ರಾಮನಗರ ಜಿಲ್ಲೆಯಲ್ಲಿ ಕನಸೊಂದು ಕಮರಿದಂತಾಗಿದೆ. ಇದೇ ವೇಳೆ ಬಿಜೆಪಿ ನಿರ್ಧಾರ ಒಂದಕ್ಕೆ ಕಾಂಗ್ರೆಸ್ - ಜೆಡಿಎಸ್ ನಾಯಕರು ಅಸಮಾಧಾನಗೊಂಡಿದ್ದಾರೆನ್ನಲಾಗಿದೆ.
ವರದಿ : ಎಂ.ಅಫ್ರೋಜ್ ಖಾನ್
ರಾಮನಗರ [ಜ.05]: ರಾಮನಗರ ಜಿಲ್ಲೆಗೆ ನವ ಬೆಂಗಳೂರು ಹೆಸರಿಡುವ ಸಂಬಂಧ ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ರಾಜಕೀಯ ನಾಯಕರ ಸಲಹೆ ಸಹಕಾರ ಕೇಳದ ರಾಜ್ಯ ಸರ್ಕಾರದ ನಡೆಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳಲ್ಲಿ ಬೇಸರ ವ್ಯಕ್ತವಾಗಿದೆ.
ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ರಾಮನಗರ ಜಿಲ್ಲೆಯ ಅಭಿವೃದ್ಧಿ ಹಾಗೂ ಆಡಳಿತದ ವಿಚಾರದಲ್ಲಿ ಏಕಪಕ್ಷೀಯ ನಿರ್ಧಾರಗಳನ್ನೇ ಕೈಗೊಳ್ಳುತ್ತಿದೆ. ಇದೀಗ ಯಾರೊಂದಿಗೂ ಚರ್ಚೆ ನಡೆಸದೆ, ಯಾರ ಅಭಿಪ್ರಾಯವನ್ನು ಸಂಗ್ರಹಿಸದೆಯೇ ರಾಮನಗರ ಜಿಲ್ಲೆಗೆ ನವ ಬೆಂಗಳೂರು ಹೆಸರನ್ನಿಡುವ ಚಿಂತನೆ ನಡೆಸುತ್ತಿರುವುದು ಉಭಯ ಪಕ್ಷಗಳ ಟೀಕೆಗೆ ಗುರಿಯಾಗಿದೆ.
ರಾಮನಗರ ಘಟಾನುಘಟಿ ನಾಯಕರಿಗೆ ರಾಜಕೀಯ ಆಶ್ರಯ ನೀಡಿದ ಜಿಲ್ಲೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ರಾಜಕೀಯವಾಗಿ ಮರು ಹುಟ್ಟು ಸಿಕ್ಕಿದ್ದು ಇಲ್ಲೇ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪಾಲಿಗೆ ರಾಮನಗರವೇ ರಾಜಕೀಯ ಕರ್ಮಭೂಮಿ. ರಾಮಕೃಷ್ಣ ಹೆಗಡೆ ಅವರಿಗೂ ಈ ಜಿಲ್ಲೆ ಆಶ್ರಯ ಕೊಟ್ಟಿತ್ತು.
ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯ, ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ ಅವರು ರಾಮನಗರದಿಂದಲೇ ಗೆದ್ದು ಮುಖ್ಯಮಂತ್ರಿ ಗದ್ದುಗೆ ಏರಿದ್ದರು. ರಾಜಕೀಯ, ಧಾರ್ಮಿಕ ಹಾಗೂ ಸಾಂಸ್ಕೃತಿಕವಾಗಿ ರಾಮನಗರ ತನ್ನದೇ ಛಾಪು ಮೂಡಿಸಿರುವುದರಿಂದ ರಾಮನಗರ ಜಿಲ್ಲೆ ಹೆಸರನ್ನೇ ಉಳಿಸಿಕೊಳ್ಳಬೇಕೆಂಬ ಅಭಿಪ್ರಾಯವೂ ಒಂದೆಡೆ ವ್ಯಕ್ತವಾಗುತ್ತಿದೆ.
ಡಿಕೆಶಿ ನಾಡಲ್ಲಿ 25 ಎಕರೆಯಲ್ಲಿ ತಿರುಪತಿ ಮಾದರಿ ದೇಗುಲ : ರಾಜ್ಯ ಸರ್ಕಾರದಿಂದ ಅಸ್ತು...
ಇದೀಗ ಶಾಸಕರಾದ ಎಚ್.ಡಿ. ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್, ಶಾಸಕರಾದ ಅನಿತಾ ಕುಮಾರಸ್ವಾಮಿ, ಎ. ಮಂಜುನಾಥ್, ವಿಧಾನ ಪರಿಷತ್ ಸದಸ್ಯರಾದ ಸಿ.ಎಂ. ಲಿಂಗಪ್ಪ, ಎಸ್. ರವಿ, ಅ. ದೇವೇಗೌಡ ಹಾಗೂ ಸಂಸದ ಡಿ.ಕೆ.ಸುರೇಶ್ ಅವರು ರಾಮನಗರ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದಾರೆ.
