ಡಿ.19ರಂದು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳು ಇದ್ದರೆ ಕಠಿಣ ಕ್ರಮ ಕೈಗೊಳ್ಳುವಂತೆ ಎಡಿಜಿಪಿ(ಕಾನೂನು ಸುವ್ಯವಸ್ಥೆ) ಅಮರ್ ಕುಮಾರ್ ಪಾಂಡೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಂಗಳೂರು(ಜ.05): ಪೌರತ್ವ ತಿದ್ದುಪಡಿ ವಿರೋಧಿಸಿ ಮಂಗಳೂರಿನಲ್ಲಿ ಡಿ.19ರಂದು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳು ಇದ್ದರೆ ಕಠಿಣ ಕ್ರಮ ಕೈಗೊಳ್ಳುವಂತೆ ಎಡಿಜಿಪಿ(ಕಾನೂನು ಸುವ್ಯವಸ್ಥೆ) ಅಮರ್ ಕುಮಾರ್ ಪಾಂಡೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಶನಿವಾರ ಮಂಗಳೂರಿಗೆ ಭೇಟಿ ನೀಡಿದ ಅವರು ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ್ದಾರೆ. ಮಂಗಳೂರು ಗಲಭೆ ನಡೆದ ಮಾರನೇ ದಿನ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಆಗಮಿಸುತ್ತಾರೆ ಎನ್ನಲಾಗಿತ್ತು. ಆದರೆ ಸಿಐಡಿ ವಿಭಾಗದ ಎಡಿಜಿಪಿ ದಯಾನಂದ್ ಆಗಮಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ಮಾರ್ಗದರ್ಶನ ಮಾಡಿದ್ದರು. ಮಂಗಳೂರು ಗಲಭೆ ಬಳಿಕ ಅಮರ್ ಕುಮಾರ್ ಪಾಂಡೆ ಅವರ ಮೊದಲ ಮಂಗಳೂರು ಭೇಟಿಯಾಗಿದೆ.
ಕಮಿಷನರ್ ಮನವಿಗೆ ಮಾಸ್ ರಿಪ್ಲೈ: ಮಂಗಳೂರು ಗಲಭೆಯ 1000ಕ್ಕೂ ಹೆಚ್ಚು ವಿಡಿಯೋ ಲಭ್ಯ
ದಿನಪೂರ್ತಿ ನಡೆದ ಈ ಸಭೆಯಲ್ಲಿ ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ, ಕಮಿಷನರ್ ಡಾ.ಪಿ.ಎಸ್. ಹರ್ಷ, ಎಸ್ಪಿ ಲಕ್ಷ್ಮಿ ಪ್ರಸಾದ್, ಡಿಸಿಪಿಗಳಾದ ಅರುಣಾಂಗ್ಶು ಗಿರಿ, ಲಕ್ಷ್ಮೇ ಪ್ರಸಾದ್ ಇದ್ದರು ಎಂದು ಮೂಲಗಳು ತಿಳಿಸಿವೆ.
ಡಿ.19ರಂದು ನಡೆದ ಹಿಂಸಾಚಾರ ಹಾಗೂ ಗೋಲಿಬಾರ್ ಘಟನೆಯ ಸಮಗ್ರ ವಿವರವನ್ನು ಮಂಗಳೂರು ಪೊಲೀಸರು ಎಡಿಜಿಪಿ ಅಮರ್ ಕುಮಾರ್ ಪಾಂಡೆ ಅವರ ಎದುರು ಮಂಡಿಸಿದ್ದಾರೆ.
ಕೇರಳ ವಿದ್ಯಾರ್ಥಿಗಳು ಮಂಗಳೂರು ಬಿಟ್ಟು ಬನ್ನಿ: ಸಿಎಂ ಪಿಣರಾಯಿ ಸೂಚನೆ
ನಿಷೇಧಾಜ್ಞೆ ಇದ್ದರೂ ಗುಂಪೊಂದು ನಡೆಸಿದ ಪ್ರತಿಭಟನೆ, ಪೊಲೀಸ್ ಲಾಠಿ ಚಾಜ್‌ರ್, ಬಳಿಕ ಗಲಭೆ ಹಬ್ಬಿರುವುದು, ಗಲಭೆ ನಿಯಂತ್ರಿಸಲು ಕೈಗೊಂಡ ಕ್ರಮಗಳು ಹಾಗೂ ಗೋಲಿಬಾರ್ ನಡೆಸಬೇಕಾದ ಅನಿವಾರ್ಯತೆಯನ್ನು ಎಡಿಜಿಪಿಗೆ ಮಂಗಳೂರು ಪೊಲೀಸರು ಮನದಟ್ಟು ಮಾಡುವ ಪ್ರಯತ್ನ ನಡೆಸಿದರು ಎಂದು ಹೇಳಲಾಗಿದೆ.
