ. ನನಗೆ ಶಿಕ್ಷಣ ಮುಂದುವರಿಸುವ ಆಸೆ ಇದೆ. ಆದ್ದರಿಂದ ನನ್ನ ಪಾಲಕರೊಂದಿಗೆ ನನ್ನನ್ನು ಕಳುಹಿಸದೇ ಬಾಲ ಮಂದಿರಕ್ಕೆ ಕಳುಹಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಳು.

ಇದನ್ನು ಪರಿಗಣಿಸಿದ ಹೈಕೋರ್ಟ್, ಆಕೆಯ ಭದ್ರತೆ ಮತ್ತು ಕಲ್ಯಾಣದ ದೃಷ್ಟಿಯಿಂದ ಗದಗನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ ಬಾಲಕಿಯರ ಬಾಲ ಮಂದಿರಕ್ಕೆ ಕಳುಹಿಸುವಂತೆ ಪೊಲೀಸರಿಗೆ ಸೂಚಿಸಿತು. ಅಲ್ಲದೇ ಬಾಲಕಿಯು ಪ್ರೌಢಾವಸ್ಥೆ ತಲುಪುವವರೆಗೆ ಅಥವಾ ಆಕೆಯು ತನ್ನ ಪೋಷಕರ ಜೊತೆ ತೆರಳುವ ಮನಸ್ಸು ಮಾಡುವವರೆಗೆ ಆಕೆಯನ್ನು ಬಾಲ ಮಂದಿರದಲ್ಲೇ ಇಟ್ಟುಕೊಳ್ಳಬೇಕು ಜೊತೆಗೆ ಆಕೆ ಶಿಕ್ಷಣ ಮುಂದವರಿಸುವ ಬಗ್ಗೆ ಖಾತ್ರಿಪಡಿಸುವಂತೆ ಬಾಲಮಂದಿರಕ್ಕೆ ಹೈಕೋರ್ಟ್ ಸೂಚಿಸಿದೆ. 

ಕೊರೋನಾ ಕಾಲದಲ್ಲಿ ಹೆಚ್ಚಿದ ಬಾಲ್ಯವಿವಾಹ

ಒಂದು ವೇಳೆ ಬಾಲಕಿಯು ತಮ್ಮ ಪೋಷಕರ ಜೊತೆ ತೆರಳಲು ಬಯಸಿದರೆ ಆಕೆಯ ರಕ್ಷಣೆ ಮತ್ತು ಭವಿಷ್ಯದ ಖಾತ್ರಿ ಪಡೆದು ಆಕೆಯನ್ನು ಪೋಷಕರ ಜೊತೆ ಕಳುಹಿಸಬಹುದು ಎಂದು ಹೈಕೋರ್ಟ್ ನಿರ್ದೇಶಿಸಿದೆ.

1929 ಬಾಲ್ಯ ವಿವಾಹ ಕಾಯ್ದೆ : ಬಾಲ್ಯ ವಿವಾಹದ ವಿರುದ್ಧ ಮೊದಲ ಕಾನೂನು 1929 ರಲ್ಲಿ ರೂಪಿತವಾಯಿತು. ಇದನ್ನು 1930 ರಲ್ಲಿ ಏಪ್ರಿಲ್ 1 ರಂದು ಇಡೀ ದೇಶದಲ್ಲಿ ಜಾರಿಗೆ ತರಲಾಯಿತು. ಬಾಲಕಿಯರ ಹಕ್ಕು ರಕ್ಷಣೆಗೆ ಮೊದಲ ಆದ್ಯತೆ ನೀಡಲಾಯಿತು.