ಅಲ್ಲದೆ, ಮಾಜಿ ಸಚಿವ ಪಿಜಿಆರ್ ಸಿಂಧ್ಯಾ, ಮಾಜಿ ಶಾಸಕರಾದ ಎಚ್.ಸಿ. ಬಾಲಕೃಷ್ಣ, ಅಶ್ವತ್‌್ಥ , ಕೆ. ರಾಜು ಸೇರಿದಂತೆ ಅನೇಕ ನಾಯಕರು ಜಿಲ್ಲೆಯನ್ನು ಪ್ರತಿನಿಧಿಸಿದ್ದವರು. ಇವರೊಂದಿಗೆ ಚರ್ಚೆ ನಡೆಸುವುದಿರಲಿ, ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಅವರ ಗಮನಕ್ಕೂ ತರದೆಯೇ ಬಿಜೆಪಿ ನಾಯಕರ ನವ ಬೆಂಗಳೂರು ಪ್ರಸ್ತಾವನೆಗೆ ರಾಜ್ಯಸರ್ಕಾರ ಚಿಂತನೆ ನಡೆಸಿರುವುದು ಸಾಕಷ್ಟುಚರ್ಚೆಗೆ ಗ್ರಾಸವಾಗಿದೆ.
ಕಮರಿದ ಅವಳಿ ನಗರದ ಕನಸು:
ಕುಮಾರಸ್ವಾಮಿರವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೇ ರಾಮನಗರ ಜಿಲ್ಲೆ ಅಸ್ತಿತ್ವಕ್ಕೆ ಬಂದಿತು. ಇದಾದ 12 ವರ್ಷಗಳ ನಂತರ ಕುಮಾರಸ್ವಾಮಿ ರಾಮನಗರ ಮತ್ತು ಚನ್ನಪಟ್ಟಣವನ್ನು ಅವಳಿ ನಗರಗಳಂತೆ ಅಭಿವೃದ್ಧಿಪಡಿಸುವ ಕನಸು ಕಂಡಿದ್ದರು. ಬೃಹತ್ ಕೈಗಾರಿಕಾ ವಲಯ ಸ್ಥಾಪಿಸಿ ಎರಡು ನಗರಗಳ ಯುವಜನರಿಗೆ ಉದ್ಯೋಗ ಅವಕಾಶ ಕಲ್ಪಿಸುವ ಉದ್ದೇಶವಿರುವುದಾಗಿ ಹೇಳಿಕೊಂಡಿದ್ದರು.
ರಾಮನಗರ ಜಿಲ್ಲೆಗೆ ಹೊಸ ಹೆಸರು!?...
ರಾಮನಗರ ಮತ್ತು ಚನ್ನಪಟ್ಟಣ ನಗರಗಳನ್ನು ಅವಳಿ ನಗರಗಳನ್ನಾಗಿ ಅಭಿವೃದ್ಧಿಪಡಿಸುವುದಕ್ಕೆ ಎರಡೂ ನಗರಗಳ ಜನತೆ ಕೂಡ ಸ್ವಾಗತಿಸಿದ್ದರು. ಅವಳಿ ನಗರ ಸಾಕಾರವಾದರೆ ವ್ಯಾಪಾರ, ವಹಿವಾಟು ವೃದ್ಧಿಸಿ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಕಾರಣವಾಗಲಿದೆ ಎಂಬುದು ಸಾರ್ವಜನಿಕರ ಹಂಬಲವಾಗಿತ್ತು. ಆದರೆ, ಅವಳಿ ನಗರದ ಕನಸು ಕಮರಿ ಹೋಯಿತು.
ಇನ್ನು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯಲ್ಲಿದ್ದ ನಾಲ್ಕು ತಾಲೂಕುಗಳನ್ನು ಒಟ್ಟುಗೂಡಿಸಿ ರಾಮನಗರ ಜಿಲ್ಲೆಯಾಗಿ ರಚನೆ ಮಾಡಿದ್ದಕ್ಕೆ ಮೊದಲಿನಿಂದಲು ಬೇಸರವಿತ್ತು. ಕುಮಾರಸ್ವಾಮಿ ಅವರೊಂದಿಗಿನ ಮಿತ್ರತ್ವಕ್ಕೆ ಮುನ್ನ ಶಿವಕುಮಾರ್ ಯಾವುದೇ ಸಭೆ, ಸಮಾರಂಭಗಳಲ್ಲಿ ರಾಮನಗರ ಜಿಲ್ಲೆ ಎಂದು ಹೇಳದೆ ಬೆಂಗಳೂರು ದಕ್ಷಿಣ ಎಂತಲೇ ಸಂಬೋಧಿಸುತ್ತಿದ್ದರು.
ಅಲ್ಲದೆ, ರಾಮನಗರ ಜಿಲ್ಲೆ ಬದಲಿಗೆ ಬೆಂಗಳೂರು ದಕ್ಷಿಣ ಜಿಲ್ಲೆಯೆಂದು ನಾಮಕರಣ ಮಾಡಬೇಕಿತ್ತು ಎಂದಿದ್ದರು.