ಗಲಭೆಯ ಕುರಿತು ಸಂಗ್ರಹಿಸಿರುವ ಸಾಕ್ಷ್ಯಗಳನ್ನು ಎಡಿಜಿಪಿ ಮುಂದಿರಿಸಿದ್ದು, ಅದನ್ನು ಅಮರ್ ಕುಮಾರ್ ಪಾಂಡೆ ಪೂರ್ತಿಯಾಗಿ ಅವಲೋಕಿಸಿದರು. ಹಿಂಸಾಚಾರ ಘಟನೆ ನಡೆದ ರಾತ್ರಿ ಖಾಸಗಿ ಆಸ್ಪತ್ರೆಗೆ ಪೊಲೀಸರು ನುಗ್ಗಬೇಕಾದ ಸಂದರ್ಭವನ್ನು ಈ ವೇಳೆ ವಿವರಿಸಲಾಯಿತು ಎನ್ನಲಾಗಿದೆ. ಎಡಿಜಿಪಿಗೆ ಘಟನೆಯ ವಿಡಿಯೋ, ಸಿಸಿ ಟಿವಿ ಫುಟೇಜ್ ದಾಖಲೆ ಹಾಗೂ ಜಾಲತಾಣಗಳಲ್ಲಿ ಬಂದಿರುವ ಕೆಲವು ಪ್ರಚೋದನಾಕಾರಿ ಸಂದೇಶಗಳನ್ನು ಪೊಲೀಸರು ತೋರಿಸಿದ್ದು, ಸಾಕಷ್ಟುಪ್ರಮಾಣದಲ್ಲಿ ಸಾಕ್ಷ್ಯ ಕಲೆಹಾಕಿರುವುದನ್ನು ಕೂಡ ಅವರ ಗಮನಕ್ಕೆ ತರಲಾಯಿತು ಎಂದು ಮೂಲಗಳು ತಿಳಿಸಿವೆ.
ಮಂಗಳೂರು: ಇನ್ನು ಡಿಸಿ ಕಚೇರಿ ಎದುರು ಪ್ರತಿಭಟನೆ ಕಷ್ಟ
ಗುಪ್ತಚರ ಇಲಾಖೆಯ ಮುನ್ಸೂಚನೆ ಮೇರೆಗೆ ನಿಷೇಧಾಜ್ಞೆ ಜಾರಿಗೊಳಿಸಿದ ಹೊರತೂ ಗಲಭೆಗೆ ಕಾರಣವಾಗಿರುವ ಬಗ್ಗೆ ಎಡಿಜಿಪಿ ಅಸಮಾಧಾನ ವ್ಯಕ್ತಪಡಿಸಿದರು ಎಂದು ಹೇಳಲಾಗಿದೆ. ಅದೇ ದಿನ ಬೆಂಗಳೂರು ಸೇರಿದಂತೆ ನಂತರದ ದಿನಗಳಲ್ಲಿ ರಾಜ್ಯದ ಬೇರೆ ಬೇರೆ ಕಡೆ ಪೌರತ್ವ ತಿದ್ದುಪಡಿ ವಿರೋಧಿ ಪ್ರತಿಭಟನೆಗಳು ನಡೆದಿವೆ. ಆದರೆ ಮಂಗಳೂರಿನಲ್ಲೇ ಗಲಭೆ ನಡೆಯಲು ಕಾರಣ ಏನು? ಪೊಲೀಸರು ಇದನ್ನು ಇನ್ನಷ್ಟುಗಂಭೀರವಾಗಿ ತೆಗೆದುಕೊಂಡಿದ್ದರೆ, ಗಲಭೆಯನ್ನು ತಕ್ಷಣವೇ ಮಟ್ಟಹಾಕಲು ಸಾಧ್ಯವಿತ್ತು ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು ಎನ್ನಲಾಗಿದೆ.
ಕಠಿಣ ಕ್ರಮಕ್ಕೆ ಸೂಚನೆ:
ಈಗಾಗಲೇ ಮಂಗಳೂರು ಗಲಭೆಗೆ ಸಂಬಂಧಿಸಿ 20ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ. 24ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಇದಲ್ಲದೆ ಗಲಭೆಗೆ ಮುನ್ನ ಹಾಗೂ ನಂತರ ಪ್ರಚೋದನಾತ್ಮಕ ಸಂದೇಶಗಳನ್ನು ಕಳುಹಿಸಿದ 50ಕ್ಕೂ ಅಧಿಕ ಮಂದಿ ವಿರುದ್ಧ ಸೈಬರ್ ಕ್ರೈಂ ಪೊಲೀಸರು ಕೇಸು ದಾಖಲಿಸಿದ್ದಾರೆ. ಇವುಗಳ ಬಗ್ಗೆ ಮಾಹಿತಿ ಪಡೆದುಕೊಂಡ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಅವರು, ಸೂಕ್ತ ಸಾಕ್ಷ್ಯಾಧಾರಗಳಿದ್ದರೆ ಕಠಿಣ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು ಎಂದು ತಿಳಿದುಬಂದಿದೆ.