ಈ ಕಾನೂನಿನ ಪ್ರಕಾರ, ಮದುವೆಗೆ ಪುರುಷರ ವಯಸ್ಸಿನ ಮಿತಿಯನ್ನು ಕನಿಷ್ಠ 21 ವರ್ಷಗಳು ಮತ್ತು ಮಹಿಳೆಯರಿಗೆ, ವಯಸ್ಸಿನ ಮಿತಿಯನ್ನು ಕನಿಷ್ಠ 18 ವರ್ಷಗಳಿಗೆ ನಿಗದಿಪಡಿಸಲಾಗಿದೆ. ಮದುವೆಗೆ ಮುಂಚೆ, ಇದನ್ನು ಬಾಲ್ಯ ವಿವಾಹ ಎಂದು ಪರಿಗಣಿಸಲಾಗಿತ್ತು. ಮತ್ತು ಇದಕ್ಕಾಗಿ ಅವರನ್ನು ಶಿಕ್ಷಿಸಲಾಯಿತು.

ಬಾಲ್ಯ ವಿವಾಹ ನಿಷೇಧ ಕಾಯ್ದೆ 2006: ಬಾಲ್ಯ ವಿವಾಹಕ್ಕಾಗಿ ಮಾಡಲಾದ ಕಾನೂನಿನ ಕೆಲವು ನ್ಯೂನತೆಗಳನ್ನು ನಿವಾರಿಸಲು, ಭಾರತ ಸರ್ಕಾರವು 2006 ರಲ್ಲಿ 1 ನವೆಂಬರ್ 2007 ರಂದು ಜಾರಿಗೆ ತಂದ ಬಾಲ್ಯ ವಿವಾಹ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿತು. ಈ ಕಾಯಿದೆಯ ಪ್ರಕಾರ, ಬಾಲ್ಯ ವಿವಾಹವನ್ನು ನಿಲ್ಲಿಸುವುದು ಮಾತ್ರವಲ್ಲ, ಅದನ್ನು ಸಂಪೂರ್ಣವಾಗಿ ರದ್ದುಗೊಳಿಸುವುದಾಗಿತ್ತು.

ಬಾಲ್ಯವಿವಾಹದ ವಿರುದ್ಧ ಕ್ರಮ ಕೈಗೊಳ್ಳುವುದು ಕಷ್ಟಕರ ಮತ್ತು ಸಮಯ ತೆಗೆದುಕೊಳ್ಳುವಂತೆ ಹಿಂದಿನ ಕಾನೂನು ಇದ್ದು ಮಾರ್ಪಾಟು ಅನಿವಾರ್ಯವಾಗಿತ್ತು. 2006 ರ ಕಾಯಿದೆಯ ಪ್ರಕಾರ, ವಯಸ್ಸಿನ ಮಿತಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ, ಆದರೆ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಅದರಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಯಿತು.

ಬಾಲ್ಯವಿವಾಹಕ್ಕೆ ಪ್ರೋತ್ಸಾಹ ನೀಡುವವರಿಗೆ ಜೈಲು ಶಿಕ್ಷೆಯನ್ನು 3 ತಿಂಗಳಿಂದ 2 ವರ್ಷಕ್ಕೆ ಹೆಚ್ಚಿಸಲಾಯಿತು. ಒಂದು ನಿರ್ದಿಷ್ಟ ದಂಡವನ್ನು ವಿಧಿಸಲಾಗುತ್ತದೆ. ಬಾಲ್ಯವಿವಾಹದಿಂದ ಮಗು ಜನಸಿದರೆ ಮಗುವನ್ನು ಕಾಪಾಡಲು ಕಾನೂನಿನಲ್ಲಿ ಅವಕಾಶ ಮಾಡಿಕೊಡಲಾಗಿದೆ.

PREV
Read more Articles on
click me!

Recommended Stories

ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಪೊಲೀಸ್ ಸಿಬ್ಬಂದಿಗೆ ಡಿಜಿ ಐಜಿಪಿ ಡಾ ಸಲೀಂ ಖಡಕ್ ಎಚ್ಚರಿಕೆ
ಬೆಂಗಳೂರಿನ ಹಲವೆಡೆ ಡಿ.6, 8ಕ್ಕೆ ಪವರ್ ಕಟ್, ಯಾವ ಏರಿಯಾದಲ್ಲಿ 8 ಗಂಟೆ ವಿದ್ಯುತ್ ಕಡಿತ?