ಆದರೀಗ ಬಿಜೆಪಿ ನಾಯಕರು ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರು, ಸಂಸದರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ದೇಶ ವಿದೇಶಗಳ ಬಂಡವಾಳದಾರರನ್ನು ಆಕರ್ಷಿಸಲು ರಾಜ್ಯಸರ್ಕಾರಕ್ಕೆ ರಾಮನಗರ ಜಿಲ್ಲೆಗೆ ನವ ಬೆಂಗಳೂರು ಹೆಸರು ನಾಮಕರಣಕ್ಕೆ ಬೇಡಿಕೆಯಿಟ್ಟಿದ್ದಾರೆ. ಇದು ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ಟೀಕೆಗೆ ಗುರಿಯಾಗಿದೆ.
ಇನ್ನು ರಾಜಕೀಯೇತರ ಪ್ರಮುಖ ಗಣ್ಯ ವ್ಯಕ್ತಿಗಳು ಹಾಗೂ ಪ್ರಮುಖ ಸಂಘಟನೆಗಳ ನಾಯಕರು, ರಾಮನಗರ ಜಿಲ್ಲೆ ಎಂಬ ಹೆಸರನ್ನೇ ಉಳಿಸಿಕೊಳ್ಳಬೇಕು ಅಥವಾ ಬೆಂಗಳೂರು ದಕ್ಷಿಣ ಜಿಲ್ಲೆಯೆಂಬ ಹೆಸರನ್ನು ಮರು ನಾಮಕರಣಕ್ಕೆ ಪ್ರಯತ್ನಿಸಬೇಕು ಎನ್ನುತ್ತಿದ್ದಾರೆ.
ನಾನು ಊರಿನಲ್ಲಿ ಇರಲಿಲ್ಲ. ರಾಮನಗರ ಜಿಲ್ಲೆಗೆ ನವ ಬೆಂಗಳೂರು ಹೆಸರು ಮರು ನಾಮಕರಣ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿರುವುದು ಗಮನಕ್ಕೆ ಬಂದಿಲ್ಲ. ಯಾರು ಪ್ರಸ್ತಾವನೆ ಸಲ್ಲಿಸಿದರು, ರಾಜ್ಯ ಸರ್ಕಾರದ ನಡೆಯ ಬಗ್ಗೆ ನನಗೇನು ಗೊತ್ತಿಲ್ಲ. ಮಾಹಿತಿ ಪಡೆದುಕೊಂಡು ಪ್ರತಿಕ್ರಿಯೆ ನೀಡುತ್ತೇನೆ.
- ಅನಿತಾ ಕುಮಾರಸ್ವಾಮಿ, ಶಾಸಕರು, ರಾಮನಗರ ಕ್ಷೇತ್ರ.
ರಾಮನಗರ ಜಿಲ್ಲೆಯನ್ನು ನವಬೆಂಗಳೂರು ಎಂದು ಹೆಸರು ಬದಲಾಯಿಸುವ ವಿಚಾರದ ಬಗ್ಗೆ ನನಗೆ ಸಂಪೂರ್ಣ ಮಾಹಿತಿಯಿಲ್ಲ. ಕಾನೂನು ಬದ್ಧವಾಗಿ ರಾಮನಗರ ಜಿಲ್ಲೆಯಾಗಿದೆ. ಜನರಿಗೆ ಅನುಕೂಲ ಆಗುವುದಾದರೆ ನಾನು ಕೂಡ ಸ್ವಾಗತ ಮಾಡುತ್ತೇನೆ.
- ಸಿ.ಪಿ.ಯೋಗೇಶ್ವರ್, ಮಾಜಿ ಸಚಿವರು.
ರಾಮನಗರ ಜಿಲ್ಲೆ ಅಸ್ತಿತ್ವಕ್ಕೆ ತರುವ ಸಂದರ್ಭದಲ್ಲಿಯೇ ಬೆಂಗಳೂರು ದಕ್ಷಿಣ ಜಿಲ್ಲೆ ಹೆಸರಿಡುವಂತೆ ಸಲಹೆ ನೀಡಿದ್ದೆ. ಬೆಂಗಳೂರು ಕೆಂಪೇಗೌಡರು ಕಟ್ಟಿದ ನಾಡು. ಬೆಂಗಳೂರು ಪದವನ್ನು ಸೇರಿಸಿ ಜಿಲ್ಲೆಗೆ ಹೆಸರಿಟ್ಟಿದ್ದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಯ ಹೆಸರು ಸ್ಥಾನ ಪಡೆಯುತ್ತಿತ್ತು. ನವ ಬೆಂಗಳೂರು ಎಂದು ಮರು ನಾಮಕರಣ ಮಾಡುವುದು ಸ್ವಾಗತಾರ್ಹ ಸಂಗತಿ.
- ಎಚ್.ಸಿ. ಬಾಲಕೃಷ್ಣ, ಮಾಜಿ ಶಾಸಕರು.