ನೆಹರೂ ಮೈದಾನಕ್ಕೆ ಪೊಲೀಸ್ ಸರ್ಪಗಾವಲು
ಮುಸ್ಲಿಂ ಸೆಂಟ್ರಲ್ ಕಮಿಟಿ ಶನಿವಾರ ಮಂಗಳೂರು ಗೋಲಿಬಾರ್ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆಗೆ ನೀಡಿದ ಕರೆಯನ್ನು ವಾಪಸ್ ಪಡೆದರೂ ಮುಂಜಾಗ್ರತಾ ಕ್ರಮವಾಗಿ ನೆಹರೂ ಮೈದಾನ ಸುತ್ತಮುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು.
ಬೆಳಗ್ಗಿನಿಂದಲೇ ಸುಮಾರು 20 ಕೆಎಸ್‌ಆರ್‌ಪಿ ತುಕಡಿಯ ಪೊಲೀಸರು ಮೈದಾನ ಸುತ್ತ ಬಿಗು ಭದ್ರತೆ ಏರ್ಪಡಿಸಿದ್ದರು. ಯಾವುದೇ ಕ್ಷಣದಲ್ಲಿ ಪ್ರತಿಭಟನಾಕಾರರು ನೆಹರೂ ಮೈದಾನ ಪ್ರವೇಶಿಸಿ ಪ್ರತಿಭಟನೆ ನಡೆಸಿ ಶಾಂತಿ ಕದಡುವ ಸಾಧ್ಯತೆ ಇದೆ ಎಂಬ ಮುನ್ಸೂಚನೆ ಹಿನ್ನೆಲೆಯಲ್ಲಿ ಈ ಭದ್ರತೆ ಏರ್ಪಡಿಸಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆಯಕಟ್ಟಿನ ಜಾಗದಲ್ಲಿ ಭದ್ರತೆ:
ಶನಿವಾರ ಮಾಧ್ಯಮ ಜೊತೆ ಮಾತನಾಡಿದ ಕಮಿಷನರ್ ಡಾ.ಪಿ.ಎಸ್.ಹರ್ಷ, ನೆಹರೂ ಮೈದಾನದಲ್ಲಿ ನಡೆಯಬೇಕಿದ್ದ ಪ್ರತಿಭಟನೆಯನ್ನು ಮುಸ್ಲಿಂ ಸಂಘಟನೆಗಳು ಮುಂದೂಡಿವೆ. ಮುಂದಿನ ದಿನಾಂಕ ಹೇಳುವಂತೆ ಅವರಿಗೆ ಸೂಚನೆ ನೀಡಿದ್ದೇವೆ. ಈಗಾಗಲೇ ಕಮಿಷನರೇಟ್ ವ್ಯಾಪ್ತಿಯ ಕೆಲವೆಡೆ ಪ್ರತಿಭಟನೆಗೆ ಅನುಮತಿ ನೀಡಲಾಗಿದೆ. ಜ.12ರಂದು ಸಿಎಎ ಬೆಂಬಲಿಸಿ ಬಿಜೆಪಿ ಸಮಾವೇಶ ನಡೆಸುವುದಾಗಿ ತಿಳಿಸಿದೆ. ಅವರಿಗೂ ಸಮಾವೇಶ ಮುಂದೂಡುವಂತೆ ಗೃಹ ಸಚಿವರಲ್ಲಿ ಮನವಿ ಮಾಡಿದ್ದೇವೆ. ಈಗ ಮತ್ತೊಮ್ಮೆ ಅವರ ಬಳಿ ಕೇಳುತ್ತೇವೆ, ಸಭೆ ಮುಂದೂಡಲಿ. ಉಳಿದಂತೆ ಸದ್ಯ ಇಡೀ ಮಂಗಳೂರು ನಗರ ಶಾಂತವಾಗಿದೆ. ಎಲ್ಲ ಆಯಕಟ್ಟಿನ ಜಾಗದಲ್ಲಿ ಬಿಗು ಪೊಲೀಸ್ ಭದ್ರತೆ ಮುಂದುವರಿಸಲಾಗಿದೆ. ಹಿಂಸಾಚಾರ ಘಟನೆಗೆ ಸಂಬಂಧಿಸಿ ಸ್ವತಂತ್ರ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಹೀಗಾಗಿ ತನಿಖೆ ಬಗ್ಗೆ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.